For Quick Alerts
ALLOW NOTIFICATIONS  
For Daily Alerts

ನಿಮ್ಮ ಎರಡು ಮಕ್ಕಳ ನಡುವೆ ವಯಸ್ಸಿನ ಅಂತರ ಎಷ್ಟಿದೆ? ಪ್ರಯೋಜನಗಳೇನು, ಸವಾಲುಗಳೇನು?

|

ಈಗಿನ ಕಾಲದಲ್ಲಿ ಕೆಲವರು ಒಂದು ಮಗು ಸಾಕು, ಒಂದು ಮಗುವನ್ನೇ ಚೆನ್ನಾಗಿ ನೋಡಿಕೊಂಡರಾಯಿತು ಎಂದುಕೊಂಡರೆ, ಕೆಲವರು ಇರುವ ಒಂದು ಮಗುವಿಗೆ ತಂಗಿಯೋ ತಮ್ಮನೋ ಇದ್ದರೆ ಚೆನ್ನಾಗಿರುತ್ತದೆ ಎನ್ನುವ ಕಾರಣದಿಂದಲೋ ಅಥವಾ ಮೊದಲ ಮಗು ಹೆಣ್ಣು ಅಥವಾ ಗಂಡಾಗಿದ್ದರೆ ಇನ್ನೊಂದು ಮಗು ಗಂಡು ಅಥವಾ ಹೆಣ್ಣು ಆಗಲಿ, ಮೊದಲನೇ ಮಗುವಿಗೊಂದು ಕಂಪನಿ ಸಿಕ್ಕಂತಾಗುತ್ತದೆ ಎನ್ನುವ ಕಾರಣಕ್ಕೆ ಇನ್ನೊಂದು ಮಗುವಿಗೆ ಯೋಜನೆ ಹಾಕಿಕೊಳ್ಳುತ್ತಾರೆ. ಆದರೆ ಎರಡನೇ ಮಗುವಾಗಿರಲಿ ಮೂರನೇ ಮಗುವಾಗಿರಲಿ ಮಕ್ಕಳ ಮಧ್ಯೆ ಎಷ್ಟು ವಯಸ್ಸಿನ ಅಂತರವಿದ್ದರೆ ಒಳ್ಳೆಯದು ಎನ್ನುವ ಕನ್ಫ್ಯೂಷನ್‌ಗೆ ಒಳಗಾಗುತ್ತಾರೆ.

ಸಲಹೆ ನೀಡುವವರು ಮಗುವಿಗೆ ಒಂದು ವರ್ಷವಾಗುವುದರಲ್ಲಿ ಇನ್ನೊಂದು ಮಗುವಿಗೆ ಪ್ಲಾನ್‌ ಮಾಡಿ ಇಬ್ಬರೂ ಜೊತೆಯಾಗಿ ಬೆಳೆಯುತ್ತಾರೆ ಎಂದರೆ, ಕೆಲವರು ಮೊದಲ ಮಗುವಿಗೂ ಎರಡನೇ ಮಗುವಿಗೂ ಎರಡೂವರೆ ವರ್ಷಗಳ ಅಂತರವಿರಬೇಕು, ಇಲ್ಲವಾದರೆ ಮೊದಲನೇಯ ಮಗು ತಂಗಿಯೋ ತಮ್ಮನೋ ಬಂದ ಮೇಲೆ ತನ್ನನ್ನು ಕಡೆಗಣಿಸುತ್ತಾರೆ ಎಂದು ಭಾವಿಸುವುದರಿಂದ ಇಬ್ಬರು ಮಕ್ಕಳಿಗೂ ಅದು ಆರೋಗ್ಯಕರ ಬೆಳವಣಿಗೆಗೆ ಉತ್ತಮವಲ್ಲ ಎನ್ನುವ ಕಿವಿಮಾತು ಹೇಳುತ್ತಾರೆ. ಹಾಗಾದರೆ ಇಬ್ಬರು ಮಕ್ಕಳ ನಡುವಣ ವಯಸ್ಸಿನ ಅಂತರ ಎಷ್ಟಿದ್ದರೆ ಒಳಿತು, ಇದರಿಂದಾಗುವ ಒಳಿತು ಹಾಗೂ ಕೆಡುಕುಗಳೇನು ಎನ್ನುವುದನ್ನು ಈ ಲೇಖನದ ಮೂಲಕ ವಿವರಾವಾಗಿ ತಿಳಿದುಕೊಳ್ಳೋಣ.

ಮಕ್ಕಳ ನಡುವೆ ಒಂದು ವರ್ಷದ ಅಂತರವಿದ್ದರೆ ಒಳಿತೇನು..?

ಮಕ್ಕಳ ನಡುವೆ ಒಂದು ವರ್ಷದ ಅಂತರವಿದ್ದರೆ ಒಳಿತೇನು..?

ಮಕ್ಕಳ ನಡುವೆ ಒಂದು ವರ್ಷದ ಅಂತರವಿದ್ದರೆ ಮಕ್ಕಳು ಒಟ್ಟಿಗೆ ಬೆಳೆಯುವುದಲ್ಲದೇ ಉತ್ತಮ ಸ್ನೇಹಿತರಾಗುತ್ತಾರೆ. ಆದರೆ ನೀವು ಕೆಲಸ ಮಾಡುವ ಯಂತ್ರವಾಗುತ್ತೀರಿ ಆದರೆ ಮೊದಲನೇ ಮಗುವಿನ ಅನುಭವದಿಂದಾಗಿ ವರ್ಷದೊಳಗಿನ ಇಬ್ಬರು ಮಕ್ಕಳನ್ನು ಸಾಕುವುದು ನಿಮಗೆ ಸಲೀಸಾಗಬಹುದು.ಮನೆಕೆಲಸದೊಂದಿಗೆ ಮಕ್ಕಳಿಬ್ಬರ ಕೆಲಸವನ್ನೂ ನಿಭಾಯಿಸಿಕೊಂಡು ಹೋಗುವುದು ಸರಳವೆನಿಸಬಹುದು.

ಇನ್ನೊಂದು ಮುಖ್ಯ ಸಂಗತಿಯೆಂದರೆ ಮೊದಲ ಮಗುವು ಎಲ್ಲವನ್ನೂ ಅರ್ಥಮಾಡಿಕೊಳ್ಳುವಷ್ಟು ಬೆಳೆದಿರುವುದಿಲ್ಲ. ಹಾಗಾಗಿ ಚಿಕ್ಕಮಗುವನ್ನು ತಿರಸ್ಕರಿಸುವ ಸಾಧ್ಯತೆಗಳು ತುಂಬಾ ಕಡಿಮೆ. ಎರಡನೇ ಮಗುವಿಗೆ ನೀವು ಹೆಚ್ಚು ಸಮಯವನ್ನು ನೀಡಬೇಕಾಗಿ ಬಂದಾಗ ಮೊದಲನೇ ಮಗುವು ನಿಮ್ಮಿಂದ ಹೆಚ್ಚು ಗಮನ ಅಥವಾ ಆದ್ಯತೆಯನ್ನು ನಿರೀಕ್ಷಿಸಲಾರದು.

ವಯಸ್ಸಿನ ಅಂತರ ಕಡಿಮೆ ಇರುವ ಮಕ್ಕಳು ಭಾವನಾತ್ಮಕವಾಗಿ ಹತ್ತಿರವಾಗುತ್ತಾರೆ. ಜೊತೆಗೆ ಆಟವಾಡುತ್ತಾ ಸಮಯ ಕಳೆಯುವುದರಿಂದ ನಿಮಗೂ ಹಾಯೆನಿಸುವುದು.

ನೀವು ಒಂದು ಸವಾಲಿನ ಹಂತವನ್ನು ದಾಟಿರುವುದರಿಂದ ಇನ್ನೊಂದು ಸವಾಲನ್ನು ಎದುರಿಸುವುದು ಕಷ್ಟವಾಗಲ್ಲ. ಏಕೆಂದರೆ ಮೊದಲ ಮಗುವಿಗೆ ಸ್ವಯಂ ಆಹಾರ ಸೇವನೆಯಾಗಲಿ, ಪಾಟ್ಟಿ ಟ್ರೈನಿಂಗ್‌ ಕೊಡುವುದುದರಲ್ಲಿ ನೀವು ಎಕ್ಸ್‌ಪರ್ಟ್‌ ಆಗಿರುತ್ತೀರಿ. ಇನ್ನೊಂದು ಲಾಭ ಏನೆಂದರೆ ಮೊದಲನೇ ಮಗುವಿಗೆ ಬಳಸಿದ ವಸ್ತುಗಳು ಅಂದರೆ, ಕೆಲವೊಂದು ಬಟ್ಟೆ, ತೊಟ್ಟಿಲು, ಕಾರ್‌ ಸೀಟ್‌, ಸ್ಟ್ರೋಲರ್‌ಗಳನ್ನು ಬಿಸಾಕದೇ, ಮರು ಬಳಕೆ ಮಾಡಬಹುದು.

ಒಂದು ವರ್ಷದ ಅಂತರವಿದ್ದರ ಕೆಡುಕುಗಳೇನು..?

ಮೊದಲನೇ ಹೆರಿಗೆಯಿಂದ ಇನ್ನೂ ಚೇತರಿಸಿಕೊಳ್ಳಲಾಗದ ದೇಹಕ್ಕೆ ಮತ್ತೊಂದು ಮಗುವನ್ನು ಹೊರುವುದು ಕಷ್ಟವಾಗಬಹುದು. ಪ್ರಸವಾನಂತರ ದೇಹದಲ್ಲಿನ ಕ್ಯಾಲ್ಸಿಯಂ, ಕಬ್ಬಿಣಾಂಶ ಮಟ್ಟಗಳು ಕಡಿಮೆ ಇರುತ್ತದೆ. ಪ್ರಸವಾನಂತರ ರಕ್ತಹೀನತೆ ಸಮಸ್ಯೆಯೂ ನಿಮ್ಮನ್ನು ಕಾಡಬಹುದು. ಹೆರಿಗೆಯಾದ ಒಂದು ವರ್ಷದೊಳಗೆ ಮತ್ತೆ ಗರ್ಭಧರಿಸುವುದು ಅಕಾಲಿಕ ಹೆರಿಗೆಗೆ ಕಾರಣವಾಗಬಹುದು ಎನ್ನುವ ಅಂಶವನ್ನು ಕೆಲವು ಸಂಶೋಧನೆಗಳು ವಿವರಿಸಿವೆ.

ಮೊದಲನೇ ಮಗು ಸಿ ಸೆಕ್ಷನ್‌ನಿಂದ ಜನಿಸಿದ್ದರೆ, ಎರಡನೇ ಮಗುವಿನ ಹೆರಿಗೆ ಯೋನಿಯ ಮೂಲಕ ಹೆರಿಗೆ ಮಾಡಿಸುವುದು ಕಷ್ಟವಾಗಬಹುದು. ಇದಕ್ಕಾಗಿಯೇ ವೈದ್ಯರು ಗರ್ಭಧಾರಣೆಯ ನಡುವೆ ಕನಿಷ್ಠ 18 ತಿಂಗಳ ಅಂತರವಿರಬೇಕೆಂದು ಹೇಳುತ್ತಾರೆ. ಇದು ನಿಮ್ಮ ಹೆರಿಗೆಯ ಅಪಾಯವನ್ನು ವಿವರಿಸಿದರೆ, ಇನ್ನೊಂದು ಮುಖ್ಯವಾಗಿ ಮೊದಲನೇ ಹೆರಿಗೆ, ಮಗುವಿನ ಲಾಲನೆ ಪಾಲನೆ, ನಿದ್ದೆಯಿಲ್ಲದ ರಾತ್ರಿಯಿಂದ ನೀವು ಹೆಚ್ಚು ದಣಿದಿರುತ್ತೀರಿ. ಮತ್ತೆ ಎರಡನೇಯ ಮಗುವಾದರೆ ನಿಮಗೆ ವಿಶ್ರಾಂತಿಗೆ ಸಮಯವೇ ಇರದು.

ಒಂದು ವರ್ಷ ಅಂತರ ಇಬ್ಬರು ಮಕ್ಕಳಿದ್ದರೆ ಇನ್ನೊಂದು ಸಮಸ್ಯೆಯೆಂದರೆ ಇಬ್ಬರೂ ಮಕ್ಕಳನ್ನು ಕೆಲವೊಂದು ಸಂದರ್ಭದಲ್ಲಿ ನೋಡಿಕೊಳ್ಳುವುದು ಸವಾಲಾಗಬಹುದು. ಮನೆಯಿಂದ ಹೊರಗೆ ಹೋಗಬೇಕಾದರೂ ಎರಡೆರಡು ಸ್ಟ್ರಾಲರ್‌ ತಳ್ಳಿಕೊಂಡು ಹೋಗಬೇಕಾದ ಪರಿಸ್ಥಿತಿ ಬರಬಹುದು. ಹಾಗಾಗಿ ನಿಮ್ಮ ಮಗುವಿಗೆ ಒಂದು ವರ್ಷವಾಗುವ ಮುನ್ನವೇ ಮತ್ತೆ ಗರ್ಭಧರಿಸುವ ಯೋಚನೆ ಇದ್ದರೆ ಸಾವಧಾನವಾಗಿ ನಿರ್ಧಾರ ತೆಗೆದುಕೊಳ್ಳಿ.

ಇನ್ನು ಮಕ್ಕಳ ಪ್ರಾಡಕ್ಟ್‌ಗಳಂತೂ ಹೆಚ್ಚು ದುಬಾರಿ. ಇಬ್ಬರು ಮಕ್ಕಳ ಅಗತ್ಯಗಳು, ಡೈಪರ್‌ ಖರ್ಚುಗಳನ್ನು ಸರಿತೂಗಿಸಿಕೊಂಡು ಹೋಗುವುದು ಕಷ್ಟವಾಗಬಹುದು. ಇದಲ್ಲದೇ ಮುಖ್ಯವಾಗಿ ಇಬ್ಬರು ಮಕ್ಕಳ ನಿದ್ದೆ, ಆಹಾರ, ನೋಡಿಕೊಳ್ಳುವಷ್ಟರಲ್ಲಿ ನೀವು ಹೈರಾಣಾಗಬಹುದು.

ಮಕ್ಕಳ ನಡುವೆ ಎರಡು ವರ್ಷಗಳ ಅಂತರ: ಒಳಿತು -ಕೆಡುಕು'

ಮಕ್ಕಳ ನಡುವೆ ಎರಡು ವರ್ಷಗಳ ಅಂತರ: ಒಳಿತು -ಕೆಡುಕು'

ಮೊದಲನೇಯ ಗರ್ಭಧಾರಣೆಗೂ ಎರಡನೇಯ ಗರ್ಭಧಾರಣೆಗೂ ಸಾಕಷ್ಟು ಅಂತರವಿರುವುದರಿಂದ ನಿಮ್ಮ ಆರೋಗ್ಯಕ್ಕೂ ಉತ್ತಮ. ಅಷ್ಟರಲ್ಲಿ ನಿಮ್ಮ ದೇಹವೂ ಇನ್ನೊಂದು ಗರ್ಭಧಾರಣೆಗೆ ಸಿದ್ಧವಾಗಿರುತ್ತದೆ. ಎರಡು ವರ್ಷಗಳ ಅಂತರವು ಗರ್ಭಧಾರಣೆಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಮೊದಲನೇಯ ಮಗುವಿನ ಆರೈಕೆಯಿಂದ ಸಾಕಷ್ಟು ಕಲಿತಿರುವ ನೀವು, ಎರಡನೇ ಮಗುವಿನ ಪಾಲನೆಯಲ್ಲಿ ವಿಶ್ವಾವನ್ನು ಅನುಭವಿಸುವಿರಿ.

ಎರಡುವರ್ಷಗಳ ಅಂತರವಿದ್ದರೆ ಏನು ಸಮಸ್ಯೆ ಎನ್ನುವುದಾದರೆ ಮಕ್ಕಳ ಮಧ್ಯೆ ಅಸೂಯೆ ಹೆಚ್ಚಾಗಬಹುದು. ನೀವು ಸಣ್ಣ ಮಗುವಿಗೆ ಗಮನ ನೀಡಿದಾಗ ಮೊದಲ ಮಗುವಿನಲ್ಲಿ ಕೋಪ, ಹಠ ಹೆಚ್ಚಾಗಬಹುದು. ಬೇಕೆಂದೇ ಹಠ ಂಆಡಬಹುದು.ನಿಮ್ಮ ಪ್ರೀತಿಯನ್ನು ಹಂಚಿಕೊಳ್ಳಲು ಮೊದಲನೇ ಮಗು ಬಯಸದಿರಬಹುದು.ಹೆಚ್ಚಿನ ಮಕ್ಕಳು ಸಣ್ಣ ಮಗುವಿಗೆ ಚಿವುಟುವುದು, ಹೊಡೆಯುವುದು ಮಾಡುತ್ತಾರೆ. ಹೀಗಾದಾಗ ಇಬ್ಬರು ಮಕ್ಕಳನ್ನೂ ಒಟ್ಟಿಗೆ ಬಿಟ್ಟು ಹೋಗಲು ಹಿಂಜರಿಕೆ ಪಡಬೇಕಾದೀತು.

ಮಕ್ಕಳ ನಡುವೆ ಮೂರು ವರ್ಷಗಳ ಅಂತರ

ಮಕ್ಕಳ ನಡುವೆ ಮೂರು ವರ್ಷಗಳ ಅಂತರ

ಮೊದಲನೇ ಮಗು ಓಡಾಡಲು ಶುರು ಮಾಡಿದ ಸಮಯದಲ್ಲಿ ಇನ್ನೊಂದು ಮಗುವಿನ ಆಗಮನವಾಗುವುದರಿಂದ ಎರಡನೇ ಮಗುವಿನ ಆರೈಕೆ ಸುಲಭವಾಗಬಹುದು. ಸಂಶೋಧನೆಗಳ ಪ್ರಕಾರ ಮೂರು ವರ್ಷದ ನಂತರ ಎರಡನೇ ಮಗಗುವನ್ನು ಹೊಂದುವುದು ಹೆರಿಗೆಯಲ್ಲಿನ ಅಪಾಯವನ್ನು ಸಾಕಷ್ಟು ಕಡಿಮೆ ಮಾಡುವುದಂತೆ. ಆರೋಗ್ಯಕರ ಗರ್ಭವಸ್ಥೆಯು ನಿಮಗೂ, ನಿಮ್ಮ ಮಗುವಿಗೂ ಉತ್ತಮವಾಗಿರುತ್ತದೆ.

ಮೂರು ವರ್ಷದ ಮಗು ತನ್ನ ಎಲ್ಲಾ ಕೆಲಸವನ್ನು ತಾನಾಗೇ ಮಾಡುವಾಗ ಅಂದರೆ ಊಟ ಮಾಡುವುದು, ಪಾಟ್ಟಿ ಹೋಗುವುದು ಅಭ್ಯಾಸ ಮಾಡಿಕೊಂಡಾಗ ನಿಮಗೆ ಎರಡನೇ ಮಗುವನ್ನು ನಿಭಾಯಿಸುವುದು ಸರಳವಾಗುವುದು. ಕೆಲವೊಮ್ಮೆ ಮೂರು ವರ್ಷದ ಮಗುವನ್ನು ಪ್ರೀಸ್ಕೂಲ್ನಲ್ಲಿ ಬಿಟ್ಟಾಗ ಎರಡನೇ ಮಗುವಿನೊಂದಿಗೆ ಸಮಯ ಕಳೆಯಲು ನಿಮಗೆ ಅನುಕೂಲಕರವಾಗಬಹುದು.

ಇನ್ನು ಮೂರು ವರ್ಷಗಳ ಅಂತರದ ಸವಾಲುಗಳ ಬಗ್ಗೆ ಹೇಳುವುದಾದರೆ ಚೊಚ್ಚಲ ಮಗು ಈಗ ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತಾನೆ. ತನ್ನ ಮೇಲೆ ಗಮನ ಕಡಿಮೆ ಮಾಡಿ, ಮಗುವಿನೊಂದಿಗೇ ಹೆಚ್ಚು ಕಾಲ ಕಳೆಯುವ ಅಮ್ಮನನ್ನೂ ಗಮನಿಸುತ್ತಾನೆ. ಒಡ ಹುಟ್ಟಿದವರಲ್ಲಿ ಅಸೂಯೆ ಎನ್ನುವುದು ಸಾಮಾನ್ಯವೇ. ಆದರೆ ಮೂರನೇ ವಯಸ್ಸಿನಲ್ಲಿ ಹಿರಿಯ ಮಗು ತನ್ನ ಬಗ್ಗೆ ಕಡಿಮೆ ಕಾಳಜಿ ವಹಿಸುತ್ತಿದ್ದಾರೆ ಎಂದರಿತಾಗ ಹೊಡೆಯುವುದು, ಕಿರುಚುವುದು , ಹಠಮಾಡುವುದು ಸಾಮಾನ್ಯ. ಹೀಗಾದಾಗ ಇಬ್ಬರೂ ಮಕ್ಕಳನ್ನು ಒಂದೇ ಸಮಯದಲ್ಲಿ ನಿಭಾಯಿಸುವುದು ನಿಮಗೆ ತಲೆನೋವಾಗಬಹುದು.

ಮಕ್ಕಳ ನಡುವೆ ನಾಲ್ಕು ವರ್ಷ ಅಥವಾ ಹೆಚ್ಚಿನ ವರ್ಷಗಳ ಅಂತರ; ಪ್ರಯೋಜನ ಮತ್ತು ಸವಾಲು

ಮಕ್ಕಳ ನಡುವೆ ನಾಲ್ಕು ವರ್ಷ ಅಥವಾ ಹೆಚ್ಚಿನ ವರ್ಷಗಳ ಅಂತರ; ಪ್ರಯೋಜನ ಮತ್ತು ಸವಾಲು

ಇಬ್ಬರು ಮಕ್ಕಳ ನಡುವೆ ನಾಲ್ಕು ವರ್ಷಗಳ ಅಂತರವಿರುವುದು ನಿಮಗೆ ಕಷ್ಟಕರವಾಗಲಾರದು. ಯಾಕೆಂದರೆ ಮೊದಲ ಮಗುವಿಗೂ ನೀವು ಸಾಕಷ್ಟು ಸಮಯ ನೀಡಿರುತ್ತೀರಿ. ನಾಲ್ಕು ವರ್ಷಕ್ಕೆಲ್ಲಾ ಮಕ್ಕಳು ಪ್ರಬುದ್ಧರಾಗುತ್ತಾರೆ. ತಿಳುವಳಿಕೆಯೂ ಇರುತ್ತದೆ. ಹಾಗಾಗಿ ಇಬ್ಬರು ಮಕ್ಕಳನ್ನು ನಿಭಾಯಿಸುವುದು ಕಷ್ಟವಾಗಲ್ಲ. ಮಕ್ಕಳ ಜೊತೆಗೆ ಓದಲು, ಆಟವಾಡಲು ಮತ್ತು ಮಕ್ಕಳಿಗಾಗಿ ಹೆಚ್ಚು ಸಮಯವನ್ನು ನೀವು ಹೊಂದಿರುತ್ತೀರಿ. ಅಲ್ಲದೇ ಹಿರಿಯ ಮಗು ತನ್ನಷ್ಟಕ್ಕೆ ತಾನೇ ಆಟವಾಡುವುದು, ಸ್ವಂತ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ, ಎರಡನೇ ಮಗುವಿಗೆ ನೀವು ಹೆಚ್ಚು ಸಮಯವನ್ನು ನೀಡಬಹುದು.

ಒಡಹುಟ್ಟಿದ ಮಕ್ಕಳ ನಡುವೆ ದೈಹಿಕ ಆಕ್ರಮಣಶೀಲತೆಯು ಕಡಿಮೆ ಇರುತ್ತದೆ. ಮೊದಲನೇ ಮಗುವು ಎರಡನೇ ಮಗುವಿನ ಬಗ್ಗೆ ಹೆಚ್ಚು ಕಾಳಜಿ ವಹಿಸಬಹುದು, ಹೆಚ್ಚು ಅಕ್ಕರೆ ಬೆಳೆಸಬಹುದು. ಯಾಕೆಂದರೆ ಅದುವರೆಗೂ ಒಂಟಿಯಾಗಿ ಆಟವಾಡುತ್ತಿದ್ದ ಮಗುವಿಗೆ ಎರಡನೇ ಮಗುವಿನ ಆಗಮನವು ಹೆಚ್ಚು ಸಂತಸವನ್ನು ತರಬಹುದು. ನನ್ನ ಜೊತೆ ಆಟವಾಡಲು ತಮ್ಮನಿದ್ದಾನೆ ಅಥವಾ ತಂಗಿಯಿದ್ದಾನೆ ಎನ್ನುವ ಭಾವನೆ ಮೊದಲ ಮಗುವಿನಲ್ಲಿ ಬೆಳೆದಾಗ ಬಾಂಧವ್ಯವೂ ಗಟ್ಟಿಯಾಗುವುದು. ನೀವೂ ನಿರಾಳವಾಗಿರಬಹುದು.ನಾಲ್ಕು ವರ್ಷಗಳ ಅಂತರದಲ್ಲಿ ನಿಮ್ಮ ಮೊದಲನೇ ಮಗು ಅಷ್ಟಾಗಿ ನಿಮ್ಮ ಗಮನವನ್ನು ಬಯಸದಿರಬಹುದು. ಅದು ಬಿಟ್ಟು ಪುಟ್ಟ ಕಂದನನ್ನು ನೋಡಿಕೊಳ್ಳುವ ಪುಟಾಣಿ ಕೇರ್‌ ಟೇಕರ್‌ ನಿಮ್ಮ ಮೊದಲನೇ ಮಗುವೇ ಆಗಬಹುದು.

ಇನ್ನು ಸಮಸ್ಯೆಗಳ ಬಗ್ಗೆ ಹೇಳುವುದುದಾದರೆ ನಿಮ್ಮ ವಯಸ್ಸು 35ಕ್ಕಿಂತ ಮೇಲ್ಪಟ್ಟಿದ್ದು, ನೀವು ಗರ್ಭಧಾರಣೆಗೆ ಯೋಚಿಸುತ್ತಿದ್ದರೆ ಸ್ವಲ್ಪ ಮಟ್ಟಿಗೆ ಅಪಾಯಗಳ ಸಂಭಾವ್ಯತೆ ಇದ್ದೇ ಇರುತ್ತದೆ. ಮಗುವನ್ನು ನೋಡಿಕೊಳ್ಳುವ ವಿಚಾರದಲ್ಲಿ ನಿಮ್ಮ ಅನುಭವಗಳನ್ನು ನೀವು ಮರೆತಿರಬಹುದು. ಅದಲ್ಲದೇ ಮಕ್ಕಳ ನಡುವೆ ವಯಸ್ಸಿನ ಅಂತರ ಹೆಚ್ಚಾದಂತೆ ಬಾಂಧವ್ಯ ಕಡಿಮೆಯಾಗಬಹುದು. ಯಾಕೆಂದರೆ ಮೊದಲ ಮಗು ಅವರದೇ ವಯಸ್ಸಿನ ಮಗುವಿನೊಂದಿಗೆ ಇರಲು ಇಷ್ಟಪಡಬಹುದು. ಆಟೋಟ ಚಟುವಟಿಕೆಯಲ್ಲಿ ಮೊದಲನೇ ಮಗು ತನ್ನ ತಂಗಿ, ತಮ್ಮನನ್ನು ತನ್ನೊಂದಿಗೆ ಆಟದಲ್ಲಿ ಸೇರಿಸಿಕೊಳ್ಳದಿರಬಹುದು. ಯಾಕೆಂದರೆ ವಯಸ್ಸಿನ ಅಂತರ ಹೆಚ್ಚಾಗಿರುತ್ತದೆ.

ಮಕ್ಕಳ ನಡುವೆ ವಯಸ್ಸಿನ ಅಂತರದ ಆಯ್ಕೆ ನಿಮ್ಮದೇ..

ಮಕ್ಕಳ ನಡುವೆ ವಯಸ್ಸಿನ ಅಂತರದ ಆಯ್ಕೆ ನಿಮ್ಮದೇ..

ಈಗಾಗಲೇ ನೀವು ಒಂದು ಮಗುವಿನ ಪೋಷಕಾರಗಿದ್ದು ಇನ್ನೊಂದು ಮಗು ಪಡೆಯಬೇಕೆಂಬ ಇಚ್ಛೆ ಇದ್ದಲ್ಲಿ ಮೊದಲು ನೀವು ಅದಕ್ಕೆ ಸಿದ್ಧರಿದ್ದೀರಾ ಅಥವಾ ನಿಮ್ಮ ದೇಹ ಎರಡನೇ ಗರ್ಭಧಾರಣೆಗೆ ಸಿದ್ಧವಾಗಿದೆಯೇ ಎನ್ನುವುದನ್ನು ಕಂಡುಕೊಳ್ಳುವುದು ಮುಖ್ಯ. ಯಾಕೆಂದರೆ ಎರಡು ಗರ್ಭಧಾರಣೆಯ 18ತಿಂಗಳ ಅಂತರವಿರುವುದು ತುಂಬಾ ಮುಖ್ಯ.

ಮಾನಸಿಕವಾಗಿಯೂ ನೀವು ಎರಡನೇ ಗರ್ಭಧಾರಣೆಗೆ ಸಿದ್ಧವಾಗುವುದು ಮುಖ್ಯ. ಯಾಕೆಂದರೆ ಮೊದಲನೇ ಮಗುವಿನ ತಾಯ್ತನದಲ್ಲಿ ಅನುಭವಿಸಿದ್ದ ಸಮಸ್ಯೆಗಳು, ಒತ್ತಡ, ನಿದ್ರಾಹೀನತೆಯ ಸಮಸ್ಯೆಗಳು ಮತ್ತೆ ಮರುಕಳಿಸಬಹುದಾದ್ದರಿಂದ, ಮನಸ್ಸಿನ ಮೇಲಿನ ಒತ್ತಡ ತಾಯಿ ಮಗುವಿನ ಮೇಲೆ ಪರಿಣಾಮ ಬೀರುವುದರಿಂದ ಎರಡನೇ ಮಗುವಿನ ಬಗ್ಗೆ ಮುಖ್ಯವಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ.

ಮೊದಲನೇ ಮಗು ಎದೆಹಾಲು ಕುಡಿಯುತ್ತಿರುವ ಸಮಯದಲ್ಲೇ ಮತ್ತೆ ಗರ್ಭವನ್ನು ಧರಿಸುವುದು ನಿಮ್ಮ ದೇಹದಲ್ಲಿ ಪೋಷಕಾಂಶಗಳ ಕೊರತೆಗೆ ಕಾರಣವಾಗಬಹುದು. ಇದು ನಿಮ್ಮ ಹಾಗೂ ನಿಮ್ಮ ಇಬ್ಬರು ಮಕ್ಕಳ ಮೇಲೂ ಹೆಚ್ಚಿನ ಪರಿಣಾಮ ಬೀರುವುದಂತೂ ನಿಜ. ಮೊದಲನೇ ಗರ್ಭಧಾರಣೆ, ಪ್ರಸವದಿಂದ ಚೇತರಿಸಿಕೊಳ್ಳಲು ಹೆಚ್ಚಿನ ಸಮಯ ಬೇಕೇ ಬೇಕು.

ಮಕ್ಕಳ ಮಧ್ಯೆ ಹೆಚ್ಚಿನ ವಯಸ್ಸಿನ ಅಂತರವೂ ಕೂಡಾ ನಿಮ್ಮ ಆರೋಗ್ಯವನ್ನು ಅವಲಂಬಿಸಿರುತ್ತದೆ. ನಿಮ್ಮ ವಯಸ್ಸು 35ಕ್ಕಿಂತ ಹೆಚ್ಚಾಗಿದ್ದಲ್ಲಿ, ಗರ್ಭಧಾರಣೆಯಲ್ಲಿ ಸಮಸ್ಯೆಯನ್ನು ಎದುರಿಸಬಹುದು. ಗರ್ಭಾಶಯದ ಸಾಮರ್ಥ್ಯ ಕಡಿಮೆಯಾಗುವುದರಿಂದ ಅದು ಭ್ರೂಣದ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತದೆ.ಗರ್ಭಪಾತವೂ ಆಗಬಹುದು. ಹಾಗಾಗಿ ಗರ್ಭಧಾರಣೆಯ ಬಗ್ಗೆ ಯೋಜಿಸುವುದಾದರೆ ಆರೋಗ್ಯದ ಅಪಾಯಗಳು ಮತ್ತು ಪ್ರಯೋಜನಗಳ ಬಗ್ಗೆ ಅರಿತುಕೊಳ್ಳುವುದು ಮುಖ್ಯ. ಇನ್ನೊಂದು ಮಗು ಯಾವಾಗ ಮಾಡಬೇಕೆನ್ನುವುದನ್ನು ನಿರ್ಧಾರ ಮಾಡುವವರೆಗೆ ಜನನ ನಿಯಂತ್ರಣ ವಿಧಾನಗಳನ್ನು ಬಳಸಿ.

English summary

Spacing Your Kids: The Pros & Cons of Every Age Gap in Kannada

You must know the pros and cons of age gap between your kids.
X
Desktop Bottom Promotion