ಮೊಟ್ಟೆ, ಓವನ್ ಬಳಸದೆ ಸುಲಭವಾಗಿ ಮಾಡಿ ಕ್ರಿಸ್‌ಮಸ್ ಕೇಕ್..! ಹೇಗೆ ಗೊತ್ತಾ?

Posted By:

ಕ್ರಿಸ್ ಮಸ್ ಹತ್ತಿರವಾಗುತ್ತಿದೆ. ಕ್ರಿಸ್‌ಮಸ್ ಅಂದ್ರೆ ಮಕ್ಕಳಿಂದ ಹಿಡಿದು ಹಿರಿಯರ ವರೆಗು ಸಂಭ್ರಮ ಪಡುವಂತಹ ಹಬ್ಬವಾಗಿದೆ. ಇಡೀ ವಿಶ್ವ ಈಗ ಹೊಸ ವರ್ಷ ಹಾಗೆ ಕ್ರಿಸ್‌ಮಸ್‌ನ ಸಂಭ್ರಮಾಚರಣೆಯಲ್ಲಿದೆ. ಹಾಗೆ ಕ್ರಿಸ್‌ಮಸ್‌ ಎಂದ ತಕ್ಷಣ ನಮಗೆ ವಿವಿಧ ಬಗೆಯ ಆಹಾರಗಳು ನೆನಪಿಗೆ ಬರುತ್ತವೆ. ಕೇಕ್‌ಗಳು, ಪಾನಿಯಗಳು ಈ ಕ್ರಿಸ್‌ಮಸ್‌ನಲ್ಲಿ ಎಲ್ಲರ ಬಾಯಲ್ಲಿ ನೀರು ತರಿಸುತ್ತವೆ.

ಕ್ರಿಸ್‌ಮಸ್ ದಿನದಂದು ಮನೆಯಲ್ಲೇ ಕೇಕ್ ಮಾಡುವುದು ಅಂದರೆ ಎಲ್ಲರಿಗೂ ಇಷ್ಟ. ಆದರೆ ಓವನ್, ಮೊಟ್ಟೆ ಬಳಸದೆ ಸಿಂಪಲ್ ವಿಧಾನದಲ್ಲಿ ಕೇಕ್ ಮಾಡುವುದು ಹೇಗೆ ಎಂಬುದು ತಿಳಿದಿರೋದಿಲ್ಲ. ಹೀಗಾಗಿ ನಾವಿಂದು ಮನೆಯಲ್ಲಿ ಈ ಕ್ರಿಸ್ ಮಸ್ ಕೇಕ್ ಮಾಡುವ ಕುರಿತು ತಿಳಿದುಕೊಳ್ಳೋಣ. ಮನೆ ಮಂದಿ ಕುಳಿತು ಸವಿಯಬಹುದಾದ ಈ ಕೇಕ್ ಮಾಡುವ ಕುರಿತು ತಿಳಿದುಕೊಳ್ಳೋಣ.

How To Make Christmas Cake At Home In Kannada

ಈ ರೀತಿಯ ಅದ್ಭುತ ರುಚಿಯ ಕೇಕ್ ಅನ್ನು ಮನೆ ಮಂದಿಯಲ್ಲ ಇಷ್ಟಪಡುತ್ತಾರೆ. ಅದ್ರಲ್ಲೂ ಮಕ್ಕಳಂತು ಈ ಕೇಕ್‌ಗೆ ಫಿದಾ ಆಗುತ್ತಾರೆ. ಹಾಗಾದ್ರೆ ಕ್ರಿಸ್‌ಮಸ್‌ಗೆ ಮತ್ತಷ್ಟು ಮೆರುಗುವ ತರುವಂತಹ ಕೇಕ್ ಅನ್ನು ಮನೆಯಲ್ಲೇ ಮಾಡೋದು ಹೇಗೆ? ಮನೆಯಲ್ಲಿ ಕ್ರಿಸ್‌ಮಸ್ ಕೇಕ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಈ ಕೇಕ್ ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.

ಕ್ರಿಸ್‌ಮಸ್ ಕೇಕ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?

  • ಮೈದಾ ಹಿಟ್ಟು - 2 ಕಪ್
  • ಹಾಲು
  • ಸಕ್ಕರೆ - 1/2 ಕಪ್
  • ಕೋಕೋ ಪೌಡರ್ - 1 tbs
  • ವಿನೆಗರ್ - 2 ಟೀಸ್ಪೂನ್
  • ವೆನಿಲ್ಲಾ ಎಸೆನ್ಸ್
  • ನಟ್‌ಮೆಗ್ ಪುಡಿ/ ಜಾಯಿಕಾಯಿ - ಚಿಟಿಕೆಯಷ್ಟು
  • ಶುಂಠಿ ಪುಡಿ
  • ದಾಲ್ಚಿನ್ನಿ ಪುಡಿ
  • ಸಕ್ಕರೆ
  • ಬೇಕಿಂಗ್ ಪೌಡರ್
  • ಅಡಿಗೆ ಸೋಡಾ
  • ಕೇಕ್ ಅಚ್ಚು
  • ಬಾದಾಮಿ
  • ಗೋಡಂಬಿ
  • ಚೆರ್ರಿ ಹಣ್ಣು
  • ಕಪ್ಪು ಒಣ ದ್ರಾಕ್ಷಿ
  • ಬಿಳಿ ಒಣ ದ್ರಾಕ್ಷಿ
  • ಕಿತ್ತಳೆ ರಸ

ಕ್ರಿಸ್‌ಮಸ್ ಕೇಕ್ ಮಾಡುವ ವಿಧಾನವೇನು?

ಮೊದಲು ಒಂದು ಬೌಲ್‌ಗೆ ಒಣ ದ್ರಾಕ್ಷಿ, ಕಪ್ಪು ದ್ರಾಕ್ಷಿ, ಗೋಡಂಬಿ, ಚರಿ ಹಣ್ಣು ಕತ್ತರಿಸಿಕೊಂಡು ಹಾಕಿ ಕಿತ್ತಳೆ ರಸವನ್ನು ಹಾಕಿ ನೆನೆಯಲು ಬಿಡಬೇಕು. 4ರಿಂದ 5 ಗಂಟೆಗಳ ಕಾಲ ನೆನೆಯಲು ಬಿಡಿ.

ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಸಕ್ಕರೆ ಹಾಕಿಕೊಂಡು ಪಾಕ ಮಾಡಿ. ನೀರು ಹಾಕದೆ ಇದನ್ನು ಕರಗಿಸಿಕೊಳ್ಳಿ. ಸಿರಪ್ ಆದ ಬಳಿಕ ಅರ್ಧ ಗ್ಲಾಸ್ ಬಿಸಿ ನೀರು ಹಾಕಿ ಪಾಕ ಒಂದು ಬೌಲ್‌ಗೆ ಹಾಕಿಟ್ಟುಕೊಳ್ಳಿ.

ಈಗ ಒಂದು ಪಾತ್ರೆ ಒಲೆ ಮೇಲೆ ಇಟ್ಟು ಒಳಗೆ ಸ್ಟ್ಯಾಂಡ್ ಇಡಬೇಕು. 10 ನಿಮಿಷ ಈ ಪಾತ್ರೆ ಬಿಸಿಯಾಗಲು ಬಿಡಿ. ಈಗ ಒಂದು ಬೌಲ್‌ಗೆ ಹಾಲು, ಎಣ್ಣೆ, ಚಕ್ಕೆ, ಒಣ ಶುಂಠಿ ಪುಡಿ, ಜಾಯಿಕಾಯಿ ಪುಡಿ ಮಾಡಿ ಇದಕ್ಕೆ ಹಾಕಿ, ಹಾಗೆ ವೆನಿಲ್ಲ ಎಸೆನ್ಸ್ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಕಾಲು ಕಪ್ ಸಕ್ಕರೆ ಪುಡಿ, ಮೈದಾ ಹಿಟ್ಟು, ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ, ಕೋಕಾ ಪೌಡರ್ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಸಕ್ಕರೆ ಪಾಕ ಅಥವಾ ಕ್ಯಾರಮಲ್ ಸಿರಪ್ ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿ.

ಈಗ ನೆನೆಸಿಟ್ಟಿರುವ ಎಲ್ಲಾ ಡ್ರೈ ಫ್ರೂಟ್ಸ್‌ ಅನ್ನು ಇದಕ್ಕೆ ಹಾಕಿ ಮತ್ತೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ 2 ಸ್ಪೂನ್ ವಿನೆಗರ್ ಹಾಕಿಕೊಳ್ಳಿ. ಈ ಹಿಟ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳುತ್ತಾ, ಕೇಕ್ ಮಾಡುವ ಟ್ರೇಗೆ ಹಾಕಬೇಕು. ಈ ಟ್ರೇಯನ್ನು ಕೇಕ್ ಬಟರ್ ಪೇಪರ್ ಅಥವಾ ಸಾಮಾನ್ಯ ಪೇಪರ್‌ಗೆ ಎಣ್ಣೆ ಹಚ್ಚಿಕೊಂಡು ಒಳಗೆ ಹಾಕಿಟ್ಟು ರೆಡಿ ಮಾಡಿಕೊಳ್ಳಿ.

ಅನಂತರ ಈ ಹಿಟ್ಟನ್ನು ಕೇಕ್‌ ಟ್ರೇಗೆ ಹಾಕಿಕೊಳ್ಳಿ ನಂತರ ಒಲೆ ಮೇಲೆ ಬಿಸಿ ಮಾಡಿಕೊಂಡಿರುವ ಪಾತ್ರೆಯ ಒಳಗೆ ಈ ಟ್ರೇ ಅನ್ನು ಇಟ್ಟು ಮುಚ್ಚಳ ಮುಚ್ಚಿ 40 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿಕೊಳ್ಳಿ. 40 ರಿಂದ 45 ನಿಮಿಷದ ಬಳಿಕ ಮುಚ್ಚಳ ತೆಗೆದು ನೋಡಿ. ಅನಂತರ ತಣ್ಣಗಾಗಲು ಬಿಡಿ. ಇಷ್ಟಾದರೆ ನಿಮ್ಮ ಮುಂದೆ ಈ ಕೇಕ್ ರೆಡಿಯಾಗುತ್ತದೆ, ನಂತರ ಕತ್ತರಿಸಿಕೊಂಡು ಸವಿಯಲು ನೀಡಿ.

[ of 5 - Users]
Story first published: Monday, December 23, 2024, 10:05 [IST]
X
Desktop Bottom Promotion