For Quick Alerts
ALLOW NOTIFICATIONS  
For Daily Alerts

ಹಯಗ್ರೀವ ನೆನೆಯದ ನರಜನ್ಮವೇಕೆ!

By Staff
|
Delicious sweet recipe Hayagriva (Courtesy : Tulasivana)
ಪುರಾಣ ಕಾಲದಲ್ಲಿ ಶ್ರೀ ವಾದಿರಾಜರು ತಲೆಯ ಮೇಲೆ ಕಡಲೆಬೇಳೆ ಮತ್ತು ಬೆಲ್ಲದ ಹೂರಣವನ್ನು ನೈವೇದ್ಯರೂಪದಲ್ಲಿ ತಲೆಯ ಮೇಲೆ ಹೊತ್ತುಕುಳಿತಿದ್ದಾಗ ವಿಷ್ಣು ಹಯ ಅಂದರೆ ಕುದುರೆಯ ರೂಪದಲ್ಲಿ ಬಂದು ನೈವೇದ್ಯ ಸ್ವೀಕರಿಸಿ ಹೋಗುತ್ತಾರೆ. ಈ ಕಾರಣದಿಂದಲೇ ಈ ಸಿಹಿ ತಿನಿಸಿಗೆ ಹಯಗ್ರೀವ ಅಂತ ಹೆಸರು ಬಂದಿದೆ ಎಂಬುದು ಒಂದು ವಾದ.

* ಚಂದ್ರಿಕಾ ಗುರುರಾಜ್, ಚೆನ್ನೈ

ಕಲಿಯುಗದ ಏಕೈಕ ದೇವರು ಎಂದೇ ಖ್ಯಾತರಾಗಿರುವ ಶ್ರೀ ರಾಘವೇಂದ್ರ ಸ್ವಾಮಿಗಳು ಯಾವುದೇ ಕುಲ, ಜಾತಿ, ಅಂತಸ್ತನ್ನು ಮೀರಿದ ಯತಿವರೇಣ್ಯರು. ಅನೇಕ ರಾಯರ ಮಠಗಳಲ್ಲಿ ಮೂರುದಿನಗಳ ಕಾಲವೂ ಅನ್ನಸಂತರ್ಪಣೆ ಕಾರ್ಯಕ್ರಮವಿರುತ್ತದೆ. ಲಕ್ಷಾನುಲಕ್ಷ ಭಕ್ತರು ಮಠಗಳಿಗೆ ಬಂದು ರಾಯರಿಗೆ ಭಕ್ತಿಪೂರ್ವಕವಾಗಿ ನಮಿಸಿ ಪ್ರಸಾದ ಸ್ವೀಕರಿಸಿ ಕೃತಾರ್ಥರಾಗುತ್ತಾರೆ.

ಈ ಅನ್ನಸಂತರ್ಪಣೆಗಳಲ್ಲಿ ಮತ್ತು ಮಾಧ್ವ ಬ್ರಾಹ್ಮಣರ ಮನೆಗಳಲ್ಲಿ ಶ್ರೀ ಮಧ್ವಾಚಾರ್ಯರಿಗೆ ಅತ್ಯಂತ ಪ್ರಿಯವಾದ ಹಯಗ್ರೀವ ಸಿಹಿ ಪದಾರ್ಥವನ್ನು ತಯಾರಿಸದೆ ಆರಾಧನೆ ಪೂರ್ಣಗೊಳ್ಳುವುದಿಲ್ಲ. ತಿಂದಷ್ಟೂ ತೃಪ್ತಿಯನ್ನು ತಂದುಕೊಡುವ ಸಿಹಿ ಹಯಗ್ರೀವ. ಮಧ್ವನವಮಿಯಂದು ತಪ್ಪದೆ ತಯಾರಾಗುವ ಈ ಸಿಹಿಯನ್ನು ರಾಯರ ಆರಾಧನೆಯಂದೂ ಮಾಡುತ್ತಾರೆ.

ಪುರಾಣ ಕಾಲದಲ್ಲಿ ಶ್ರೀ ವಾದಿರಾಜರು ತಲೆಯ ಮೇಲೆ ಕಡಲೆಬೇಳೆ ಮತ್ತು ಬೆಲ್ಲದ ಹೂರಣವನ್ನು ನೈವೇದ್ಯರೂಪದಲ್ಲಿ ತಲೆಯ ಮೇಲೆ ಹೊತ್ತುಕುಳಿತಿದ್ದಾಗ ವಿಷ್ಣು ಹಯ ಅಂದರೆ ಕುದುರೆಯ ರೂಪದಲ್ಲಿ ಬಂದು ನೈವೇದ್ಯ ಸ್ವೀಕರಿಸಿ ಹೋಗುತ್ತಾರೆ. ಈ ಕಾರಣದಿಂದಲೇ ಈ ಸಿಹಿ ತಿನಿಸಿಗೆ ಹಯಗ್ರೀವ ಅಂತ ಹೆಸರು ಬಂದಿದೆ ಎಂಬುದು ಒಂದು ವಾದ. ಈ ವಿವರಣೆಯಲ್ಲಿ ತಪ್ಪಿದ್ದರೆ ಅಥವಾ ತಿದ್ದುಪಡಿಯಿದ್ದರೆ ಬಲ್ಲವರು ತಿಳಿಸಬೇಕೆಂದು ವಿನಂತಿ.

ಹಯಗ್ರೀವದ ರುಚಿಯನ್ನು ತಿಂದವನೇ ಬಲ್ಲ. ಇದನ್ನು ಯಾರು ಬೇಕಾದರೂ ಯಾವ ಸಂದರ್ಭದಲ್ಲಿಯಾದರೂ ತಯಾರಿಸಿ ತಿನ್ನಬಹುದು. ಈಗ ಈ ಸಿಹಿಯನ್ನು ಮಾಡುವ ವಿಧಾನವನ್ನು ತಿಳಿಯೋಣ.

ಬೇಕಾಗುವ ಪದಾರ್ಥಗಳು

ಕಡಲೆಬೇಳೆ 1 ಕಪ್
ಬೆಲ್ಲ 1 ಕಪ್
ಒಣ ಕೊಬ್ಬರಿ ಅರ್ಧ ಕಪ್
ಗಸಗಸೆ 5 ಚಮಚದಷ್ಟು
ಒಣ ಹಣ್ಣುಗಳಾದ ಬಾದಾಮಿ, ಗೋಡಂಬಿ, ಒಣದ್ರಾಕ್ಷಿ ಇತ್ಯಾದಿ
ತುಪ್ಪ, ಏಲಕ್ಕಿ ಪುಡಿ, ಲವಂಗ

ಮಾಡುವ ವಿಧಾನ

* ಮೊದಲಿಗೆ ಕಡಲೆಬೇಳೆಯನ್ನು ಕುಕ್ಕರಿನಲ್ಲಿ ಇಟ್ಟು ಬೇಯಿಸಿ ತೆಗೆದಿಟ್ಟುಕೊಳ್ಳಬೇಕು. ಕುಕ್ಕರು ತಣ್ಣಗಾದನಂತರ ಬೇಳೆಯಲ್ಲಿದ್ದ ನೀರನ್ನು ಬಸಿಯಬೇಕು.
* ಒಣಹಣ್ಣುಗಳನ್ನು ಒಂದು ತವಾದಲ್ಲಿ ಚಮಚದಷ್ಟು ತುಪ್ಪ ಹಾಕಿ ಹುರಿದಿಟ್ಟುಕೊಳ್ಳಬೇಕು.
* ಗಸಗಸೆಯನ್ನು ಕೂಡ ಅರ್ಧ ಚಮಚ ತುಪ್ಪ ಹಾಕಿ ಹುರಿದಿಟ್ಟುಕೊಳ್ಳಬೇಕು.
* ನಂತರ ಹೆರಿದಿಟ್ಟುಕೊಂಡಿದ್ದ ಅಥವಾ ಕುಟ್ಟಿಪುಡಿ ಮಾಡಿಟ್ಟುಕೊಂಡಿದ್ದ ಬೆಲ್ಲಕ್ಕೆ ಸ್ವಲ್ಪ ನೀರು ಸೇರಿಸಿ ಒಲೆಯ ಮೇಲಿಟ್ಟು ನೀರು ಪಾಕವಾಗುವತನಕ ಕಾಯಿಸಬೇಕು.
* ಬೆಲ್ಲದ ಪಾಕ ತಯಾರುಗಾತ್ತಿದ್ದಂತೆ ಅದಕ್ಕೆ ಬೇಯಿಸಿ ನೀರು ಬಸಿದ ಕಡಲೆಬೇಳೆಯನ್ನು ಸುರಿಯಬೇಕು. ಅದಕ್ಕೆ ತುರಿದಿಟ್ಟುಕೊಂಡು ಒಣಕೊಬ್ಬರಿ, ಗಸಗಸೆ, ಡ್ರೈ ಫ್ರುಟ್ಸ್, ಏಲಕ್ಕಿ ಪುಡಿ, ಲವಂಗಗಳನ್ನು ಸೇರಿಸಿ ಮತ್ತೆ ಬೇಯಿಸಬೇಕು. ಈ ಮಿಶ್ರಣ ಎಲ್ಲೂ ತಳಹಿಡಿಯದಂತೆ ಕೈಯಾಡಿಸುತ್ತಲೇ ಇರಬೇಕು. ಇಲ್ಲದಿದ್ದರೆ ಬೇಗನೆ ಹೊತ್ತಿ ರುಚಿಯೆಲ್ಲ ಕೆಟ್ಟುಹೋಗುತ್ತದೆ.

ಊಟ ಮಾಡುವಾಗ ರಾಯರನ್ನು ಮನದಲ್ಲೇ ನೆನೆದು ಹಯಗ್ರೀವವನ್ನು ಮೆಲ್ಲಿರಿ.

Story first published: Friday, May 28, 2010, 15:52 [IST]
X
Desktop Bottom Promotion