For Quick Alerts
ALLOW NOTIFICATIONS  
For Daily Alerts

ಸಿಹಿ ತಿನಿಸುಗಳ ರಾಜ ಶ್ರೀಖಂಡ

By * ಪ್ರಸಾದ ನಾಯಿಕ
|
Srikhand, north karnataka sweet dish
ಈ ಸಿಹಿ ತಿನಿಸಿಗೆ ಶ್ರೀಖಂಡ ಎಂಬ ವಿಚಿತ್ರ ಹೆಸರು ಹೇಗೆ ಬಂತೋ ಗೊತ್ತಿಲ್ಲ. ಒಟ್ಟಿನಲ್ಲಿ ದಕ್ಷಿಣ ಕರ್ನಾಟಕದಲ್ಲಿ ಒಬ್ಬಟ್ಟು ಅಥವಾ ಹೋಳಿಗೆಗಳಿಲ್ಲದೇ ಅನೇಕ ಹಬ್ಬಗಳು ಹೇಗೆ ಮುಂದೆ ಸಾಗುವುದಿಲ್ಲವೋ, ಉತ್ತರ ಕರ್ನಾಟಕದಲ್ಲಿ ಶ್ರೀಖಂಡವಿಲ್ಲದೆ ಅನೇಕ ಹಬ್ಬಹರಿದಿನಗಳಲ್ಲಿ ಊಟ ಮುಕ್ತಾಯವಾಗುವುದಿಲ್ಲ. ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಶ್ರೀಖಂಡ ಸರ್ವೇಸಾಮಾನ್ಯವಾಗಿ ತಯಾರಿಸುವ ಸಿಹಿತಿನಿಸು.

ಇನ್ನು ಇದರ ರುಚಿಯೋ... ಭೇಷ್ ಭೇಷ್ ಅನ್ನುವಷ್ಟು ಸಖತ್ತಾಗಿರುತ್ತದೆ. ಈ ಸಿಹಿಯನ್ನು ಊಟದ ಜೊತೆ ಮಾತ್ರವಲ್ಲ ತಿಂಡಿಯೊಡನೆಯೂ ತಿನ್ನಬಹುದು. ಅದರಲ್ಲೂ ಪೂರಿಯೊಂದಿಗೆ ಶ್ರೀಖಂಡ ಹೇಳಿ ಮಾಡಿಸಿದ ಜೋಡಿ. ತಿಂದರೆ ಪೂರಿಗಳ ಲೆಕ್ಕ ಸಿಗಲಿಕ್ಕಿಲ್ಲ, ಬಿಟ್ಟರೆ ಶ್ರೀಖಂಡದ ರುಚಿ ದಕ್ಕಲಿಕ್ಕಿಲ್ಲ.

ಇದನ್ನು ತಯಾರಿಸುವ ಬಗೆ ತುಂಬಾ ಕ್ಲಿಷ್ಟಕರವಾಗಿರಬಹುದೆಂದೇನಾದರೂ ನೀವು ಊಹಿಸಿದ್ದರೆ, ನಿಮ್ಮ ಊಹೆಯನ್ನು ಪಕ್ಕಕ್ಕಿಡಿ. ಬೇರೆ ಯಾವುದೇ ಸಿಹಿಯನ್ನು ತಯಾರಿಸುವುದಕ್ಕಿಂತ ಸುಲಭವಾಗಿ ಇದನ್ನು ತಯಾರಿಸಬಹುದು. ಇದನ್ನು ನಂಬಲು ಒಮ್ಮೆ ಮನೆಯಲ್ಲಿಯೇ ಶ್ರೀಖಂಡ ತಯಾರಿಸಿ ನೋಡಿ.

ಬೇಕಾಗುವ ಪದಾರ್ಥಗಳು

* ಗಟ್ಟಿ ಮೊಸರು 6 ಬಟ್ಟಲು
* ಸಕ್ಕರೆ 3 ಬಟ್ಟಲು
* ಕೇಸರಿ ಬಣ್ಣ
* ಏಲಕ್ಕಿ ಪುಡಿ
* ಗೋಡಂಬಿ, ಒಣದ್ರಾಕ್ಷಿ, ಬಾದಾಮಿ

ಮಾಡುವ ವಿಧಾನ

ಉತ್ತಮ ಗುಣಮಟ್ಟದ ಹಾಲು ತಂದು ಬೆಳಿಗ್ಗೆಯೇ ಹೆಪ್ಪು ಹಾಕಿ. ಸಾಯಂಕಾಲದ ಹೊತ್ತಿಗೆ ಮೊಸರಾಗುತ್ತಿದ್ದಂತೆ ಅದನ್ನು ತೆಳ್ಳನೆಯ ಬಟ್ಟೆಯಲ್ಲಿ ಸುರಿದು ಗಂಟುಕಟ್ಟಿ ಗೂಟಕ್ಕೆ ನೇತು ಹಾಕಿ. ಬೆಳಗಿನ ಜಾವಕ್ಕೆ ನೀರೆಲ್ಲ ಬಸಿದನಂತರ ಒಂದು ಪಾತ್ರೆಗೆ ತೆಗೆದು ಸಕ್ಕರೆ ಹಾಕಿ ಚೆನ್ನಾಗಿ ಕೈಯಾಡಿಸಿ. ಜೊತೆಜೊತೆಗೇ ಏಲಕ್ಕಿ ಪುಡಿ ಮತ್ತು ಕೇಸರಿ ಬಣ್ಣ ಹಾಕಿ ಕೈಯಾಡಿಸಿ. ಮೊಸರು ಹುಳಿಯಾಗಿರುವುದರಿಂದ ರುಚಿಗೆ ತಕ್ಕಷ್ಟು ಸಕ್ಕರೇ ಸೇರಿಸಿ. ದಟ್ಸಾಲ್! ಸಿಹಿಸಿಹಿ ಶ್ರೀಖಂಡ ರೆಡಿ.

ಇದನ್ನು ಪೂರಿ ಅಥವಾ ಚಪಾತಿಯೊಂದಿಗೆ ತಾಜಾ ಇರುವಾಗಲೇ ತಿನ್ನಬಹುದು. ಅಥವಾ ಬೇಸಿಗೆಯಲ್ಲಿ ಅದನ್ನು ಫ್ರಿಜ್ಜಲ್ಲಿ ಇಟ್ಟು ತಣ್ಣಗಾದ ನಂತರ ಮೆಲ್ಲಬಹುದು.

ಮರೆತ ಮಾತು : ಕೆಲ ಓದುಗರು ತಿಳಿಸಿದಂತೆ, ಗೋಡಂಬಿ, ಒಣದ್ರಾಕ್ಷಿ, ಬಾದಾಮಿಗಳನ್ನು ಶ್ರೀಖಂಡಕ್ಕೆ ಸೇರಿದರೆ ಅದರ ರುಚಿ ಮತ್ತಷ್ಟು ಜಾಸ್ತಿಯಾಗುತ್ತದೆ.

ಇದನ್ನೂ ಓದಿರಿ

ತಿಂಡಿ ಎಂಬ ಪದ ತಂದ ಪೇಚಾಟ

X
Desktop Bottom Promotion