For Quick Alerts
ALLOW NOTIFICATIONS  
For Daily Alerts

ಅನಿಯಮಿತ ಮುಟ್ಟಿನ ಸಮಸ್ಯೆ ಇದ್ದರೆ ಗರ್ಭಧಾರಣೆಗೆ ಸಮಸ್ಯೆಯಾಗುವುದೇ?

|

ಮಾಸಿಕ ದಿನಗಳು ಕ್ರಮಬದ್ದವಾಗಿರದೇ ಇದ್ದರೆ ಅಸಹನೀಯವೂ ಅನಾನುಕೂಲಕರವೂ ಆಗುತ್ತದೆ. ಆದರೆ ಇದೇನೂ ಗಂಭೀರವಾಗಿ ಪರಿಗಣಿಸಬೇಕಾದ ತೊಂದರೆಯಲ್ಲ. ಆದರೆ, ಮಾಸಿಕ ದಿನಗಳು ಕ್ರಮಬದ್ದವಾಗಿಲ್ಲದೇ ಇದ್ದರೆ ಇದು ಯಾವುದೋ ರಸದೂತದ ಅಸಮತೋಲನದ ಪರಿಣಾಮವಿರಬಹುದು. ಹೀಗಿದ್ದಾಗ ಗರ್ಭ ಧರಿಸುವಿಕೆಯ ಸಾಧ್ಯತೆಯನ್ನು ಈ ತೊಂದರೆ ಏರುಪೇರುಗೊಳಿಸಲೂಬಹುದು.

ಆದ್ದರಿಂದ ಒಂದು ವೇಳೆ ನಿಮ್ಮ ಮಾಸಿಕ ದಿನಗಳು ಕ್ರಮಬದ್ದವಾಗಿಲ್ಲದೇ ಇದ್ದರೆ ಮತ್ತು ನೀವು ಗರ್ಭ ಧರಿಸಲು ಬಯಸಿದರೆ ನೀವು ನಿಮ್ಮ ದೇಹದ ರಸದೂತಗಳ ಅಸಮತೋಲನದ ಬಗ್ಗೆ ಸ್ತ್ರೀರೋಗ ತಜ್ಞರಲ್ಲಿ ವಿವರಿಸಿ ಸಲಹೆ ಪಡೆಯುವುದು ಅಗತ್ಯವಾಗಿದೆ. ನಿಮ್ಮ ಈ ತೊಂದರೆಗೆ ಏನು ಕಾರಣ ಎಂಬುದನ್ನು ವೈದ್ಯರು ಸೂಕ್ತ ಪರೀಕ್ಷೆಗಳ ಮೂಲಕ ಕಂಡುಕೊಳ್ಳುತ್ತಾರೆ ಹಾಗೂ ಅಗತ್ಯವಿರುವ ಚಿಕಿತ್ಸೆಯನ್ನು ಸೂಚಿಸಿ ಮಾಸಿಕ ದಿನಗಳು ಹಾಗೂ ನಿಮ್ಮ ಗರ್ಭಧರಿಸುವ ಸಾಧ್ಯತೆಯನ್ನು ಹೆಚ್ಚಿಸುವಂತೆ ಮಾಡುತ್ತಾರೆ.

ಅಷ್ಟಕ್ಕೂ ಕ್ರಮಬದ್ದವಲ್ಲದ ಮಾಸಿಕ ಋತುಚಕ್ರವೆಂದರೇನು?

ಅಷ್ಟಕ್ಕೂ ಕ್ರಮಬದ್ದವಲ್ಲದ ಮಾಸಿಕ ಋತುಚಕ್ರವೆಂದರೇನು?

ಇದಕ್ಕೂ ಮುನ್ನ ಕ್ರಮಬದ್ದವಾದ ಮಾಸಿಕ ಋತುಚಕ್ರ ಎಂದರೇನು ಎಂಬುದನ್ನು ಅರಿಯೋಣ. ನೀವು ರಸಜ್ವಲೆಯಾದ ದಿನದಿಂದ ರಜೋನಿವೃತ್ತಿಯ ದಿನದವರೆಗೂ ನಿಮ್ಮ ಅಂಡಾಶಯದಿಂದ ಪ್ರತಿ ತಿಂಗಳೂ ಒಂದು ಅಂಡಾಣು ಬಿಡುಗಡೆಗೊಳ್ಳುತ್ತದೆ ಮತ್ತು ವೀರ್ಯಾಣುವಿನೊಂದಿಗೆ ಮಿಲನಕ್ಕಾಗಿ ಕಾಯುತ್ತದೆ. ಇದು ಸಾಧ್ಯವಾಗದೇ ಹೋದರೆ ಇದು ಮಾಸಿಕ ಸ್ರಾವದ ಮೂಲಕ ದೇಹದಿಂದ ವಿಸರ್ಜನೆಗೊಳ್ಳುತ್ತದೆ. ಮುಂದಿನ ತಿಂಗಳು ಇನ್ನೊಂದು ಅಂಡಾಣು ಬಿಡುಗಡೆಯಾಗುತ್ತದೆ ಹಾಗೂ ಮಿಲನಗೊಳ್ಳದೇ ಇದ್ದರೆ ಮಾಸಿಕ ಸ್ರಾವದ ಮೂಲಕ ದೇಹದಿಂದ ವಿಸರ್ಜನೆಗೊಳ್ಳುತ್ತದೆ ಇದೇ ಮಾಸಿಕ ಋತುಚಕ್ರ.

ಸಾಮಾನ್ಯವಾಗಿ ಈ ಚಕ್ರ ಮೂವತ್ತು ದಿನಗಳಿಗೆ ಆಗುತ್ತದೆ ಎಂಬ ಕಾರಣಕ್ಕೇ ಮಾಸಿಕ ಎಂಬ ಪದವನ್ನು ಬಳಸಲಾಗಿದೆಯೇ ಹೊರತು ಪ್ರತಿ ಮಹಿಳೆಗೂ ಈ ಅವಧಿ ಇಪ್ಪತ್ತನಾಲ್ಕರಿಂದ ನಲವತ್ತು ದಿನಗಳವರೆಗೂ ಏರುಪೇರಾಗಬಹುದು. ಒಂದು ವೇಳೆ ಈ ತಿಂಗಳು ಒಂದು ರೀತಿ, ಮುಂದಿನ ತಿಂಗಳು ಇನ್ನೊಂದು ರೀತಿ ಈ ಪರಿಯಾಗಿ ಪ್ರತಿ ತಿಂಗಳೂ ಬೇರೆ ಬೇರೆ ದಿನಗಳ ಅವಧಿ ಕಂಡುಬರುವುದನ್ನೇ ಕ್ರಮಬದ್ದವಲ್ಲದ ಮಾಸಿಕ ಋತುಚಕ್ರ ಎನಿಸಿಕೊಳ್ಳುತ್ತದೆ. ಕೆಲವೊಮ್ಮೆ ಇದು ಅತಿಯಾದ ವೈಪರೀತ್ಯಗಳನ್ನು ಕಾಣುತ್ತದೆ. (ಅಂದರೆ ಮೂವತ್ತೈದು ದಿನಗಳಿಗೂ ಹೆಚ್ಚು ಅಥವಾ ಇಪ್ಪತ್ತೊಂದು ದಿನಕ್ಕೂ ಕಡಿಮೆ).

ಕ್ರಮಬದ್ದವಲ್ಲದ ಮಾಸಿಕ ಋತುಚಕ್ರಕ್ಕೆ ಕಾರಣಗಳೇನು?

ಕ್ರಮಬದ್ದವಲ್ಲದ ಮಾಸಿಕ ಋತುಚಕ್ರಕ್ಕೆ ಕಾರಣಗಳೇನು?

ಮಾನಸಿಕ ಒತ್ತಡ, ಅತಿಯಾದ ಪ್ರಯಾಣ, ಅತಿಯಾದ ವ್ಯಾಯಾಮ ಮತ್ತು ನಿಮ್ಮ ನಿತ್ಯದ ಜೀವನದಲ್ಲಿ ತಾತ್ಕಾಲಿಕ ಬದಲಾವಣೆ ಮೊದಲಾದವು ಈ ತೊಂದರೆಗೆ ಸಾಮಾನ್ಯ ಕಾರಣವಾಗಿವೆ. ಈ ಕಾರಣಗಳು ತಾತ್ಕಾಲಿಕವಾಗಿದ್ದು ಇವುಗಳು ಇಲ್ಲವಾದ ಬಳಿಕ ಋತುಚಕ್ರ ಎಂದಿನಂತೆ ಸಾಮಾನ್ಯ ಸ್ಥಿತಿಗೆ ಬರುತ್ತದೆ.

ಆದರೆ ಇತರ ಆರೋಗ್ಯಸಂಬಂಧಿ ಕಾರಣಗಳಿಂದ ಎದುರಾಗಿದ್ದರೆ ಇದಕ್ಕೆ ಸೂಕ್ತ ಚಿಕಿತ್ಸೆಯ ಅಗತ್ಯವಿದೆ. ಆಹಾರ ಸೇವನೆಯ ಕ್ರಮದಲ್ಲಿ ಏರುಪೇರು, ತೂಕದಲ್ಲಿ ಇಳಿಕೆ ಅಥವಾ ತೂಕದಲ್ಲಿ ಏರಿಕೆ, ಥೈರಾಯ್ಡ್ ಮಟ್ಟಗಳು ಅತಿ ಹೆಚ್ಚು (ಹೈಪರ್ ಥೈರಾಯ್ಡಿಸಂ) ಅಥವಾ ಅತಿ ಕಡಿಮೆ (ಹೈಪೋಥೈರಾಯ್ಡಿಸಂ), ರಸದೂತಗಳ ಅಸಮತೋಲನ (ವಿಶೇಷವಾಗಿ ಗರ್ಭ ನಿರೋಧಕ ಗುಳಿಗೆಗಳ ಸೇವನೆಯ ಪ್ರಾರಂಭ, ನಿಲ್ಲಿಸುವಿಕೆ ಅಥವಾ ನಡುವೆ ಸೇವನೆಯನ್ನು ತಪ್ಪಿಸುವುದು, ಈಸ್ಟ್ರೋಜೆನ್ ಹೆಚ್ಚುವರಿ ಔಷಧಿಗಳು ಅಥವಾ ಪಟ್ಟಿಗಳ ಅನ್ವಯಿಕೆ ಇತ್ಯಾದಿ) ಮೊದಲಾದವುಗಳ ಕಾರಣಗಳು ಇರಬಹುದು.

ಅತಿ ಸಾಮಾನ್ಯವಾದ ಕಾರಣವೆಂದರೆ ಪಿಕೋಸ್ ಅಥವಾ (polycystic ovary syndrome (PCOS). ಸಹಜವಾಗಿ, ಗರ್ಭ ಧರಿಸಿದ್ದರೆ ಮಾಸಿಕ ದಿನಗಳು ಕಾಣಬರುವ ಸಂಭವವಿಲ್ಲ.

ನನಗೆ ಮಾಸಿಕ ಋತುಚಕ್ರ ಅನಿಯಮಿತವಾಗಿವೆ ಎಂದು ಹೇಗೆ ಹೇಳುವುದು?

ನನಗೆ ಮಾಸಿಕ ಋತುಚಕ್ರ ಅನಿಯಮಿತವಾಗಿವೆ ಎಂದು ಹೇಗೆ ಹೇಳುವುದು?

ಸಾಮಾನ್ಯವಾಗಿ ಹೆಚ್ಚಿನ ಮಹಿಳೆಯರು ಸ್ತ್ರೀರೋಗ ತಜ್ಞರಲ್ಲಿ ಈ ಪ್ರಶ್ನೆಯನ್ನು ಕೇಳುತ್ತಾರೆ. ತಜ್ಞರ ವಿವರಣೆಯ ಪ್ರಕಾರ, ಮೊದಲಾಗಿ, ನೀವು ನಿಮ್ಮ ಮಾಸಿಕ ದಿನಗಳನ್ನು ತಪ್ಪದೇ ಕ್ಯಾಲೆಂಡರಿನಲ್ಲಿ ಗುರುತು ಹಾಕಿಕೊಳ್ಳಬೇಕು. ಪ್ರಾರಂಭದ ದಿನ, ಎಷ್ಟು ದಿನ ಇತ್ತು, ಯಾವ ದಿನ ಸ್ರಾವ ಅತಿ ಹೆಚ್ಚಾಗಿತ್ತು, ಇದಕ್ಕಾಗಿ ಯಾವ ಔಷಧಿ ಸೇವಿಸಿದ್ದಿರಿ ಮೊದಲಾದ ವಿವರಗಳನ್ನು ಬರೆದಿಟ್ಟರೆ ವೈದ್ಯರಿಗೆ ಅಪಾರವಾದ ಸಹಾಯ ಲಭಿಸುತ್ತದೆ. ಪ್ರತಿ ತಿಂಗಳೂ ತಪ್ಪದಂತೆ ಈ ವಿವರಗಳನ್ನು ದಾಖಲಿಸಿ ಇಟ್ಟುಕೊಳ್ಳಬೇಕು. ಈಗಂತೂ ಈ ಕೆಲಸಕ್ಕಾಗಿಯೇ ಆಪ್ ಗಳು ಲಭ್ಯವಿವೆ. ಇವನ್ನು ಬಳಸಿದರೆ ಇನ್ನೂ ಉತ್ತಮ. ಕೆಲವು ತಿಂಗಳುಗಳ ಬಳಿಕ ಈ ಮಾಹಿತಿಗಳನ್ನು ಪರಸ್ಪರ ಹೋಲಿಸಿ ನೋಡಬೇಕು. ಇದು 28 ರಿಂದ 30 ದಿನಗಳ ಅವಧಿಯಲ್ಲಿ ತಪ್ಪದೇ ಬರುತ್ತಿದೆ ಎಂದರೆ ನಿಮ್ಮ ಆರೋಗ್ಯ ಸಾಮಾನ್ಯವಾಗಿದೆ ಎಂದು ತಿಳಿದುಕೊಳ್ಳಬಹುದು. ಒಂದು ವೇಳೆ ಪ್ರತಿ ತಿಂಗಳ ಅವಧಿಯೂ ಬೇರೆ ಬೇರೆಯೇ ಆಗಿದ್ದು ಕೆಲವೊಮ್ಮೆ ಅತಿ ಕಡಿಮೆ ಕೆಲವೊಮ್ಮೆ ಅತಿ ಹೆಚ್ಚು ಕಂಡುಬಂದರೆ ನಿಮ್ಮ ಮಾಸಿಕ ಋತುಚಕ್ರ ಅನಿಯಮಿತವಾಗಿವೆ ಎಂದು ಪರಿಗಣಿಸಬಹುದು.

 ಮಾಸಿಕ ಋತುಚಕ್ರ ಅನಿಯಮಿತವಾಗಿದ್ದರೂ ಗರ್ಭ ಧರಿಸಲು ಸಾಧ್ಯವೇ?

ಮಾಸಿಕ ಋತುಚಕ್ರ ಅನಿಯಮಿತವಾಗಿದ್ದರೂ ಗರ್ಭ ಧರಿಸಲು ಸಾಧ್ಯವೇ?

ಹೌದು, ಮಾಸಿಕ ಋತುಚಕ್ರ ಅನಿಯಮಿತವಾಗಿದ್ದರೂ ಇದು ಮಹಿಳೆಯ ಫಲವತ್ತತೆಯನ್ನು ಬಾಧಿಸುವುದಿಲ್ಲ. ವಾಸ್ತವದಲ್ಲಿ ಹೆಚ್ಚಿನ ಮಹಿಳೆಯರು ಮಾಸಿಕ ಋತುಚಕ್ರ ಅನಿಯಮಿತವಾಗಿರುವ ಹೊರತಾಗಿಯೂ ಗರ್ಭ ಧರಿಸಿದ್ದಾರೆ ಮತ್ತು ಸಾಮಾನ್ಯ ಹೆರಿಗೆಯೂ ಆಗಿದೆ. ಆದ್ದರಿಂದ ಮಾಸಿಕ ಋತುಚಕ್ರ ಅನಿಯಮಿತವಾಗಿದೆ ಎಂದ ಮಾತ್ರಕ್ಕೆ ಫಲವತ್ತತೆಯೂ ಇಲ್ಲವಾಗುತ್ತದೆ ಎಂದು ನೀವು ಅಂದುಕೊಂಡಿದ್ದರೆ ಇದಕ್ಕೆ ಉತ್ತರ ಇಲ್ಲ ಎಂದೇ ಸ್ಪಷ್ಟಪಡಿಸಬಹುದು. ಆದರೆ, ಈ ಸ್ಥಿತಿ ನಿಮಗೆ ಗರ್ಭ ಧರಿಸುವ ಕ್ರಿಯೆಯನ್ನು ಕೊಂಚ ಕಷ್ಟಕರವಾಗಿಸಬಹುದು.

ಒಂದು ವೇಳೆ ನಿಮಗೆ ಮಾಸಿಕ ಋತುಚಕ್ರ ಅನಿಯಮಿತವಾಗಿದೆ ಎಂದು ಖಚಿತವಾದರೂ ಮತ್ತು ಗರ್ಭ ಧರಿಸುವುದು ಕಷ್ಟಕರವಾದರೂ ಸರಿ, ಗರ್ಭ ಧರಿಸಲು ಸಾಧ್ಯವೇ ಇಲ್ಲವೆಂದೇನೂ ಇಲ್ಲ. ಆದರೆ ಇದಕ್ಕಾಗಿ ಸರಿಯದ ಯೋಜನೆಗಳನ್ನು ಹಾಕಿಕೊಳ್ಳಬೇಕಾಗುತ್ತದೆ. ಕಳೆದ ತಿಂಗಳ ಸ್ರಾವದ ಬಳಿಕ ಅಂಡೋತ್ಪತ್ತಿಯ ದಿನ (ovulation) ಯಾವಾಗ ಆಗುತ್ತದೆ ಎಂಬ ಮಾಹಿತಿಯನ್ನು ನಿಮ್ಮ ವೈದ್ಯರು ಸ್ಥೂಲವಾಗಿ ವಿವರಿಸಬಹುದು. ಈ ದಿನಗಳನ್ನು ನೀವು ಆಯ್ದುಕೊಂಡು ಗರ್ಭಧಾರಣೆಗಾಗಿ ಪ್ರಯತ್ನಿಸಬೇಕು. ಆದರೆ ನಿಮ್ಮ ಮಾಸಿಕ ದಿನಗಳು ಅತಿಯಾದ ಏರುಪೇರು ಹೊಂದಿದ್ದು ಕೆಲವು ತಿಂಗಳುಗಳ ಕಾಲ ಸ್ರಾವವೇ ಇಲ್ಲದಿದ್ದರೆ ನಿಮ್ಮ ಅಂಡೋತ್ಪತ್ತಿಯ ದಿನವನ್ನು ನಿರ್ಧರಿಸಲು ವೈದ್ಯರಿಗೂ ಕಷ್ಟವಾಗುತ್ತದೆ. ಆಗ ಅಂಡೋತ್ಪತ್ತಿಯಾಗಿರುವ ಸೂಚನೆಯನ್ನು ನಿಮ್ಮ ದೇಹ ನೀಡುವ ಅತಿ ಸೂಕ್ಷ್ಮ ಲಕ್ಷಣಗಳ ಮೂಲಕ ನೀವೇ ಕಂಡುಕೊಳ್ಳಬೇಕಾಗುತ್ತದೆ. ಈ ದಿನಗಳನ್ನು ಆಯ್ದುಕೊಂಡು ನೀವು ಗರ್ಭಧಾರಣೆಗಾಗಿ ಪ್ರಯತ್ನಿಸಬೇಕು ಹಾಗೂ ನಿಮ್ಮ ಪ್ರಯತ್ನ ಸತತ ಹಾಗೂ ಅಂಡೋತ್ಪತ್ತಿಯ ಆಚೀಚಿನ ದಿನಗಳಲ್ಲಿಯೂ ಪ್ರಯತ್ನ ಮುಂದುವರೆಯಬೇಕು.

ಒಂದು ವೇಳೆ ನಿಮ್ಮ ಅಂಡಾಶಯದಿಂದ ಅಂಡಾಣು ಬಿಡುಗಡೆಯಾಗದೇ ಇದ್ದು ಇದರಿಂದಾಗಿಯೇ ಅನಿಯಮಿತ ಮಾಸಿಕ ಋತುಚಕ್ರ ಎದುರಾಗಿದ್ದರೆ ನೀವು ಗರ್ಭ ಧರಿಸುವ ಸಾಧ್ಯತೆ ಇಲ್ಲ ಎಂದೇ ಹೇಳಬೇಕಾಗುತ್ತದೆ. ಸಾಮಾನ್ಯವಾಗಿ ಗರ್ಭ ಧರಿಸದೇ ಇರಲು ಎದುರಾಗುವ ಕಾರಣಗಳಲ್ಲಿ ಶೇಖಡಾ ಮೂವತ್ತರಷ್ಟು ಮಹಿಳೆಯರಿಗೆ ಇದೇ ತೊಂದರೆ ಇರುತ್ತದೆ. ಈಗ ನೀವು ಅಂಡಾಶಯದಿಂದ ಅಂಡಾಣುವೇಕೆ ಬಿಡುಗಡೆಯಾಗುತ್ತಿಲ್ಲ ಎಂಬ ನಿಟ್ಟಿನಲ್ಲಿ ತಜ್ಞರಿಂದ ಪರೀಕ್ಷೆಗೆ ಒಳಪಡಬೇಕಾಗುತ್ತದೆ. ಇದು ಬೇರಾವುದೋ ಕಾಯಿಲೆಯ ಪರಿಣಾಮವಿರಬಹುದೇ ಅಥವಾ ಇನ್ನೂ ಬೆಳಕಿಗೆ ಬರದ ಕ್ಲಿಷ್ಟತೆಗಳಿವೆಯೇ ಎಂಬುದನ್ನು ವೈದ್ಯರು ಸೂಕ್ತ ಪರೀಕ್ಷೆಗಳ ಮೂಲಕ ಕಂಡುಕೊಳ್ಳಲು ಯತ್ನಿಸುತ್ತಾರೆ. ಆ ಪರೀಕ್ಷೆಗಳ ವಿವರಗಳನ್ನು ಅನುಸರಿಸಿ ನಿಮಗೆ ಯಾವ ಚಿಕಿತ್ಸೆಯ ಅಗತ್ಯತೆ ಇದೆ ಎಂಬುದನ್ನು ವೈದ್ಯರೇ ನಿರ್ಧರಿಸುತ್ತಾರೆ.

ಮಾಸಿಕ ಋತುಚಕ್ರ ಅನಿಯಮಿತವಾಗಿದ್ದರೆ ಲಭ್ಯವಿರುವ ಚಿಕಿತ್ಸೆಗಳು ಯಾವುವು?

ಮಾಸಿಕ ಋತುಚಕ್ರ ಅನಿಯಮಿತವಾಗಿದ್ದರೆ ಲಭ್ಯವಿರುವ ಚಿಕಿತ್ಸೆಗಳು ಯಾವುವು?

ಮಾಸಿಕ ಋತುಚಕ್ರ ಅನಿಯಮಿತವಾಗಿದ್ದು ನಿಮ್ಮ ಗರ್ಭಧರಿಸುವ ಕನಸು ನನಸಾಗಿಲ್ಲದಿದ್ದರೆ ನಿಮ್ಮ ವೈದ್ಯರು ಇದಕ್ಕೆ ಆರೋಗ್ಯ ಕಾರಣದ ಹೊರತಾಗಿ ಇತರ ಭಾವನಾತ್ಮಕ ಕಾರಣಗಳಿವೆಯೇ ಎಂಬುದನ್ನು ಆಪ್ತಸಮಾಲೋಚನೆಯ ಮೂಲಕ ವಿಚಾರಿಸಬಹುದು. ಏಕೆಂದರೆ ಮಾನಸಿಕ ಒತ್ತಡ (ಉದಾಹರಣೆಗೆ - ಆದರೆ ಗಂಡು ಮಗುವೇ ಆಗಬೇಕು, ಹೆಣ್ಣು ಮಗು ಆಗಬಾರದು ಎಂಬ ಒತ್ತಡ), ಅತಿಯಾದ ವ್ಯಾಯಾಮ ಮಾಡುತ್ತಿದ್ದರೆ (ಹೌದು ಅತಿಯಾದ ವ್ಯಾಯಾಮವೂ ಅಂಡಾಣು ಬಿಡುಗಡೆಯಾಗದಂತೆ ತಡೆಯುತ್ತದೆ) ವೈದ್ಯರು ಸೂಕ್ತ ಸಲಹೆಗಳನ್ನು ನೀಡಬಹುದು.

ಒಂದು ವೇಳೆ ನಿಮ್ಮ ಸ್ಥಿತಿಗೆ ರಸದೂತಗಳ ಅಸಮತೋಲನ ಕಾರಣವಾಗಿದ್ದರೆ ವೈದ್ಯರು ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ರಸದೂತ ಚಿಕಿತ್ಸೆ ಅಥವಾ ಹಾರ್ಮೋನ್ ಥೆರಪಿಗಳನ್ನು ನೀಡಬಹುದು. ನೀವು ಗರ್ಭ ನಿರೋಧಕ ಗುಳಿಗೆಗಳನ್ನು ಸೇವಿಸುತ್ತಿದ್ದರೆ ಇವನ್ನು ಹೇಗೆ ಮತ್ತು ಯಾವಾಗ ನಿಲ್ಲಿಸಬೇಕು ಎಂಬುದನ್ನೂ ವಿವರಿಸಬಹುದು. ಕೆಲವೊಮ್ಮೆ ಇತರ ಗರ್ಭ ನಿರೋಧಕ ಕ್ರಮವೂ ಗರ್ಭಧಾರಣೆಯಾಗದಂತೆ ಮಾಡುವ ಜೊತೆಗೇ ರಸದೂತಗಳ ಮೇಲೆ ಪ್ರಭಾವ ಬೀರಬಹುದು. ಕೆಲವೊಮ್ಮೆ, ಗರ್ಭ ನಿರೋಧಕ ಕ್ರಮದಿಂದಲೂ ಅನಿಯಮಿತ ಋತುಚಕ್ರ ಎದುರಾಗಿರುತ್ತದೆ. ಇದನ್ನು ಕೊಂಚ ಸರಿಪಡಿಸಿದರೆ ಮಾಸಿಕ ಚಕ್ರವೂ ತಹಬಂದಿಗೆ ಬಂದು ಈಗ ಗರ್ಭನಿರೋಧಕ ಕ್ರಮವನ್ನು ನಿವಾರಿಸಿದರೆ ಮುಂದಿನ ತಿಂಗಳಲ್ಲಿ ಗರ್ಭ ಧರಿಸುವ ಸಾಧ್ಯತೆ ಹೆಚ್ಚುತ್ತದೆ. ಆದರೆ ಈ ಕ್ರಮವೂ ಪ್ರತಿಬಾರಿಯೂ ಯಶಸ್ವಿಯಾಗಲಾರದು.

ಈ ಎಲ್ಲಾ ಕ್ರಮಗಳಿಂದಲೂ ನೀವು ಗರ್ಭ ಧರಿಸುತ್ತಿಲ್ಲದಿದ್ದರೆ ವೈದ್ಯರು ಫಲವತ್ತತೆ ಹೆಚ್ಚಿಸುವ ಔಷಧಿಗಳಾದ letrozole (Femara), clomiphene (Clomid) ಅಥವಾ ಚುಚ್ಚುಮದ್ದುಗಳನ್ನು ನೀಡಬಹುದು. ಇವು ಅಂಡೋತ್ಪತ್ತಿಯನ್ನು ಉತ್ತೇಜಿಸುವ ಔಷಧಿಗಳಾಗಿವೆ. ಈ ಔಷಧಿಗಳನ್ನು ಪ್ರಾರಂಭಿಸುವ ಮೊದಲು ನೀವು ಪೂರ್ಣಪ್ರಮಾಣದ ಫಲವತ್ತತೆಯ ಅಂಡೋತ್ಪತ್ತಿಯನ್ನು (fertility evaluation) ಪಡೆದಿರಬೇಕು.

ಆದ್ದರಿಂದ ಕೇವಲ ನಿಮ್ಮ ಮಾಸಿಕ ದಿನಗಳು ಏರುಪೇರಾಗಿವೆ ಎಂಬ ಮಾತ್ರಕ್ಕೇ ನೀವು ಗರ್ಭ ಧರಿಸಲು ಸಾಧ್ಯವೇ ಇಲ್ಲ ಎಂಬ ನಿರ್ಧಾರಕ್ಕೆ ಎಂದೂ ಬರದಿರಿ. ಒಂದು ವೇಳೆ ನೀವು ಗರ್ಭ ಧರಿಸಲು ಬಯಸದೇ ಇದ್ದರೆ ಮಾತ್ರ ಈ ಅನಿಯಮಿತ ಋತುಚಕ್ರದಿಂದ ನಿಮ್ಮ ಸಾಮಾನ್ಯ ಆರೋಗ್ಯಕ್ಕೇನೂ ಬಾಧೆಯಿಲ್ಲ ಎಂಬುದನ್ನು ವೈದ್ಯರಿಂದ ಖಚಿತಪಡಿಸಿಕೊಳ್ಳಿ. ನಿಮ್ಮ ಆರೋಗ್ಯ ಉತ್ತಮವಾಗಿರಲು ಯಾವ ಕ್ರಮದಿಂದಲೂ ನೀವು ತಪ್ಪಿಸಿಕೊಂಡಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಆರೋಗ್ಯಕ್ಕೆ ಅತ್ಯುತ್ತಮ ಎಂದು ವೈದ್ಯರು ಭಾವಿಸುವ ಕ್ರಮ ಮತ್ತು ಔಷಧಿಗಳನ್ನು ಕ್ರಮಬದ್ದವಾಗಿ ಸೇವಿಸಿ ಹಾಗೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಿ.

English summary

Can a Girl Get Pregnant If Her Periods Are Irregular in Kannada

Can a girl get pregnant if her periods are irregular, read on...
X
Desktop Bottom Promotion