For Quick Alerts
ALLOW NOTIFICATIONS  
For Daily Alerts

ಫಟಾಫಟ್ ತಯಾರಿಸಿ ಚಿಕನ್-ಸಿಹಿ ಜೋಳದ ಸೂಪ್‌

By Arshad
|

ಊಟಕ್ಕೂ ಮೊದಲು ಸೂಪ್ ಎಂಬ ದ್ರವವನ್ನು ಹೀರುವುದನ್ನು ಹಿಂದೆ ಒಂದು ಐಷಾರಾಮವೆಂದು ಪರಿಗಣಿಸಲಾಗುತ್ತಿತ್ತು. ಆದರೆ ಇದರ ಆರೋಗ್ಯಕರ ಗುಣಗಳನ್ನು ಕಂಡ ಬಳಿಕ ಇದು ಜನಸಾಮಾನ್ಯರ ಅಡುಗೆಮನೆಗಳಲ್ಲಿಯೂ ತಯಾರಾಗುತ್ತಿದೆ. ಸುಲಭವಾಗಿ ತಯಾರಿಸಬಲ್ಲ ಪ್ಯಾಕೆಟ್ಟುಗಳೂ ಬಂದಿವೆ. ಆದರೆ ಮನೆಯಲ್ಲಿ ತಯಾರಿಸಿದ ಸೂಪ್‌ಗೆ ಇವು ಸಾಟಿಯಲ್ಲ. ಅದರಲ್ಲೂ ಸಿಹಿ, ಖಾರ, ಪ್ರೋಟೀನು, ಶಕ್ತಿ ಎಲ್ಲವನ್ನೂ ಮೇಳೈಸಿಕೊಂಡಿರುವ ರುಚಿಕರ ಚಿಕನ್-ಸಿಹಿ ಮೆಕ್ಕೆಜೋಳದ ಸೂಪ್‌ಗೆ ಸರಿಸಾಟಿಯಾದುದು ಇನ್ನೊಂದಿಲ್ಲ. ಅದರಲ್ಲೂ ತೂಕ ಇಳಿಸುವ ಇರಾದೆಯುಳ್ಳವರಿಗೆ ಇದೊಂದು ಉತ್ತಮ ಆಹಾರವಾಗಿದೆ, ಏಕೆಂದರೆ ಇದರಲ್ಲಿ ಚಿಕನ್ ಇದ್ದರೂ ಅವು ನಿಧಾನವಾಗಿ ಜೀರ್ಣಗೊಳ್ಳುವ ಕಾರಣ ಹಾಗೂ ಕಡಿಮೆ ಕ್ಯಾಲೋರಿಗಳು ಇರುವ ಕಾರಣ ತೂಕ ಇಳಿಸಲು ಸಹಕಾರಿಯಾಗಿದೆ.

ಹೆಸರೇ ಸೂಚಿಸುವಂತೆ ಇದರಲ್ಲಿ ಮುಖ್ಯವಾಗಿರುವುದು ಕೋಳಿ ಮಾಂಸ ಹಾಗೂ ಸಿಹಿಯಾದ ಮೆಕ್ಕೆಜೋಳ. ಮೆಕ್ಕೆಜೋಳದಲ್ಲಿ ಕಾರ್ಬೋಹೈಡ್ರೇಟುಗಳು ಉತ್ತಮ ಪ್ರಮಾಣದಲ್ಲಿರುವ ಕಾರಣ ಇದು ಬೆಳಗ್ಗಿನ ಉಪಾಹಾರಕ್ಕೂ ರಾತ್ರಿಯ ಊಟಕ್ಕೂ ಸೂಕ್ತವಾಗಿದೆ. ಒಂದು ವೇಳೆ ನೀವು ಸಸ್ಯಾಹಾರಿಯಾಗಿದ್ದರೆ ಇದರಲ್ಲಿನ ಕೋಳಿಮಾಂಸವನ್ನು ಬಿಟ್ಟು ಕೇವಲ ಮೆಕ್ಕೆಜೋಳವನ್ನು ಬಳಸಿಕೊಂಡರೂ ರುಚಿಯಲ್ಲೇನೂ ಕಡಿಮೆಯಾಗುವುದಿಲ್ಲ. ಬನ್ನಿ, ಈಗ ಈ ರುಚಿಯಾದ ಸೂಪ್ ಮಾಡುವ ಬಗೆಯನ್ನು ನೋಡೋಣ: ಆರೋಗ್ಯಕರ ಡಯಟ್ -ಚಿಕನ್ ಸೂಪ್

*ಪ್ರಮಾಣ: ನಾಲ್ವರಿಗೆ, ಒಂದು ಹೊತ್ತಿಗಾಗುವಷ್ಟು
*ಸಿದ್ಧತಾ ಸಮಯ: ಹದಿನೈದು ನಿಮಿಷಗಳು
*ತಯಾರಿಕಾ ಸಮಯ: ಇಪ್ಪತ್ತು ನಿಮಿಷಗಳು

Chicken Sweet Corn Soup Recipe

ಅಗತ್ಯವಿರುವ ಸಾಮಾಗ್ರಿಗಳು:
*ಕೋಳಿ ಮಾಂಸ (ಎದೆಯ ಭಾಗ): ನೂರು ಗ್ರಾಂ
*ಕ್ಯಾರೆಟ್ : ಅರ್ಧ ಕಪ್
*ಕೋಸು - 1/2 ಕಪ್
*ಸಿಹಿ ಮೆಕ್ಕೆಜೋಳದ ಕಾಳುಗಳು - 2 ಕಪ್
*ಕಾಳುಮೆಣಸಿನ ಪುಡಿ- 1 ಚಿಕ್ಕ ಚಮಚ
*ಕೆಂಪು ಮೆಣಸಿನ ಪುಡಿ - 1/2 ಚಿಕ್ಕ ಚಮಚ (ಕಾಶ್ಮೀರಿ ಚಿಲ್ಲಿ ಆದರೆ ಒಂದು ಚಿಕ್ಕ ಚಮಚ, ಇದರ ರುಚಿ ಇನ್ನೂ ಉತ್ತಮ)
*ಮೆಕ್ಕೆಜೋಳದ ಹಿಟ್ಟು- 1 ದೊಡ್ಡ ಚಮಚ
*ಉಪ್ಪು, ರುಚಿಗನುಸಾರ
*ಎಣ್ಣೆ: ಅಗತ್ಯಕ್ಕೆ ತಕ್ಕಷ್ಟು
*ಅರಿಶಿನ ಪುಡಿ: ಅರ್ಧ ಚಿಕ್ಕ ಚಮಚ ಚಿಕನ್ ರೈಸ್ ಸೂಪ್ - ಸ್ಪೆಷೆಲ್ ರೆಸಿಪಿ

ವಿಧಾನ:
1) ಒಂದು ಪಾತ್ರೆಯಲ್ಲಿ ಕೊಂಚ ನೀರು ಹಾಕಿ ಬಿಸಿಮಾಡಿ. ಇದಕ್ಕೆ ಕೋಳಿಮಾಂಸವನ್ನು ತುರಿದು ಬೇಯುತ್ತಿರುವ ನೀರಿಗೆ ಸೇರಿಸಿ.
2) ಇದಕ್ಕೆ ಕೊಂಚ ಅರಿಶಿನ ಪುಡಿ ಹಾಕಿ ಹತ್ತು ನಿಮಿಷ ಬೇಯಿಸಿ. ಬಳಿಕ ಈ ನೀರನ್ನು ಸೋಸಿ ಮಾಂಸವನ್ನು ಒಂದು ಪಾತ್ರೆಯಲ್ಲಿಡಿ.
3) ಇನ್ನೊಂದು ಪಾತ್ರೆ ಅಥವಾ ಬಾಣಲೆಯಲ್ಲಿ ಕೊಂಚ ಎಣ್ಣೆ ಬಿಸಿಮಾಡಿ ಇದಕ್ಕೆ ಸಿಹಿ ಮೆಕ್ಕೆಜೋಳದ ಕಾಳುಗಳು, ಚಿಕ್ಕದಾಗಿ ಕತ್ತರಿಸಿದ ಕೋಸು ಮತ್ತು ಕ್ಯಾರೆಟ್ಟುಗಳನ್ನು ಸೇರಿಸಿ ಮಿಶ್ರಣ ಮಾಡಿ.
4) ಕೊಂಚ ಹುರಿದ ಬಳಿಕ ಎರಡು ಲೀಟರ್ ನೀರು ಹಾಕಿ.
5) ಇದಕ್ಕೆ ಕಾಳುಮೆಣಸಿನ ಪುಡಿ, ಮೆಣಸಿನ ಪುಡಿ ಮತ್ತು ಬೇಯಿಸಿದ್ದ ಕೋಳಿಮಾಂಸ ಹಾಕಿ ಮಿಶ್ರಣ ಮಾಡಿ.
6) ಇನ್ನೊಂದು ಚಿಕ್ಕ ಪಾತ್ರೆಯಲ್ಲಿ ಕೊಂಚ ನೀರು ತೆಗೆದುಕೊಂಡು ಮೆಕ್ಕೆಜೋಳದ ಹಿಟ್ಟನ್ನು ಹಾಕಿ ಗಂಟುಗಳಿಲ್ಲದಂತೆ ಕಲಿಸಿ ಬೇಯುತ್ತಿರುವ ನೀರಿಗೆ ಹಾಕಿ ಕಲಕಿ.
7) ಈಗ ಉಪ್ಪು ಸೇರಿಸಿ ನಿಧಾನ ಉರಿಯಲ್ಲಿ ನಡುನಡುವೆ ಅಲ್ಲಾಡಿಸುತ್ತಾ ಸುಮಾರು ಹದಿನೈದು ನಿಮಿಷಗಳವರೆಗೆ ಬೇಯಿಸಿ. ರುಚಿಕರ ಚಿಕನ್-ಸಿಹಿ ಮೆಕ್ಕೆಜೋಳದ ಸೂಪ್ ಈಗ ತಯಾರಾಗಿದೆ. ಆರೋಗ್ಯಕರವಾದ ಈ ಸೂಪ್ ಸವಿಯಲು ನಿಮ್ಮ ಕುಟುಂಬದವರಿಗೆ ನೀಡಿ ಮೆಚ್ಚುಗೆ ಪಡೆಯಿರಿ. ನೀವೂ ಮೆಚ್ಚಿದರೆ ನಮಗೆ ತಿಳಿಸಿ. ಇದಕ್ಕಾಗಿ ಕೆಳಗಿನ ಕಮೆಂಟ್ಸ್ ಭಾಗವನ್ನು ಬಳಸಿಕೊಳ್ಳಿ.

English summary

Chicken Sweet Corn Soup Recipe

One of the healthiest dishes is the soups. There are hundreds of varieties of soups. But among them, one of the soup recipes that you have to try is the chicken sweet corn soup. This is a very easy recipe to prepare on a cold winter evening. There are many people who are diet conscious and follow a fluid diet.
X
Desktop Bottom Promotion