For Quick Alerts
ALLOW NOTIFICATIONS  
For Daily Alerts

ಸ್ನೇಹದ ಗಡಿ ದಾಟಿ ನುಸುಳಿದ ಪ್ರೇಮ

By ಅಪರ್ಣಾ ಎ.ಎಸ್, ಪುತ್ತೂರು
|

ನಾ ಏಕಾಂತದಲಿ ನಿನ್ನ ನೆನೆಯುತ್ತಾ ಕಾಯುವಾಗ, ನೀ ನಗುವಾದೆ ಈ ಜೀವಕೆ! ನಿನ್ನೊಂದಿಗೆ ಕಳೆದ ಪ್ರತಿಯೊಂದು ಕ್ಷಣಗಳು ಕನಸುಗಳಾಗಿ ಕೈಹಿಡಿಯೆ ನಾ ಬರೆದಿರುವೆ ಭಾವಗಳ ಬರವಣಿಗೆ! ಬಿಡದೇ ಕಾಡುವ ನೆನೆಪುಗಳ ಹಿಂದೆ ಬರೆದಿಟ್ಟ ಸಾಲುಗಳು ನೂರಾರು ಹಾಗೊಮ್ಮೆ ಹೀಗೊಮ್ಮೆ ಆಗಾಗ ಕದತಟ್ಟಿ ಒಳನುಸುಳಿ ಮನಪುಳಕಿಸಿ ಹೋಗುವವು!

ಎಲ್ಲರ ಥರ ನಾವಿಬ್ಬರು ಒಳ್ಳೆ ಸ್ನೇಹಿತರು! ಆದರೆ ಹೇಗ್ಹೇಳೋದು, ಈ ಪ್ರೀತಿ ಅನ್ನೋದಿದ್ಯಲ್ಲ ಗೊತ್ತಾಗದೇ ಸದ್ದಿಲ್ಲದೇ ಯಾವಾಗಲೋ ಈ ಹೃದಯದ ಒಳಗೆ ಸೇರಿಬಿಡುತ್ತೆ. ನನ್ನೊಳಗೆ ನಿನ್ನ ಬಗ್ಗೆ ಕಾಣಿಸುತ್ತಿದ್ದ ಪೊಸೆಸಿವ್‍ನೆಸ್ ಅದ್ಯಾಕೋ ಇತ್ತೀಚೆಗೆ ಜಾಸ್ತಿಯಾಗ್ತಾ ಇದೆ ಅಂತ ನನಗೇ ಅನ್ನಿಸ್ತಾ ಇದೆ.

ನನ್ನ ಬಿಟ್ಟು ಬೇರೆಯವರ ಬಗ್ಗೆ ಮಾತುಕತೆ ಬಂದರಂತೂ ಮುಖ ಗಡಿಗೆಯಾಗಿಸಿಕೊಂಡು ಯುದ್ಧಕ್ಕೇ ನಿಂತುಬಿಡುವವಳು ನಾನು. ಅಷ್ಟು ಮುದ್ದು ನೀ ನನಗೆ! ಎದುರಿಗೆ ನೀನು ನಾನು ಬೆಸ್ಟ್ ಫ್ರೆಂಡ್ಸ್ ಅದ್ಯಾರು ಏನೇ ಹೇಳ್ತಾ ಇರ್ಲಿ ನಿನ್ನನ್ನ ಬಿಟ್ಕೊಡಲ್ಲ ಅಂತನ್ನುತ್ತಲೇ ನನ್ನ ಪ್ರೀತಿಯನ್ನು ಹೃದಯದಲ್ಲೇ ಬಚ್ಚಿಟ್ಟುಕೊಂಡಿದ್ದೆ.

ನಿನ್ನ ಕಣ್ಣ ಮೋಡಿಗೆ ಬಿದ್ದೆ ನಾನು

ನಿನ್ನ ಕಣ್ಣ ಮೋಡಿಗೆ ಬಿದ್ದೆ ನಾನು

ನಿನ್ನ ಸುಂದರ ಕಣ್ಣುಗಳ ಬಾಣದ ನೋಟ ಮಾಡುವ ಮೋಡಿಗಲ್ಲವೇ ನಾ ಬಿದ್ದಿದ್ದು! ನೀನೋ ಹಾಕಿ ಆಟಗಾರ, ಊರಲ್ಲೇಲ್ಲಾ ನಿನ್ನದೇ ಗುಣಗಾನ. ನೀನಾಡುವ ಪ್ರತೀ ಮ್ಯಾಚ್‍ಗೆ ನಾನಲ್ಲಿರಲೆಬೇಕಿತ್ತು.

ಮೊದಲೇ ಚುರುಕು ಕಣ್ಣು ನಿನ್ನದು ನೀ ಸಿದ್ಧವಾಗುವಾಗ ನಾ ನಿನ್ನ ದಿಟ್ಟಿಸಿ ನೋಡುವಾಗೆಲ್ಲಾ ಹಾಕಿ ಸ್ಟಿಕ್ ಅಡ್ಡಾಡಿಸುತ್ತಾ ಏನು ಕೋತಿ ಹಂಗ್ ಗುರಾಯಿಸ್ತಾ ಇದ್ದೀಯಾ? ಹಂಗೆಲ್ಲಾ ನೋಡ್ಬೇಡ್ವೇ ನಂಗ್ ದೃಷ್ಟಿ ಆಗ್ಬಿಡತ್ತೆ ಅಂತ ಹೇಳಿ ಆಟ ಆಡೋಕೆ ಹೋಗ್ತಿದ್ದೆ!

ನಿನ್ನ ಈ ಮಾದರಿಯ ಆಟಕ್ಕೇ ಆ ಹಾಕಿ ಸ್ಟಿಕ್ ಹಿಡಿದು ಮಾಡುವ ಮ್ಯಾಜಿಕ್‍ಗೇ ಅಲ್ಲವೇ ಆಗಾಗ ನಾ ಮನಸೋಲುತ್ತಿದ್ದದ್ದು! ನೀನೊಂದು ಥರ ಸಂಧ್ಯಾರಾಗ ಕಣೋ ನನಗೆ!

ಬಾಲ್ಯದ ಗೆಳೆತನ ಪ್ರೀತಿಯಾಗಿ ಬದಲಾಯಿತು

ಬಾಲ್ಯದ ಗೆಳೆತನ ಪ್ರೀತಿಯಾಗಿ ಬದಲಾಯಿತು

ನನ್ನ ಬೆಳಗೂ ನೀನು.... ನನ್ನ ಅನುಕ್ಷಣವೂ ನೀನು! ನೀನೆ ನನ್ನ ಆಂತರ್ಯ ನೀನೆ ನನ್ನ ಸರ್ವಸ್ವ! ಅಬ್ಬಾ ನಾ ಅರಿಯೆ ಅದ್ಯಾವಾಗ ನೀ ನನ್ನ ತನುಮನವ ಅವರಿಸಿಕೊಂಡು ಬಿಟ್ಟಿದ್ದೆ. ಅಲ್ಲಾ ಬಾಲ್ಯದ ಗೆಳೆತನ ನಮ್ಮದು ಅದ್ಯಾವಾಗ ಪ್ರೀತಿಗೆ ಬದಲಾಯಿಸಿತೋ ಅರಿವಿಗೆ ಬಾರದು. ಹೇಗೋ ಇದ್ದ ಜೀವನ ಹೆಂಗೆಂಗೋ ಆಗಿ ಇನ್ಹೆಂಗೋ ತಿರುಗಿ ಮತ್ತೆ ನಿನ್ನ ಜೀವನಕ್ಕೆ ಎಳೆದು ತಂದಿತ್ತು. ಅದೊಂದು ಸುಂದರ ನೆನೆವರಿಕೆ ನನಗೆ.

ನಿನಗಾಗಿ ಸಿಂಗರಿಸಿಕೊಂಡೆ

ನಿನಗಾಗಿ ಸಿಂಗರಿಸಿಕೊಂಡೆ

ನೀನಂದು 'ಯಾವತ್ತೂ ಸಿಗುವ ಜಾಗದಲ್ಲಿ ಸಿಗು ಹಾ ಬರೋವಾಗ ಆವತ್ತು ಮಾಲ್‍ನಲ್ಲಿ ನಾ ಕೊಡಿಸಿದ ಕೆಂಪು ಬಣ್ಣದ ಸೆಲ್ವಾರ್ ಹಾಕು. ಅಮ್ಮಾ ತಾಯಿ ಮತ್ತೆ ಯಾವತ್ತಿನ ಥರ ನಿದ್ದೆಯಿಂದ ಎದ್ದು ಬಂದಿರೋ ಹಂಗೇ ಬರಬೇಡ್ವೇ ಸ್ವಲ್ಪ ಚೆನ್ನಾಗಿ ಕಾಣೋ ಥರ ಬಾ' ಅಂದಿದ್ದೆ. ಅದೇ ಮೊದಲು ನೀನನ್ನ ಸಿಂಗರಿಸಿಕೊಂಡು ಬರೋಕೆ ಹೇಳಿದ್ದು ! ನೀ ಹೇಳಿದಂತೆಯೇ ಬಂದಿದ್ದವಳಿಗೆ ನೀ ಮಾಡಿದ್ದು ಮರೆಯಲಾಗದಂತಹ ಅಚ್ಚರಿ.

ಪ್ರೇಮದ ಕಾರಂಜಿ ಚಿಮ್ಮಿದಾಗ

ಪ್ರೇಮದ ಕಾರಂಜಿ ಚಿಮ್ಮಿದಾಗ

ಸುತ್ತಲೂ ಕೆಂಬಣ್ಣದ ಬಲೂನ್, ನಾ ಬರುವ ದಾರಿಯೆಲ್ಲಾ ಕೆಂಗುಲಾಬಿಯಿಂದ ಸಿಂಗರಿಸಿದ್ದೆ, ಎಲ್ಲಿ ನೋಡಿದರೂ ಕೆಂಪು ನಾ ಬರುತ್ತಿದ್ದಂತೆಯೇ ಸುತ್ತಲೂ ಮಿನುಗುವ ದೀಪಗಳು ಒಮ್ಮಿಂದೊಮ್ಮೆಲೇ ಹೊತ್ತಿಕೊಂಡು ಉರಿಯುವಾಗ ಮುಂದೆ ಬಂದ ನನಗೆ ಕಣ್ಮುಚ್ಚು ಅನ್ನುವ ನಿನ್ನ ಧ್ವನಿ ಹಾಗೆ 3 ನಿಮಿಷದ ಬಳಿಕೆ ನಾ ಕಣ್ಣು ತೆರೆದಾಗ ನೀ ದುತ್ತನೇ ಎದುರಿಗೆ ರಾಜಕುಮಾರನಂತೆ ನಿಂತಿದ್ದೆ!

ಆ ತಿಳಿಗಂಧದ ಬಣ್ಣದ ಧಿರಿಸಿನಲ್ಲಿ ಮೊದಲೇ ಅಮುಲ್ ಬೇಬಿಯಂತಿದ್ದ ನೀನು ಮತ್ತೂ ಮುದ್ದಾಗಿ ಕಾಣುತ್ತಿದ್ದೆ. ಹಾಗೇ ಮುದ್ದಾಡುವ ಬಯಕೆಯನ್ನು ಒತ್ತಿಟ್ಟುಕೊಂಡು ಹಾಗೆ ನಿಂತಿದ್ದಾಗ ಗುಲಾಬಿ ದೂದಪೇಡಾಗಳೊಂದಿಗೆ ಪ್ರೇಮ ನಿವೇದನೆ ಮಾಡಿದಾಗ ಒಮ್ಮಿಂದೊಮ್ಮೆಲೇ ಬಣ್ಣ ಬಣ್ದ ಕಾರಂಜಿಗಳೂ ಚಿಮ್ಮತೊಡಗಿತ್ತು ನನ್ನ ಅಷ್ಟೂ ಕಲ್ಪನೆಗಳು ನನಸಾದ ಭಾವನೆ ನನಗೆ!

ನಿನ್ನ ನಿವೇದನೆ ನಿರೀಕ್ಷಿಸದವಳಿಗೆ ಮನತುಂಬಿ ಬಂದಿತ್ತು.. ಒಪ್ಪಿಕೊಳ್ಳದಿರಲು ಕಾರಣಗಳೇ ಇರಲಿಲ್ಲ ಯಾಕಂದ್ರೆ ಅದಾಗಲೇ ನಾ ನಿನಗೆ ಸೋತು ಹೋಗಿದ್ದೆ. ಹ್ಮ್ ಅಲ್ಲಿಂದ ಮತ್ತೆ ನೂರು ಕಾಲ ಜೊತೆಯಾಗಿರುವ ವಚನದೊಂದಿಗೆ ಜೊತೆ ಜೊತೆಯಲಿ ನಮ್ಮ ಪಯಣ! ಈ ಫೆಬ್ರವರಿ 14ಕ್ಕೆ ನೀನಿನ್ನೇನೋ ಅಚ್ಚರಿಯೊಂದಿಗೆ ನನ್ನೆದುರುಗೊಳ್ಳು ತಯಾರಿ ಮಾಡಿರುವೆ ಎಂಬುದರ ಅರಿವಿದೆ ನನಗೆ!

ಪನ್ನಾ....

English summary

Valentine Day Special Love Story Written By Aparna

Valentine Day Special Love Story Written By Aparna to kannada boldsky, Read on
X