Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಅಸಲಿ ಅಯ್ಯಂಗಾರರ ಅಪ್ಪಟ ಪುಳಿಯೋಗರೆ

ಬೆಟ್ಟದಪುರದಲ್ಲಿರುವ ನಮ್ಮ ತಾಯಿ ಮಂಗಮ್ಮ ಅವರಿಂದ ಪುಳಿಯೋಗರೆ ರೆಸಿಪಿಯನ್ನು ಫೋನಿನಲ್ಲಿ ಕೇಳಿ ಬರೆದುಕೊಂಡು ನಿಮಗೆ ಬರೆಯುತ್ತಿದ್ದೇನೆ. ಮೊದಮೊದಲು ನಾನು ಮಾಡಿದ್ದು ಅಷ್ಟು ಸರಿಯಾಗಿ ಬರುತ್ತಿರಲಿಲ್ಲ. ಈಗೀಗ ಹದ ಸಿಕ್ಕಿದೆ. ಪಾಟ್ ಲಕ್ , ವೀಕ್ ಎಂಡ್ ಪಾರ್ಟಿಗಳಿಗೆ ನಮ್ಮ ಮನೆಯಿಂದ ಪುಳಿಯೋಗರೆ ಹಾಟ್ ಕೇಸ್ ನಲ್ಲಿ ಹೋಗಲೇಬೇಕು ಎನ್ನುವುದು ಇಲ್ಲಿ ಮನೆಮಾತಾಗಿದೆ. ನನ್ನಂತೆ ನೀವೂ ಪುಳಿಯೋಗರೆ ಮಾಡಿ, ಸವಿಯಿರಿ. 5-6 ಜನ ಊಟಕ್ಕೆ ಅಗತ್ಯವಾದ ಪ್ರಮಾಣದಲ್ಲಿ ರೆಸಿಪಿ ನಿರೂಪಿಸಲಾಗಿದೆ. ಪುಳಿಯೋಗರೆಗೆ ಸಿದ್ಧ ಮಾಡಿಕೊಳ್ಳಲು ಐದು ಹಂತಗಳಿವೆ:
ಅ) 100 ಗ್ರಾಮ್ ಹುಣಿಸೆಹಣ್ಣನ್ನು ನೆನೆಸಿಟ್ಟು ಅದರ ರಸಹಿಂಡಿಕೊಂಡು ಅದಕ್ಕೆ ನಿಂಬೆಹಣ್ಣಿನ ಗಾತ್ರದಷ್ಟು ಬೆಲ್ಲ ಹಾಕಿ ಚೆನ್ನಾಗಿ ಕುದಿಸಿಟ್ಟುಕೊಳ್ಳಬೇಕು.
ಆ) ಆರು ಚಮಚ ಕರಿಎಳ್ಳನ್ನು ಲೈಟಾಗಿ ಹುರಿದು ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿಮಾಡಿಟ್ಟುಕೊಳ್ಳಬೇಕು. ಅರ್ಧ ಗಿಟುಕು ಒಣ ಕೊಬ್ಬರಿಯನ್ನು ತುರಿದು ರೆಡಿ ಮಾಡಿಟ್ಟುಕೊಂಡಿರಬೇಕು.
ಇ) ಒಂದು ಚಮಚ ಮೆಂತ್ಯ, ಎರಡು ಚಮಚ ಕರಿ ಮೆಣಸು, ಮೂರು ಚಮಚ ಕೊತ್ತಂಬರಿ ಬೀಜ, ಎರಡು ಚಮಚ ಜೀರಿಗೆ, 5-6 ಬಳ್ಳಿ ಒಣಮೆಣಸಿನಕಾಯಿ, 4-5 ಗುಂಟೂರು ಮೆಣಸಿನಕಾಯಿ (ಬಳ್ಳಿಕಾಯಿ ಬಣ್ಣಕ್ಕೆ, ಗುಂಟೂರು ಕಾಯಿ ಖಾರಕ್ಕೆ): ಇವಿಷ್ಟನ್ನೂ ಎರಡೋ ಮೂರೋ ಚಮಚ ಎಣ್ಣೆಯಲ್ಲಿ ಸಣ್ಣ ಉರಿಯಲ್ಲಿ ಗರಿಗರಿ ಹುರಿದು ಆನಂತರ ಮಿಕ್ಸಿಗೆ ಹಾಕಿ ಪುಡಿ ಮಾಡಿಟ್ಟುಕೊಳ್ಳಬೇಕು.
ಈ) ಒಗ್ಗರಣೆಗೆ 75 ಮಿಲಿಲೀಟರ್ ಎಣ್ಣೆ, ಒಂದು ಚಮಚ ಸಾಸಿವೆ, ಎರಡು ಚಮಚ ಉದ್ದಿನಬೇಳೆ, ಎರಡು ಚಮಚ ಕಡಲೆಬೇಳೆ, 50 ಗ್ರಾಂ ಕಡಲೆಕಾಯಿ ಬೀಜ, ಮಾಗಿದ ಕರಿಬೇವಿನ ಎಲೆಗಳು ಮತ್ತು ಅರ್ಧ ಚಮಚ ಇಂಗು.
(ಉ)ಉದುರು ಉದುರಾಗಿ ಮಾಡಿದ ಅನ್ನ. ಕುಕ್ಕರ್ ಧಿಕ್ಕರಿಸಿ ಬಸಿದ ಅನ್ನ ಮಾಡಿದರೆ ಗುಡ್.
ಮಾಡುವ ವಿಧಾನ :
ಹುಣಿಸೆ ಬೆಲ್ಲದ ರಸವನ್ನು(ಅ) ಬಾಣಲೆಗೆ ಹಾಕಿ ಬೆಚ್ಚಗಾದ ನಂತರ ಅದಕ್ಕೆ ಮಸಾಲೆ ಪುಡಿಯನ್ನು(ಇ) ಬೆರೆಸಿ ಮರದ ಸೌಟಿನಲ್ಲಿ ಚೆನ್ನಾಗಿ ಹದಬರುವ ತನಕ ಸಂಸ್ಕರಿಬೇಕು. ಮಸಾಲೆ ಕೂಡಿಕೊಂಡ ನಂತರ ಎಳ್ಳು, ಕೊಬ್ಬರಿ(ಆ) ಪುಡಿಯನ್ನು ಬೆರೆಸಿ ಹಿತವಾಗಿ ಕಲಸಬೇಕು. ಈ ಗೊಜ್ಜನ್ನು(ಅ+ಆ+ಇ) ಹರಿವಾಣದಲ್ಲಿ ಆರುತ್ತಿರುವ ಅನ್ನದ ಮೇಲೆ ಹಾಕಬೇಕು. ಒಗ್ಗರಣೆಯನ್ನು(ಈ) ಪ್ರತ್ಯೇಕವಾಗಿ ಮಾಡಿ ಅದನ್ನು ಹರಿವಾಣಕ್ಕೆ ಸುರಿಯಿರಿ. ಕೈಗೆ ಸ್ವಲ್ಪ ಎಣ್ಣೆ ಸವರಿಕೊಂಡು ಅನ್ನ(ಉ) ಕಲಸಿದರೆ ಪುಳಿಯೋಗರೆ ಸಿದ್ಧವಾಗುತ್ತದೆ. ಕಲಸುವಾಗ ರುಚಿಗೆ ತಕ್ಕಷ್ಟು ಐಯೋಡೈಸ್ಡ್ ಉಪ್ಪು ಬೆರೆಸಬೇಕು. (ಬರೆಯುವಾಗ ಮರೆತುಬಿಟ್ಟಿದ್ದೆ, ಕ್ಷಮಿಸಿ.)
ವಿಶೇಷ ಸೂಚನೆ :
*ಅಕ್ಕಿ ದಪ್ಪ ಅಥವಾ ಸಣ್ಣಗಿದ್ದರೆ ಪರವಾಗಿಲ್ಲ. ಆದರೆ ಹಳೆ ಅಕ್ಕಿಯಾಗಿರಬೇಕು.
*ಹುಣಿಸೆಹಣ್ಣನ್ನೇ ಉಪಯೋಗಿಸಬೇಕು. ಪೇಸ್ಟ್ ಬೇಡ.
*ಖಾರ ಹೆಚ್ಚು ಇಷ್ಟಪಡುವವರು ಗುಂಟೂರು ಮೆಣಸಿನಕಾಯಿ ಎರಡು ಹೆಚ್ಚಿಗೆ ಬಳಸಬಹುದು.
*ಒಗ್ಗರಣೆ ಮಾಡುವಾಗ ಬೇಳೆಗಳು, ಕಡಲೆಕಾಯಿ ಬೀಜ ಮತ್ತು ಕರಿಬೇವು ಸೀದು ಕಪ್ಪಗಾಗದಂತೆ ಎಚ್ಚರವಹಿಸಬೇಕು.
* ಪುಳಿಯೋಗರೆ ಉಳಿದರೆ ಅಥವಾ ಉಳಿಸಿ ಭದ್ರವಾಗಿ ಮುಚ್ಚಿಟ್ಟರೆ ಎರಡುದಿನವಾದರೂ ಕೆಡುವುದಿಲ್ಲ. ಬದಲಾಗಿ ಒಳ್ಳೆ ರುಚಿ ಬಂದಿರುತ್ತದೆ. ನಾರಾಯಣಮಸ್ತು.



Click it and Unblock the Notifications