ನಾಗರ ಪಂಚಮಿ ಸ್ಪೆಷಲ್: ಈ ಮೂರು ಸಿಹಿ ತಿಂಡಿ ಸವಿದು ನೋಡಿ..! ಹಬ್ಬ ಸಂಭ್ರಮ ಮತ್ತಷ್ಟು ಹೆಚ್ಚಿಸಿ

Posted By:

ನಾಗರ ಪಂಚಮಿ ಹಬ್ಬ ಅಂದ್ರೆ ಅದು ಸಂಭ್ರಮದ ಹಬ್ಬ. ಶ್ರಾವಣ ಮಾಸದ ಮೊದಲ ಹಬ್ಬ ಇದಾಗಿದೆ. ಹೀಗಾಗಿ ಎಲ್ಲರಿಗೂ ಈ ಹಬ್ಬದ ಮೂಲಕ ಹೊಸ ರೀತಿಯ ದಿನಗಳು ಬರುತ್ತವೆ. ಅನೇಕ ಹಬ್ಬಗಳಿಗೆ ಇದು ಶುಭಾರಂಭ ನೀಡಲಿದೆ ಎಂದು ಹೇಳಲಾಗುತ್ತದೆ. ನಾಗರ ಪಂಚಮಿಯಲ್ಲಿ ನಾಗರ ಮೂರ್ತಿಗಳಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. ಹಾಗೆ ಮನೆಯಲ್ಲೂ ಪೂಜೆ ಮಾಡುವುದು ನೋಡಬಹುದು.

ಇನ್ನು ಈ ಶ್ರಾವಣ ಮಾಸದ ಮೊದಲ ಹಬ್ಬದಲ್ಲಿ ಮನೆಯಲ್ಲಿ ಸಿಹಿ ಮಾಡುವುದು ಕೂಡ ಇದೆ. ಹಾಗೆ ನಾಗರ ಪಂಚಮಿಯಲ್ಲಿ ಹಲವು ರೀತಿಯ ಸಿಹಿಗಳ ಮಾಡಿ ಸವಿಯುವುದು ಕಾಮನ್, ಅದ್ರಲ್ಲೂ ನಾವಿಂದು ಪೂಜೆಗಾಗಿ ನೈವೇದ್ಯಕ್ಕೆ ಇಡುವುದು ಹಾಗೆ ಪ್ರಸಾದವಾಗಿಯೂ ನೀಡುವಂತಹ ಕೆಲವು ಸಿಹಿ ತಿಂಡಿಗಳ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.

Discover 3 Delightful Treats At Home In Kannada

ಅದ್ರಲ್ಲೂ ನಾಗರ ಪಂಚಮಿಯಲ್ಲಿ ಮಾತ್ರವೇ ಮಾಡುವಂತಹ ವಿಶೇಷ ಖಾದ್ಯಗಳಲ್ಲಿ ಈ ಮೃದುವಾದ ಪುಟಾಣಿ ಉಂಡೆ ಕೂಡ ಒಂದಾಗಿದೆ. ಹುರಿಗಡಲೆಯನ್ನು ಬಳಸಿಕೊಂಡು ಈ ಉಂಡೆಯನ್ನು ಮಾಡಲಾಗುತ್ತದೆ. ಹಾಗಾದ್ರೆ ಈ ಉಂಡೆಯನ್ನು ಮಾಡುವುದು ಹೇಗೆ? ಪೂಜೆಗಾಗಿ ಮಕ್ಕಳ ಇಷ್ಟದ ಈ ಉಂಡೆಯನ್ನು ಮಾಡುವುದು ಹೇಗೆ ನೋಡೋಣ.

ಹುರಿಗಡಲೆ ಉಂಡೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಪುಟಾಣಿ ಉಂಡೆ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?

  • ಹುರಿಗಡಲೆ
  • ಒಣ ಕೊಬ್ಬರಿ
  • ಸಕ್ಕರೆ
  • ಏಲಕ್ಕಿ
  • ತುಪ್ಪ
  • ಗಸೆಗಸೆ


ಪುಟಾಣಿ ಉಂಡೆ ಮಾಡುವುದು ಹೇಗೆ?

ಮೊದಲು ಹುರಿಗಡಲೆಯನ್ನು ಮಿಕ್ಸಿ ಜಾರ್‌ಗೆ ಹಾಕಿ ಅದನ್ನು ಸಣ್ಣದಾಗಿ ಪುಡಿ ಮಾಡಬೇಕು. ನುಣ್ಣಗೆ ಪುಡಿ ಮಾಡಿ ಮತ್ತೆ ಜರಡಿ ಹಿಡಿದು ಕೇವಲ ನುಣ್ಣಗಿರುವ ಹಿಟ್ಟನ್ನು ಮಾತ್ರ ತೆಗೆದುಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಗಸೆಗಸೆ ಹಾಕಿಕೊಂಡು ಹುರಿದುಕೊಳ್ಳಿ. ಗಸೆ ಗಸೆ ಸಿಡಿಯುವಾಗ ತೆಗೆದಿಟ್ಟುಕೊಳ್ಳಿ.

ಬಳಿಕ ಇದಕ್ಕೆ ಸ್ವಲ್ಪ ಕೊಬ್ಬರಿ ತುರಿ ಹಾಕಿ 1 ನಿಮಿಷ ಹಾಕಿ ಫ್ರೈ ಮಾಡಿ ತೆಗದಿಡಿ. ನಂತರ 1 ಕಪ್ ಸಕ್ಕರೆ ಹಾಕಿ ಸ್ವಲ್ಪ ನೀರು ಹಾಕಿ ದಪ್ಪವಾದ ಪಾಕ ಮಾಡಿ. ಸಕ್ಕರೆ ಕರಗಿ ನೊರೆಬಂದು ಒಂದೆಳೆ ಪಾಕ ಮಾಡಿಕೊಳ್ಳಿ. ನಂತರ ಒಲೆ ಆಫ್ ಮಾಡಿಕೊಂಡು ಇಳಿಸಿಕೊಂಡು ಅದರೊಳಗೆ ಪುಟಾಣಿ ಹಿಟ್ಟು ಹಾಕಿಕೊಂಡು ಕಲಸಿಕೊಳ್ಳಿ. ಕೈ ಬಿಡದೆ 5 ನಿಮಿಷ ಮಿಕ್ಸ್ ಮಾಡಿದರೆ ಚೆನ್ನಾಗಿ ಹದವಾಗುತ್ತದೆ.

ಈ ಗಟ್ಟಿಯಾಗಿರುವ ಹಿಟ್ಟಿಗೆ ಬಿಸಿ ಮಾಡಿ ಇಟ್ಟಿದ್ದ ಕೊಬ್ಬರಿ, ಗಸೆ ಗಸೆ ಹಾಗೆ ಯಾವುದಾದರು ಡ್ರೈ ಫ್ರೂಟ್ಸ್‌ ಇದ್ದರೆ ಹಾಕಿಕೊಳ್ಳಿ. ಈಗ ಕೈಯಿಂದ ಮಿಕ್ಸ್ ಮಾಡಿಕೊಳ್ಳಿ. ಕಲಸುವಾಗ ಇದು ಗಟ್ಟಿ ಆಗಿರಲಿದೆ. ಈಗ ಒಲೆ ಮೇಲೆ ಇಟ್ಟು 2ರಿಂದ 3 ಸ್ಪೂನ್ ತುಪ್ಪ ಹಾಕಿ 1 ನಿಮಿಷ ಮಿಕ್ಸ್ ಮಾಡಿ ಒಲೆ ಆಫ್ ಮಾಡಿ ಇಳಿಸಿಕೊಂಡು ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಉಂಡೆ ಕಟ್ಟಿಕೊಳ್ಳಿ. ಇಷ್ಟಾದರೆ ನಾಗರ ಪಂಚಮಿಗೆ ಪುಟಾಣಿ ಉಂಡೆ ರೆಡಿಯಾಗುತ್ತದೆ.


ಅದ್ಭುತ ರುಚಿಯಲ್ಲಿ ಸಿಹಿ ಕಡಬು ಮಾಡಿ ನೋಡಿ

ಇದೊಂದು ರೆಸಿಪಿಯ ಬಳಿಕ ಈಗ ನಾವು ನೋಡೋಣ. ಅದ್ರಲ್ಲೂ ಹೆಚ್ಚಾಗಿ ಹಬೆಯಲ್ಲಿ ಮಾಡುವ ಖಾರ ಹಾಗೂ ಸಿಹಿ ಕಡಬು ಮಾಡುವುದು ನೋಡಿರಬಹುದು. ನಾಗರ ಪಂಚಮಿಯಲ್ಲಿ ಈ ವಿಶೇಷ ಖಾದ್ಯ ಮಾಡುತ್ತಾರೆ. ಹಾಗಾದ್ರೆ ಈ ಸಿಹಿ ಕಡಬು ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.

ಸಿಹಿ ಕಡಬು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.


ಸಿಹಿ ಕಡಬು ಮಾಡಲು ಬೇಕಾಗುವ ಪದಾರ್ಥಗಳು

  • ಅಕ್ಕಿ ಹಿಟ್ಟು 1 ಕಪ್
  • ಕಾಯಿ ತುರಿ- 1 ಕಪ್
  • ಬೆಲ್ಲ
  • ತುಪ್ಪ
  • ಏಲಕ್ಕಿ ಪುಡಿ


ಸಿಹಿ ಕಡಬು ಮಾಡುವುದು ಹೇಗೆ?

ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಬೆಲ್ಲ ಹಾಕಿ ಸ್ವಲ್ಪ ನೀರು ಹಾಕಿ ಕರಗಿಸಿಕೊಳ್ಳಬೇಕು. ಬೆಲ್ಲದ ಪಾಕ ಮಾಡುವುದು ಬೇಡ, ಕರಗಿದರೆ ಸಾಕು. ನಂತರ ಈ ಬೆಲ್ಲವನ್ನು ಜರಡಿ ಹಿಡಿದು ತೆಗೆದಿಟ್ಟುಕೊಳ್ಳಿ. ಈಗ ಬೆಲ್ಲದ ನೀರನ್ನು ಬಾಣಲೆಗೆ ಮತ್ತೆ ಹಾಕಿ ಅದಕ್ಕೆ ತೆಂಗಿನಕಾಯಿ ತುರಿ ಹಾಕಿಕೊಂಡು ಹುರಿದುಕೊಳ್ಳಬೇಕು. ಬೆಲ್ಲದ ನೀರು ಇಂಗಿದ ಬಳಿಕ ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ ಸ್ವಲ್ಪ ಗಟ್ಟಿಯಾಗುವವರೆಗೂ ಮಿಕ್ಸ್ ಮಾಡಿ. ಉಂಡೆ ಕಟ್ಟು ಹದಕ್ಕೆ ಬಂದಾಗ ಒಲೆ ಆಫ್ ಮಾಡಿಕೊಳ್ಳಿ.

ಈಗ ಒಲೆ ಮೇಲೆ ಮತ್ತೊಂದು ಪಾತ್ರೆ ಇಟ್ಟು ಅದಕ್ಕೆ ಅಳತೆ ಕಪ್‌ನಲ್ಲಿ ಒಂದೂವರೆ ಕಪ್ ನೀರು ಹಾಕಿ ಸ್ವಲ್ಪ ಉಪ್ಪು, ಅರ್ಧ ಚಮಚ ತುಪ್ಪ ಹಾಕಿ ಕುದಿಯಲು ಬಿಡಿ. ಇದು ಕುದಿಬರುವಾಗ ಅಳತೆ ಕಪ್‌ನಲ್ಲಿ 1 ಕಪ್ ಅಕ್ಕಿ ಹಿಟ್ಟು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಕಡಬು ಮಾಡಲು ಹಿಟ್ಟು ಹದ ಮಾಡುವಂತೆ ಮಾಡಿ.

ಹಿಟ್ಟು ಬೆಂದಾಗ ಒಲೆ ಆಫ್ ಮಾಡಿ ಸ್ವಲ್ಪ ತಣ್ಣಗಾಗಲು ಬಿಟ್ಟು ನಾದುಕೊಳ್ಳಬೇಕು. ಚಪಾತಿ ಹಿಟ್ಟಿನಂತೆ ನಾದುಕೊಂಡು ಉಂಡೆ ಕಟ್ಟಲು ಬರುವಂತೆ ಮಾಡಿಕೊಳ್ಳಿ, ನಂತರ ಈ ಹಿಟ್ಟನ್ನು ನಿಂಬೆ ಹಣ್ಣಿನ ಗಾತ್ರದ ಉಂಡೆಗಳಾಗಿ ಮಾಡಿಕೊಳ್ಳಿ. ನಂತರ ಉಂಡೆಯನ್ನು ಪ್ಲಾಸ್ಟಿಕ್ ಮೇಲೆ ಇಟ್ಟು ಮತ್ತೊಂದು ಪ್ಲಾಸ್ಟಿಕ್ ಮೇಲೆ ಮುಚ್ಚಿ ಲಟ್ಟಿಸಿಕೊಳ್ಳಿ. ಈಗ ಮೊದಲು ಮಾಡಿರುವ ಹೂರ್ಣವನ್ನು ಮಧ್ಯದಲ್ಲಿ ಇಟ್ಟು ಅಚ್ಚಿನಲ್ಲಿ ಇಟ್ಟು ಪ್ರೆಸ್ ಮಾಡಿಕೊಳ್ಳಬೇಕು. ಕರ್ಜಿಕಾಯಿ ರೀತಿಯಲ್ಲಿ ಈ ಕಡಬು ಮಾಡಿಕೊಳ್ಳಿ.

ನಂತರ ಈ ಕಡಬನ್ನು ಕುಕ್ಕರ್‌ನಲ್ಲಿ, ಇಡ್ಲಿ ಸ್ಟೀಮರ್‌ನಲ್ಲಿ ಇಟ್ಟು ಬಾಳೆ ಎಲೆ ಮುಚ್ಚಿ 5 ನಿಮಿಷ ಹಬೆಯಲ್ಲಿ ಬೇಯಿಸಿಕೊಂಡರೆ ನಿಮ್ಮ ಮುಂದೆ ಸಿಹಿ ಕಡಬು ರೆಡಿಯಾಗುತ್ತದೆ.


ಅರಶಿಣ ಕಡಬು ಮಾಡಿದ್ರೆ ಕ್ಷಣದಲ್ಲಿ ಖಾಲಿಯಾಗುತ್ತೆ.

ಅರಶಿಣ ಕಡಬು ಮಾಡಲು ಯಾವೆಲ್ಲಾ ಪದಾರ್ಥ ಬೇಕು? ಮಾಡುವುದು ಹೇಗೆ ನೋಡೋಣ.

  • ಅಕ್ಕಿ
  • ಅರಶಿಣ ಎಲೆ
  • ಬೆಲ್ಲದ ಪುಡಿ
  • ಏಲಕ್ಕಿ ಪುಡಿ
  • ತುಪ್ಪ
  • ತೆಂಗಿನಕಾಯಿ ತುರಿ
  • ಉಪ್ಪು


ಮಾಡುವುದು ಹೇಗೆ ನೋಡಿ

ಮೊದಲು 1 ಕಪ್ ಅಕ್ಕಿ ತೊಳೆದು 1 ಗಂಟೆ ನೆನೆಯಲು ಬಿಡಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಬೆಲ್ಲದ ಪುಡಿ ಹಾಕಿ ನೀರು ಹಾಕಿ ಕರಗಲು ಬಿಡಿ. ಬೆಲ್ಲ ಕರಗಿದ ಬಳಿಕ ಒಟ್ಟು 2 ನಿಮಿಷ ಕುದಿ ಬಂದರೆ ಸಾಕು. ಈಗ ಇದಕ್ಕೆ 1 ಕಪ್ ಕಾಯಿ ತುರಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ 2 ಸ್ಪೂನ್ ತುಪ್ಪ ಸಹ ಹಾಕಿಕೊಳ್ಳಿ. ನಂತರ ಈ ಮಿಶ್ರಣ ದಪ್ಪವಾಗುವವರೆಗೂ ಕುದಿಯಲು ಬಿಡಿ. ನಂತರ ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ. ಒಲೆ ಆಫ್ ಮಾಡಿಕೊಳ್ಳಿ.

Discover 3 Delightful Treats At Home In Kannada

ಈಗ ನೆನೆಸಿಟ್ಟ ಅಕ್ಕಿಯನ್ನು ಮಿಕ್ಸಿ ಜಾರ್‌ಗೆ ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿಕೊಳ್ಳುವಾಗ ಸ್ವಲ್ಪ ಕಾಯಿ ತುರಿ ಹಾಗೆ ಸ್ವಲ್ಪ ಬೆಲ್ಲದ ಪುಡಿ, ಉಪ್ಪು ಸಹ ಹಾಕಿ ಸ್ವಲ್ಪ ನೀರು ಹಾಕಿ ರುಬ್ಬಬೇಕು. ಹಿಟ್ಟು ದಪ್ಪವಾಗಿರಬೇಕು. ವಡೆ ಮಾಡುವ ಹಿಟ್ಟಿನ ಹದದಲ್ಲಿರಲಿ.

ಈಗ ಅರಶಿಣ ಎಲೆಗಳನ್ನು ತೊಳೆದು ಇಟ್ಟುಕೊಳ್ಳಿ. ಈಗ ಎಲೆ ಎಗೆದುಕೊಂಡು ಮಧ್ಯದಲ್ಲಿ ಮಾತ್ರ ಹಿಟ್ಟು ಹಾಕಿಕೊಳ್ಳಿ. ನಂತರ ಹಿಟ್ಟಿನ ಮೇಲೆ ಸ್ವಲ್ಪ ಹೂರ್ಣ ಇಟ್ಟು ಮಧ್ಯದಲ್ಲಿ ಮಡಚಿಕೊಳ್ಳಬೇಕು. ಎಲ್ಲಾ ಎಲೆಗಳಿಗೂ ಹೀಗೆ ಮಾಡಿಕೊಳ್ಳಿ. ಅನಂತರ ಇಡ್ಲಿ ಕುಕ್ಕರ್‌ನಲ್ಲಿ ಎಲ್ಲಾ ಎಲೆಗಳ ಜೋಡಿಸಿಕೊಂಡು 15ರಿಂದ 20 ನಿಮಿಷ ಆದರೂ ಬೇಯಿಸಿಬೇಕು. ಇಷ್ಟಾದರೆ ನಿಮ್ಮ ಮುಂದೆ ಅರಶಿಣ ಕಡಬು ರೆಡಿಯಾಗುತ್ತದೆ.

[ of 5 - Users]
Story first published: Monday, July 28, 2025, 19:36 [IST]
X
Desktop Bottom Promotion