For Quick Alerts
ALLOW NOTIFICATIONS  
For Daily Alerts

ಮೈನೆರೆದ ಮಗಳಿಗೆ ತಿನ್ನಿಸಿ ಎಳ್ಳು ಪಲದ್ಯ

By * ಸುಮಲತಾ ಭಟ್
|
Grown up girl needs more nurishment
ಮಹಾನಗರವೆಂಬ ಕಗ್ಗಾಡಿನಲ್ಲಿ ಫ್ಲಾಟುಗಳ ಮೇಲೆ ಬದುಕು. ಆ ಫ್ಲಾಟಿಗೊಂದು ಬಾಲ್ಕನಿ ಇದ್ದರೆ ಅಥವಾ ಟೆರೇಸಿಗೆ ಹೋಗಿ ಆಕಾಶ ನೋಡುವ ಅವಕಾಶ ಇದ್ದರೆ.... ಅಂತಹವರು ಅದೃಷ್ಟವಂತರು. ಆದರೆ ಹಾಗೆ ಆಕಾಶ ದಿಟ್ಟಿಸಿದಾಗಲೆಲ್ಲ ನೆನಪುಗಳೇ ಅಲ್ಲವೇ ದಾಂಗುಡಿ ಇಡುವುದು. ಯಾವುದೋ ಸಣ್ಣ ಹಳ್ಳಿಯಲ್ಲಿ ಕಳೆದ ಬಾಲ್ಯ, ಶಾಲೆ, ಕಲಿಕೆ, ಇನ್ನೇನೇನೋ ಹುಚ್ಚಾಟಗಳು... ಆ ಕಾಲದಲ್ಲಿ ನಮಗಿದ್ದ ಅವಕಾಶ ಈಗ ಮಕ್ಕಳಿಗಿಲ್ಲವಲ್ಲ ಅಂತ ಬೇಜಾರಾಗುವುದುಂಟು. ಈಗಿನ ಮಕ್ಕಳು ಏನಿದ್ದರೂ ಸ್ಕೂಲ್‌ ವಿಷ್ಯದಲ್ಲಿ ಸೂಪರ್ ಫಾಸ್ಟು.

ಮನೆಯೊಳಗೇ ಕ್ರಿಕೆಟ್‌ ಆಡುವ ಮಗ, ಮೊನ್ನೆಯಷ್ಟೇ ದೊಡ್ಡವಳಾದರೂ ಸಾಕಷ್ಟು ಆರೈಕೆಗಳಿಗೆ ಗಮನ ಕೊಡದೇ ಓದುತ್ತಿರುವ ಮಗಳನ್ನು ನೋಡಿದಾಗ ಕರುಳು ಚುಳ್‌ ಅನ್ನುತ್ತೆ. ತಾನು ದೊಡ್ಡವಳಾದಾಗ ಊರಿನಲ್ಲಿ ನಡೆದ ಸಂಭ್ರಮ, ಅಮ್ಮ ಮೂರು ವರ್ಷಗಳ ಕಾಲ ತಿನ್ನಿಸಿದ ತರಾವಳಿಯ ಮದ್ದುಗಳು ನೆನಪಾಗುತ್ತವೆ.

ಈ ಫ್ಲಾಟಿನಲ್ಲಿ ಅರಿಶಿಣ ಕುಂಕುಮದ ಸಂಭ್ರಮಕ್ಕೇನೂ ಕೊರತೆಯಿಲ್ಲ. ಆದರೆ ಆ 'ಅಪ್ಪ ಸೊಪ್ಪಿ"ನ ರಸ, 'ಈಂದಿನ" ಬೇರಿನ ಕಷಾಯ, 'ಹೊನ್ನಲ್ಕ"ನ ಸೊಪ್ಪಿನ ನೀರು... ಇವನ್ನೆಲ್ಲ ಒಣ ಬಿಸಿಲು ನೆಕ್ಕುತ್ತಿರುವ ಈ ನಗರದಲ್ಲಿ ಎಲ್ಲಿಂದ ತರಲಿ?

ಹಾಗಂತ ಊರಿನಲ್ಲಿರುವ ಅತ್ತೆಗೆ ಪತ್ರ ಬರೆದೆ. ಅತ್ತೆ ಸಮಾಧಾನ ಹೇಳಿ ಮತ್ತೆ ಪತ್ರ ಬರೆದರು : ಸೊಪ್ಪುಗಳು, ಚಿಗುರುಗಳು, ಸಿಗದೇ ಇರಬಹುದು. ಆದರೆ ಹುಡುಗಿಯ ಆರೋಗ್ಯಕ್ಕೆ ಬೇಕಾದ ಮೆಂತೆ, ಜೀರಿಗೆ, ಎಳ್ಳು ಪಲದ್ಯಗಳನ್ನು ಮಾಡಿಕೊಡುವುದಕ್ಕೇನೂ ತೊಂದರೆ ಇಲ್ಲವಲ್ಲ... ಎಂದು ನೆನಪಿಸಿ ಪಲದ್ಯ ಮಾಡುವ ಬಗೆಯನ್ನು ಬರೆದಿದ್ದರು.

ಹೌದು. ಪಲದ್ಯ ಹುಡುಗಿಯರಿಗೇನು, ನಿತ್ರಾಣವಿರುವ ಹೆಂಗಸರಿಗೂ ತ್ರಾಣ ಕೊಡುವ ತಿನಿಸು. ಮನೆಯಲ್ಲಿ ಮಕ್ಕಳಿಗೂ ದಿನವೂ ಒಂದೊಂದು ಸ್ಪೂನ್‌ ಪಲದ್ಯ ತಿನ್ನಿಸುವುದು, ಚ್ಯವನಪ್ರಾಶ ಲೇಹ್ಯ ತಿನ್ನಿಸುವುದಕ್ಕಿಂತ ನೂರು ಪಾಲು ಒಳ್ಳೆಯದು.

ಪಲದ್ಯ ಮಾಡುವುದು ತುಂಬ ಸುಲಭ. ಸಾಮಾನ್ಯವಾಗಿ ಎಳ್ಳು, ಮೆಂತೆ, ಜೀರಿಗೆ ಪಲದ್ಯ ಮಾಡುತ್ತಾರೆ. ಎಳ್ಳು ಪಲದ್ಯ ತಯಾರಿ ತಿಳಿದುಕೊಂಡರೆ ಉಳಿದುವಕ್ಕೆ ಅದೇ ಫಾರ್ಮುಲಾ.

ಬೇಕಾಗುವ ವಸ್ತುಗಳು : ಒಂದು ಪಾವು ಎಳ್ಳು. ಬಿಳಿ ಎಳ್ಳಾದರೆ ಒಳ್ಳೆಯದು. ಅಷ್ಟೇ ಪ್ರಮಾಣದಲ್ಲಿ ಅಂದರೆ ಒಂದು ಪಾವು ತುಪ್ಪ ಹಾಗೂ ಒಂದು ಪಾವು ಬೆಲ್ಲ.

ಮಾಡುವ ವಿಧಾನ: ಬಿಳೀ ಎಳ್ಳನ್ನು ಬಾಣಲೆಯಲ್ಲಿ ಹಾಕಿ, ಸ್ವಲ್ಪ ಬೆಚ್ಚಗೆ ಮಾಡಿಕೊಳ್ಳಬೇಕು. ನಂತರ ಈ ಎಳ್ಳನ್ನು ಮಿಕ್ಸಿಗೆ ಹಾಕಿ ಹುಡಿ ಮಾಡಿಕೊಳ್ಳಿ. ತೀರಾ ನುಣ್ಣಗಾಗಬೇಕಾಗಿಲ್ಲ.

ಈಗ ಬೆಲ್ಲ ಮತ್ತು ತುಪ್ಪವನ್ನು ಬಿಸಿ ಮಾಡಿ ಅದಕ್ಕೆ ಹುಡಿ ಮಾಡಿಟ್ಟುಕೊಂಡ ಎಳ್ಳನ್ನು ಸೇರಿಸಿ ಚೆನ್ನಾಗಿ ಬಿಸಿ ಮಾಡಿ ಮಗುಚಿ. ಪರಿಮಳ ಬೇಕಿದ್ದರೆ ಒಂದಿಷ್ಟು ಏಲಕ್ಕಿ ಪುಡಿ ಹಾಕಬಹುದು. ಇದನ್ನು ಬಾಟಲಿಯಲ್ಲಿ ಹಾಕಿಟ್ಟುಕೊಂಡರೆ ಒಂದೆರಡು ತಿಂಗಳ ಕಾಲ ಬಳಸಬಹುದು.

ಹೀಗೇ ಎಳ್ಳಿಗೆ ಬದಲಾಗಿ ಮೆಂತೆ ಹಾಗೂ ಜೀರಿಗೆ ಮಿಶ್ರಣಗಳಿಂದಲೂ ಪಲದ್ಯ ಮಾಡಬಹುದು. ಅಥವಾ ಅರ್ಧ ಪಾವು ಮೆಂತೆ ಮತ್ತು ಅರ್ಧ ಪಾವು ಜೀರಿಗೆಯ ಮಿಶ್ರಣದಿಂದಲೂ ಮಾಡಿದ ಪಲದ್ಯ ಆರೋಗ್ಯಕರ.

Story first published: Friday, September 3, 2010, 16:37 [IST]
X
Desktop Bottom Promotion