Latest Updates
-
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ
ನಾವು ಮನಸ್ಸು ಮಾಡಿದರೆ ರುಚಿಯಾಗಿ ಅಡುಗೆ ಮಾಡಬಲ್ಲೆವು
ದಿನಾ ಅದನ್ನೇ ತಿಂದು ತಿಂದು ಬೇಜಾರಾಗಿದೆ ಸಾರ್. ಮನೆಯೂಟವು ಬೋರು, ಹೋಟೆಲ್ ತಿಂಡಿ ಇನ್ನೂ ಬೋರು. ಇದು ಸಾಕಪ್ಪಾ ಸಾಕು ಎನಿಸಿದೆ. ನಾಲಗೆ ಜಡ್ಡು ಹಿಡಿದು ಹೋಗಿದೆ, ಏನಾದರೂ ಹೊಸ ಐಡಿಯಾ ಇದ್ದರೆ ತಿಳಿಸಿ ಎಂದು ಕೇಳಿದ್ದಾರೆ ಕೋರಮಂಗಲದ ವೈಷ್ಣವಿ ಸುಧಾಕರ್. ವೈಷ್ಣವಿ ಅವರಿಗೆ ಒಂದು ಸಾರಿಗೆ ಕಂಪನಿಯಲ್ಲಿ ಉದ್ಯೋಗವಂತೆ. ಪತಿರಾಯ ಮೆಡಿಕಲ್ ರೆಪ್ ಅಂತೆ. ಆತನಿಗೆ ತಿಂಗಳಿಗೆ ಮೂರು ವಾರ ಪ್ರವಾಸವಂತೆ. ಹಾಗಾಗಿ, ವೈಷ್ಣವಿಗೆ ಮನೆಯಲ್ಲಿ ಒಬ್ಬಳಿಗೋಸ್ಕರ ಸ್ಟೌವ್ ಹೊತ್ತಿಸುವುದಕ್ಕೆ ಮೋಟಿವೇಷನ್ನೇ ಇಲ್ಲವಂತೆ.
ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ ಕೋರಮಂಗಲದ ಹೋಟೆಲುಗಳೇ ಗತಿಯಂತೆ. ಅಲ್ಲಿ ರೇಟುಗಳು ತುಂಬಾ ಜಾಸ್ತಿಯಂತೆ. ಉತ್ತರ ಭಾರತದ ಐಟಂಗಳನ್ನೇ ತಿಂದು ಜೀವನವೇ ಬೇಜಾರು ಎನ್ನುವಂತಾಗಿದೆಯಂತೆ. ಅವರಿಗೆ ಇನ್ನೂ ಒಂದು ಸಮಸ್ಯೆಯಿದೆಯಂತೆ. ಒಬ್ಬಳೇ ಹೋಟೆಲಿಗೆ ಹೋಗುವುದಿಲ್ಲವಂತೆ. ಯಾರಾದರೂ ಜೊತೆಗೆ ಇರಲೇಬೇಕಂತೆ. ಗೆಳತಿ ಸಿಕ್ಕರೆ ಜತೆಯಲ್ಲಿ ಕುಳಿತು ಮಾತು, ರೊಟ್ಟಿ, ಕರ್ರಿ ಮೇಯುವುದಂತೆ. ಯಾರೂ ಇಲ್ಲದಿದ್ದರೆ ಅಯ್ಯಂಗಾರ್ ಬೇಕರಿಯ ಸ್ವೀಟ್ ಬನ್ನುಗಳೇ ಪಂಚಭಕ್ಷ ಪರಮಾನ್ನವಂತೆ. ಇದುವೆ ಅವರ ದುರ್ಭರ ಜೀವನ ಶೈಲಿಯಂತೆ. ಹುಣಸೂರು ಸಮೀಪವಿರುವ ಚಿಲಕುಂದದಲ್ಲಿ ಅಮ್ಮ ಮಾಡುತ್ತಿದ್ದ ಅಡುಗೆ ರುಚಿ ಪ್ರತಿದಿನ ನಸುಕಿನ ಕನಸಿನಲ್ಲಿ ಇಣಕುತ್ತದಂತೆ.
ನಮಗೆ ಸೋದರಿ ವೈಷ್ಣವಿ ಅವರ ಪರಿಸ್ಥಿತಿ ಸಂಸಾರಸ್ಥರಿಗಿಂತ ಚೆನ್ನಾಗಿ ಅರ್ಥವಾಗತ್ತೆ. ವೈಷ್ಣವಿಯಂಥವರು ನಮ್ಮಲ್ಲಿ ಅನೇಕರಿದ್ದಾರೆ. ಊರುಬಿಟ್ಟಮೇಲೆ ತೃಪ್ತಿಯಾಗಿ ಎರಡು ಹೊತ್ತು ಊಟಮಾಡದ ಕನ್ನಡಿಗರ ಕಷ್ಟ ಕನ್ನಡಿಗರಿಗೆ ಮಾತ್ರ ಅರ್ಥವಾಗುತ್ತದೆ. ಯಾಕೆಂದರೆ ನಾವೂ ಊರು ಬಿಟ್ಟು ಬಂದವರೇ ತಾನೆ? ಹೊಸರುಚಿಯ ಐಡಿಯಾಗಳ ಬರಗಾಲ ನಮ್ಮನ್ನೂ ಆಗಾಗ ಬಾಧಿಸುತ್ತಿರುತ್ತದೆ. Wear your thinking caps ಎಂದು ಸಂಪಾದಕರ ಇಮೇಲ್ ಬಂದಾಗ ಕೆಲವು ಐಡಿಯಾಗಳು ನಮ್ಮ ಗ್ರಾಫಿಕ್ ತಂಡದ ಸದಸ್ಯರಿಗೆ ಫ್ಲಾಷ್ ಆಗುವುದುಂಟು. ಕೆಲವು ಐಡಿಯಾಗಳು ಕ್ಲಿಕ್ ಆದರೆ, ಹಲವು ಐಡಿಯಾಗಳು ಪೇಜ್ ನಾಟ್ ಫೌಂಡ್ ಆಗುವುದುಂಟು.
ಈಚೆಗೆ ದಟ್ಸ್‌ಕನ್ನಡದ ಒಂಟಿ ಜೀವಿಗಳೆಲ್ಲ ಸೇರಿ ಹುಳಿಮಾವಿನ ಸಿಂಗಲ್ ಚಾಪೆ ರೂಂ ಮನೆಯಲ್ಲಿ, ಸೊನ್ನೆ ಸೌಕರ್ಯವಿರುವ ಅಡುಗೆ ಮನೆಯಲ್ಲಿ ಮಾಡಿದ ಒಂದು ಅಡುಗೆಯನ್ನು ನಿಮ್ಮಲ್ಲಿ ಈ ಮೂಲಕ ನಿವೇದಿಸಿಕೊಳ್ಳುತ್ತಿದ್ದೇವೆ. ಈ ರುಚಿ ನಿಮಗೂ ಆಕಸ್ಮಾತ್ ಇಷ್ಟವಾದರೆ ನಮ್ಮ ಅಪಾರ ಶ್ರಮ ಸಾರ್ಥಕವಾದಂತೆ. ನೀವು ಅಂದರೆ ವೈಷ್ಣವಿ ಮೇಡಂ ಈ ಅಡುಗೆಯನ್ನು ಪ್ರಯೋಗಮಾಡಲಿ ಎಂದು ಆಶಿಸುತ್ತೇವೆ. ದೇವರು ಸಕಲರಿಗೂ ಒಳ್ಳೆಯದನ್ನೇ ಮಾಡಲಿ!
ಬೇಕಾದ ಪದಾರ್ಥ
ವಿದ್ಯುತ್ ರೈಸ್ ಕುಕ್ಕರ್
ತ್ರೀ ಪಿನ್ ಪ್ಲಗ್ ಕನೆಕ್ಷನ್
ಅಕ್ಕಿ ತೊಳೆಯುವುದಕ್ಕೆ ಬೇಕಾದಷ್ಟು ನೀರು
ಉದ್ದಗಿರುವ ಎಂಟು ಹಸಿಮೆಣಸಿನಕಾಯಿ
ಕಾಲು ಕೆಜಿ ಈರುಳ್ಳಿ
ಫುಡ್‌ವರ್ಲ್ಡ್‌ನಿಂದ ತಂದ 100 ಗ್ರಾಂ ಜಿಆರ್‌ಬಿ ತುಪ್ಪ
ಮಣಿ ಕಾರ್ನರ್‌ನಿಂದ 200 ಗ್ರಾಂ ಮೊಸರಿನ ಮೂರು ಸ್ಯಾಷೆ
ಯಾವತ್ತೋ ತಂದಿಟ್ಟಿರುವ ಟಾಟಾ ಉಪ್ಪಿನ ಪ್ಯಾಕೆಟ್ ಹಾಗೆಯ ಇದೆ
ಅಡುಗೆ ಶುರು
ಅಕ್ಕಿಯನ್ನು ನಾಲಕ್ಕು ಸಲ ತೊಳೆದು ಕುಕ್ಕರ್‌ಗೆ ಹಾಕಿ ಅಕ್ಕಿಯಮೇಲೆ ನಾಲಕ್ಕು ಬೆರಳು ಎತ್ತರವಿರುವಷ್ಟು ನೀರು ತುಂಬಿ ಸ್ವಿಚ್ ಆನ್ ಮಾಡಿದರೆ ಅಡುಗೆ ನಾಟಕದ ಮೊದಲನೇ ಅಂಕ ಮುಕ್ತಾಯ. 13 ರೂಪಾಯಿ ಕಕ್ಕಿ ತಂದ ಅರ್ಧ ಕೆಜಿ ಸೋನಾಮಸೂರಿ ತನ್ನಪಾಡಿಗೆ ತಾನು ಬೇಯುವುದಕ್ಕೆ 29 ನಿಮಿಷ ಬೇಕು. ಬೆಂದ ನಂತರ ಸೈಡಿಗೆ ಇರುವ ಬಟನ್ ಕೆಳಗೆ ಟಕ್ ಅಂತ ಬೀಳುತ್ತದೆ. ಪ್ರೆಸ್ಟೀಜ್ ಪ್ರೆಷರ್ ಕುಕ್ಕರ್‌ನಂತೆ ಪೋಲಿ ಹುಡುಗರ ಥರಹ ನಮ್ಮ ಇಲೆಕ್ಟ್ಟಿಕ್ ಕುಕ್ಕರ್ ಶಿಳ್ಳೆ ಹಾಕುವುದಿಲ್ಲ.
ಅನ್ನ ಉಂಬೇಯುತ್ತಿರುವಾಗ ಹಸಿಮೆಣಸಿನಕಾಯಿಗಳ ತುಂಬು ಆಕಾಶ ನೋಡುತ್ತಿರುವಂತೆ ಅನ್ನದಲ್ಲಿ ಅಲ್ಲಲ್ಲಿ ಚುಚ್ಚಿಡಬೇಕು. ಹತ್ತು ನಿಮಿಷ ಸಾಕು. ಮೆಣಸಿನಕಾಯಿಯ ಚರ್ಮ ಹಬೆಯಾಡುವ ಬಿಸಿ ಅನ್ನದಲ್ಲಿ ಹದವಾಗಿ ಬೆಂದು ಮೃದುವಾಗುತ್ತದೆ.
ಊಟದ ಸಮಯ
ಅನ್ನವನ್ನು ಸ್ವಲ್ಪ ಆರಿಸಿ ತಟ್ಟೆಯ ಮೇಲೆ ಹರವಿಕೊಳ್ಳಬೇಕು. ಅದಕ್ಕೆ ಯಥೇಶ್ಚವಾಗಿ ತುಪ್ಪ ಉಪ್ಪು ಬೆರೆಸಿ ಬೆಂದ ಹಸಿಮೆಣಸಿನಕಾಯಿಯನ್ನು ಕಿವುಚಿ ಕಲಸಿಕೊಳ್ಳಬೇಕು. ಹಸಿ ಈರುಳ್ಳಿ ಬಿಡಿಸಿ, ಹೆಚ್ಚಿಕೊಂಡು ಬದಿಯಲ್ಲಿ ಇಟ್ಟುಕೊಂಡಿರಬೇಕು. ಇದು ಒಂದು ಕೋರ್ಸ್ ಊಟ. ಇನ್ನೊಂದು ಕೋರ್ಸಿಗೆ ಉಪ್ಪು, ಮೊಸರು ಮತ್ತು ಈರುಳ್ಳಿ. ಕೆಲವರು ಹಸಿಮೆಣಸು ಎಂದಾಕ್ಷಣ ಜಿರಲೆ ಕಂಡಂತೆ ಹೆದರುವರು. ತುಪ್ಪ ಮೊಸರು ಇರುವವರೆಗೂ ಮೆಣಸಿನ ಭಯಬೇಡ ತಿಳಿ ಮನುಜ.
ಡಿಸ್‌ಕ್ಲೈಮರ್
ಆವತ್ತಿನ ನಮ್ಮ ನಳಪಾಕ Absolute success. Content and Image both were really awesome. ಅಡುಗೆ ಮಾಡುವಾಗ ಸದಸ್ಯರ ನಡುವೆ ಸ್ವಲ್ಪಹೊತ್ತು ಕೆಲ ವಾದವಿವಾದಗಳು ನಡೆದವು. ಅಕ್ಕಿಯನ್ನು ನಾಲಕ್ಕು ಸಲ ತೊಳೆದರೆ ಅದರಲ್ಲಿರುವ ಪೌಷ್ಠಿಕಾಂಶಗಳು ನಾಶವಾಗುತ್ತವೆ ಎಂದು ಪ್ರಕಾಶನ ಬುದ್ಧಿಮತ್ತೆ ಹೇಳುತ್ತಿತ್ತು. ಆದರೆ, ಸೆಣಬಿನ ಧೂಳು ಇನ್ನಿಲ್ಲವಾಗುವವರೆಗೆ ತೊಳೆಯುತ್ತೇನೆ ಎಂದು ನಾನು ಸಮರ್ಥಿಸಿಕೊಳ್ಳುತ್ತಿದ್ದೆ. No shop talking ಅಂತ ಸುನೀಲ ಅರಚುತ್ತಿದ್ದ. ಕನ್ನಡ ಚಿತ್ರಕ್ಕೆ ಇವತ್ತಲ್ಲ ನಾಳೆ ಆಸ್ಕರ್ ಪ್ರಶಸ್ತಿ ಬಂದೆ ಬರತ್ತೆ ಅಂತ ಪ್ರಕಾಶ ವಾದಿಸುತ್ತಿದ್ದರೆ ಆಸ್ಕರ್ ಅಲ್ಲ ಭಾಸ್ಕರ್ ಪ್ರಶಸ್ತಿನೂ ಬರಲ್ಲ ಎಂದು ನಿಧಿ ಪ್ರಮಾಣ ಮಾಡುತ್ತಿದ್ದ. ಅಂತೂ ಆವತ್ತಿನ ಟೂ ಬೈ ಫೋರ್ ಬಿಯರು ಮತ್ತು ಮೆಣಸಿನ ಅನ್ನದ ಊಟದ ಪಾರ್ಟಿ ಸಖತ್ ಆಗಿತ್ತು.
ಈ ಪಾರ್ಟಿ ಆಗಿ ಇವತ್ತಿಗೆ ಆರು ದಿವಸಗಳಾದವು. ಆವತ್ತಿನಿಂದ ಹುಳಿಮಾವು ಅಡುಗೆ ಮನೆ ಅನಾಥವಾಗಿದೆ. ಕುಕ್ಕರ್ಕೂಡ ತೊಳೆದಿಲ್ಲ. ಸ್ಟೀಲ್ ತಟ್ಟೆಗಳು ಸಿಂಕ್‌ನಲ್ಲಿ ಮಂಕಾಗಿ ಕೂತಿವೆ. ಕಟ್ಟೆಮೇಲೆ ಬಿದ್ದಿರುವ ಈರುಳ್ಳಿ ಎಲೆಗಳು ಹಾರದಂತೆ ಆ ಮೊಂಡ ಚಾಕು ಕಾವಲು ಕುಳಿತಿದೆ.



Click it and Unblock the Notifications











