ಹೊಟ್ಟೆಗೂ ಹಿತ, ನಾಲಿಗೆಗೂ ರುಚಿ.. ಅಜವಾನ ಬಳಸಿ ಈ ರೀತಿ ಪೂರಿ ಮಾಡಿ! 10 ಅಲ್ಲ, 20 ತಿಂತೀರಾ

Posted By:

ಚಳಿಗಾಲಕ್ಕೆ ಬೆಸ್ಟ್ ಬ್ರೇಕ್‌ಫಾಸ್ಟ್! ಹೊಟ್ಟೆಗೂ ಹಿತ, ನಾಲಿಗೆಗೂ ರುಚಿ.. ಈ ರೀತಿ ಪೂರಿ ಮಾಡಿದರೆ ಹತ್ತಲ್ಲ ಇಪ್ಪತ್ತು ತಿಂತೀರಾ. ಮಾಡುವ ರಹಸ್ಯ ಇಲ್ಲಿದೆ ನೋಡಿ. ಹೌದು, ಚಳಿಗಾಲದಲ್ಲಿ (Winter) ಬಿಸಿಬಿಸಿ, ಗರಿಗರಿಯಾದ ತಿಂಡಿಯ ಹಂಬಲ ಸಾಮಾನ್ಯ. ಇಂತಹ ಸಂದರ್ಭದಲ್ಲಿ ಸಿದ್ಧಪಡಿಸಬಹುದಾದ 'ಅಜವಾನ ಪೂರಿ' (Ajwain Puri) ಪರಿಪೂರ್ಣ ಆಯ್ಕೆಯಾಗಿದೆ. ಓಮದ ಕಾಳುಗಳಿಂದ ತಯಾರಿಸುವ ಈ ಪುರಿ, ರುಚಿಯ ಜೊತೆಗೆ ಆರೋಗ್ಯಕ್ಕೂ ಹಿತಕರವಾಗಿದೆ.

ಕಡಿಮೆ ಸಮಯದಲ್ಲಿ ಹೋಟೆಲ್ ಶೈಲಿಯ ಉಬ್ಬಿದ ಪುರಿಗಳನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ಸಾಂಪ್ರದಾಯಿಕ ಪುರಿಗೆ ಭಿನ್ನವಾಗಿ, ಅಜವಾನದ ವಿಶಿಷ್ಟ ಪರಿಮಳ ಮತ್ತು ರುಚಿ ಹೊಸ ಅನುಭವ ನೀಡುತ್ತದೆ. ಓಮದ ಕಾಳುಗಳು ಜೀರ್ಣಕ್ರಿಯೆಗೆ ಉತ್ತೇಜನ ನೀಡುವುದರಿಂದ, ಚಳಿಗಾಲದ ಆಹಾರ ಪದ್ಧತಿಗೆ ಇದು ಹೆಚ್ಚು ಸೂಕ್ತವಾಗಿದೆ. ಇದು ಕೇವಲ ರುಚಿಕರವಷ್ಟೇ ಅಲ್ಲ, ಆರೋಗ್ಯದ ದೃಷ್ಟಿಯಿಂದಲೂ ಪ್ರಯೋಜನಕಾರಿಯಾಗಿದೆ.

ಓಮದ ಕಾಳು (ಅಜವಾನ) ತನ್ನ ವಿಶಿಷ್ಟ ಸುಗಂಧ ಮತ್ತು ಔಷಧೀಯ ಗುಣಗಳಿಗೆ ಹೆಸರುವಾಸಿ. ಚಳಿಗಾಲದಲ್ಲಿ ನಿಧಾನವಾಗುವ ಜೀರ್ಣಕ್ರಿಯೆಯನ್ನು ಸುಧಾರಿಸಲು ಅಜವಾನ ಸಹಕಾರಿ. ಇದು ದೇಹಕ್ಕೆ ಉಷ್ಣತೆ ನೀಡಿ, ಶೀತ ಮತ್ತು ಕೆಮ್ಮಿನಂತಹ ಸಮಸ್ಯೆಗಳಿಂದ ರಕ್ಷಿಸುತ್ತದೆ. ಕರಿದ ಪದಾರ್ಥವಾದರೂ, ಅಜವಾನ ಇರುವುದರಿಂದ ಹೊಟ್ಟೆಗೆ ಭಾರ ಎನಿಸುವುದಿಲ್ಲ. ಈ ರುಚಿಕರವಾದ ಅಜವಾನ ಪೂರಿ ತಯಾರಿಸಲು ಅಗತ್ಯವಿರುವ ಪದಾರ್ಥಗಳು ಮತ್ತು ತಯಾರಿಸುವ ಸರಳ ವಿಧಾನ (Ajwain Puri Recipe) ಇಲ್ಲಿದೆ.

ಅಜವಾನ ಪೂರಿಗೆ ಬೇಕಾಗುವ ಪದಾರ್ಥಗಳು

• ಗೋಧಿ ಹಿಟ್ಟು - 2 ಕಪ್
• ಅಜವಾನ (ಓಮದ ಕಾಳು) - 1½ ಚಮಚ
• ಉಪ್ಪು - ರುಚಿಗೆ ತಕ್ಕಷ್ಟು
• ಕರಿಮೆಣಸಿನ ಪುಡಿ - ½ ಚಮಚ
• ತುಪ್ಪ ಅಥವಾ ಎಣ್ಣೆ - ಸ್ವಲ್ಪ
• ನೀರು - ಅಗತ್ಯವಿರುವಷ್ಟು
• ಎಣ್ಣೆ -ಕರಿಯಲು

ಅಜವಾನ ಪೂರಿ ತಯಾರಿಸುವ ಸರಳ ವಿಧಾನ

- ಮೊದಲಿಗೆ ಹಿಟ್ಟಿನ ಸಿದ್ಧತೆ. ಒಂದು ದೊಡ್ಡ ಪಾತ್ರೆಯಲ್ಲಿ ಎರಡು ಕಪ್ ಗೋಧಿ ಹಿಟ್ಟನ್ನು ತೆಗೆದುಕೊಳ್ಳಿ. ಇದಕ್ಕೆ ಅಜವಾನವನ್ನು ಹಸ್ತಗಳ ನಡುವೆ ಉಜ್ಜಿ ಸೇರಿಸಿ. ಇದರಿಂದ ಅದರ ಪರಿಮಳ ದ್ವಿಗುಣಗೊಳ್ಳುತ್ತದೆ.

- ನಂತರ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅರ್ಧ ಚಮಚ ಕರಿಮೆಣಸಿನ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

- ಈಗ ಹಿಟ್ಟಿಗೆ ಒಂದು ಅಥವಾ ಎರಡು ಚಮಚ ಬಿಸಿ ತುಪ್ಪ ಅಥವಾ ಎಣ್ಣೆಯನ್ನು ಸೇರಿಸಿ. ಈ ಮಿಶ್ರಣವನ್ನು ಕೈಗಳಿಂದ ಉಜ್ಜುತ್ತಾ ಕಲಸಿ. ಇದು ಪುರಿಗಳು ಗರಿಗರಿಯಾಗಲು ಮುಖ್ಯವಾದ ಹಂತ.

- ಈಗ ಹಿಟ್ಟು ಕಲಸುವುದು. ಸ್ವಲ್ಪ ಸ್ವಲ್ಪವಾಗಿ ಉಗುರುಬೆಚ್ಚಗಿನ ನೀರನ್ನು ಸೇರಿಸುತ್ತಾ, ಗಟ್ಟಿಯಾದ ಹಿಟ್ಟನ್ನು ನಾದಿ. ಪುರಿಗೆ ಚಪಾತಿಗಿಂತಲೂ ಹೆಚ್ಚು ಗಟ್ಟಿಯಾದ ಹಿಟ್ಟು ಬೇಕಾಗುತ್ತದೆ.

- ಹಿಟ್ಟನ್ನು ಕಲಸಿದ ನಂತರ ಒದ್ದೆ ಬಟ್ಟೆಯಿಂದ ಮುಚ್ಚಿ 10-15 ನಿಮಿಷಗಳ ಕಾಲ ನೆನೆಯಲು ಬಿಡಿ.

- ನೆನೆದಿರುವ ಹಿಟ್ಟನ್ನು ಮತ್ತೊಮ್ಮೆ ನಾದಿ, ಸಣ್ಣ ಸಣ್ಣ ಸಮಾನ ಗಾತ್ರದ ಉಂಡೆಗಳನ್ನು ಮಾಡಿ.

- ಈಗ ಲಟ್ಟಣಿಗೆ ಬಳಸಿ ಮಧ್ಯಮ ಗಾತ್ರದ ಪುರಿಗಳನ್ನು ಲಟ್ಟಿಸಿಕೊಳ್ಳಿ. ಪೂರಿ ತೀರಾ ತೆಳುವಾಗಿ ಅಥವಾ ತೀರಾ ದಪ್ಪವಾಗಿರಬಾರದು.

- ಕಡಾಯಿಯಲ್ಲಿ ಎಣ್ಣೆಯನ್ನು ಚೆನ್ನಾಗಿ ಬಿಸಿ ಮಾಡಿ. ಎಣ್ಣೆ ಕಾದ ನಂತರ ಉರಿಯನ್ನು ಮಧ್ಯಮಕ್ಕೆ ಇಳಿಸಿ, ಲಟ್ಟಿಸಿದ ಪುರಿಗಳನ್ನು ಒಂದೊಂದಾಗಿ ಹಾಕಿ. ಎರಡೂ ಬದಿ ಚಿನ್ನದ ಬಣ್ಣಕ್ಕೆ ಬರುವವರೆಗೆ ಮತ್ತು ಗರಿಗರಿಯಾಗುವವರೆಗೆ ಕರೆದುಕೊಳ್ಳಿ.

- ಬಿಸಿಬಿಸಿ ಅಜವಾನ ಪೂರಿಗಳನ್ನು ಮಾವಿನಕಾಯಿ ಉಪ್ಪಿನಕಾಯಿ, ಗಟ್ಟಿ ಮೊಸರು, ಅಥವಾ ಬಿಸಿ ಆಲೂಗಡ್ಡೆ ಪಲ್ಯದೊಂದಿಗೆ ಸವಿಯಬಹುದು.

- ಸಂಜೆಯ ಚಹಾದ ಜೊತೆಗಿನ ಸ್ನ್ಯಾಕ್ ಆಗಿಯೂ ಅಜವಾನ ಪೂರಿ ಅತ್ಯುತ್ತಮ ಆಯ್ಕೆಯಾಗಿದೆ.

ಅತಿಥಿಗಳು ಬಂದಾಗ ಅಥವಾ ವೀಕೆಂಡ್‌ನಲ್ಲಿ ಕುಟುಂಬದೊಡನೆ ಆನಂದಿಸಲು ಈ ಸ್ಪೆಷಲ್ ಪೂರಿ ರೆಸಿಪಿಯನ್ನು ಒಮ್ಮೆ ಟ್ರೈ ಮಾಡಿ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಇಷ್ಟಪಡುವ ಈ ತಿಂಡಿ, ಚಳಿಗಾಲದಲ್ಲಿ ನಿಮ್ಮ ಅಡುಗೆಮನೆಗೆ ಹೊಸ ಪರಿಮಳವನ್ನು ತರಲಿ.

[ of 5 - Users]
Story first published: Monday, January 5, 2026, 16:30 [IST]
X
Desktop Bottom Promotion