ಲೋ ಬಜೆಟ್.. 6 ತಿಂಗಳು ಇಟ್ಟು ಬಳಸಬಹುದು ಈ ಗರಂ ಮಸಾಲ! ಮನೆಯಲ್ಲೇ ಮಾಡೋದು ಹೇಗೆ?

Posted By:

ಕೇವಲ 10 ನಿಮಿಷ ಸಾಕು! ಇಂಥ ಗರಂ ಮಸಾಲ ಮಾಡಿದ್ರೆ ಊಟದ ರುಚಿ ಡಬಲ್ ಆಗುತ್ತೆ. ಮನೆಯಲ್ಲೇ ಘಮಘಮಿಸುವ ಗರಂ ಮಸಾಲ ಪುಡಿ ಮಾಡೋದು ಹೇಗೆ ಗೊತ್ತಾ? ಗರಂ ಮಸಾಲಾ (Garam Masala) ನಮ್ಮ ಅಡುಗೆಯ ಜೀವನಾಡಿ ಎಂದೇ ಹೇಳಬಹುದು. ಯಾವುದೇ ಅಡುಗೆಗೂ ಅದ್ಭುತ ರುಚಿ ಮತ್ತು ಪರಿಮಳ ನೀಡುತ್ತೆ ಈ ಮಸಾಲ. ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವ ಗರಂ ಮಸಾಲಾಗೆ ಹೋಲಿಸಿದರೆ, ಮನೆಯಲ್ಲಿ ತಯಾರಿಸಿದ ಮಸಾಲಾ ತನ್ನ ತಾಜಾತನ ಮತ್ತು ಹೆಚ್ಚು ಪರಿಮಳ ಹೊಂದಿರುತ್ತದೆ. ಇದರಿಂದ ಅಡುಗೆಯ ರುಚಿ ಮತ್ತಷ್ಟು ಡಬಲ್ ಆಗುತ್ತದೆ.

ಮನೆಯಲ್ಲೇ ಗರಂ ಮಸಾಲಾ ತಯಾರಿಸುವುದು ಸುಲಭವಾದ ಪ್ರಕ್ರಿಯೆ. ಇದು ನಿಮ್ಮ ಅಡುಗೆಮನೆಯನ್ನು ಸುವಾಸನೆಯಿಂದ ತುಂಬಿಸುತ್ತದೆ. ಇದರಲ್ಲಿ ಬಳಸುವ ಪ್ರತಿ ಮಸಾಲೆ ಪದಾರ್ಥವೂ ತಾಜಾ ಆಗಿರುವುದರಿಂದ, ಅಡುಗೆಗೆ ನೈಸರ್ಗಿಕ ಮತ್ತು ಶ್ರೀಮಂತ ರುಚಿ ದೊರೆಯುತ್ತದೆ. ಮನೆಯಲ್ಲೇ ಗರಂ ಮಸಾಲ ಪುಡಿ (Homemade Garam Masala) ಮಾಡೋದು ಹೇಗೆ? ಅದರ ಪ್ರಯೋಜನಗಳು ಏನು? ಎಂಬುವುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

Garam Masala Powder

ಆರೋಗ್ಯಕ್ಕೆ ಹೆಚ್ಚು ಉತ್ತಮ

ಮನೆಯಲ್ಲಿ ಗರಂ ಮಸಾಲಾ (garam masala recipe) ತಯಾರಿಸುವುದರ ಪ್ರಯೋಜನಗಳು ಹಲವು. ಇದರ ಮುಖ್ಯ ಆಕರ್ಷಣೆಯೇ ತಾಜಾತನ ಮತ್ತು ಪರಿಮಳ. ಮಸಾಲಾ ಪದಾರ್ಥಗಳನ್ನು ಪುಡಿ ಮಾಡುವ ಮೊದಲು ಹುರಿಯುವುದರಿಂದ, ಅವುಗಳಲ್ಲಿರುವ ನೈಸರ್ಗಿಕ ತೈಲಗಳು ಬಿಡುಗಡೆಯಾಗಿ ಪರಿಮಳ ಹೆಚ್ಚುತ್ತದೆ. ಮಾರುಕಟ್ಟೆಯ ಮಸಾಲೆಗಳಲ್ಲಿ ಸಾಮಾನ್ಯವಾಗಿ ಸಂರಕ್ಷಕಗಳು ಮತ್ತು ಕೃತಕ ಬಣ್ಣಗಳನ್ನು ಬಳಸಲಾಗುತ್ತದೆ. ಆದರೆ, ಮನೆಯಲ್ಲಿ ತಯಾರಿಸುವ ಮಸಾಲಾ ಸಂಪೂರ್ಣವಾಗಿ ನೈಸರ್ಗಿಕವಾಗಿರುವುದರಿಂದ, ಇದು ಆರೋಗ್ಯಕ್ಕೆ ಹೆಚ್ಚು ಉತ್ತಮ.

ರುಚಿಯ ಪ್ರಮಾಣ ನಿಯಂತ್ರಣ

ಮನೆಯಲ್ಲಿ ಗರಂ ಮಸಾಲಾ ಪುಡಿ (garam masala powder) ತಯಾರಿಸುವುದರಿಂದ, ನಿಮ್ಮ ಇಚ್ಛೆಗೆ ಅನುಗುಣವಾಗಿ ಮಸಾಲೆಗಳ ಪ್ರಮಾಣವನ್ನು ನಿಯಂತ್ರಿಸಬಹುದು. ಇದರಿಂದ ನಿಮ್ಮ ರುಚಿಗೆ ಸೂಕ್ತವಾದ ಗರಂ ಮಸಾಲ ಸಿದ್ಧವಾಗುತ್ತದೆ. ಅಲ್ಲದೆ, ಮಾರುಕಟ್ಟೆಯಲ್ಲಿ ದೊರೆಯುವ ಮಸಾಲೆಗಳಿಗಿಂತ ತಾಜಾ ಮಸಾಲೆಗಳನ್ನು ಖರೀದಿಸಿ ಪುಡಿ ಮಾಡುವುದು ಆರ್ಥಿಕವಾಗಿ ಹೆಚ್ಚು ಲಾಭದಾಯಕವಾಗಿದೆ.

ಗರಂ ಮಸಾಲಾ ತಯಾರಿಸಲು ಬೇಕಾಗುವ ಸಾಮಗ್ರಿಗಳು

• ಕೊತ್ತಂಬರಿ / ಧನಿಯಾ
• ಜೀರಿಗೆ
• ಕಾಳುಮೆಣಸು
• ಲವಂಗ
• ದಾಲ್ಚಿನ್ನಿ
• ಏಲಕ್ಕಿ
• ದೊಡ್ಡ ಏಲಕ್ಕಿ
• ಜಾಯಿಕಾಯಿ ಪುಡಿ
• ಸೋಂಪು

Garam Masala

ಗರಂ ಮಸಾಲಾ ತಯಾರಿಸುವ ವಿಧಾನ

ಮೊದಲಿಗೆ, ಒಂದು ಬಾಣಲೆ ಅಥವಾ ಪ್ಯಾನ್ ಬಿಸಿ ಮಾಡಿ. ನಂತರ ಅದಕ್ಕೆ ಧನಿಯಾ, ಜೀರಿಗೆ, ಕಾಳು ಮೆಣಸು, ಲವಂಗ, ಚಕ್ಕೆ, ಚಿಕ್ಕ ಮತ್ತು ದೊಡ್ಡ ಏಲಕ್ಕಿ, ಮತ್ತು ಸೋಂಪು ಹಾಕಿ ಹುರಿಯಿರಿ. ಮಸಾಲೆಗಳು ಸುಟ್ಟು ಹೋಗದಂತೆ ನೋಡಿಕೊಳ್ಳಿ. ಅವುಗಳಿಂದ ಸುವಾಸನೆ ಬರಲು ಪ್ರಾರಂಭಿಸಿದಾಗ ಉರಿಯನ್ನು ಆಫ್ ಮಾಡಿ. ಇದರಿಂದ ಮಸಾಲೆಗಳ ನೈಸರ್ಗಿಕ ತೈಲಗಳು ಬಿಡುಗಡೆಯಾಗಿ ಪರಿಮಳ ಹೆಚ್ಚುತ್ತದೆ.

ಮಸಾಲೆಗಳನ್ನು ಹುರಿದ ನಂತರ ಅವುಗಳನ್ನು ಒಂದು ತಟ್ಟೆಗೆ ಹಾಕಿ. ಅದು ಸಂಪೂರ್ಣವಾಗಿ ತಣ್ಣಗಾಗಲು ಬಿಡಿ. ಮಸಾಲೆಗಳು ತಣ್ಣಗಾದ ನಂತರ ಪುಡಿ ಮಾಡಿ. ಆಗ ಪುಡಿ ನುಣ್ಣಗೆ ಮಾಡಲು ಸುಲಭವಾಗುತ್ತದೆ. ಜೊತೆಗೆ ಮಸಾಲಾ ಒಟ್ಟಾಗುವುದಿಲ್ಲ. ಈಗ ತಣ್ಣಗಾದ ಮಸಾಲೆಗಳನ್ನು ಮಿಕ್ಸರ್ ಜಾರಿಗೆ ಹಾಕಿ. ಅದಕ್ಕೆ ಜಾಯಿಕಾಯಿ ಪುಡಿಯನ್ನು ಬೆರೆಸಿ. ನುಣ್ಣನೆಯ ಪುಡಿಯಾಗುವವರೆಗೆ ಚೆನ್ನಾಗಿ ರುಬ್ಬಿ. ಪುಡಿ ಗಟ್ಟಿಯಾದಂತೆ ಅನಿಸಿದರೆ, ಸ್ವಲ್ಪ ಹೊತ್ತು ನಿಲ್ಲಿಸಿ ಮತ್ತೆ ಪುಡಿ ಮಾಡಬಹುದು.

ಪುಡಿ ಮಾಡಿದ ಗರಂ ಮಸಾಲವನ್ನು ಒಂದು ಗಂಟೆ ಅಥವಾ ಸಂಪೂರ್ಣವಾಗಿ ತಣ್ಣಗಾಗಲು ಬಿಡಿ. ಬಳಿಕ ಅದನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿ. ಮಸಾಲೆಯನ್ನು ನೇರ ಸೂರ್ಯನ ಬೆಳಕು ಬೀಳದ ಸ್ಥಳದಲ್ಲಿ ಇರಿಸಿದರೆ ಅದರ ಪರಿಮಳ ಹೆಚ್ಚು ಕಾಲ ಉಳಿಯುತ್ತದೆ. ಈ ಸರಳ ವಿಧಾನದಿಂದ ತಯಾರಿಸಿದ ತಾಜಾ ಮತ್ತು ಪರಿಮಳಭರಿತ ಗರಂ ಮಸಾಲ ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ. ಪ್ರತಿ ಊಟವನ್ನೂ ಮತ್ತಷ್ಟು ರುಚಿಕರವಾಗಿಸುತ್ತದೆ.

[ of 5 - Users]
Story first published: Wednesday, September 17, 2025, 17:51 [IST]
X
Desktop Bottom Promotion