For Quick Alerts
ALLOW NOTIFICATIONS  
For Daily Alerts

ತಲೆಹೊಟ್ಟು ನಿವಾರಣೆಗೆ ಲೋಳೆಸರದ ಮ್ಯಾಜಿಕ್ ಚಿಕಿತ್ಸೆ

By Arshad
|

ತಲೆಹೊಟ್ಟಿಗೆ ಪ್ರಮುಖ ಕಾರಣ ಶಿಲೀಂಧ್ರಗಳ ಸೋಂಕಿನಿಂದ ತಲೆಯ ಚರ್ಮ ತೀರಾ ಒಣಗಿ ಹೊರಪದರ ಪಕಳೆಯಂತೆ ನಿಧಾನವಾಗಿ ಏಳುವುದು. ಇದು ಪೂರ್ತಿಯಾಗಿ ಏಳದೇ ಕೊಂಚವೇ ಎದ್ದು ಉಳಿದ ಭಾಗ ಚರ್ಮಕ್ಕೆ ಅಂಟಿಕೊಂಡೇ ಇರುವುದು ತುರಿಕೆ ತರಿಸುತ್ತದೆ. ನಾಲ್ಕು ಜನರ ನಡುವೆ ಇದ್ದಾಗ ಈ ತುರಿಕೆ ಅಸಾಧ್ಯ ಮುಜುಗರ ತರಿಸುತ್ತದೆ. ಅಲ್ಲದೇ ಸಡಿಲಗೊಂಡ ಪಕಳೆಗಳು ನಿಧಾನವಾಗಿ ಕೂದಲ ಮೇಲೆಲ್ಲಾ ಆವರಿಸಿ ಭುಜದ ಮೇಲೆ, ಗಾಳಿಗೆ ಹಾರಾಡತೊಡಗುತ್ತವೆ. ಇದನ್ನು ಕಂಡವರು ತೋರುವ ಅಸಹ್ಯ ಸಹಾ ಮುಜುಗರಕ್ಕೀಡುಮಾಡಬಹುದು. ಥತ್ ! ತಲೆ ತುರಿಕೆಯಿಂದ ತಪ್ಪಿಸಿಕೊಳ್ಳೋದು ಹೇಗೆ?

ತಲೆಹೊಟ್ಟಿನ ಕಾರಣ ಚರ್ಮಕ್ಕೆ ಅಗತ್ಯ ಪೋಷಣೆ ದೊರಕದೇ ಕೂದಲ ಬುಡಗಳೂ ಸಡಿಲವಾಗಿ ಕೂದಲು ಉದುರುವ ಸಮಸ್ಯೆ ತಲೆದೋರುತ್ತದೆ. ತಲೆಗೂದಲು ಬೆಳೆಯುವುದು ನಿಂತುಹೋಗಿ ಕೂದಲ ಬುಡದಲ್ಲಿ ಸತ್ತ ಚರ್ಮದ ಜೀವಕೋಶಗಳು ತುಂಬಿ ಮುಂದೆ ಇಲ್ಲಿಂದ ಕೂದಲು ಹುಟ್ಟುವ ಸಾಧ್ಯತೆಯನ್ನೇ ಕಡಿಮೆ ಮಾಡುತ್ತವೆ. ತಲೆಹೊಟ್ಟು ನಿವಾರಣೆಗೆ ಮಾರುಕಟ್ಟೆಯಲ್ಲಿ ಹಲವಾರು ಶಾಂಪೂ ಮತ್ತು ಇತರ ರಾಸಾಯನಿಕ ಆಧಾರಿತ ಪ್ರಸಾಧನಗಳಿವೆ. ಆದರೆ ನಿಸರ್ಗದಲ್ಲಿ ಈ ಸಮಸ್ಯೆಗೆ ಅತ್ಯಂತ ಸಮರ್ಪಕವಾದ ಉತ್ತರವಿದೆ.

How to Use Aloe Vera Gel for Dandruff

ಇದೇ ಲೋಳೆಸರ ಅಥವಾ ಆಲೋವೆರಾ. ಇದರ ಸ್ನಿಗ್ಧ ದ್ರವವನ್ನು ನೇರವಾಗಿ ತಲೆಗೂದಲ ಬುಡಕ್ಕೆ ಹಚ್ಚಿಕೊಂಡಾಗ ತಲೆಹೊಟ್ಟು ನಿವಾರಣೆಯಾಗುವುದು ಮಾತ್ರವಲ್ಲ, ಕೂದಲ ಬುಡಕ್ಕೂ ಉತ್ತಮ ಪೋಷಣೆ ದೊರೆತು ಆರೋಗ್ಯಕರ ಮತ್ತು ಕಾಂತಿಯುಕ್ತ ಕೂದಲ ಬೆಳವಣಿಗೆಯೂ ಸಾಧ್ಯವಾಗುತ್ತದೆ. ಆದರೆ ಇದನ್ನು ಬಳಸುವುದು ಹೇಗೆ ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಇಂದು ಈ ಲೋಳೆಯ ಸಮರ್ಪಕ ಬಳಕೆಯ ವಿಧಾನದ ಕುರಿತು ಮಹತ್ವದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಮುಂದೆ ಓದಿ..

ಲೋಳೆಸರದ ಕೋಡಿನಿಂದ ಹಿಂಡಿ ತೆಗೆದ ತಾಜಾ ರಸ
ಒಂದು ಲೋಳೆಸರದ ಕೋಡಿನ ಸುಮಾರು ಮೂರು ಇಂಚಿನಷ್ಟು ಉದ್ದದ ತುಂಡನ್ನು ಕತ್ತರಿಸಿ ತೆಗೆಯಿರಿ. ಈ ಕೋಡನು ಉದ್ದಕ್ಕೆ ಸೀಳಿ ಬಿಡಿಸಿದಾಗ ಒಳಭಾಗದಲ್ಲಿ ಸ್ನಿಗ್ಧ ದ್ರವವಿರುವುದು ಕಂಡುಬರುತ್ತದೆ. ಈ ರಸವೇ ತಲೆಹೊಟ್ಟು ನಿವಾರಣೆಗೆ ಸಮರ್ಥವಾದ ದ್ರವವಾಗಿದೆ. ಬೆರಳಿನಿಂದ ಅಥವಾ ಚಮಚದಿಂದ ಕೋಡಿನ ಒಳಭಾಗದ ತಿರುಳನ್ನು ಹಿಂಡಿ ರಸವನ್ನು ಸಂಗ್ರಹಿಸಿ. ಈ ದ್ರವವನ್ನು ನೇರವಾಗಿ ತಲೆಯ ಮೇಲೆ, ಕೂದಲ ಬುಡಕ್ಕೆ ತಾಕುವಂತೆ ಹಚ್ಚಿ.


ಎಷ್ಟು ಸಾಧ್ಯವೋ ಅಷ್ಟು ತಿರುಳನ್ನು ಸಂಗ್ರಹಿಸಿ ನಯವಾದ ಮಸಾಜ್ ಮೂಲಕ ಇಡಿಯ ತಲೆಯನ್ನು ಆವರಿಸುವಂತೆ ಮಾಡಿ. ಬಳಿಕ ನಯವಾದ ಮಸಾಜ್ ಮುಂದುವರೆಸಿ. ಕೂದಲ ತುದಿಯವರೆಗೂ ಹಚ್ಚುವ ಅಗತ್ಯವಿಲ್ಲ, ಕೂದಲ ಬುಡಕ್ಕೆ ಮಾತ್ರ ಹಚ್ಚಿದರೆ ಸಾಕು. ಬಳಿಕ ಇದನ್ನು ಹಾಗೇ ಒಣಗಲು ಬಿಡಿ. ಸಂಜೆಯ ಹೊತ್ತು ಹಚ್ಚಿ ಇಡಿಯ ರಾತ್ರಿ ಬಿಟ್ಟು ಮರುದಿನ ಸೌಮ್ಯ ಶಾಂಪೂ ಬಳಸಿ ಸ್ನಾನ ಮಾಡಿಕೊಳ್ಳಿ.

ಲೋಳೆಸರ ಮತ್ತು ಟೀ ಟ್ರೀ ಎಣ್ಣೆ (tea tree oil)
ಒಂದು ವೇಳೆ ತಲೆಯಲ್ಲಿ ತುರಿಕೆ ಮತ್ತು ಸೋಂಕು ಉಂಟಾಗಿದ್ದರೆ ಈ ವಿಧಾನ ಸೂಕ್ತವಾಗಿದೆ. ಇದಕ್ಕಾಗಿ ಮೂರು ಚಿಕ್ಕ ಚಮಚದಷ್ಟು ಲೋಳೆಸರದ ತಿರುಳನ್ನು ಒಂದು ಚಿಕ್ಕ ಪಾತ್ರೆಯಲ್ಲಿ ಸಂಗ್ರಹಿಸಿ ಚೆನ್ನಾಗಿ ಕಿವುಚಿ. ಇದಕ್ಕೆ ಸುಮಾರು ಐದರಿಂದ ಏಳು ಹನಿ ಟೀ ಟ್ರೀ ಎಣ್ಣೆಯನ್ನು ಸೇರಿಸಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕೂದಲ ಬುಡಕ್ಕೆ ಆವರಿಸುವಂತೆ ಇಡಿಯ ತಲೆಗೆ ಹಚ್ಚಿ. ಬಳಿಕ ಕೊಂಚ ಹೊತ್ತು ನಯವಾಗಿ ಮಸಾಜ್‌ ಮಾಡಿ. ಸಂಜೆ ಹಚ್ಚಿದ ಬಳಿಕ ಇಡಿಯ ರಾತ್ರಿ ಹಾಗೇ ಇರಲಿ. ಮರುದಿನ ಬೆಳಿಗ್ಗೆ ಸೌಮ್ಯ ಶಾಂಪೂ ಬಳಸಿ ಸ್ನಾನ ಮಾಡಿ. ತಲೆಹೊಟ್ಟಿನ ನಿವಾರಣೆಗೆ-ಬಹೂಪಯೋಗಿ 'ಲೋಳೆಸರ'

ಲೋಳೆಸರ ಮತ್ತು ಬೇವಿನ ಎಣ್ಣೆ

ಈ ವಿಧಾನವೂ ಮೊದಲಿನ ವಿಧಾನದಂತೆಯೇ ಇದ್ದು ಕೇವಲ ಟೀ ಟ್ರೀ ಎಣ್ಣೆಯ ಬದಲಿಗೆ ಬೇವಿನ ಎಣ್ಣೆಯನ್ನು ಬಳಸಲಾಗಿದೆ. ಒಂದು ವೇಳೆ ತುರಿಕೆ ಹೆಚ್ಚಾಗಿದ್ದರೆ ಈ ವಿಧಾನ ಹೆಚ್ಚು ಸೂಕ್ತವಾಗಿದೆ. ಬೇವಿನ ಬ್ಯಾಕ್ಟೀರಿಯಾ ನಿವಾರಕ ಗುಣ ಮತ್ತು ಶಿಲೀಂಧ್ರ ನಿವಾರಕ ಗುಣ ತಲೆಹೊಟ್ಟಿಗೆ ಕಾರಣವಾದ ಕ್ರಿಮಿಗಳನ್ನು ನಿವಾರಿಸಲು ಸಮರ್ಥವಾಗಿವೆ. ಇದರೊಂದಿಗೆ ಲೋಳೆಸರ ಸೇರಿದರೆ ದುಪ್ಪಟ್ಟು ಪೋಷಣೆ ಮತ್ತು ರಕ್ಷಣೆ ದೊರಕುತ್ತದೆ. ಸುಮಾರು ಎರಡರಿಂದ ಮೂರು ಚಿಕ್ಕ ಚಮಚ ಲೋಳೆಸರದ ತಿರುಳಿಗೆ ಹತ್ತರಿಂದ ಹನ್ನೆರಡು ಹನಿ ಬೇವಿನ ಎಣ್ಣೆ ಸೇರಿಸಿ ಮಿಶ್ರಣ ಮಾಡಿ ತಲೆಗೂದಲ ಬುಡಕ್ಕೆ ಆವರಿಸುವಂತೆ ಹಚ್ಚಿ ಕೊಂಚ ಮಸಾಜ್‌ ಮಾಡಿ. ಇಡಿಯ ರಾತ್ರಿ ಹಾಗೇ ಬಿಟ್ಟು ಮರುದಿನ ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ.

ಲೋಳೆಸರ ಮತ್ತು ಲಿಂಬೆರಸ
ಒಂದು ವೇಳೆ ತಲೆಯ ಚರ್ಮದಲ್ಲಿ ಕ್ಷಾರೀಯತೆ ಹೆಚ್ಚಾಗಿದ್ದರೆ ತಲೆಹೊಟ್ಟಿನ ಜೊತೆಗೇ ಕೊಂಚ ಉರಿಯೂ ಆವರಿಸಿರುತ್ತದೆ. ವಿಶೇಷವಾಗಿ ತಲೆಗೆ ಬಾಚಣಿಗೆ ತಾಗಿಸಿದಾದ ನೋವು ಕಾಣಿಸಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ಲೋಳೆಸರ ಮತ್ತು ಲಿಂಬೆರಸದ ಬಳಕೆ ಸೂಕ್ತವಾಗಿದೆ. ಲಿಂಬೆರಸ ಆಮ್ಲೀಯವಾಗಿದ್ದು ಕ್ಷಾರೀಯ ತಲೆಹೊಟ್ಟಿನ ಪ್ರಭಾವವನ್ನು ಕಡಿಮೆಗೊಳಿಸಿ ಪಿಎಚ್ ಮಟ್ಟವನ್ನು ಸರಿದೂಗಿಸುತ್ತದೆ. ಅಲ್ಲದೇ ಮುಕ್ಕಾಲು ಪಾಲು ಚರ್ಮದ ಪಕಳೆ ಎದ್ದಿದ್ದು ಕೊಂಚವೇ ಚರ್ಮಕ್ಕೆ ಅಂಟಿಕೊಂಡಿದ್ದವನ್ನೆಲ್ಲಾ ಸಡಿಲಗೊಳಿಸಿ ನಿವಾರಣೆಯಾಗಲು ಸಹಕರಿಸುತ್ತದೆ. ಅಲ್ಲದೇ ಕೂದಲ ಕಾಂತಿಯೂ ಹೆಚ್ಚುತ್ತದೆ.


ಇದಕ್ಕಾಗಿ ಮೂರು ಚಿಕ್ಕ ಚಮಚ ಲೋಳೆಸರದ ದ್ರವ ಮತ್ತು ಎರಡು ಚಿಕ್ಕ ಚಮಚ ಈಗತಾನೇ ಹಿಂಡಿದ ಲಿಂಬೆರಸವನ್ನು ಸೇರಿಸಿ ಚೆನ್ನಾಗಿ ಕಲಕಿ. ಇದನ್ನು ಕೂಡಲೇ ತಲೆಗೂದಲ ಬುಡಕ್ಕೆ ನಯವಾದ ಮಸಾಜ್ ಮೂಲಕ ಹಚ್ಚಿ ಇಡಿಯ ತಲೆ ಆವರಿಸುವಂತೆ ಮಾಡಿ. ಬಳಿಕ ಕೊಂಚ ಹೊತ್ತು ಮಸಾಜ್ ಮುಂದುವರೆಸಿ. ಸಂಜೆಯ ಹೊತ್ತು ಈ ದ್ರವವನ್ನು ಹಚ್ಚಿ ರಾತ್ರಿಯಿಡೀ ಒಣಗಲು ಬಿಡಿ. ಮರುದಿನ ಬೆಳಿಗ್ಗೆ ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ.
English summary

How to Use Aloe Vera Gel for Dandruff

There are several method which can help you get rid of the dandruff faster but there is a very naturally occurring product which has several benefits. We are talking about aloe vera gel. Yes Aloe vera gel is highly effective product. This gives nourishment and also heals the skin. The dryness can be easily cured and healed by aloe vera.
Story first published: Friday, March 11, 2016, 20:31 [IST]
X
Desktop Bottom Promotion