For Quick Alerts
ALLOW NOTIFICATIONS  
For Daily Alerts

ಮಕ್ಳು ಯಾಕೆ ಸುಳ್ಳು ಹೇಳ್ತಾರೆ ? ಅವ್ರು ಸುಳ್ಳು ಹೇಳದ ಹಾಗೆ ತಡೆಯೋದು ಹೇಗೆ ?

|

"ಅಬ್ಬಬ್ಬಾ! ಏನ್ ಹುಡ್ಗ ಇವ್ನು ?!! ಸತ್ಯದ ತಲೆ ಮೇಲೆ ಹೊಡೆದ ಹಾಗೆ ಹೇಗೆ ಸುಳ್ಳು ಹೇಳ್ತಾನೆ ನೋಡಿ ?!! ಅಂತಾ ಕೆಲವು ಮಕ್ಕಳ ಬಗ್ಗೆ ಆಡಿಕೊಳ್ಳೋದನ್ನ ನೀವು ಕೇಳಿರ್ಬೋದು. ಕೆಲವರು ಸುಳ್ಳು ಹೇಳೋ ರೀತೀನೇ ಹಾಗಿರುತ್ತೆ. ಅದ್ರಲ್ಲೂ ಚಿಕ್ಕ ಮಕ್ಕಳಲ್ಲಿ ಈ ಗುಣ ಇದ್ರೆ ಅದು ಸಂಬಂಧಪಟ್ಟವರಿಗೆ ನಿಜಕ್ಕೂ ಬಲು ಆತಂಕದ, ಮುಜುಗುರದ ವಿಚಾರ.

ಯಾಕೇಂದ್ರೇ ಸುಳ್ಳು ಹೇಳೋದು ಒಂದು ಕೆಟ್ಟ ಚಾಳಿ. ಸುಳ್ಳು ಹೇಳೋದು ಮಹಾಪಾಪ ಅಂತಾ ಪುರಾಣಗಳು ಸಾರಿವೆ. ಅದು ಇನ್ನೊಬ್ಬರಿಗೆ ಹಾನಿಯನ್ನ ಉಂಟುಮಾಡುತ್ತೆ, ಯಾರ್ದಾದ್ರೂ ಭಾವನೆಗಳಿಗೆ ಆಘಾತ ಉಂಟುಮಾಡುತ್ತೆ, ಮತ್ತು ದೊಡ್ಡ ಜಗಳಕ್ಕೇ ಕಾರಣವಾಗಿ ಮನುಷ್ಯ-ಮನುಷ್ಯರ ನಡುವಿನ ಸಂಬಂಧಕ್ಕೇ ಹುಳಿ ಹಿಂಡಿಬಿಡುತ್ತೆ!! ಒಂದು ಗಾದೆ ಮಾತಿದೆ:

"ಸುಳ್ಳಿಗೆ ವರ್ತಮಾನ ಇರ್ಬೋದು, ಆದರೆ ಖಂಡಿತ ಸುಳ್ಳಿಗೆ ಭವಿಷ್ಯ ಇರಲಾರದು" ಅಂತಾ. ಹಾಗಾಗಿ ಯಾವಾಗಲೂ ನಮ್ಮ ಭಾವನೆಗಳನ್ನ ಪ್ರಾಮಾಣಿಕವಾಗೇ ವ್ಯಕ್ತಪಡಿಸೋದು ಅತ್ಯಂತ ಶ್ರೇಯಸ್ಕರ. ಈ ಮೊದಲೇ ಹೇಳಿರೋ ಹಾಗೆ ಮಕ್ಳು ಸುಳ್ಳು ಹೇಳೋಕೆ ಶುರುವಿಟ್ಟುಕೊಂಡ್ರೆ ಹೆತ್ತವರ ಪಾಲಿಗೆ ನಿಜಕ್ಕೂ ಅದು ತಲೆನೋವಿನ ವಿಷಯ.

ಮಕ್ಕಳು ಸುಳ್ಳು ಹೇಳುವುದು ಏಕೆ?

ಮಕ್ಕಳು ಸುಳ್ಳು ಹೇಳುವುದು ಏಕೆ?

ತಂದೆತಾಯಿಗಳ ಬಳಿ ಮಕ್ಕಳು ಸುಳ್ಳು ಹೇಳೋಕೆ ನಾನಾ ಕಾರಣಗಳಿರುತ್ವೆ. ಅದರಲ್ಲಿ ಒಂದು ಗಮನಾರ್ಹ ಕಾರಣವೆಂದರೆ, ತಂದೆತಾಯಿಗಳಿಂದ ತಮ್ಮ ನೈಜ ಉದ್ದೇಶವನ್ನ ಮುಚ್ಚಿಡೋದಕ್ಕೆ ಮತ್ತು "ಸಿಕ್ಕಿಬಿದ್ರೆ ಬೈಸಿಕೊಳ್ಳಬೇಕಾಗುತ್ತೆ" ಅನ್ನೋ ಭಯಕ್ಕೆ.

ಸಾಮಾನ್ಯವಾಗಿ ಯಾವ ಪೋಷಕರು ಅತ್ಯಂತ ಶಿಸ್ತಿನವರು, ನಿಷ್ಟುರ ಸ್ವಭಾವದವರಾಗಿರುತ್ತಾರೋ ಅಂತಹವರ ಮಕ್ಕಳೇ ಸುಳ್ಳು ಹೇಳೋ ಚಾಳೀನಾ ಬೆಳೆಸಿಕೊಳ್ಳೋದು ಜಾಸ್ತಿ (ಡಾ. ರಾಜಕುಮಾರ್ ಅಭಿನಯದ ಕನ್ನಡ ಚಲನಚಿತ್ರ "ಭಾಗ್ಯವಂತರು" ಇದಕ್ಕೆ ಒಳ್ಳೇ ಉದಾಹರಣೆ). ಯಾಕೆಂದರೆ, ಅಂತಹ ತಂದೆತಾಯಿಗಳ ಮುಂದೆ ತಮ್ಮ ತಪ್ಪನ್ನ ಪ್ರಾಮಾಣಿಕವಾಗಿ ಹೇಳ್ಕೊಂಡು ಒಪ್ಕೊಳ್ಳೋಕೆ ಮಕ್ಳು ತೀರಾ ಹೆದರಿಕೊಳ್ಳುತ್ತಾರೆ. ಸತ್ಯವನ್ನ ಹೇಳೋದಕ್ಕೆ ತುಂಬಾನೇ ಧೈರ್ಯ ಬೇಕಾಗುತ್ತೆ. ಮಕ್ಕಳಲ್ಲಿ ಅಂತಹ ಧೈರ್ಯ ಅಥವಾ ಆತ್ಮವಿಶ್ವಾಸದ ಕೊರತೆ ಇದ್ದಾಗ ಅವರು ಸುಳ್ಳು ಹೇಳೋದನ್ನೇ ರೂಢಿಯಾಗಿಸಿಕೊಳ್ಳುತ್ತಾರೆ.

ತಂದೆ-ತಾಯಿಯ ಕೋಪಕ್ಕೆ ಹೆದರಿ ಸುಳ್ಳು ಹೇಳುವುದು

ತಂದೆ-ತಾಯಿಯ ಕೋಪಕ್ಕೆ ಹೆದರಿ ಸುಳ್ಳು ಹೇಳುವುದು

ಕೋಪಿಷ್ಟ ತಂದೆತಾಯಿಗಳ ಮುಂದೆ ಸತ್ಯಾನಾ ಒಪ್ಕೊಂಡು ತಗಲಾಕೊಳ್ಳೋದು, ಆಮೇಲೆ ಅವ್ರ ಜೊತೆಗೆ ವಾದ ಮಾಡೋದು, ಆಮೇಲೆ ಅವ್ರಿಂದ ಸಿಕ್ಕಾಪಟ್ಟೆ ಬೈಸ್ಕೊಳ್ಳೋದು ಇವೆಲ್ಲ ಮಕ್ಕಳಿಗೆ ಒಲ್ಲದ ಸಂಗತಿಗಳು. ಇವುಗಳಿಂದ ತಪ್ಪಿಸಿಕೊಳ್ಳೋದಕ್ಕೋಸ್ಕರ, ಅವ್ರು ಸುಲಭೋಪಾಯಾನಾ ಕಂಡುಕೊತಾರೆ ಮತ್ತು ಆ ಸುಲಭೋಪಾಯಾನೇ ಸುಳ್ಳು ಹೇಳೋದು!! ಆದರೆ, ಈ ಸುಳ್ಳು ಹೇಳೋ ಅವರ ಆ ಪ್ರವೃತ್ತಿ ಮಾತ್ರಾ ಬಹಳ ಬೇಗನೇ ಒಂದು ಕೆಟ್ಟ ಚಾಳಿಯಾಗೇ ಅವರಲ್ಲಿ ಬೆಳೆಯುತ್ತೆ.

ಇದು ನಿಮಗೆ ಗೊತ್ತಾಗೋವಷ್ಟರಲ್ಲಿ ನೀವು ಅದಾಗಲೇ ನಿಮ್ಮ ಮಗನ ಅಥವಾ ನಿಮ್ಮ ಮಗಳ ರೂಪದಲ್ಲಿ ಓರ್ವ ಮಹಾನ್ ಸುಳ್ಳುಗಾರ ಅಥವಾ ಮಹಾನ್ ಸುಳ್ಳುಗಾರ್ತಿಯನ್ನ ಬೆಳೆಸಿರ್ತೀರಾ!! ಕಾಲ ಮಿಂಚಿಹೋಗಿರುತ್ತೆ, "ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗೀತೇ ?" ಅನ್ನೋ ಗಾದೆ ಪ್ರಕಾರ ಆಮೇಲೆ ಅವರನ್ನ ತಿದ್ದೋಕೂ ಆಗಲ್ಲ. ನಿಮ್ಮ ಆ ಮಕ್ಕಳಿಂದ ಎಲ್ರಿಗೂ ತೊಂದರೆ ಶುರುವಾಗುತ್ತೆ!!

ಹಾಗಾದರೆ ನಿಮ್ಮ ಮಕ್ಕಳು ಈ ರೀತಿ ಸುಳ್ಳುಗಾರರಾಗೋದ್ರಿಂದ ಅವರನ್ನ ತಡೆಯೋದು ಹೇಗೆ ? ಪ್ರಾಮಾಣಿಕತೆ ಮತ್ತು ಸತ್ಯದ ಸರಿಯಾದ ದಾರಿಯನ್ನ ನಿಮ್ಮ ಮಕ್ಕಳು ಆರಿಸಿಕೊಳ್ಳೋದನ್ನ ಉತ್ತೇಜಿಸೋಕೆ ಕೆಲವು ಮಾರ್ಗೋಪಾಯಗಳಿವೆ. ಅವು ಏನಂತ ಈಗ ನೋಡೋಣ....

ಸಹಜವಾದ ಪರಿಣಾಮಗಳನ್ನ ನಿಮ್ಮ ಮಕ್ಕಳ ಜೊತೆ ಚರ್ಚಿಸಿ

ಸಹಜವಾದ ಪರಿಣಾಮಗಳನ್ನ ನಿಮ್ಮ ಮಕ್ಕಳ ಜೊತೆ ಚರ್ಚಿಸಿ

ನಿಮ್ಮ ಮಕ್ಕಳೇನೂ ಹುಟ್ಟಿತ್ತಲೇ ಸರ್ವಜ್ಞರಾಗಿರೋಲ್ಲ ಅನ್ನೋದು ಸರಿಯಷ್ಟೇ ?! ಅವರಿಗೆ ವಿಷಯಗಳನ್ನ ಹಂತ ಹಂತವಾಗಿ ತಿಳಿಹೇಳಬೇಕು. ಸುಳ್ಳು ಹೇಳೋದ್ರಿಂದಾಗೋ ಕೆಟ್ಟ ಪರಿಣಾಮಗಳ ಬಗ್ಗೆ ಅವರಿಗೆ ಹಿತವಚನ ಹೇಳಿ. ಸತ್ಯ ಘಟನೆಗಳ ಆಧಾರದ ಮೇಲೆ ಸತ್ಯ ಹೇಳೋದಕ್ಕೂ ಸುಳ್ಳು ಹೇಳೋದಕ್ಕೆ ಇರೋ ವ್ಯತ್ಯಾಸಗಳನ್ನ ಅವರಿಗೆ ಮನದಟ್ಟು ಮಾಡಿ. ಹೀಗೆ ಮಾಡಿದಾಗ ಅವರಿಗೆ ನಿಮ್ಮ ದೃಷ್ಟಿಕೋನದ ಅರಿವಾಗತ್ತೆ ಹಾಗೂ ಅವರು ಸುಳ್ಳು ಹೇಳೋ ಅಭ್ಯಾಸಕ್ಕೆ ಮಂಗಳ ಹಾಡ್ತಾರೆ.

ನಿಮ್ಮ ಮಕ್ಕಳ ಪಾಲಿಗೆ ಒಳ್ಳೆಯ ಹೆತ್ತವರಾಗಿರೋದಕ್ಕಿಂತಲೂ ಆತ್ಮೀಯ ಸ್ನೇಹಿತರಾಗಿ

ನಿಮ್ಮ ಮಕ್ಕಳ ಪಾಲಿಗೆ ಒಳ್ಳೆಯ ಹೆತ್ತವರಾಗಿರೋದಕ್ಕಿಂತಲೂ ಆತ್ಮೀಯ ಸ್ನೇಹಿತರಾಗಿ

ನೀವು ನಿಮ್ಮ ಮಕ್ಕಳ ಪಾಲಿಗೆ ಹೆತ್ತರಾಗಿರೋದರ ಮತ್ತು ಅವರ ಪಾಲಿನ ಅತ್ಯುತ್ತಮ ಸ್ನೇಹಿತರಾಗಿರೋದರ ಮಧ್ಯೆ ಸಮತೋಲನವನ್ನ ಕಾಯ್ದುಕೊಳ್ಳಬೇಕು. ನಿಮ್ಮ ಮಕ್ಕಳು ತೊಂದರೆಗೀಡಾದಾಗಲೆಲ್ಲ ನಿಮ್ಮ ಮಕ್ಕಳು ನಿಮ್ಮ ಸಲಹೇನಾ ಪಡ್ಕೋಳ್ಳೋಕೆ ಹಿಂಜರಿಯೋ ಹಾಗಾಗ್ಬಾರ್ದು. ಅವರು ತಪ್ಪು ಮಾಡಿದಾಗ್ಲೆಲ್ಲ ನೀವು ಬರೀ ಬೈತಾನೇ ಇದ್ರೆ, ಮುಂದೆ ತಾವು ಮಾಡಿದ ತಪ್ಪನ್ನ ನಿಮ್ಹತ್ರ ಹೇಳ್ಕೊಳ್ಳೋಕೇ ಅವ್ರು ಹಿಂಜರಿಯೋಕೆ ಶುರುಮಾಡ್ತಾರೆ ಮತ್ತು ಆ ಬಗ್ಗೆ ನೀವೇನಾದ್ರೂ ಕೇಳಿದ್ರೆ ಹೆದರಿ ನಿಮ್ಹತ್ರ ಸುಳ್ಳುಸುಳ್ಳೇ ಹೇಳ್ತಾರೆ.

ನಿಮ್ಮಲ್ಲಿ ಅವರು ನಂಬಿಕೆಯನ್ನ ಬೆಳೆಸಿಕೊಳ್ಳೋ ಹಾಗೆ ಮಾಡಿ

ನಿಮ್ಮಲ್ಲಿ ಅವರು ನಂಬಿಕೆಯನ್ನ ಬೆಳೆಸಿಕೊಳ್ಳೋ ಹಾಗೆ ಮಾಡಿ

ಅವರೊಂದಿಗಿನ ನಿಮ್ಮ ವಿಶ್ವಾಸವನ್ನ ಮತ್ತೊಮ್ಮೆ ಮರುಸ್ಥಾಪನೆ ಮಾಡಿ ಹಾಗೂ ಅವರ ಗೌರವ ಗಳಿಸಿಕೊಳ್ಳಿ. ಭಾವನಾತ್ಮಕವಾಗಿ ನಿಮ್ಮ ಮಕ್ಕಳು ನಿಮಗೆ ತುಂಬಾ ಆಪ್ತರಾಗೋ ರೀತಿಯಲ್ಲಿ ಯೋಜನೆಯೊಂದನ್ನ ಹಾಕಿಕೊಳ್ಳಿರಿ ಹಾಗೂ ಅವರೊಂದಿಗೆ ಒಂದು ಆಪ್ತ ಬಾಂಧವ್ಯಾನಾ ಬೆಳೆಸಿಕೊಳ್ಳಿ. ಹೀಗಾದಾಗ ಅವರು ನಿಮ್ಮನ್ನ ನಂಬೋಕೆ ಶುರುಮಾಡ್ತಾರೆ ಮತ್ತು ಬಳಿಕ ನಿಮ್ಮ ಬಳಿ ಸುಳ್ಳು ಹೇಳೋಲ್ಲ.

ಪ್ರಾಮಾಣಿಕತೆಯ ಮೌಲ್ಯವನ್ನ ಅವರಿಗೆ ಮನವರಿಕೆ ಮಾಡಿಸಿ

ಪ್ರಾಮಾಣಿಕತೆಯ ಮೌಲ್ಯವನ್ನ ಅವರಿಗೆ ಮನವರಿಕೆ ಮಾಡಿಸಿ

ಪ್ರಾಮಾಣಿಕವಾಗಿರೋದರ ಮೌಲ್ಯಗಳನ್ನ ಮತ್ತು ಪ್ರಾಮುಖ್ಯತೇನಾ ಅವರಿಗೆ ಮನವರಿಕೆ ಮಾಡಿಸಿ. ಅವರು ಪ್ರಾಮಾಣಿಕರಾಗೋಗೆ ಪ್ರಯತ್ನಿಸೋವಾಗ ನೀವು ಅವರೊಂದಿಗಿನ ತಾಳ್ಮೆ ಕಳ್ಕೋಬಾರ್ದು!! "ಅದು ಕಷ್ಟಕರವೇ ಆಗಿದ್ದರೂ ನನ್ನ ಬಳಿ ನೀನು ಸತ್ಯವನ್ನೇ ಹೇಳೋದರ ಮೂಲಕ ನೀನು ಒಳ್ಳೆಯ ಕೆಲಸವನ್ನೇ ಮಾಡಿರುವೆ" ಅಂತಾ ಪ್ರಶಂಸಿಸಿ ಮತ್ತು ಆ ಮೂಲಕ ಪ್ರಾಮಾಣಿಕತೆ ಅನ್ನೋದು ಅವರ ಗುಣಸ್ವಭಾವದಲ್ಲಿ ಆಳವಾಗಿ ಬೇರೂರುವಂತೆ ಮಾಡಿ.

English summary

Why Kids Lie And What Can You Do To Stop Them

Here are why kid lie and what can you do stop them.
X
Desktop Bottom Promotion