For Quick Alerts
ALLOW NOTIFICATIONS  
For Daily Alerts

Fathers Day:ಹೋಗಿ ಬರುತ್ತೇನೆ ಮಗಳೇ ಅನ್ನಲಿಲ್ಲ, ನನ್ನ ಮಗಳ ಬೆನ್ನ ಹಿಂದೆ ಇರುತ್ತೇನೆ ಅಂದಿದ್ದಷ್ಟೇ

By Jaya
|

ಅಪ್ಪ ಎಂದರೆ ಪದಗಳಿಲ್ಲದ ಪಲ್ಲವಿ. ವಾತ್ಯಲ್ಯದ ಆಳವರಿಯಲಾಗದ ಸಾಗರ, ಸದಾ ರಕ್ಷಾಕವಚವಾಗಿರುವ ಕೊನೆಯೇ ಇಲ್ಲದ ದಿಗಂತ. ಪೂರ್ಣವಿರಾಮವಿಲ್ಲದ ಸಾಲು, ಇನ್ನು ಏನೇನೋ! ಹೌದು ಹೆಚ್ಚಿನ ಹೆಣ್ಣುಮಕ್ಕಳಂತೆ ನನ್ನಪ್ಪ ನನ್ನ ಪ್ರಥಮ ಪ್ರೀತಿ, ಅದರ ಜೊತೆಗೆ ನನ್ನ ಕನಸಿನ ಕನ್ನಡಿ. ಮನಸಿನ ಮುನ್ನುಡಿ. ಬದುಕಿನ ಚೆನ್ನುಡಿ.

ವೃತ್ತಿಯಲ್ಲಿ ಪಾಠ ಹೇಳುವ ಗುರುವಾಗಿದ್ದ ನನ್ನ ಅಪ್ಪ ಹಣೆಬರಹವನ್ನೇ ಬದಲಿಸಬಲ್ಲೆ ಎನ್ನುತ್ತಿದ್ದ ಆತ್ಮವಿಶ್ವಾಸಿ. ಸತ್ಯ ನನ್ನ ಕಡೆಗಿದ್ದರೆ ದೈವ, ದೆವ್ವವನ್ನು ಎದುರು ಹಾಕಿಕೊಳ್ಳಬಲ್ಲೆ ಎನ್ನುತ್ತಿದ್ದ ಧೈರ್ಯಶಾಲಿ. ತಾನು ಸರಿಯಾಗಿದ್ದಲ್ಲಿ, ಯಾರ ವಿರೋಧ ಬೇಕಾದರೂ ಕಟ್ಟಿಕೊಳ್ಳುತ್ತಿದ್ದ ನೇರ ನುಡಿಯ ಹುಂಬ. ಅಂದುಕೊಂಡಿದ್ದನ್ನ ಮಾಡಿಯೇ ತೀರುತ್ತಿದ್ದ ಛಲಗಾರ. ತನ್ನದೇ ಹಾದಿಯಲ್ಲಿ ಯಾರ ಹಂಗಿಲ್ಲದೇ ನಡೆಯುತ್ತಿದ್ದ ಒಂಟಿ ಸಲಗ. ಯಾರಿಗೂ ಬಗ್ಗದೆ, ಸಾವಿಗೂ ಜಗ್ಗದೇ ಎದೆಯುಬ್ಬಿಸಿ ಬದುಕಿದ ಅವನದು ಅಸಾಮಾನ್ಯ ವ್ಯಕ್ತಿತ್ವ .

ನಾನು ನಿನ್ನ ಜೀವನವನ್ನೇ ಪಾಠವನ್ನಾಗಿ ಸ್ವೀಕರಿಸಿದೆ

ನಾನು ನಿನ್ನ ಜೀವನವನ್ನೇ ಪಾಠವನ್ನಾಗಿ ಸ್ವೀಕರಿಸಿದೆ

ನನ್ನ ಅಕ್ಕಂದಿರು ಮತ್ತು ಅಣ್ಣಂದಿರಿಗೆಲ್ಲ ಶಾಲೆಯಲ್ಲಿ ಗುರುವಾಗಿ ಅಪ್ಪನ ಪಾಠ ಕೇಳಿದರೆ, ನಾನು ಅವನ ಜೀವನವನ್ನೇ ಪಾಠವನ್ನಾಗಿ ಸ್ವೀಕರಿಸಿದೆ . ಮಹಾತ್ವಾಕಾಂಕ್ಷಿಯಾಗಿದ್ದ ನನ್ನಪ್ಪ ಎಷ್ಟೇ ಪ್ರಯತ್ನಪಟ್ಟರೂ ಅವನಂದುಕೊಂಡಿದ್ದ ಹಲವು ಗುರಿಗಳನ್ನು ಸಾಧಿಸಲಾಗಲಿಲ್ಲ. ತನ್ನ ಕನಸೆಲ್ಲವನ್ನ ನನ್ನ ಕಣ್ಣಲ್ಲಿ ಕಂಡರೂ ಹೀಗೆ ಆಗು, ಇದನ್ನೇ ಮಾಡು ಎಂದು ಒಮ್ಮೆಯೂ ಒತ್ತಡ ಹೇರಲಿಲ್ಲ. ದೇಶ ಪ್ರೇಮ, ದೈವ ಭಕ್ತಿ, ಸತ್ಯ, ಪ್ರಾಮಾಣಿಕತೆಯ ಬದುಕು ನಿನ್ನದಾಗಿರಲೆಂದ. ಎಲ್ಲರಂತೆ ಹಣ ಗಳಿಸು, ಸುಖದ ಸುಪ್ಪತ್ತಿಗೆಯಲ್ಲಿ ನೆಮ್ಮದಿಯಿಂದಿರು ಎನ್ನಲಿಲ್ಲ, ನೀನು ನೀನಾಗಿ ಬದುಕು; ಹಸಿದ, ನೊಂದ ಜೀವಗಳಿಗೆ ಆಧಾರವಾಗು ಅದೇ ನಿಜವಾದ ಬದುಕು ಎಂದು ಹೇಳಿಕೊಟ್ಟ.

ನಾನು ಹೇಳಿಕೊಳ್ಳದಿದ್ದರೂ, ತೋರಿಸಿಕೊಳ್ಳದಿದ್ದರೂ ನನ್ನ ಮನಸ್ಸನ್ನ ಸುಲಭವಾಗಿ ಅರಿಯುತ್ತಿದ್ದ ಅಪ್ಪ ನನ್ನ ನೋವಿಗೆ ಸ್ಪಂದಿಸಿ ಅದಕ್ಕೆ ಮುಕ್ತಿ ಕೊಡಿಸಿಬಿಡುತ್ತಿದ್ದ. ಮುಚ್ಚಿದ ಬಾಗಿಲ ಹಿಂದೆ ನಾನು ಶಬ್ದ ಮಾಡದೇ ಅತ್ತರೂ ಅವನಿಗೆ ಅದು ಹೇಗೆ ತಿಳಿಯುತ್ತಿತ್ತೋ ಗೊತ್ತಿಲ್ಲ. ನಮ್ಮೂರಿನ ಆವಾರಿ(ಬಂಡಿ ಹಬ್ಬದ ಬಳಿಕ ಕುರಿ, ಕೋಳಿಗಳನ್ನು ಬಲಿ ನೀಡುವ ಆಚರಣೆ)ಯಲ್ಲಿ ಕೋಳಿ ಬಲಿ ನೀಡುವುದನ್ನು ಅವನು ಏಕಾಏಕಿ ನಿಲ್ಲಿಸಿದಾಗ ಅದು ನನಗೆ ಸ್ಪಷ್ಟವಾಗಿತ್ತು. ಸಂಪ್ರದಾಯವಾದಿಯಾದರೂ ದೈವದ ಹೆಸರಲ್ಲಿ ಮೂಕ ಪ್ರಾಣಿಗಳ ಬಲಿಯನ್ನು ಅವನು ಖಂಡಿಸಿದ್ದು ಅವನೇನು ಎಂಬುದನ್ನು ಎಳೆಯ ಪ್ರಾಯದಲ್ಲೇ ನನಗೆ ಪರಿಚಯ ಮಾಡಿಸಿತ್ತು.

ಸಾವಿನ ಭಯ ಅವನಿಗೆ ಇರಲೇ ಇಲ್ಲ

ಸಾವಿನ ಭಯ ಅವನಿಗೆ ಇರಲೇ ಇಲ್ಲ

28ನೇ ವಯಸ್ಸಿಗೆ ಹಲ್ಲನ್ನೆಲ್ಲ ಕಳೆದುಕೊಂಡಿದ್ದ ಅಪ್ಪನಿಗೆ ನಿವೃತ್ತಿಯ ಬೆನ್ನಲ್ಲೇ ಬಾಯಿಯ ಕ್ಯಾನ್ಸರ್ ಎಂಬ ಮಹಾಮಾರಿ ಧುತ್ತೆಂದು ಬಂದೆರಗಿತ್ತು. ಆದರೂ ಆತ ಧೃತಿಗೆಡಲಿಲ್ಲ. ಅದ್ಯಾವ ಲೆಕ್ಕ, ನನಗೆ ಆ ಕಾಯಿಲೆ ಬರಲು ಸಾಧ್ಯವೇ ಇಲ್ಲ ಎನ್ನುತ್ತ ಆತ್ಮವಿಶ್ವಾಸದಿಂದ ಬದುಕಿದ. ಯಮಯಾತನೆಯಲ್ಲಿಯೂ ಒಂದು ದಿನ ಕೂಡ ನೋವು ಎಂದು ಕಿರುಚಲಿಲ್ಲ. ಎಳೆಯ ಪ್ರಾಯದಿಂದ ರೂಢಿಸಿಕೊಂಡಿದ್ದ ಯೋಗ, ಧ್ಯಾನ, ದೈವಭಕ್ತಿ, ಕಷ್ಟ ಸಹಿಷ್ಣುತೆ ಅವನನ್ನು ಗಟ್ಟಿಗನಾಗಿಸಿದ್ದವು. ಪ್ರಾಣ ಬಿಡುವ ಕೆಲವೇ ದಿನಗಳ ಹಿಂದೆ ಕೂಡ 30 ಕಿಲೋಮೀಟರ್ ಸೈಕಲ್ ತುಳಿದಿದ್ದ. ಅಸಹನೀಯ ದೈಹಿಕ ಬಾಧೆಯ ನಡುವೆಯೂ ನನ್ನ ಪತ್ನಿ ಹೇಗಿದ್ದಳೋ ಹಾಗೆ ಇರಲಿ ಎಂದು ಸೂಚ್ಯವಾಗಿ ಹೇಳುತ್ತಲೇ ಇದ್ದ. ಅವಳಿಗೆ ವಿಧವೆ ಪಟ್ಟ ನೀಡಿ ಮಾನಸಿಕವಾಗಿ ಹಿಂಸಿಸಬಹುದೆಂಬ ಭಯ ಅವನ ಕಾಡಿತ್ತು. ಆದರೆ ಸಾವಿನ ಭಯ ಅವನಿಗೆ ಇರಲೇ ಇಲ್ಲ. ಎಂದಿಗೂ ಮಗಳ ಕೈ ಬಿಡಬೇಡ ಎಂದು ನನ್ನ ಆತ್ಮೀಯ ಸ್ನೇಹಿತನ ಕೈ ಹಿಡಿದು ಪದೇ ಪದೇ ವಚನ ತೆಗೆದುಕೊಂಡ ಅಪ್ಪ, ನನ್ನ ಮಗಳ ಬೆನ್ನಿಗೆ ಸದಾ ಇರುತ್ತೇನೆ, ನನಗವಳದೇ ಚಿಂತೆ ಎಂದು ನನಗಾಗಿ ಕನವರಿಸುತ್ತಲೇ ಇದ್ದ.

ಅವನೇ ಬಿತ್ತಿದ್ದ ಆದರ್ಶ ಮತ್ತು ಕನಸುಗಳೊಂದಿಗೆ

ಅವನೇ ಬಿತ್ತಿದ್ದ ಆದರ್ಶ ಮತ್ತು ಕನಸುಗಳೊಂದಿಗೆ

ಹೋಗಿ ಬರುತ್ತೇನೆ ಮಗಳೇ ಅನ್ನಲಿಲ್ಲ. ನಿದ್ದೆಗಣ್ಣಲ್ಲಿ ಎದ್ದು ಓಡಿದೆ. ನನ್ನ ಮಗಳ ಬೆನ್ನ ಹಿಂದೆ ಇರುತ್ತೇನೆ ಅಂದಿದ್ದಷ್ಟೇ ಅದರ ಕುರುಹು ನಾ ಕಾಣುತ್ತಿಲ್ಲ. ನಿಜವಾಗಿಯೂ ಕಾಯುತ್ತಿದ್ದೇನೆ ಅಪ್ಪ.. ಸೈಕಲ್ ಮೇಲೆ ಕುಳಿತುಕೊಂಡು ಶಾಲೆಗೆ ಹೋಗಲು ಅಲ್ಲ ಅಪ್ಪ. ನೀ ತಂದ ಶೇಂಗಾ ಚಿಕ್ಕಿ ಮೆಲ್ಲಲು ಅಲ್ಲ. ನೀ ಪೂಜೆ ಮಾಡುವಾಗ ಅಣಿ ಮಾಡಿಕೊಡಲು ಅಲ್ಲ, ಜತೆ ಸೇರಿ ಆಯಿನಾ ಕಾಡಲೂ ಅಲ್ಲ. ಆತ್ಮಸ್ವರೂಪಿಯಾದ ನೀ ಹೇಗಿರುವೆ, ಎಲ್ಲಿರುವೆ ಎಂದು ತಿಳಿಯಲಷ್ಟೇ.. ಈಗಲಾದರೂ ನೀ ಸಂತೋಷವಾಗಿರುವೆಯಾ ಎಂದು ಅರಿಯಲಷ್ಟೇ...

ಎಲ್ಲೇ ಇದ್ದರು ಅವನ ಆತ್ಮ ತೃಪ್ತವಾಗಿರಲಿ ಎಂದು ಪ್ರಾರ್ಥಿಸುತ್ತ ಯಾವುದಾದರು ರೂಪದಲ್ಲಿ ಮರಳುವನೆಂದು ಕಾಯುತ್ತಿದ್ದೇನೆ. ಅವನೇ ಬಿತ್ತಿದ್ದ ಆದರ್ಶ ಮತ್ತು ಕನಸುಗಳೊಂದಿಗೆ...

English summary

Fathers Day Special Article By Jaya

Fathers Day Special Article By Jaya, Read on...
Story first published: Sunday, June 19, 2022, 7:33 [IST]
X
Desktop Bottom Promotion