For Quick Alerts
ALLOW NOTIFICATIONS  
For Daily Alerts

ಆಹಾ..! ಬಿಸಿ ಬಿಸಿ ಆಲೂ-ಬ್ರೆಡ್ ರೋಲ್‌ ರೆಸಿಪಿ

By Arshad
|

ಅಡುಗೆಯಲ್ಲಿ ಆಲೂಗಡ್ಡೆಗೆ ವಿಶಿಷ್ಟ ಸ್ಥಾನವಿದೆ. ಏನೆಂದರೆ ಇದರೊಂದಿಗೆ ಇನ್ನೊಂದು ತರಕಾರಿ ಅಥವಾ ಬೇರೆ ಆಹಾರಸಾಮಾಗ್ರಿಯನ್ನು ಜೊತೆಯಾಗಿಸಿ ತಯಾರಿಸಬಹುದಾದ ಖಾದ್ಯಗಳ ಸಂಖ್ಯೆ ಅತಿ ಹೆಚ್ಚಿರುವುದು. ಆಲೂ ಗೋಬಿ, ಆಲೂ ಮಟರ್, ಆಲೂ ಬೈಂಗನ್,.. ಹೀಗೇ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಬರೆಯ ಆಲುಗಡ್ಡೆಯನ್ನು ಉದ್ದಕ್ಕೆ ತುಂಡರುಸಿ ಹುರಿದು ಟೊಮೇಟೊ ಸಾಸ್ ಅಥವಾ ಕೆಚಪ್ ನೊಂದಿಗೂ ಸವಿಯುವುದು ಎಷ್ಟೋ ಜನರ ಇಷ್ಟದ ತಿಂಡಿಯಾಗಿದೆ.

ಈ ಪಟ್ಟಿಗೆ ಇನ್ನೊಂದು ಸೇರ್ಪಡೆ ಆಲೂ ಬ್ರೆಡ್ ರೋಲ್. ಆಲೂಗಡ್ಡೆ, ಬೇಯಿಸಿದ ಬಟಾಣಿ ಮತ್ತು ಬ್ರೆಡ್‌ಗಳನ್ನು ಜೊತೆಯಾಗಿಸಿದಾಗ ಇದರ ರುಚಿ ಮತ್ತು ಕುರುಕು ಎಲ್ಲರ ಮನ ಗೆಲ್ಲುತ್ತದೆ. ಬೆಳಗ್ಗಿನ ಉಪಾಹಾರಕ್ಕೆ ಅಥವಾ ಸಂಜೆಯ ಕುರುಕು ತಿಂಡಿಯಾಗಿ ಈ ಖಾದ್ಯವನ್ನು ತಯಾರಿಸಿದರೆ ಇದನ್ನು ಮೆಚ್ಚದೇ ಇರಲು ಕಾರಣವೇ ಉಳಿಯುವುದಿಲ್ಲ.

ಇದರ ಇನ್ನೊಂದು ಹೆಗ್ಗಳಿಗೆ ಏನೆಂದರೆ ಯಾವಾಗ ಮಾಡಲು ಮನಸ್ಸಾಯಿತೋ ಆಗ ಥಟ್ಟನೇ, ಕೆಲವೇ ನಿಮಿಷಗಳಲ್ಲಿ ತಯಾರಿಸಿ ಬಡಿಸಬಹುದು. ಧಾವಂತದಲ್ಲಿರುವ ಅತಿಥಿಗಳಿಗೆ ಬಡಿಸಲೂ ಇದು ಉತ್ತಮವಾಗಿದೆ. ಮಕ್ಕಳಂತೂ ಇನ್ನೂ ಬೇಕು ಎಂದು ಹಠ ಹಿಡಿಯುತ್ತಾರೆ. ಬನ್ನಿ, ಇಂತಹ ಸ್ವಾದಿಷ್ಟ ಖಾದ್ಯವನ್ನು ತಯರಿಸುವುದು ಹೇಗೆ ಎಂಬುದನ್ನು ಈಗ ನೋಡೋಣ:

Yummy Aloo Bread Roll Recipe

ಪ್ರಮಾಣ: ನಾಲ್ವರಿಗೆ ಒಂದು ಹೊತ್ತಿಗಾಗುವಷ್ಟು
*ಸಿದ್ಧತಾ ಸಮಯ: ಹದಿನೈದು ನಿಮಿಷಗಳು.
*ತಯಾರಿಕಾ ಸಮಯ: ಹದಿನೈದು ನಿಮಿಷಗಳು.

ಅಗತ್ಯವಿರುವ ಸಾಮಗ್ರಿಗಳು
*ಆಲೂಗಡ್ಡೆ - 3 (ಮಧ್ಯಮ ಗಾತ್ರ)
*ಹಸಿರು ಬಟಾಣಿ - 1 ಕಪ್ (ನೀರಿನಲ್ಲಿ ನೆನೆಸಿಟ್ಟಿದ್ದು, ಅಥವಾ ಫ್ರೋಜನ್ ಸಹಾ ಆಗಬಹುದು)
*ಈರುಳ್ಳಿ- 1/2 ಕಪ್ (ಚಿಕ್ಕದಾಗಿ ಹೆಚ್ಚಿದ್ದು)
*ಬಿಳಿಯ ಬ್ರೆಡ್ ಹೋಳುಗಳು (slice) - 8 ರಿಂದ 10
*ಹಸಿಮೆಣಸು - 3 ರಿಂದ 4
*ಕೊತ್ತೊಂಬರಿ ಪುಡಿ - 1/2 ಚಿಕ್ಕ ಚಮಚ
*ಉಪ್ಪು: ರುಚಿಗನುಸಾರ
*ಎಣ್ಣೆ: ಹುರಿಯಲು ಅಗತ್ಯವಿರುವಷ್ಟು

ವಿಧಾನ:
1) ಮೊದಲು ಆಲೂಗಡ್ಡೆ ಮತ್ತು ಬಟಾಣಿಗಳನ್ನು ಕೊಂಚ ನೀರಿನಲ್ಲಿ ಪ್ರೆಷರ್ ಕುಕ್ಕರಿನಲ್ಲಿ ಎರಡರಿಂದ ಮೂರು ಸೀಟಿ ಬರುವವರೆಗೆ ಬೇಯಿಸಿ.
2) ಬಳಿಕ ಮುಚ್ಚಳವನ್ನು ತಣಿಸಿ ತೆರೆದು ಹೆಚ್ಚಿನ ನೀರನ್ನು ಬಸಿಯಿರಿ.
3) ಆಲುಗಡ್ಡೆಗಳ ಸಿಪ್ಪೆ ಸುಲಿದು ಒಂದು ತಟ್ಟೆಯಲ್ಲಿಟ್ಟು ಚಮಚವೊಂದರಿಂದ ಜಜ್ಜಿ ಹರಡಿ. ಇನ್ನೊಂದು ತಟ್ಟೆಯಲ್ಲಿ ಬಟಾಣಿಗಳನ್ನು ಹರಡಿ.
4) ಇದೇ ಹೊತ್ತಿನಲ್ಲಿ ಇನ್ನೊಂದು ಒಲೆಯಲ್ಲಿ ಬಾಣಲೆಯೊಂದರಲ್ಲಿ ಕೊಂಚ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿಮಾಡಿ. ಇದಕ್ಕೆ ಈರುಳ್ಳಿ, ಹಸಿಮೆಣಸು ಹಾಕಿ ಕೊಂಚ ಹುರಿಯಿರಿ. ಈರುಳ್ಳಿ ಕೊಂಚ ಕಂದು ಬಣ್ಣ ಬರುತ್ತಿದ್ದಂತೆಯೇ ಧನಿಯ ಪುಡಿ ಅಥವಾ ಕೊತ್ತಂಬರಿ ಪೌಡರ್ ಹಾಕಿ ಇನ್ನಷ್ಟು ಬಾಡಿಸಿ.
5) ಇದಕ್ಕೆ ಬೇಯಿಸಿದ ಬಟಾಣಿ ಹಾಕಿ ಕೊಂಚ ಕಾಲ ಹುರಿಯಿರಿ. ಬಟಾಟಿ ಕಾಳುಗಳು ಕೊಂಚ ಹುರಿದ ಬಳಿಕ ಜಜ್ಜಿದ ಆಲುಗಡ್ಡೆಯನ್ನು ಹಾಕಿ ಕೊಂಚ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಉರಿ ಆರಿಸಿ ಬಾಣಲೆಯನ್ನು ಪಕ್ಕದಲ್ಲಿಡಿ.
6) ಈಗ ಬ್ರೆಡ್‌ನ ಹೋಳುಗಳನ್ನು ತಣ್ಣೀರಿನಲ್ಲಿ ಮುಳುಗಿಸಿ ನೀರು ಹೀರಿಕೊಳ್ಳುವಂತೆ ಮಾಡಿ. ಬಳೀಕ ಈ ಹೋಳನ್ನು ಎರಡು ಕೈಗಳ ನಡುವೆ ಇರಿಸಿ ಒತ್ತಿ ನೀರನ್ನು ಬಸಿಯಿರಿ.
7) ಬಾಣಲೆಯಲ್ಲಿದ್ದ ಆಲುಗಡ್ಡೆ ಮಿಶ್ರಣವನ್ನು ಚಿಕ್ಕ ಚಿಕ್ಕ ಉಂಡೆಗಳಾಗಿಸಿ. ದೊಡ್ಡ ಲಿಂಬೆಹಣ್ಣಿಗಿಂತಲೂ ಕೊಂಚ ದೊಡ್ಡದಾಗಿರಲಿ.
8) ಈ ಉಂಡೆಯನ್ನು ಬ್ರೆಡ್ ಹೋಳಿನ ನಡುವೆ ಇಟ್ಟು ಅಂಚುಗಳನ್ನು ಈ ಉಂಡೆಯ ಮೇಲೆ ಆವರಿಸುವಂತೆ ಮಾಡಿ.
9) ಇನ್ನೊಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಈ ಉಂಡೆಯನ್ನು ಮಧ್ಯಮ ಉರಿಯಲ್ಲಿ ಕರಿಯಿರಿ.
10) ಎಲ್ಲಾ ಉಂಡೆಗಳನ್ನು ಹೀಗೇ ಕಂದು ಬಣ್ಣ ಬರುವವರೆಗೆ ಕರಿಯಿರಿ.
11) ಬಿಸಿಬಿಸಿ ಇದ್ದಂತೆಯೇ ಟೊಮೇಟೊ ಸಾಸ್, ಕೆಚಪ್, ಚಟ್ನಿ ಮೊದಲಾದವುಗಳೊಂದಿಗೆ ಸವಿಯಲು ನೀಡಿ. ಈ ವಿಧಾನ ಹೇಗೆನಿಸಿತು ಎಂಬುದನ್ನು ನಮಗೆ ಖಂಡಿತಾ ತಿಳಿಸಿ. ಇದಕ್ಕಾಗಿ ಕೆಳಗಿನ ಕಮೆಂಟ್ಸ್ ಭಾಗವನ್ನು ಬಳಸಿಕೊಳ್ಳಿ.

English summary

Yummy Aloo Bread Roll Recipe

Certain food items have the best combinations ever, such as onions and potatoes. Any recipe that is prepared with these vegetables tastes just great and out of the world. Similarly, french fries taste awesome with coke and some tomato sauce/ketchup. So, read to know how to prepare the best snack ever that is the aloo bread roll recipe.
X
Desktop Bottom Promotion