For Quick Alerts
ALLOW NOTIFICATIONS  
For Daily Alerts

ಬೇಲದ ಹಣ್ಣಿನ ಪಾನಕ ಕುಡಿಯೋಣ...

By ಸುಜಾತಾ ಎಚ್.ಎಸ್., ಬೆಂಗಳೂರು
|
Belada Hannina Panaka
ಮಹಾಶಿವರಾತ್ರಿ, ಶ್ರೀರಾಮನವಮಿ ಯಾವುದೇ ಹಬ್ಬವಾಗಲಿ ಈ ದಿನ ಪಾನಕ - ಪನಿವಾರಕ್ಕೆ ಒಂದು ಮಹತ್ವವೇ ಇದೆ. ಎಳನೀರು, ಕರಬೂಜ, ಕಲ್ಲಂಗಡಿ ಹಣ್ಣುಗಳು ದಿನ ಯಥೇಚ್ಛವಾಗಿ ಖರ್ಚಾಗುತ್ತವೆ. ಕಡಲೇ ಬೇಳೆ ಕೋಸಂಬರಿ, ಬೇಲದ ಹಣ್ಣಿನ ಪಾನಕಗಳಿಗೆ ಈ ಹಬ್ಬಗಳಂದು ಕರ್ನಾಟಕದಲ್ಲಿ ವಿಶೇಷ ಸ್ಥಾನ.

ಹಳೆ ಮೈಸೂರು ಸೀಮೆಯಲ್ಲಿ ಬಿಲ್ವಪತ್ರೆ, ಪಾನಕ - ಪನಿವಾರವಿಲ್ಲದೆ ಈ ಹಬ್ಬಗಳು ಹಬ್ಬ ಎನಿಸುವುದೇ ಇಲ್ಲ. ನಮ್ಮ ಹಳೆ ಮನೆ ಪಕ್ಕ ಮೈಸೂರಿನ ಕಡೆಯವರೊಬ್ಬರಿದ್ದರು. ಹಿಂದೊಂದು ಬಾರಿ ಏನ್ ಸಾರ್ ಇವತ್ತು ನಾಷ್ಟಾ? ಅಂತ ಕೇಳಿದ್ದಕ್ಕೆ, ಉಪವಾಸ ಅಲ್ವ ಸಾರ್ ಇವತ್ತು. ಕಡ್ಲೆಬೇಳೆ ಕೋಸಂಬ್ರಿ, ಜೊತೆಗೆ ಬೇಲದ ಹಣ್ಣಿನ ಪಾನಕ ಅಂತ ರಾಗವಾಗಿ ಹೇಳಿದ್ದರು. ಮಾರ್ಕೆಟ್ಟಿನಲ್ಲಂತೂ ಬೇಲದ ಹಣ್ಣಿನದೇ ಭರಾಟೆ. ಕಲ್ಲಂಗಡಿಯಂತೂ ಇದ್ದೇ ಇದೆ. ತಣ್ಣನೆಯ ಪಾನಕ ಹೊಟ್ಟೆಗಿಳಿಯುತ್ತಿದ್ದರೆ ದೇವರ ಧ್ಯಾನವೂ ಅಷ್ಟೇ ಕೂಲಾಗಿ ಸಾಗುತ್ತಿರುತ್ತದೆ.

ಸರಿ, ಕಡಲೆ ಬೇಳೆ ಕೋಸಂಬರಿ ತಿಂದು ಬೇಲದ ಹಣ್ಣಿನ ಪಾನಕ ಸವಿಯಲು ನೀವೂ ಸಜ್ಜಾಗಿ...

ಬೇಲದ ಹಣ್ಣಿನ ಪಾನಕ : ಬೇಲದ ಹಣ್ಣಿನ ಪಾನಕ ಮಾಡುವುದು ಬಹು ಸುಲಭ. ಸಾಮಾನ್ಯವಾಗಿ ಬೇಲದ ಹಣ್ಣು ನೋಡಲು ಬಹುತೇಕ ಬಿಲ್ವಪತ್ರೆಯ ಕಾಯಿಯಂತೆಯೇ ಕಾಣುತ್ತದೆ. ಆದರೆ, ಇದರ ಗಾತ್ರ ತುಸು ದೊಡ್ಡದು. ಬಹು ಸ್ವಾದಿಷ್ಟ. ಮೊದಲು ನಿಮಗೆ ಅಗತ್ಯವಿರುವಷ್ಟು ಶುದ್ಧ ನೀರು ರೆಡಿ ಇಟ್ಟುಕೊಂಡು ಅಗತ್ಯಕ್ಕೆ ತಕ್ಕಷ್ಟು ಬೆಲ್ಲವನ್ನು ನೀರಿನಲ್ಲಿ ಹಾಕಬೇಕು.

ಬೆಲ್ಲ ಸಂಪೂರ್ಣ ಕರಗಿದ ಮೇಲೆ, ಬೆಲ್ಲ ಮಿಶ್ರಿತ ನೀರನ್ನು ಬಿಳಿಯ ಒಗೆದ ಬಟ್ಟೆಯಲ್ಲಿ ಸೋಸಿ ಬೇರೆ ಪಾತ್ರೆಯಲ್ಲಿ ಸಂಗ್ರಹಿಸಿಕೊಳ್ಳಬೇಕು. ಚೆನ್ನಾಗಿ ಹಣ್ಣಾದ ಬೇಲದ ಹಣ್ಣಿನ ಮೇಲ್ಭಾಗದ ಗಟ್ಟಿ ತೊಗಟೆಯನ್ನು ಒಡೆದು, ಒಳಗಿರುವ ತಿರುಳನ್ನು ತೆಗೆದು (ಚಿಕ್ಕ ಪಾತ್ರೆಯಲ್ಲಿ ) ಶುದ್ಧ ನೀರಿನಲ್ಲಿ ಸ್ವಲ್ಪ ಹೊತ್ತು ನೆನೆಸಬೇಕು. ಆನಂತರ ಹುಣಸೆಹಣ್ಣು ಕಿವುಚುವಂತೆ ಚೆನ್ನಾಗಿ ಕಿವುಚಿ, ರಸವನ್ನು ಬಟ್ಟೆಯಲ್ಲಿ ಸೋಸಿ, ಬೆಲ್ಲ ಮಿಶ್ರಿತ ನೀರಿನಲ್ಲಿ ಚೆನ್ನಾಗಿ ಬೆರೆಸಬೇಕು. ಇಷ್ಟಾದರೆ, ಸೊಗಸಾದ ಹಾಗೂ ಸವಿಯಾದ ಪಾನಕ ರೆಡಿ.

ಗಮಗಮಿಸಲು ಇದಕ್ಕೆ ಏಲಕ್ಕಿ ಹಾಕಿದರೂ ಪ್ರಯೋಜನ ಇಲ್ಲ. ಬೇಲದ ಹಣ್ಣಿನ ಸುವಾಸನೆಯೆದುರು ಏಲಕ್ಕಿ ಮಂಕಾಗುತ್ತದೆ.

ಕಡಲೆ ಬೇಳೆ ಕೋಸಂಬರಿ : ಕಡಲೆ ಬೇಳೆಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು, ಮತ್ತೆ ನೀರಿನಲ್ಲಿ ನೆನೆಸಿಡಬೇಕು. ಆನಂತರ ನೀರನ್ನು ಬಸಿಯಬೇಕು. ಬಳಿಕ ಬಿಳಿಯ ಪಂಚೆಯ ಮೇಲೆ ಕೆಲ ಕಾಲ ನೆಂದ ಕಡಲೇಬೇಳೆಯನ್ನು ಹರವಿ ಒಣಗಿಸಬೇಕು. ಇದಕ್ಕೆ ಹದವಾಗಿ ಕಾಯಿತುರಿ ಬೆರೆಸಬೇಕು. ಬಾಯಿ ರುಚಿಗೆ ಹಾಗೂ ಖಾರಕ್ಕಾಗಿ, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಇಂಗು, ಸಾಸಿವೆಯ ಒಗ್ಗರಣೆ ಹಾಕಬೇಕು. ಹದವಾಗಿ ಉಪ್ಪು, ಒಂದು ಸ್ಪೂನ್‌ನಷ್ಟು ಹುಣಸೆ ಹುಳಿ ಹಾಕಿ ಕಲಸಿದರೆ ಸಾದಿಷ್ಟ ಹಾಗೂ ಪೌಷ್ಟಿಕಯುಕ್ತ ಕಡಲೇಬೇಳೆ ಕೋಸಂಬರಿ ಸಿದ್ಧ.

ಕೆಲವರು ಇದಕ್ಕೆ ಸಣ್ಣಗೆ ಹೆಚ್ಚಿದ ಸೌತೆಕಾಯಿಯನ್ನೂ ಸೇರಿಸುತ್ತಾರೆ. ಹುಣಸೆ ಹುಳಿಯ ಬದಲು ನಿಂಬೇಹಣ್ಣನ್ನೂ ಹಾಕುತ್ತಾರೆ.

English summary

Belada Panaka on Shivaratri - ಬೇಲದ ಹಣ್ಣಿನ ಪಾನಕ ಕುಡಿಯೋಣ...

Belada Panaka (Wood Apple juice) is normally prepared on Mahashivaratri along with kosambari as a substitute to normal food. Panaka is not just keeps you cool during summer, it also pumps energy into the body.
Story first published: Wednesday, March 28, 2012, 14:00 [IST]
X
Desktop Bottom Promotion