ಮನೆಯಲ್ಲಿ ಬೇಕರಿ ರುಚಿಯ ಹನಿ ಕೇಕ್ ಮಾಡಿ..! ಇಲ್ಲಿದೆ ರೆಸಿಪಿ

Posted By:

ನಾವು ಬೇಕರಿಗೆ ಹೋದರೆ ಥಟ್ ಅಂತ ನಮ್ಮ ಕಣ್ಣಿಗೆ ಬೀಳೋದು ಹನಿ ಕೇಕ್, ಹನಿ ಕೇಕ್ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಮಕ್ಕಳಂತು ಹನಿ ಕೇಕ್ ಸಿಕ್ಕಾಪಟ್ಟೆ ಇಷ್ಟಪಡುತ್ತಾರೆ. ಅದರಲ್ಲಿರುವ ಸಿಹಿ ಮತ್ತು ಮೃದುತ್ವ ಮತ್ತಷ್ಟು ತಿನ್ನಬೇಕು ಅನಿಸದೆ ಇರದು. ಹೀಗಾಗಿ ಎಲ್ಲಾ ಬೇಕರಿಗಳಲ್ಲೂ ಹನಿ ಕೇಕ್‌ಗೆ ಅಷ್ಟು ಬೇಡಿಕೆ ಇದ್ದೇ ಇರುತ್ತದೆ.

ಆದ್ರೆ ಬೇಕರಿಗಳಲ್ಲಿ ಸಿಗುವ ಹನಿಕೇಕ್ ಎಷ್ಟು ರುಚಿಕರವಾಗಿರುತ್ತೋ ಅದನ್ನು ಸೇವಿಸಲು ಸಹ ನಾವು ಹಿಂದು ಮುಂದು ನೋಡುತ್ತೇವೆ, ಯಾಕೆಂದ್ರೆ ಅದರಲ್ಲಿ ಯಾವೆಲ್ಲಾ ಅಂಶ ಹಾಕಿರುತ್ತಾರೋ, ಹೇಗೆ ಮಾಡಿರುತ್ತಾರೋ ಎಂದು ಅನುಮಾನಗೊಂಡು ಸುಮ್ಮನಾಗುತ್ತೇವೆ. ಹೀಗಾಗಿ ಕೆಲವೊಮ್ಮೆ ಹನಿ ಕೇಕ್ ತಿನ್ನಲು ಹೋದರು ವಾಪಾಸು ಬಂದಿರುತ್ತೇವೆ.

How To Make Bakery Like Honey Cake At Home In Kannada

ಆದ್ರೆ ನಾವು ಕೆಲವೇ ವಸ್ತುವನ್ನು ಬಳಸಿಕೊಂಡು ಬೇಕರಿ ರುಚಿಯ ಹನಿ ಕೇಕ್ ಅನ್ನು ಮನೆಯಲ್ಲೇ ಮಾಡಬಹುದು. ಹೌದು ಮನೆಯಲ್ಲಿ ತುಂಬಾ ಕಡಿಮೆ ಸಮಯದಲ್ಲಿ ಹನಿ ಕೇಕ್ ಮಾಡಬಹುದು. ಬೇಕರಿಯಲ್ಲಿ ಸಿಗುವಂತೆಯೇ ಈ ಕೇಕ್ ಸಹ ಇರಲಿದ್ದು, ನೋಡಲು ತಿನ್ನಲು ಬಲು ರುಚಿಯಾಗಿರುತ್ತದೆ.

ಹಾಗಾದ್ರೆ ನಾವಿಂದು ಬೇಕರಿ ರುಚಿಯ ಹನಿ ಕೇಕ್ ಅನ್ನು ಮನೆಯಲ್ಲೇ ಮಾಡುವುದು ಹೇಗೆ? ಹನಿ ಕೇಕ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಹನಿ ಕೇಕ್ ಮಾಡುವ ಪಾಕವಿಧಾನವೇನು ಎಂಬುದನ್ನು ನಾವಿಂದು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಹನಿ ಕೇಕ್ ಮಾಡಲು ಬೇಕಾಗುವ ವಸ್ತುಗಳು

  • ಮೈದಾ ಹಿಟ್ಟು- 1 ಕಪ್ (200 ಗ್ರಾಮ್)
  • ಮೊಸರು- ಅರ್ಧ ಕಪ್
  • ಎಣ್ಣೆ
  • ಸಕ್ಕರೆ (ಪೌಡರ್)- ಅರ್ಧ ಕಪ್
  • ಕೋಕನಟ್ ಪೌಡರ್
  • ಸಕ್ಕರೆ
  • ಹಾಲು
  • ಅಡುಗೆ ಸೋಡಾ
  • ಮಿಕ್ಸ್ ಫ್ರೂಟ್ ಜಾಮ್
  • ವೆನಿಲ್ಲಾ ಎಸೆನ್ಸ್
  • ಜೇನು ತುಪ್ಪ

ಹನಿ ಕೇಕ್ ಮಾಡುವುದು ಹೇಗೆ?

ಮೊಸಲು ಕುಕ್ಕರ್‌ ಅನ್ನು ಬಿಸಿ ಮಾಡಿಕೊಳ್ಳಿ. ಕುಕ್ಕರ್‌ನ ಸೀಟಿ ಮತ್ತು ರಬ್ಬರ್ ಎರಡನ್ನೂ ತೆಗೆದಿಟ್ಟು ಕುಕ್ಕರ್ ಬಿಸಿ ಮಾಡಿಕೊಳ್ಳಬೇಕು. ಬಳಿಕ ಒಂದು ಪಾತ್ರೆಯಲ್ಲಿ ಮೊಸರು, ಎಣ್ಣೆ ಹಾಗೂ ಸಕ್ಕರೆ ಪುಡಿ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಬೇಕು. ನೈಸ್ ಆಗುವವರೆಗೂ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

ಬಳಿಕ ಇದಕ್ಕೆ ಅಕ್ಕಿ ಹಿಟ್ಟು ಜರಡಿ ಹಿಡಿದು ಹಾಕಿಕೊಳ್ಳಿ. ಅದು ಅಳತೆ ಪ್ರಕಾರವೇ ಹಾಕಿಕೊಳ್ಳಿ. ಎಲ್ಲಾ ಪದಾರ್ಥಗಳು ಒಂದೇ ಕಪ್ ಅಳತೆಗೆ ತಕ್ಕಂತೆ ತೆಗೆದುಕೊಳ್ಳಿ. ಇದಕ್ಕೆ ಅಡುಗೆ ಸೋಡಾ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಅರ್ಧ ಕಪ್‌ ಕಾಯಿಸಿದ ಹಾಲನ್ನು ಸ್ವಲ್ಪ ಸ್ವಲ್ಪ ಹಾಕಿಕೊಂಡು ಕಲಸಿಕೊಳ್ಳಬೇಕು.

ಈ ಹಿಟ್ಟು ಚೆನ್ನಾಗಿ ಮಿಕ್ಸ್ ಆಗಬೇಕು. ಜಾಸ್ತಿ ನೀರಾಗಬಾರದು ಗಟ್ಟಿಯೂ ಆಗಬಾರದು. ಇದಕ್ಕೆ ವೆನಿಲ್ಲಾ ಎಸೆನ್ಸ್ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಈಗ ಕೇಕ್ ಮಾಡಲು ಹಿಟ್ಟು ರೆಡಿಯಾಗುತ್ತದೆ. ಈಗ ಕೇಕ್ ಮಾಡಲು ಸಣ್ಣದಾದ ಸ್ಟೀಲ್ ಅಥವಾ ಅಲ್ಯೂಮೀನಿಯಂ ಪಾತ್ರೆ ತೆಗೆದುಕೊಳ್ಳಿ. ಈ ಪಾತ್ರೆಗೆ ಚೆನ್ನಾಗಿ ಎಣ್ಣೆ ಹಚ್ಚಿಕೊಳ್ಳಿ.

ಬಳಿಕ ಈ ಪಾತ್ರೆಯನ್ನು ಬಿಸಿಮಾಡಿದ್ದ ಕುಕ್ಕರ್‌ ಒಳಗೆ ಇಡಬೇಕು. ಕುಕ್ಕರ್ ಒಳಗೆ ಕೆಳಗಡೆ ಒಂದು ಸ್ಟ್ಯಾಂಡ್ ಇಟ್ಟುಕೊಳ್ಳಿ. ಇದರೊಳಗೆ ಪಾತ್ರೆಯಿಟ್ಟು ಕೇಕ್ ಹಿಟ್ಟನ್ನು ಅದರ ಒಳಗೆ ಹಾಕಿ. ಕುಕ್ಕರ್‌ಗೆ ಸೀಟಿ, ರಬ್ಬರ್ ಹಾಕದೆ ಚಿಕ್ಕ ಉರಿಯಲ್ಲಿ 40ರಿಂದ 50 ನಿಮಿಷದವರೆಗೂ ಕಾಯಿಸಿಕೊಳ್ಳಿ.

ಬಳಿಕ ಈಗ ಒಂದು ಪಾತ್ರೆಯಲ್ಲಿ ಕಾಲು ಕಪ್ ಸಕ್ಕರೆ ಹಾಕಿ ಅದಕ್ಕೆ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಸ್ವಲ್ಪ ಜೇನು ತುಪ್ಪಹಾಕಿಕೊಂಡು ಚೆನ್ನಾಗಿ ಕುದಿಸಿ ಅಂಟಾದ ಪಾಕ ಮಾಡಿಕೊಳ್ಳಿ. 2 ನಿಮಿಷ ಕಾಯಿಸಿದರೆ ಸಾಕು. ಬಳಿಕ ಈ ಪಾಕ ತೆಗೆದಿಟ್ಟುಕೊಳ್ಳಿ. ಬಳಿಕ ಅದೇ ಪಾತ್ರೆಗೆ ಸ್ವಲ್ಪ ಮಿಕ್ಸ್ ಫ್ರೂಟ್ ಜಾಮ್ ಹಾಕಿ 1 ಸ್ಪೂನ್ ಜೇನು ತುಪ್ಪಹಾಕಿ ಮಿಕ್ಸ್ ಮಾಡಿಕೊಳ್ಳಿ. 2 ನಿಮಿಷ ಕಾಯಿಸಿ ಬಳಿಕ ಪಾತ್ರೆ ಇಳಿಸಿಕೊಳ್ಳಿ.

ಈಗ ಕುಕ್ಕರ್ ಒಳಗಿರುವ ಕೇಕ್ ಅನ್ನು ಹೊರಗೆ ತೆಗೆದುಕೊಳ್ಳಿ. ಅದನ್ನು ಪಾತ್ರೆಯಿಂದ ನಿಧಾನವಾಗಿ ತೆಗೆದಿಟ್ಟುಕೊಳ್ಳಿ. ಬಳಿಕ ಅದಕ್ಕೆ ಸಕ್ಕರೆ ಪಾಕವನ್ನು ಹಚ್ಚಿಕೊಳ್ಳಿ. ಇನ್ನೊಂದೆ ರೆಡಿಯಾಗಿರುವ ಜಾಮ್ ಅನ್ನು ಅದರ ಮೇಲೆ ಹಾಕಿಕೊಂಡಿ ಚೆನ್ನಾಗಿ ಹಚ್ಚಿಕೊಳ್ಳಿ. ಪೂರ್ತಿ ಕೇಕ್ ತುಂಬ ಈ ಜಾಮ್‌ ಅನ್ನು ಹಚ್ಚಿಕೊಳ್ಳಿ. ಬಳಿಕ ಕೊನೆಯದಾಗಿ ತೆಂಗಿನ ಕಾಯಿ ಪುಡಿಯನ್ನು ಹಾಕಿಕೊಂಡು ಸವಿಯಲು ಇಡಿ. ಇದನ್ನು ಫ್ರಿಡ್ಜ್‌ನಲ್ಲಿಟ್ಟು ಸೇವಿಸಲು ನೀಡಿದರೆ ರುಚಿ ಮತ್ತಷ್ಟು ಹೆಚ್ಚಾಗುತ್ತದೆ.

[ of 5 - Users]
X
Desktop Bottom Promotion