ಮಕ್ಕಳು ಬ್ರೆಡ್ ತಿನ್ನಲ್ವಾ? ಹೆಚ್ಚು ಉಳಿದಿದ್ಯಾ.. ಈ ಚೈನೀಸ್ ತಿಂಡಿ ಮಾಡಿಕೊಡಿ

Posted By:

ಮನೆಗೆ ತಂದ ಬ್ರೆಡ್ ಅನ್ನು ಮಕ್ಕಳು ತಿನ್ನುತ್ತಿಲ್ವಾ? ಖಾಲಿಯಾಗದೆ ಇನ್ನು ಹೆಚ್ಚು ಉಳಿದಿದ್ಯಾ? ಚಿಂತೆಬೇಡ, ಅದರಿಂದ ರುಚಿಯಾದ ತಿಂಡಿ ಮಾಡಬಹುದು. ಇದು ಸಂಜೆಯ ಸ್ನಾಕ್ಸ್‌ಗೆ ಹೇಳಿ ಮಾಡಿಸಿದ ತಿಂಡಿ. ಇದರ ಬಗ್ಗೆ ತಿಳಿದರೆ, ಈಗಲೇ ನೀವು ಒಮ್ಮೆ ಟ್ರೈ ಮಾಡ್ತೀರಿ. ಹೌದು, ನೀವು ಇಲ್ಲಿಯವರೆಗೆ ಪನ್ನೀರ್, ವೆಜ್ ಮತ್ತು ಸೋಯಾ ಮಂಚೂರಿಯನ್ ತಿಂದಿರಬೇಕು. ಆದರೆ, ಉಳಿದ ಬ್ರೆಡ್‌ನಿಂದ ಕೆಲವು ಚೈನೀಸ್ ರುಚಿಯ ತಿಂಡಿಗಳನ್ನು ತಯಾರಿಸಬಹುದು ಅಂತ ನೀವು ಎಂದಾದರೂ ಯೋಚಿಸಿದ್ದೀರಾ? ಖಂಡಿತ ಇಲ್ಲ ಬಿಡಿ. ನಾವಿಂದು ಬ್ರೆಡ್ ಮಂಚೂರಿಯನ್ (Bread Manchurian) ಮಾಡುವ ಬಗ್ಗೆ ತಿಳಿಸಲಿದ್ದೇವೆ. ಈ ತಿಂಡಿ ಪ್ರತಿ ತುತ್ತಲ್ಲೂ ಮಸಾಲೆಯುಕ್ತ ರುಚಿಯಿಂದ ತುಂಬಿರುತ್ತದೆ. ಮತ್ತೇಕೆ ತಡ, ಮನೆಯಲ್ಲಿಯೇ ಬ್ರೆಡ್ ಮಂಚೂರಿಯನ್ ಹೇಗೆ ತಯಾರಿಸಬೇಕೆಂದು ತಿಳಿಯೋಣ ಬನ್ನಿ.

ನಾವು ಕೆಲವೊಮ್ಮೆ ಮನೆಗೆ ತಂದ ಸಾಕಷ್ಟು ಸಾಮಗ್ರಿಗಳನ್ನು ಫ್ರಿಜ್‌ನಲ್ಲಿಟ್ಟು ಮರೆತು ಹೋಗಿರುತ್ತೇವೆ. ಏನೋ ಹುಡುಕುವಾಗ ಅದು ಕೈಗೆ ಸಿಗುತ್ತದೆ. ಆಗಲೇ, ಅದನ್ನು ತಂದಿರುವುದು ನೆನಪಾಗೋದು. ಅಷ್ಟರಲ್ಲಿ ಆ ಪದಾರ್ಥದ ಅವಧಿ ಮುಗಿಯುವ ಅಂತಕ್ಕೆ ಬಂದಿರುತ್ತದೆ. ಅದನ್ನು ಒಂದೇ ದಿನದಲ್ಲಿ ತಿಂದು ಖಾಲಿ ಮಾಡುವುದು ಕಷ್ಟ. ಆ ಸಮಯದಲ್ಲಿ ಅದನ್ನು ಬಳಸಿ ರುಚಿಯಾದ ತಿಂಡಿ ಮಾಡಿದರೆ, ನಿಮಿಷದಲ್ಲೇ ಖಾಲಿ ಆಗುತ್ತದೆ. ಬ್ರೆಡ್ ಸಹ ಹಾಗೆಯೇ. ನಾವು ಅದನ್ನು ತಂದು ಮರೆಯುತ್ತೇವೆ. ಬಿಸಾಡಲೂ ಮನಸ್ಸು ಬರಲ್ಲ. ಹಾಗಂತ ಒಂದೇ ಸಲ ಎಲ್ಲವನ್ನೂ ತಿನ್ನವುದು ಅಸಾಧ್ಯ. ಆಗ ಅದನ್ನು ಬಳಸಿ ಬ್ರೆಡ್ ಮಂಚೂರಿಯನ್ (Bread Manchurian Recipe) ಮಾಡಬಹುದು. ಇದು ತಿನ್ನಲು ಬಹಳ ಟೇಸ್ಟಿಯಾಗಿರುತ್ತದೆ.

Bread Manchurian

ಬ್ರೆಡ್ ಮಂಚೂರಿಯನ್ ತಯಾರಿಸಲು ಬೇಕಾಗುವ ಪದಾರ್ಥಗಳು

• ಬ್ರೆಡ್ ಸ್ಲೈಸ್‌ಗಳು (ಹೋಳುಗಳು) - 8 ರಿಂದ 10
• ಕಾರ್ನ್‌ಫ್ಲೋರ್ - 2 ಸ್ಪೂನ್
• ಮೈದಾ ಹಿಟ್ಟು - 2 ಸ್ಪೂನ್
• ಹಸಿ ಮೆಣಸಿನಕಾಯಿಗಳು - ಸಣ್ಣಗೆ ಕತ್ತರಿಸಿದ 2
• ಬೆಳ್ಳುಳ್ಳಿ - 4 ರಿಂದ 5 ಎಸಳು
• ಈರುಳ್ಳಿ - 1 ಅಥವಾ 2
• ಕ್ಯಾಪ್ಸಿಕಂ - ಸಣ್ಣಗೆ ಹೆಚ್ಚದ 1
• ಟೊಮೆಟೊ ಸಾಸ್ - 2 ಚಮಚ
• ಚಿಲ್ಲಿ ಸಾಸ್, ಸೋಯಾ ಸಾಸ್ - 1 ಸ್ಪೂನ್
• ಉಪ್ಪು - ರುಚಿಗೆ ತಕ್ಕಷ್ಟು
• ಅಡುಗೆ ಎಣ್ಣೆ - ಸ್ವಲ್ಪ (ಹುರಿಯಲು)

Take a Poll

ಬ್ರೆಡ್ ಮಂಚೂರಿಯನ್ ಮಾಡುವುದು ಹೇಗೆ?

ಇದೀಗ ಬ್ರೆಡ್ ಮಂಚೂರಿಯನ್ ತಯಾರಿಸಲು ಪ್ರಾರಂಭಿಸೋಣ. ನಾವು ಮೊದಲು, ಬ್ರೆಡ್ ಹೋಳುಗಳನ್ನು ತೆಗೆದುಕೊಳ್ಳೋಣ. ಅವುಗಳನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳೋಣ. ನೀವು ಚೆನ್ನಾಗಿ ಮ್ಯಾಶ್ ಮಾಡಿಕೊಳ್ಳಬಹುದು. ಬಳಿಕ ಸ್ವಲ್ಪ ನೀರು, ಮೈದಾ ಹಿಟ್ಟು ಮತ್ತು ಕಾರ್ನ್ ಫ್ಲೋರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳೋಣ. ಈಗ ಅದರಿಂದ ಸಣ್ಣ ಉಂಡೆಗಳನ್ನು ತಯಾರಿಸೋಣ. ಇದಾದ ಬಳಿಕ, ಗ್ಯಾಸ್ ಮೇಲೆ ಒಂದು ಬಾಣಲೆ ಇಡೋಣ. ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ, ಬಿಸಿ ಮಾಡೋಣ. ಎಣ್ಣೆ ಕಾದ ಬಳಿಕ, ಉಂಡೆಗಳನ್ನು ಅದರಲ್ಲಿ ಹಾಕೋಣ. ಅವು ಗೋಲ್ಡನ್ ಬಣ್ಣ ಬರುವವರೆಗೆ ಮತ್ತು ಗರಿಗರಿಯಾಗುವವರೆಗೆ ಚೆನ್ನಾಗಿ ಬೇಯಿಸಿ, ಬಳಿಕ ಹೊರಗೆ ತೆಗೆಯೋಣ.

ಟೀ ಟೈಮ್‌ಗೆ ಹೇಳಿ ಮಾಡಿಸಿದ ಸ್ನಾಕ್ಸ್

ಈಗ ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ, ಬಳಿಕ ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ, ಈರುಳ್ಳಿ ಮತ್ತು ಕ್ಯಾಪ್ಸಿಕಂ ಹಾಕಿ ಚೆನ್ನಾಗಿ ಹುರಿಯೋಣ. ಬಳಿಕ ಅದಕ್ಕೆ ಟೊಮೆಟೊ ಸಾಸ್, ಸೋಯಾ ಸಾಸ್ ಮತ್ತು ಚಿಲ್ಲಿ ಸಾಸ್ ಹಾಕೋಣ. ಇದಾದ ಬಳಿಕ ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಗ್ರೇವಿಗಾಗಿ ಸ್ವಲ್ಪ ನೀರು ಸೇರಿಸಿ ಕೆಲವು ನಿಮಿಷ ಬೇಯಿಸೋಣ. ಇಷ್ಟು ಮಾಡಿದರೆ ಸಾಕು ರುಚಿ ರುಚಿಯಾದ ಬ್ರೆಡ್ ಮಂಚೂರಿಯನ್ ಸಿದ್ಧವಾಗುತ್ತದೆ. ಸಂಜೆ ಟೀ ಟೈಮ್‌ಗೆ ಈ ಬ್ರೆಡ್ ಮಂಚೂರಿಯನ್ ಹೇಳಿ ಮಾಡಿಸಿದ ಸ್ನಾಕ್ಸ್ ಆಗಿದೆ. ನಿಮಗೆ ಇಷ್ಟವಾದರೇ ಈಗಲೇ ಒಮ್ಮೆ ಟ್ರೈ ಮಾಡಿ.

[ of 5 - Users]
Story first published: Thursday, June 12, 2025, 18:00 [IST]
X
Desktop Bottom Promotion