ಆರೋಗ್ಯಕ್ಕೆ ಅತ್ಯುತ್ತಮ ಈ ಜೀರಿಗೆ ಮೆಣಸಿನ ರಸ..! ಮಾಡೋದು ಹೇಗೆ?

Posted By:

ಹವಾಮಾನ ಬದಲಾವಣೆಯಿಂದಾಗಿ ನಾವು ಶೀತ, ಕೆಮ್ಮು, ಗಂಟಲು ನೋವು, ಜ್ವರದಂತಹ ಸಮಸ್ಯೆಗೆ ಒಳಗಾಗುತ್ತಲೇ ಇರುತ್ತೇವೆ. ಈ ವೇಳೆ ನಾವು ಮನೆಯಲ್ಲಿ ಕಷಾಯ, ಜೀರಿಗೆ ಕಾಫಿ, ಮೆಣಸಿನಕಾಳಿನ ಸಾರು, ಶುಂಠಿ ಟೀ ಹೀಗೆ ಹಲವು ರೀತಿಯ ಪರಿಹಾರ ನಾವು ಮಾಡಿರುತ್ತೇವೆ. ಏಕೆಂದರೆ ಈ ರೀತಿಯ ಕಷಾಯ, ಖಾದ್ಯಗಳು ಆರೋಗ್ಯಕ್ಕೆ ಉತ್ತಮ. ಹಾಗೆ ದೇಹಕ್ಕಾಗಿರುವ ತಂಪನ್ನು ಮತ್ತ ಸಮತೋಲನಕ್ಕೆ ತರುತ್ತದೆ.

ಹೀಗೆ ಆರೋಗ್ಯಕರ ಖಾದ್ಯದಲ್ಲಿ ಜೀರಿಗೆ ಹಾಗೂ ಮೆಣಸಿನ ರಸಂ ಮಾಡಿದ್ದೀರಾ? ಜೀರಿಗೆ ಹಾಗೂ ಹಸಿ ಮೆಣಸಿನ ಸಾರು ಎಷ್ಟೊಂದು ರುಚಿ ನೀಡುತ್ತೆ ಅಂದ್ರೆ ನೀವು ಒಮ್ಮೆ ಸವಿದರೆ ಮತ್ತೆ ಮತ್ತೆ ಸವಿಯುತ್ತೀರಿ. ಅನ್ನದ ಜೊತೆ ಮಾತ್ರವಲ್ಲ ಇದನ್ನು ಲೋಟಕ್ಕೆ ಹಾಕಿಕೊಂಡು ಕುಡಿಯಬಹುದು. ಜೀರಿಗೆ ಸಾರು ಎಲ್ಲರು ಇಷ್ಟಪಡುವ ಒಂದು ಆರೋಗ್ಯಕರ ಖಾದ್ಯ.

How To Make Cumin Jeerige Saaru recipe At Home In Kannada

ಹಾಗಾದ್ರೆ ರುಚಿ ರುಚಿಯ ಜೀರಿಗೆ ಮೆಣಸಿನ ಸಾರು ಮಾಡುವುದು ಹೇಗೆ? ಈ ಜೀರಿಗೆ ಸಾರು ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಬೇಕು ಎಂಬ ಮಾಹಿತಿಯನ್ನು ನಾವಿಂದು ತಿಳಿದುಕೊಳ್ಳೋಣ.

ಜೀರಿಗೆ ಸಾರು ಮಾಡಲು ಬೇಕಾಗುವ ಪದಾರ್ಥಗಳು

  • ಕಾಳು ಮೆಣಸು - ಸ್ವಲ್ಪ
  • ಜೀರಿಗೆ
  • ಟೊಮೆಟೋ - 2
  • ಕೊತ್ತಂಬರಿ ಸೊಪ್ಪು
  • ಕರಿಬೇವಿನ ಸೊಪ್ಪು
  • ಒಣ ಮೆಣಸಿನಕಾಯಿ
  • ಬೆಳ್ಳುಳ್ಳಿ
  • ಇಂಗು
  • ಸಾಸಿವೆ
  • ಅರಿಶಿನದ ಪುಡಿ
  • ಹುಣಸೆಹಣ್ಣು
  • ಎಣ್ಣೆ
  • ಉಪ್ಪು

ಜೀರಿಗೆ ಮೆಣಸಿನ ಸಾರು ಮಾಡುವುದು ಹೇಗೆ?

ಮೊದಲು ಒಲೆ ಮೇಲೆ ಒಂದು ಪಾತ್ರ ಇಟ್ಟು ಅದಕ್ಕೆ ಕಾಳು ಮೆಣಸುಗಳನ್ನು ಹಾಕಬೇಕು. ನಂತರ ಇದಕ್ಕೆ ಜೀರಿಗೆ ಹಾಕಿ ಹುರಿದುಕೊಳ್ಳಬೇಕು. 4 ನಿಮಿಷದ ಬಳಿಕ ಒಲೆ ಆಪ್ ಮಾಡಿಕೊಂಡು ಸಣ್ಣ ಮಿಕ್ಸಿ ಜಾರ್‌ಗೆ ಈ ಹುರಿದ ಪದಾರ್ಥಗಳ ಹಾಕಿಕೊಂಡು ಪುಡಿ ಮಾಡಿಕೊಳ್ಳಿ. ಸಣ್ಣದಾಗಿ ಪುಡಿ ಮಾಡಿಕೊಂಡ ಈ ಪುಡಿಯನ್ನು ಬದಿಗಿಟ್ಟುಕೊಳ್ಳಿ.

ಈಗ ಒಂದು ಬೌಲ್‌ನಲ್ಲಿ ನಿಂಬೆ ಹಣ್ಣು ಗಾತ್ರದ ಹುಣಸೆಹಣ್ಣನ್ನು ಹಾಕಿ ಪುಡಿ ಮಾಡಿಕೊಳ್ಳಿ, ಇದರಿಂದ ಬಂದ ನೀರು ತೆಗೆದಿಟ್ಟುಕೊಳ್ಳಿ. ಈಗ ಮತ್ತೊಂದು ಬೌಲ್‌ಗೆ ಟೊಮೆಟೋ ಹಣ್ಣನ್ನು ದೊಡ್ಡದಾಗಿ ಹೆಚ್ಚಿಕೊಂಡು ಹಾಕಿ ಸ್ವಲ್ಪ ನೀರು ಹಾಕಿ ಪುಡಿ ಮಾಡಿಕೊಳ್ಳಬೇಕು. ಕಿವುಚಿಕೊಂಡು ಅದರ ನೀರು ಸಹ ಎತ್ತಿಟ್ಟುಕೊಳ್ಳಿ. ಈಗ ಬೆಳ್ಳುಳ್ಳಿಯನ್ನು ಸಹ ಜಜ್ಜಿ ಬದಿಗೆ ಇಟ್ಟುಕೊಳ್ಳಿ.

ನಂತರ ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಅದಕ್ಕೆ ಸಾಸಿವೆ, ಇಂಗು, ಬೆಳ್ಳುಳ್ಳಿ ಹಾಕಿ ಬಿಸಿ ಮಾಡಿಕೊಳ್ಳಿ. ನಂತರ ಇದಕ್ಕೆ ಒಣ ಮೆಣಸು, ಕರಿಬೇವು ಹಾಕಿ ಬಿಸಿ ಮಾಡಿಕೊಂಡು ನಂತರ ಹುಣಸೆ ಹುಳಿಯನ್ನು ಹಾಕಿಕೊಳ್ಳಿ, ಹಾಗೆ ಇದಕ್ಕೆ ಟೊಮೆಟೋ ನೀರನ್ನು ಸಹ ಹಾಕಿಕೊಳ್ಳಿ.

ಇದಾದ ಬಳಿಕ ಅರಶಿನ ಹಾಕಿ ನಂತರ ಮೊದಲು ಮಿಕ್ಸಿಯಲ್ಲಿ ಪುಡಿ ಮಾಡಿಟ್ಟುಕೊಂಡ ಮಸಾಲೆಯ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ನಂತರ 2 ಗ್ಲಾಸ್ ನೀರು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಹಾಗೆ ಕೊತ್ತಂಬರಿ ಸೊಪ್ಪು ಹಾಕಿ 5 ನಿಮಿಷ ಕುದಿಯಲು ಬಿಡಿ. ಇಷ್ಟಾದರೆ ನಿಮ್ಮ ಮುಂದೆ ಬಿಸಿ ಬಿಸಿ ಜೀರಿಗೆ ಮೆಣಸಿನ ರಸ ರೆಡಿಯಾಗುತ್ತದೆ. ಇದು ಆರೋಗ್ಯಕರ ರಸಂ ಆಗಿದೆ. ಚಳಿಗಾಲದಲ್ಲಿ ಒಳ್ಳೆಯ ರೆಸಿಪಿ, ಇದನ್ನು ಮನೆಯಲ್ಲಿ ನೀವು ಸಹ ಮಾಡಿ ನೋಡಿ. ಎಲ್ಲರ ಆರೋಗ್ಯಕ್ಕೂ ಇದು ಅತ್ಯುತ್ತಮ ಖಾದ್ಯ.

[ of 5 - Users]
Story first published: Tuesday, October 15, 2024, 13:10 [IST]
X
Desktop Bottom Promotion