ಬಾಯಿ ರುಚಿಗೆ ಬೆಸ್ಟ್ ಹಾಗೆ ಆರೋಗ್ಯ ವೃದ್ಧಿಸುವ ಮೆಂತ್ಯ ಸೊಪ್ಪಿನ ಸಾರು.! ಮಾಡಿ ನೋಡಿ..!

Posted By:

ಸೊಪ್ಪು ತರಕಾರಿಯಲ್ಲಿ ಮಾಡುವ ಪಲ್ಯ, ಸಾಂಬಾರ್ ಬಹಳ ರುಚಿ ನೀಡಲಿದೆ. ಊಟ, ತಿಂಡಿಯ ಜೊತೆಗೆ ಈ ಸೊಪ್ಪಿನ ಸಾರು, ಪಲ್ಯಗಳು ಅದ್ಭುತ ರುಚಿ ತರಲಿವೆ. ಹಾಗೆ ಸೊಪ್ಪು ನಮ್ಮ ದೇಹಕ್ಕೆ ಬಹಳ ಆರೋಗ್ಯಕರ ಅಂಶಗಳ ತರುವ ಕಾರಣ ಸೊಪ್ಪು ತರಕಾರಿಯನ್ನು ಹೆಚ್ಚು ಸೇವಿಸಬೇಕು ಎಂದು ಹೇಳಲಾಗುತ್ತದೆ. ನೀವು ಕೂಡ ಹಲವು ಸೊಪ್ಪುಗಳ ಬಳಸಿಕೊಂಡು ಅದ್ಭುತ ಸಾಂಬಾರ್ ಮಾಡಿರುತ್ತೀರಿ.

ಇಂತಹ ಸಾಂಬಾರ್ ಮಾಡುವ ಶೈಲಿಯಲ್ಲಿ ನಾವಿಂದು ಮೆಂತ್ಯ ಸೊಪ್ಪಿನಿಂದ ಮಾಡುವ ಸಾಂಬಾರ್ ಕುರಿತು ತಿಳಿದುಕೊಳ್ಳೋಣ. ಮೆಂತ್ಯ ಸೊಪ್ಪು ಕಹಿಯಾಗಿದ್ದರೂ ಕುಡ ಅದರಿಂದಾಗುವ ಆರೋಗ್ಯಕರ ಲಾಭ ನೀವು ತಿಳಿದಿರಬೇಕು. ಮೆಂತ್ಯ ಸೊಪ್ಪಿನಲ್ಲಿ ಅಧಿಕ ಪ್ರಮಾಣದಲ್ಲಿ ಕಬ್ಬಿಣಾಂಶ ಹೊಂದಿರಲಿದೆ. ಇದು ರಕ್ತ ಹೀನತೆಗೆ ಪರಿಹಾರ ನೀಡಲಿದೆ.

How To Make Fenugreek Leaves Sambar At Home In Kannada

ದುರ್ಬಲ ಯಕೃತ್ತಿನ ಕ್ರಿಯೆ ಮತ್ತು ಜೀರ್ಣಕ್ರಿಯೆ ಸಮಸ್ಯೆ ಇರುವವರಿಗೆ ಮೆಂತ್ಯ ಸೊಪ್ಪು ತುಂಬಾ ಉಪಯುಕ್ತವಾಗಿದೆ. ಹೀಗಾಗಿ ಆರೋಗ್ಯಕ್ಕೆ ಇದು ಬಹಳ ಉಪಕಾರಿ ಅಂಶ ಹೊಂದಿದೆ. ಹಾಗಾದ್ರೆ ನಾವು ಈ ಮೆಂತ್ಯ ಸೊಪ್ಪಿನ ಸಾರು ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ಮೆಂತ್ಯ ಸೊಪ್ಪಿನ ಸಾರು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು?, ಮೆಂತ್ಯ ಸಾರು ಮಾಡಲು ಎಷ್ಟು ಸಮಯ ಹಿಡಿಯಲಿದೆ ಎನ್ನುವುದನ್ನು ನಾವಿಂದು ತಿಳಿದುಕೊಳ್ಳೋಣ.

ಮೆಂತ್ಯ ಸೊಪ್ಪಿನ ಸಾರು ಮಾಡಲು ಬೇಕಾಗುವ ವಸ್ತುಗಳು ಬೇಕು?

  • ಮೆಂತ್ಯ ಸೊಪ್ಪು
  • ಹೆಸರುಬೇಳೆ -ಅರ್ಧ ಕಪ್
  • ಈರುಳ್ಳಿ - 1
  • ಟೊಮೊಟೋ ಹಣ್ಣು
  • ಹಸಿ ಮೆಣಸಿನಕಾಯಿ
  • ಅರಿಶಿನ ಪುಡಿ
  • ಸಾಸಿವೆ
  • ಜೀರಿಗೆ
  • ಇಂಗು
  • ಬೆಳ್ಳುಳ್ಳಿ
  • ಉಪ್ಪು
  • ಎಣ್ಣೆ

ಮೆಂತ್ಯ ಸೊಪ್ಪಿನ ಸಾರು ಮಾಡುವ ವಿಧಾನವೇನು?

ಮೊದಲು ಒಲೆ ಮೇಲೆ ಕುಕ್ಕರ್ ಇಟ್ಟು ಅದಕ್ಕೆ 2 ಬಾರಿ ತೊಳೆದ ಅರ್ಧ ಕಪ್ ಅಳತೆಯ ಹೆಸರು ಬೇಳೆ ಹಾಕಿಕೊಂಡು, 8 ಹಸಿ ಮೆಣಸು ಸೀಳಿಕೊಂಡು ಹಾಕಿ, ಹಾಗೆ ಅರಶಿಣ ಪುಡಿ, 1 ಕಪ್ ನೀರು, ಎಣ್ಣೆ ಹಾಕಿಕೊಂಡು ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ 3 ಸೀಟಿ ಹೊಡೆಯಲು ಬಿಡಿ. ತದನಂತರ ಕುಕ್ಕರ್ ತಣ್ಣಗಾಗಲು ಬಿಡಿ.

ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿಯಾಗಲು ಬಿಡಿ, ಎಣ್ಣೆ ಬಿಸಿಯಾದಾಗ ಸಾಸಿವೆ, ಜೀರಿಗೆ, ಇಂಗು ಬೆಳ್ಳುಳ್ಳಿ ಹಾಕಿ ಅರ್ಧ ನಿಮಿಷ ಫ್ರೈ ಮಾಡಿಕೊಳ್ಳಿ. ನಂತರ ಒಂದು ಈರುಳ್ಳಿ ಸಣ್ಣದಾಗಿ ಕತ್ತರಿಸಿಕೊಂಡು ಇದಕ್ಕೆ ಹಾಕಿ 3 ನಿಮಿಷ ಫ್ರೈ ಮಾಡಿ. ನಂತರ ಸಣ್ಣದಾಗಿ ಕತ್ತರಿಸಿದ ಟೊಮೆಟೋ ಹಾಕಿ, ಉಪ್ಪು ಹಾಕಿ ಫ್ರೈ ಮಾಡಿಕೊಳ್ಳಿ. ಒಟ್ಟು 4 ನಿಮಿಷ ಫ್ರೈ ಮಾಡಿದ ಬಳಿಕ ಚೆನ್ನಾಗಿ ತೊಳೆದುಕೊಂಡಿರುವ ಮೆಂತ್ಯ ಸೊಪ್ಪು ಹಾಕಿ. ಮೆಂತ್ಯ ಸೊಪ್ಪನ್ನು ಕತ್ತರಿಸಿಕೊಳ್ಳುವ ಅಗತ್ಯವಿಲ್ಲ ಹಾಗೆ ಹಾಕಿ 5 ನಿಮಿಷ ಬೇಯಿಸಿಕೊಳ್ಳಿ.

ಈಗ ಕುಕ್ಕರ್ ಮುಚ್ಚಳ ತೆಗೆದು ಮಿಕ್ಸ್ ಮಾಡಿಕೊಂಡು ಬೇಳೆಯನ್ನು ಬಾಣಲೆಗೆ ಹಾಕಿಕೊಳ್ಳಿ. ನಂತರ ಸ್ವಲ್ಪ ನೀರು ಹಾಕಿಕೊಂಡು, ಸ್ವಲ್ಪ ಉಪ್ಪು ಸಹ ಹಾಕಿ ಮಿಕ್ಸ್ ಮಾಡಿಕೊಳ್ಳಿ, ನಿಮಗೆ ಯಾವ ಪ್ರಕಾರಕ್ಕೆ ಬೇಕೋ ಅಷ್ಟು ನೀರು ಹಾಕಿ. ಈ ಸಾರು ಆದಷ್ಟು ಗಟ್ಟಿಯಾಗಿರಲಿ. ನಂತರ 4ರಿಂದ 5 ನಿಮಿಷ ಕುದಿಬರಲು ಬಿಡಿ. ಸಾರು ಗಟ್ಟಿಯಾದರೆ ದೋಸೆ, ಇಡ್ಲಿ, ಚಪಾತಿ ಸೇರಿ ಎಲ್ಲಾ ಖಾದ್ಯದ ಜೊತೆಗೂ ಕೂಡ ಸವಿಯಬಹುದು. ಆರೋಗ್ಯದ ದೃಷ್ಟಿಯಲ್ಲೂ ಇದು ಬಹಳ ಉತ್ತಮವಾಗಿರೋದ್ರಿಂದ ಎಲ್ಲಾ ವಯಸ್ಸಿನವರು ಇದನ್ನು ಸವಿಯಬಹುದು. ನೀವು ಕೂಡ ಮನೆಯಲ್ಲಿ ಈ ರೀತಿಯಾಗಿ ಮೆಂತ್ಯ ಸೊಪ್ಪಿನ ಸಾರು ಮಾಡಿ ಸವಿದು ನೋಡಿ.

[ of 5 - Users]
Story first published: Friday, April 4, 2025, 14:59 [IST]
X
Desktop Bottom Promotion