For Quick Alerts
ALLOW NOTIFICATIONS  
For Daily Alerts

ಕನ್ನಡಿಗರ ವಿಶೇಷ ಸಾಂಬಾರು ಮಜ್ಜಿಗೆ ಹುಳಿ

By Staff
|
vegetables for majjige huli
ಕರ್ನಾಟಕದಲ್ಲಿ ವಿಶೇಷವಾಗಿ ಮೈಸೂರು ಕರ್ನಾಟಕದಲ್ಲಿ ಮಜ್ಜಿಗೆ ಹುಳಿ ವಿಶೇಷ ಸಾಂಬಾರಾಗಿ ಮನೆ ಮಂದಿಯ ನಾಲಿಗೆ ತಣಿಸುತ್ತದೆ. ಮಲ್ನಾಡು, ಕರಾವಳಿಯ ಕಡೆಯಲ್ಲಿ ಕೊಂಚ ಬೇರೆ ವಿಧಾನದಲ್ಲಿ ಮಜ್ಜಿಗೆ ಹುಳಿ ಮಾಡುವುದನ್ನು ಕಾಣಬಹುದಾದರೂ, ಅಸಲೀ ಮೈಸೂರು ಕರ್ನಾಟಕದ ರುಚಿ ಜನಪ್ರಿಯ. ಮಲ್ನಾಡಿನಲ್ಲಿ ಕಾಯಿ ನೀರು ಹೆಚ್ಚಾಗಿ ಬಳಸಿದರೆ, ಮೈಸೂರು ಕಡೆ ಹುಳಿ ಮಜ್ಜಿಗೆ ಬಳಸಲಾಗುತ್ತದೆ.

*ಮನಸ್ವಿನಿ, ನಾರಾವಿ

ಒಂದೊಂದು ಕಡೆ ಒಂದೊಂದು ರೀತಿಯ ರುಚಿಯಲ್ಲಿ ಮಜ್ಜಿಗೆ ಹುಳಿ ಹಲವರ ಬಾಯಿಗೆ ಆಹಾರವಾಗಿದೆ. ನಮ್ಮ ಜಾವಗಲ್ ಹುಡ್ಗ ಕ್ರಿಕೆಟ್ಟಿಗ ಶ್ರೀನಾಥ್ ಕೂಡ ಮಜ್ಜಿಗೆ ಹುಳಿಗೆ ಮನಸೋತಿರುವುದು ಸುಳ್ಳಲ್ಲ. ಸುಲಭ ವಿಧಾನದಲ್ಲಿ ಮಾಡಬಹುದಾದ ಈ ಸಾಂಬಾರಿಗೆ ಹಲವಾರು ತರಕಾರಿಗಳನ್ನು ಬಳಸಬಹುದು. ಬೂದಗುಂಬಳಕಾಯಿ, ಸೌತೆಕಾಯಿ, ಪಡವಲಕಾಯಿ, ಸೀಮೆಬದನೆಕಾಯಿ, ನುಗ್ಗೆಕಾಯಿ ಯಾವುದಾದರೊಂದು ತರಕಾರಿ ಇದ್ದರಾಯಿತು.

ಬೇಕಾದ ಸಾಮಾಗ್ರಿಗಳು:

*ಕಡಲೆಬೇಳೆ - ಒಂದೂವರೆ ಮುಷ್ಟಿ
*ಹಸಿಕೊಬ್ಬರಿ - ಅರ್ಧ ಬಟ್ಟಲು
*ಹಸಿಮೆಣಸಿನಕಾಯಿ - ಸಣ್ಣ ಗಾತ್ರದ್ದು 10
*ಕೊತ್ತಂಬರಿಸೊಪ್ಪು - 1 ಕಪ್
*ಸಾಸಿವೆ - ಅರ್ಧ ಟೀ ಚಮಚ
*ಜೀರಿಗೆ - 1 ಟೀ ಚಮಚ
*ಇಂಗು, ಉಪ್ಪು - ರುಚಿಗೆ ತಕ್ಕಷ್ಟು
*ಎಣ್ಣೆ - ಒಂದೂವರೆ ಟೀ ಚಮಚ
*ಅರಿಶಿನ - 2ಚಿಟುಕೆ
*ಒಣಮೆಣಸಿನಕಾಯಿ - 4 ಸಣ್ಣ ಗಾತ್ರದ್ದು
*ಕರಿಬೇವು - ಸ್ವಲ್ಪ
*ಹುಳಿಮೊಸರು - 100 ಗ್ರಾಂ
*ತರಕಾರಿ - ಬೂದಗುಂಬಳಕಾಯಿ, ಸೌತೆಕಾಯಿ, ಪಡವಲಕಾಯಿ, ಸೀಮೆಬದನೆಕಾಯಿ, ನುಗ್ಗೆಕಾಯಿ.. ಇತ್ಯಾದಿ

ಮಾಡುವ ಬಗೆ:
ಕಡಲೆಬೇಳೆಯನ್ನು ಅರ್ಧ ಗಂಟೆಗೂ ಹೆಚ್ಚು ಕಾಲ ನೀರಿನಲ್ಲಿ ನೆನಸಿ. ಕಡಲೆಬೇಳೆ, ಜೀರಿಗೆ, ಸಾಸಿವೆ, ಇಂಗು, ಉಪ್ಪು, ಹಸಿಮೆಣಸಿನಕಾಯಿ, ಕೊತ್ತಂಬರಿಸೊಪ್ಪು, ಕಾಯಿತುರಿ, 2 ಚುಟಿಕೆ ಅರಿಶಿನ ಈ ಎಲ್ಲವನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ.

ತರಕಾರಿಯನ್ನು ಬೇಯಿಸಿಕೊಂಡು ಒಗ್ಗರಣೆಯಲ್ಲಿ ಬಾಡಿಸಿರಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಮಿಕ್ಸಿಯಿಂದ ಮಿಶ್ರಣವನ್ನು ತೆಗೆದು ಬೆಂದ ತರಕಾರಿಯೊಡನೆ ಬೆರೆಸಿ, ಸ್ವಲ್ಪ ಕಾಲ ಬೇಯಿಸಿ.

ಮೊಸರಿಗೆ 1 ಲೋಟ ನೀರು ಹಾಕಿ ಚೆನ್ನಾಗಿ ಕಡೆದು, ತರಕಾರಿ ಇರುವ ಪಾತ್ರೆಗೆ ಹಾಕಿ ಕುದಿಸಿರಿ.ಹಪ್ಪಳ, ಸಂಡಿಗೆ ಅಥವಾ ಉಪ್ಪಿನಕಾಯಿಯೊಡನೆ ತಿನ್ನಲು ರುಚಿಯಾಗಿರುತ್ತದೆ. ಮೊಸರಿನ ಹುಳಿ ಪ್ರಮಾಣ ಅವರವರ ರುಚಿಗೆ ಬಿಟ್ಟಿದ್ದು. ಬಿಸಿಬಿಸಿ ಇದ್ದಾಗ ಮಜ್ಜಿಗೆ ಹುಳಿ ರುಚಿಕರ. ಇದೇ ವಿಧಾನವಲ್ಲದೆ ಬೇರೆ ಬೇರೆ ವಿಧಾನಗಳನ್ನು ತಿಳಿದವರು ನಮಗೆ ಬರೆಯಬಹುದು.

Story first published: Monday, January 5, 2009, 18:31 [IST]
X
Desktop Bottom Promotion