ಪಂಜಾಬಿ ಮಟನ್ ಕರ್ರಿ ಮಾಡಿ ನೋಡಿ.. ಈ ರುಚಿಗೆ ನೀವು ಫಿದಾ ಆಗ್ತೀರಾ! ಚಪಾತಿ, ರೊಟ್ಟಿ, ಅನ್ನಕ್ಕೆ ಹಬ್ಬ

Posted By:

ಈ ರುಚಿಗೆ ನೀವು ಫಿದಾ ಆಗ್ತೀರಾ! ಮಾಂಸಾಹಾರಿ ಪ್ರಿಯರಿಗೆ ಇದೊಂದು ಹಬ್ಬವೇ ಸರಿ. ಚಪಾತಿ, ಖಡಕ್ ರೊಟ್ಟಿ ಅಥವಾ ಬಿಸಿ ಬಿಸಿಯಾದ ಅನ್ನಕ್ಕೆ ಈ ಮಟನ್ ಕರ್ರಿ ಒಳ್ಳೆಯ ಕಾಂಬಿನೇಷನ್ ಆಗಿದೆ. ನಾವಿಂದು ನಾನ್‌ವೆಜ್ ಪ್ರಿಯರ ಸಂತೋಷಕ್ಕೆ ಪಂಜಾಬಿ ಮಟನ್ ಕರಿ ಸ್ಪೆಷಲ್ ರೆಸಿಪಿ ತಿಳಿಸಿಕೊಡಲಿದ್ದೇವೆ. ಪಂಜಾಬಿ ಅಡುಗೆಗಳು ತಮ್ಮ ವಿಶಿಷ್ಟ ರುಚಿ ಮತ್ತು ಪರಿಮಳಕ್ಕೆ ಹೆಸರುವಾಸಿ. ಪಂಜಾಬಿ ಮಟನ್ ಕರಿ (Punjabi Mutton Curry) ಇಂತಹ ಒಂದು ವಿಶೇಷ ಖಾದ್ಯವಾಗಿದೆ. ಬಾಯಲ್ಲಿ ನೀರೂರಿಸುವ ಈ ರುಚಿಕರ ಮತ್ತು ಮಸಾಲೆಯುಕ್ತ ಪಂಜಾಬಿ ಮಟನ್ ಕರಿಯನ್ನು ಮನೆಯಲ್ಲಿಯೇ ಹೇಗೆ ತಯಾರಿಸುವುದು ಎಂದು ತಿಳಿಯೋಣ ಬನ್ನಿ.

ವೀಕೆಂಡ್ ಬಂತೆಂದರೆ ಹಲವರಿಗೆ ಮಾಂಸಾಹಾರವಿಲ್ಲದೆ ದಿನ ಕಳೆಯುವುದೇ ಕಷ್ಟ ಆಗುತ್ತದೆ. ಅವರಿಗೆ ಏನೋ ಒಂದು ಕೊರತೆ ಇದ್ದಂತೆ ಭಾಸವಾಗುತ್ತದೆ. ಪ್ರತೀ ವಾರ ಒಂದೇ ರೀತಿಯ ಮಟನ್ ಅಡುಗೆ ತಿಂದು ಬೇಸರಾಗಿದ್ದರೆ, ಈ ಬಾರಿ ವಿಭಿನ್ನವಾಗಿ ಪಂಜಾಬಿ ಶೈಲಿಯ ಮಟನ್ ಕರಿ ಮಾಡಿ ಸವಿಯಿರಿ. ಇದು ಊಟಕ್ಕೆ ಹೊಸ ರುಚಿಯನ್ನು ನೀಡುತ್ತದೆ. ನೀವು ತಯಾರಿಸುವ ಈ ಪಂಜಾಬಿ ಶೈಲಿಯ ಮಟನ್ ಕರಿ (Punjabi Mutton Curry Recipe) ಚಪಾತಿ, ರೊಟ್ಟಿ ಅಥವಾ ಬಿಸಿ ಅನ್ನದೊಂದಿಗೆ ಸವಿಯಲು ಅತ್ಯುತ್ತಮವಾಗಿರುತ್ತದೆ. ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕೆನಿಸುವಂತಹ ರುಚಿಯನ್ನು ಹೊಂದಿರುತ್ತದೆ.

Punjabi Mutton Curry Recipe

ಪಂಜಾಬಿ ಮಟನ್ ಕರ್ರಿ ಮಾಡಲು ಬೇಕಾಗುವ ಪದಾರ್ಥಗಳು

• 500 ಗ್ರಾಂ ಮಟನ್
• 1 ಸ್ಪೂನ್ ಉಪ್ಪು (ರುಚಿಗೆ ತಕ್ಕಷ್ಟು)
• 1/4 ಸ್ಪೂನ್ ಅರಿಶಿನ ಪುಡಿ
• 2 ಸ್ಪೂನ್ ಖಾರದ ಪುಡಿ (ನಿಮ್ಮ ರುಚಿಗೆ ಅನುಗುಣವಾಗಿ)
• 100 ಗ್ರಾಂ ಮೊಸರು
• 6 ಸ್ಪೂನ್ ಎಣ್ಣೆ
• 4 ಏಲಕ್ಕಿ
• 5 ಲವಂಗ
• 2 ಸಣ್ಣ ಚಕ್ಕೆ ತುಂಡುಗಳು
• 2 ಕಪ್ಪು ಏಲಕ್ಕಿ
• 4-5 ಕಾಳುಮೆಣಸು
• 2 ಈರುಳ್ಳಿ (ಸಣ್ಣಗೆ ಹೆಚ್ಚಿದ್ದು)
• 2 ಟೊಮ್ಯಾಟೊ
• 4 ಟೇಬಲ್ ಸ್ಪೂನ್ ತುಪ್ಪ (ಅಥವಾ ಎಣ್ಣೆ)
• 2 ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
• 2 ಸ್ಪೂನ್ ಧನಿಯಾ ಪುಡಿ
• 1/4 ಸ್ಪೂನ್ ಗರಂ ಮಸಾಲಾ ಪುಡಿ
• 3/4 ಸ್ಪೂನ್ ಕಸೂರಿ ಮೇಥಿ
• ನೀರು
• ಕೊತ್ತಂಬರಿ ಸೊಪ್ಪು

How To Make Punjabi Mutton Curry

ಪಂಜಾಬಿ ಮಟನ್ ಕರ್ರಿ ತಯಾರಿಸುವ ವಿಧಾನ

ಮೊದಲಿಗೆ ಮಟನ್ ಅನ್ನು ಚೆನ್ನಾಗಿ ತೊಳೆಯಿರಿ. ಒಂದು ಪಾತ್ರೆಯಲ್ಲಿ ಉಪ್ಪು, ಅರಿಶಿನ, ಖಾರದ ಪುಡಿ ಮತ್ತು ಮೊಸರು ಸೇರಿಸಿ ಮಿಕ್ಸ್ ಮಾಡಿ. ಒಂದು ಗಂಟೆ ನೆನೆಸಿಡಿ. ಇದು ಮಟನ್‌ಗೆ ಮಸಾಲೆ ಚೆನ್ನಾಗಿ ಹಿಡಿಯಲು ಸಹಾಯ ಮಾಡುತ್ತದೆ. ಬಳಿಕ ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ. ಏಲಕ್ಕಿ, ಲವಂಗ, ಚಕ್ಕೆ, ಕಪ್ಪು ಏಲಕ್ಕಿ ಮತ್ತು ಕಾಳುಮೆಣಸು ಹಾಕಿ, ಸುವಾಸನೆ ಬರುವವರೆಗೆ ಹುರಿಯಿರಿ. ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ, ಕಂದು ಬಣ್ಣ ಬರುವವರೆಗೆ ಹುರಿಯಿರಿ. ಈಗ ಟೊಮ್ಯಾಟೊ ಹಾಕಿ, 2 ನಿಮಿಷ ಬೇಯಿಸಿ. ತಣ್ಣಗಾದ ಬಳಿಕ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.

ಈಗ ಒಂದು ಕುಕ್ಕರ್‌ನಲ್ಲಿ 5 ಸ್ಪೂನ್ ಎಣ್ಣೆ ಅಥವಾ ತುಪ್ಪ ಹಾಕಿ ಬಿಸಿ ಮಾಡಿ. ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ವಾಸನೆ ಹೋಗುವವರೆಗೆ ಹುರಿಯಿರಿ. ರುಬ್ಬಿದ ಮಸಾಲೆ ಪೇಸ್ಟ್ ಸೇರಿಸಿ ಕಡಿಮೆ ಉರಿಯಲ್ಲಿ ಬಣ್ಣ ಬದಲಾಗದಂತೆ ಹುರಿಯಿರಿ. ಮ್ಯಾರಿನೇಟ್ ಮಾಡಿದ ಮಟನ್ ಹಾಕಿ, 5 ನಿಮಿಷಗಳ ಕಾಲ ಹೆಚ್ಚಿನ ಉರಿಯಲ್ಲಿ ಬೇಯಿಸಿ. ಈಗ ಧನಿಯಾ ಪುಡಿ, ಖಾರದ ಪುಡಿ ಬೆರೆಸಿ ಮಿಕ್ಸ್ ಮಾಡಿ. 5 ನಿಮಿಷಗಳ ಕಾಲ ಮಟನ್ ಅನ್ನು ಮಸಾಲೆಯೊಂದಿಗೆ ಬೇಯಿಸಿ. ಮಸಾಲೆ ಮತ್ತು ಮಟನ್ ಚೆನ್ನಾಗಿ ಬೆರೆತು ಎಣ್ಣೆ ಬಿಡಲು ಪ್ರಾರಂಭಿಸುತ್ತದೆ.

Punjabi Mutton Curry

ಈಗ ಗರಂ ಮಸಾಲಾ, ಉಪ್ಪು ಹಾಕಿ ಒಂದು ನಿಮಿಷ ಕುದಿಸಿ. ನೀರು ಹಾಕಿ, ಕುಕ್ಕರ್ ಮುಚ್ಚಿ 4 ವಿಷಲ್ ಕೂಗಿಸಿ. ಪ್ರೆಷರ್ ತಣ್ಣಗಾದ ಬಳಿಕ, ಕಸೂರಿ ಮೇಥಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಒಂದು ನಿಮಿಷ ಬೇಯಿಸಿ. ಕೊನೆಯದಾಗಿ ಸ್ವಲ್ಪ ಸ್ವಲ್ಪವೇ ಬಿಸಿನೀರು ಸೇರಿಸುತ್ತಾ, ಮಟನ್ ಬೇಯುವರೆಗೂ ಬೇಯಿಸಿಕೊಂಡ್ರೆ ರುಚಿಯಾದ ಪಂಜಾಬ್ ಸ್ಟೈಲ್‌ನ ಮಟನ್ ಕರಿ ಸವಿಯಲು ಸಿದ್ಧ. ಇದರ ಮೇಲೆ ಸ್ವಲ್ಪ ಕೋತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿ.

[ of 5 - Users]
Story first published: Friday, July 18, 2025, 15:30 [IST]
X
Desktop Bottom Promotion