ಮ್ಯಾಕ್‌ಡೊನಾಲ್ಡ್ಸ್ ಶೈಲಿಯ ಚಿಕನ್ ಪಫ್! ಮನೆಯಲ್ಲೇ ಈಸಿ ಆಗಿ ಮಾಡಿ ಕ್ರಿಸ್ಪಿ ಪಫ್.. ಇಲ್ಲಿದೆ ಸುಲಭ ಟಿಪ್ಸ್

Posted By:

ಮೆಕ್‌ಡೊನಾಲ್ಡ್ಸ್ ಶೈಲಿಗಿಂತಲೂ ಅದ್ಭುತ ರುಚಿ! ಮನೆಯಲ್ಲೇ ಸುಲಭವಾಗಿ ಮಾಡಿ ಕ್ರಿಸ್ಪಿ & ಕ್ರೀಮಿಯಾದ ಚಿಕನ್ ಪಫ್. ಒಮ್ಮೆ ಮಾಡಿದರೆ ಪದೇ ಪದೆ ಮಾಡ್ತೀರಾ. ಹೌದು, ಮೆಕ್‌ಡೊನಾಲ್ಡ್ಸ್ ಅಥವಾ ಪ್ರಖ್ಯಾತ ಬೇಕರಿಗಳಲ್ಲಿ ಸಿಗುವ ಚಿಕನ್ ಪಫ್‌ (McD Style Chicken Puff) ಮಕ್ಕಳಿಂದ ವಯಸ್ಕರವರೆಗೆ ಎಲ್ಲರನ್ನೂ ಆಕರ್ಷಿಸುತ್ತದೆ. ಇದನ್ನು ಹೊರಗೆ ಕೊಳ್ಳುವುದು ದುಬಾರಿಯಾಗಬಹುದು. ಆದರೆ, ಕೆಲವು ಸರಳ ಹಂತಗಳು ಹಾಗೂ ಸರಿಯಾದ ಸಾಮಗ್ರಿಗಳೊಂದಿಗೆ ಇದೇ ರುಚಿಯನ್ನು ಮನೆಯಲ್ಲೇ ಪಡೆಯಲು ಸಾಧ್ಯ.

ಸಂಜೆಯ ಲಘು ಉಪಾಹಾರ ಅಥವಾ ಪಾರ್ಟಿಗಳಿಗೆ ಇದು ಅತ್ಯುತ್ತಮ ತಿನಿಸಾಗಿದೆ. ಮನೆಯಲ್ಲೇ ಮೆಕ್‌ಡೊನಾಲ್ಡ್ಸ್ ಮಾದರಿಯ ಗರಿಗರಿಯಾದ, ಕ್ರೀಮಿ ಚಿಕನ್ ಪಫ್ ತಯಾರಿಸಲು ಕೇವಲ ಸುಲಭ ಸಾಮಗ್ರಿಗಳು ಸಾಕು. ಸೂಪರ್ ರುಚಿಯ ಪರ್ಫೆಕ್ಟ್ ಚಿಕನ್ ಪಫ್ ಮಾ‍ಡಲು ಬೇಕಾಗುವ ಸಾಮಗ್ರಿಗಳು ಮತ್ತು ತಯಾರಿಸುವ ಸುಲಭ ವಿಧಾನ (McD Style Chicken Puff Recipe) ಮತ್ತು ಸೀಕ್ರೆಟ್ ಟಿಪ್ಸ್ ಇಲ್ಲಿವೆ.

ಚಿಕನ್ ಫಿಲ್ಲಿಂಗ್ ಸಾಮಗ್ರಿಗಳು

• ಬೋನ್ಲೆಸ್ ಚಿಕನ್
• ಬೆಣ್ಣೆ
• ಮೈದಾ ಹಿಟ್ಟು
• ಹಾಲು
• ಈರುಳ್ಳಿ
• ಶುಂಠಿ-ಬೆಳ್ಳುಳ್ಳಿ ಪೇಸ್ಟ್
• ಕಾಳುಮೆಣಸಿನ ಪುಡಿ
• ರುಚಿಗೆ ತಕ್ಕಷ್ಟು ಉಪ್ಪು
• ಒರೆಗಾನೊ / ಹರ್ಬ್ಸ್
• ಅಚ್ಚಖಾರ ಪುಡಿ

ಪಫ್ ತಯಾರಿಕೆಗೆ ಸಾಮಗ್ರಿಗಳು

• ರೆಡಿಮೇಡ್ ಪಫ್ ಪೇಸ್ಟ್ರಿ ಶೀಟ್ (ಮಾರುಕಟ್ಟೆಯಲ್ಲಿ ಲಭ್ಯ)
• ಹಾಲು ಅಥವಾ ಮೊಟ್ಟೆ ದ್ರಾವಣ

ಚಿಕನ್ ಪಫ್ ತಯಾರಿಸುವ ಸರಳ ವಿಧಾನ

- ಮೊದಲಿಗೆ ಬಾಣಲೆಯಲ್ಲಿ ಬೆಣ್ಣೆ ಕರಗಿಸಿ. ಹೆಚ್ಚಿದ ಈರುಳ್ಳಿ ಸೇರಿಸಿ ತಿಳಿ ಕೆಂಪು ಬರುವವರೆಗೆ ಹುರಿಯಿರಿ.

- ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ದೂರವಾಗುವವರೆಗೆ ಹುರಿಯಿರಿ.

- ಮೈದಾ ಹಿಟ್ಟು ಸೇರಿಸಿ, ಕಡಿಮೆ ಉರಿಯಲ್ಲಿ ಒಂದು ನಿಮಿಷ ತಿರುವಿ. ನಿಧಾನವಾಗಿ ಹಾಲು ಸೇರಿಸುತ್ತಾ, ಗಂಟು ಬರದಂತೆ ನಿರಂತರವಾಗಿ ಕಲಕಿ.

- ದಪ್ಪವಾದ ಸಾಸ್‌ಗೆ ಬೇಯಿಸಿದ ಚಿಕನ್ ತುಂಡುಗಳು, ರುಚಿಗೆ ತಕ್ಕಷ್ಟು ಉಪ್ಪು, ಕಾಳುಮೆಣಸಿನ ಪುಡಿ, ಒರೆಗಾನೊ /ಹರ್ಬ್ಸ್, ಮತ್ತು ಐಚ್ಛಿಕವಾಗಿ ಅಚ್ಚಖಾರ ಪುಡಿ ಸೇರಿಸಿ.

- ಮಸಾಲೆ ಕ್ರೀಮಿ ಆದಾಗ ಗ್ಯಾಸ್ ಆಫ್ ಮಾಡಿ ತಣ್ಣಗಾಗಲು ಬಿಡಿ.

- ರೆಡಿಮೇಡ್ ಪಫ್ ಪೇಸ್ಟ್ರಿ ಶೀಟ್‌ಗಳನ್ನು ಬಳಸಿ. ಅವುಗಳನ್ನು ಲಟ್ಟಿಸಿ ಚೌಕಾಕಾರದ ತುಂಡುಗಳಾಗಿ ಕತ್ತರಿಸಿ. ಪ್ರತಿ ಶೀಟ್‌ನ ಮಧ್ಯದಲ್ಲಿ ಎರಡು ಚಮಚ ಚಿಕನ್ ಫಿಲ್ಲಿಂಗ್ ಇರಿಸಿ.

- ಶೀಟ್ ಅನ್ನು ಅರ್ಧಕ್ಕೆ ಮಡಚಿ, ಅಂಚುಗಳನ್ನು ಫೋರ್ಕ್ ಸಹಾಯದಿಂದ ಒತ್ತಿ ಸೀಲ್ ಮಾಡಿ.

- ನಂತರ ಪಫ್‌ಗಳ ಮೇಲ್ಭಾಗಕ್ಕೆ ಹಾಲು ಅಥವಾ ಮೊಟ್ಟೆ ದ್ರಾವಣ ಬ್ರಷ್ ಮಾಡಿ, ಇದು ಬೇಯುವಾಗ ಹೊಳೆಯುವ ಕೆಂಪು-ಚಿನ್ನದ ಬಣ್ಣ ನೀಡುತ್ತದೆ.

ಪಫ್‌ಗಳನ್ನು ಬೇಕ್ ಮಾಡಲು ವಿವಿಧ ವಿಧಾನಗಳಿವೆ. ಲಭ್ಯವಿರುವ ಉಪಕರಣಗಳಾಧಾರಿತ ಸೂಕ್ತ ವಿಧಾನ ಆಯ್ಕೆ ಮಾಡಬಹುದು. ಪ್ರತಿ ವಿಧಾನವೂ ಪಫ್‌ಗಳಿಗೆ ವಿಶಿಷ್ಟ ಗರಿಗರಿತನ ನೀಡುತ್ತದೆ.

ಓವನ್ ವಿಧಾನ

ಓವನ್ ಅನ್ನು 180°C ಉಷ್ಣಾಂಶದಲ್ಲಿ ಮೊದಲೇ ಬಿಸಿ ಮಾಡಿ (ಪ್ರೀ-ಹೀಟ್ ಮಾಡಿ). ನಂತರ ಬೇಕಿಂಗ್ ಟ್ರೇನಲ್ಲಿ ಪಫ್‌ಗಳನ್ನು ಇರಿಸಿ, 20-25 ನಿಮಿಷ ಬೇಕ್ ಮಾಡಿ. ಚಿನ್ನದ ಕಂದು ಬಣ್ಣಕ್ಕೆ ತಿರುಗುವವರೆಗೆ ಬೇಕ್ ಮಾಡಬೇಕು.

ಏರ್ ಫ್ರೈಯರ್ ವಿಧಾನ

ಏರ್ ಫ್ರೈಯರ್‌ನಲ್ಲಿ 180°C ನಲ್ಲಿ ಪಫ್‌ಗಳನ್ನು ಇರಿಸಿ, 12-15 ನಿಮಿಷ ಬೇಕ್ ಮಾಡಿ. ಈ ವಿಧಾನವು ಪಫ್‌ಗಳನ್ನು ವೇಗವಾಗಿ ಬೇಕ್ ಮಾಡಲು ಸಹಾಯ ಮಾಡುತ್ತದೆ.

ಓವನ್ ಇಲ್ಲದಿದ್ದರೆ?

ಓವನ್ ಲಭ್ಯವಿಲ್ಲದವರು ದಪ್ಪ ತಳದ ಕುಕ್ಕರ್ ಅಥವಾ ಕಡಾಯಿ ಬಳಸಬಹುದು. ಪಾತ್ರೆಯ ತಳದಲ್ಲಿ ಉಪ್ಪು ಹಾಕಿ, ಅದರ ಮೇಲೆ ಸ್ಟ್ಯಾಂಡ್ ಇರಿಸಿ. ಸ್ಟ್ಯಾಂಡ್ ಮೇಲೆ ತಟ್ಟೆಯಲ್ಲಿ ಪಫ್‌ಗಳನ್ನು ಇಟ್ಟು, ಮುಚ್ಚಳ ಮುಚ್ಚಿ 30 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಕ್ ಮಾಡಬಹುದು.

ಸಿದ್ಧವಾದ ಚಿಕನ್ ಪಫ್‌ಗಳನ್ನು ಬಿಸಿಯಾಗಿ ಸವಿಯಿರಿ. ಟೊಮೆಟೊ ಕೆಚಪ್ ಅಥವಾ ಪುದೀನಾ ಚಟ್ನಿಯೊಂದಿಗೆ ರುಚಿ ಹೆಚ್ಚುತ್ತದೆ.

[ of 5 - Users]
Story first published: Friday, January 16, 2026, 8:50 [IST]
X
Desktop Bottom Promotion