For Quick Alerts
ALLOW NOTIFICATIONS  
For Daily Alerts

ಕಾಫಿ ಮಾಡುವ ವಿಧಾನದಲ್ಲೂ ಅಬ್ಬಾ ಅದೆಷ್ಟು ಬಗೆ...

By Super
|

ಕಾಫಿ ತಯಾರಿಕೆಯಲ್ಲಿ ಹಲವು ವಿಧಾನಗಳಿವೆ - ಪದ್ಧತಿಗಳಿವೆ. ಸಾಂಪ್ರದಾಯಿಕ ಬಟ್ಟೆಯಲ್ಲಿ ಕಾಫಿ ಸೋಸುವ ವಿಧಾನ, ಪರ್ಕ್ಯೂಲೇಟರ್‌ ವಿಧಾನ, ಫಿಲ್ಟರ್‌ ವಿಧಾನ, ಕುದಿಸಿ ತಯಾರಿಸುವ ವಿಧಾನ ಇತ್ಯಾದಿ, ಇತ್ಯಾದಿ..

ಬಟ್ಟೆಯಲ್ಲಿ ಕಾಫಿ ಸೋಸುವ ವಿಧಾನ : ಮೊದಲು ನೀರನ್ನು ಕುದಿಸಿ, ಕಾಫಿ ಸೋಸಲೆಂದೇ ಇರುವ ಶುಭ್ರಬಟ್ಟೆಯನ್ನು ಖಾಲಿ ಪಾತ್ರೆಯ ಮೇಲೆ ಹಾಕಿ ಸಣ್ಣ ಹಳ್ಳ ಮಾಡಿ, ಅಗತ್ಯಕ್ಕೆ ತಕ್ಕಷ್ಟು ಕಾಫಿ ಪುಡಿ ಹಾಕಿ ಅದರ ಮೇಲೆ ಬಿಸಿನೀರು ಸುರಿದು ಚೆನ್ನಾಗಿ ಹಿಂಡಿ ಕಾಫಿ ಡಿಕಾಕ್ಷನ್‌ ತಯಾರಿಸಿ, ಹಾಲು, ಸಕ್ಕರೆ ಬೆರೆಸಿ ಕಾಫಿ ಮಾಡುವ ಸಾಂಪ್ರದಾಯಿಕ ವಿಧಾನ ಮೊದಲನೆಯದು.

ಪರ್ಕ್ಯೂಲೇಟರ್‌ ಪದ್ಧತಿ : ಇನ್ನು ಪರ್ಕ್ಯೂಲೇಟರ್‌ ಅಂಗಡಿಯಲ್ಲಿ ದೊರಕುವ ಕಾಫಿ ಡಿಕಾಕ್ಷನ್‌ ತಯಾರಿಸುವ ಒಂದು ಸಾಧನ. ಇದರಲ್ಲಿ ಎರಡು ಭಾಗ ಇರುತ್ತದೆ. ಕೆಳ ಭಾಗದಲ್ಲಿ ನೀರು ಹಾಕಿ, ಮಧ್ಯಭಾಗದಲ್ಲಿರುವ ಜಾಗದಲ್ಲಿ ಕಾಫಿ ಪೌಡರ್‌ ಹಾಕಿ, ಉರಿಯುವ ಒಲೆಯ ಮೇಲಿಟ್ಟರೆ, ನೀರು ಚೆನ್ನಾಗಿ ಕಾದ ನಂತರ ಮೇಲ್ಭಾಗದ ಕೋನದಾಕಾರದ ಕೊಳವೆಯಿಂದ ಹದವಾದ ಡಿಕಾಕ್ಷನ್‌ ಮೇಲೆ ಬರುತ್ತದೆ ಹಾಗೂ ಮೇಲ್ಭಾಗದ ಜಾರ್‌ನಲ್ಲಿ ಶೇಖರವಾಗುತ್ತದೆ. ಇದಕ್ಕೆ ಮಾಮೂಲಿನಂತೆ ಹಾಲು ಸಕ್ಕರೆ ಬೆರೆಸಿದರೆ ಕಾಫಿ ರೆಡಿ.

ಫಿಲ್ಟರ್‌ ವಿಧಾನ : ಫಿಲ್ಟರ್‌ ವಿಧಾನ ಬಹು ಜನಜನಿತ. ಪಾತ್ರೆ ಅಂಗಡಿಯಲ್ಲಿ ದೊರಕುವ ಫಿಲ್ಟರ್‌ ತಂದು ಮೇಲ್ಭಾಗದ ಫಿಲ್ಟರ್‌ ಜಾರ್‌ಗೆ ಕಾಫಿ ಪುಡಿ ಹಾಕಿ, ಅದರ ಮೇಲೆ ರಂಧ್ರಗಳಿರುವ ಒತ್ತಡದ ಜಾಲರಿ ಇಟ್ಟು ಬಿಸಿನೀರು ಹಾಕಿ ಮುಚ್ಚಳ ಮುಚ್ಚಿಟ್ಟರೆ ತಾನಾಗೇ ಕಾಫಿ ಡಿಕಾಕ್ಷನ್‌ ಕೆಳ ಭಾಗದ ಪಾತ್ರೆಗೆ ಇಳಿದಿರುತ್ತದೆ.

ಸಿದ್ಧವಾದ ಕಾಫಿ ಡಿಕಾಕ್ಷನ್‌ಗೆ ಹಾಲು, ಸಕ್ಕರೆ ಬೆರೆಸಿದರೆ ಕಾಫಿ ಕುಡಿಯಲು ರೆಡಿ.

ಸ್ಟ್ರಾಂಗ್‌ ಕಾಫಿ : ಯಾವುದೇ ವಿಧಾನ ಬಳಸಿದರೂ 20 ಗ್ರಾಂ ಕಾಫಿ ಪುಡಿಗೆ 300 ಮಿ.ಲೀಟರ್‌ ಕುದಿಯುವ ನೀರು ಹಾಕಬೇಕು. ಈ ಪ್ರಮಾಣ ಕಾಯ್ದುಕೊಂಡಲ್ಲಿ ರುಚಿಯಾದ ಕಾಫಿ ತಯಾರಿ ಸುಲಭ. ನಿಮಗೆ ಲೈಟ್‌, ಸ್ಟ್ರಾಂಗ್‌, ಎಕ್ಸ್ಟ್ರಾ ಸ್ಟ್ರಾಂಗ್‌ ಕಾಫಿ ಅಗತ್ಯ ಇದ್ದರೆ, ನಿಮ್ಮ ರುಚಿಗೆ ತಕ್ಕಂತೆ ಕಾಫಿ ಪೌಡರ್‌ ಬಳಸಬೇಕು. ಎಲೆಕ್ಟ್ರಿಕ್‌ ಫಿಲ್ಟರ್‌ ಬಳಸುವವರು ಕೈಪಿಡಿಯಲ್ಲಿನ ಸೂತ್ರ ಅನುಸರಿಸಬೇಕು.

ಉತ್ತಮ ಕಾಫಿ ತಯಾರಿಕೆಗೆ ಸರಳ ಸೂತ್ರಗಳು :

* ಕಾಫಿ ಪುಡಿ ಕೊಳ್ಳುವಾಗಲೇ ತಾಜಾ ಹಾಗೂ ಉತ್ತಮ ಕಾಫಿ ಪುಡಿ ಕೊಳ್ಳಿ.
* ನೀವು ಕೊಂಡ ಕಾಫಿಯ ಪರಿಮಳ ಹಾಳಾಗದಂತೆ ಕಂಟೈನರ್‌ನಲ್ಲಿ ಭದ್ರವಾಗಿ ಗಾಳಿಯಾಡದಂತೆ ಮುಚ್ಚಿಡಿ.
* ಕಾಫಿ ಡಿಕಾಕ್ಷನ್‌ ಮಾಡುವ ಮುನ್ನ ಫಿಲ್ಟರ್‌ ಅನ್ನು ಚೆನ್ನಾಗಿ ಬಿಸಿನೀರಲ್ಲಿ ತೊಳೆಯಿರಿ. ಇದರಿಂದ ರಂಧ್ರಗಳು ತೆರೆದು ಡಿಕಾಕ್ಷನ್‌ ಸರಾಗವಾಗಿ ಇಳಿಯುತ್ತದೆ.
* ಹೊಸ ಹಾಲು, ತಾಜಾ ಕಾಫಿ ಪೌಡರ್‌, ತುಸು ಕಂದು ಬಣ್ಣ ಮಿಶ್ರಿತ ಸಕ್ಕರೆಯ ಕಾಫಿ ಬಲು ರುಚಿ.
* ಒಮ್ಮೆ ಬಳಸಿದ ಕಾಫಿ ಪೌಡರ್‌ ಮತ್ತೊಮ್ಮೆ ಬಳಸಬೇಡಿ. ಫಿಲ್ಟರ್‌ನಲ್ಲಿರುವ ಹಳೆ ಪೌಡರ್‌ ಮೇಲೆ ಹೊಸ ಪೌಡರ್‌ ಹಾಕಿ ಡಿಕಾಕ್ಷನ್‌ ತಯಾರಿಸಬೇಡಿ.
* ಫಿಲ್ಟರ್‌ನಲ್ಲಿ ಕಾಫಿ ಪೌಡರ್‌ ಜತೆ ಪುಡಿ ಮಾಡಿದ ದಾಲ್‌ಚಿನ್ನಿ, ಏಲಕ್ಕಿ, ತುಳಸಿ ಕುಡಿ ಸೇರಿಸಿದರೆ, ಕಾಫಿಯ ಸ್ವಾದ ಮತ್ತಷ್ಟು ಹೆಚ್ಚುತ್ತದೆ.
* ಜಜ್ಜಿದ ಶುಂಠಿಯನ್ನೂ ಪೌಡರ್‌ ಜತೆ ಬಳಸಿದರೆ, ನೆಗಡಿ ಕಡಿಮೆ ಆಗುತ್ತದೆ.
* ಡಿಕಾಕ್ಷನ್‌ ಮಾಡುವ ಮುನ್ನ ಕಾಫೀ ಪುಡಿಯ ಮೇಲೆ ಸ್ವಲ್ಪ ಬಿಸಿನೀರು ಇಲ್ಲವೆ ತಣ್ಣೀರು ಚುಮುಕಿಸಿದರೆ, ಏಕಪ್ರಕಾರ ಪಾನೀಯ ಪಡೆಯಬಹುದು.
* ತುಂಬಾ ಸ್ಟ್ರಾಂಗ್‌ ಕಾಫಿ ಬೇಕಿದ್ದರೆ ಕಾಫಿ ಪುಡಿ ಜತೆ ಕೆಲವು ಹರಳು ಸಕ್ಕರೆ ಬೆರೆಸಿ
* ಒಮ್ಮೆ ಮಾಡಿದ ಕಾಫಿಯನ್ನು ಯಾವುದೇ ಕಾರಣಕ್ಕೂ ಮತ್ತೆ ಬಿಸಿ ಮಾಡಿ ಕುಡಿಯಬೇಡಿ.

English summary

How to make good coffee - Tips are here

Coffee is having 1001 years of history. It is a delicious drink.
X
Desktop Bottom Promotion