For Quick Alerts
ALLOW NOTIFICATIONS  
For Daily Alerts

ಮಗುವಿಗೆ ಗ್ಯಾಸ್‌ ಪ್ರಾಬ್ಲಂ ಆದಾಗ ಹೀಗೆ ಮಾಡಿ

|

ಮೊದಲನೇ ಬಾರಿ ತಾಯಿಯಾದವರಿಗೆ ನವಜಾತ ಶಿಶುವಿನ ಎಲ್ಲಾ ಚಟುವಟಿಕೆಗಳೂ ಹೊಸತು. ಹಾಲುಡಿಸುವುದು ಮಗುವಿನ ಲಾಲನೆ ಪಾಲನೆಯಲ್ಲಿ ಕಳೆದು ಹೋಗುವ ತಾಯಿಯು ಮೊದಲನೇ ಬಾರಿ ಮಗು ಬಿಡದೇ ಅಳಲು ಶುರು ಮಾಡಿದರೆ ಆತಂಕ ಶುರುವಾಗುತ್ತದೆ. ತಟ್ಟಿದರೂ, ತೂಗಿದರೂ,, ಹಾಲುಡಿಸಿದರೂ ಸುಮ್ಮನಿರದೇ ಅಳುವ ಮಗುವನ್ನು ನೋಡಿ ಅಯ್ಯೋ ಏನಾಯ್ತಪ್ಪಾ ಎಂದು ಕಕ್ಕಾಬಿಕ್ಕಿಯಾಗುವ ಅಮ್ಮಂದಿರೇ ನಿಮ್ಮ ಮಗು ಗ್ಯಾಸ್‌ ಪ್ರಾಬ್ಲಂನಿಂದಾಗಿಯೂ ಹೀಗೆ ಅಳಬಹುದು. ಮಗುವಿಗೂ ಗ್ಯಾಸ್‌ ಪ್ರಾಬ್ಲಂ ಆಗುತ್ತಾ, ಇದಕ್ಕೆ ಕಾರಣ ಏನು, ಈ ಸಮಸ್ಯೆಗೆ ಪರಿಹಾರ ಏನು ಎನ್ನುವುದಾದರೆ ಈ ಲೇಖನ ತಪ್ಪದೇ ಓದಿ.

Gassy Problem In baby: Signs And Ways to Help Your Infant Get Relief in Kannada

ಮಗುವಿಗೆ ಗ್ಯಾಸ್‌ ಆಗಿದೆ ಎಂದು ತೋರಿಸುವ ಲಕ್ಷಣಗಳಿವು

ಶಿಶುಗಳಿಗೆ ಗ್ಯಾಸ್ ಸಮಸ್ಯೆ ಸಾಮಾನ್ಯವಾಗಿದೆ ಮತ್ತು ಸಾಮಾನ್ಯವಾಗಿ ಅವರು ಅದನ್ನು ಬರ್ಪ್ ಅಥವಾ ಫಾರ್ಟ್ ಮೂಲಕ ಹೊರಗೆ ಬಿಡುತ್ತಾರೆ. ಆದರೆ ಕೆಲವೊಮ್ಮೆ, ಅವು ಸಾಧ್ಯವಾಗದೇ ಇದ್ದಾಗ ಹೊಟ್ಟೆಯಲ್ಲಿನ ಕಿರಿಕಿರಿಯಿಂದಾಗಿ ಮಗು ಅಳಲು ಪ್ರಾರಂಭಿಸುತ್ತದೆ. ಕೆಲವೊಂದು ಲಕ್ಷಣಗಳ ಮೂಲಕ ಮಗುವಿಗೆ ಗ್ಯಾಸ್‌ ಆಗಿದೆ ಎಂದು ಗುರುತಿಸಬಹುದು.

* ಅತಿಯಾಗಿ ಅಳುವುದು, ಒಂದು ಗಂಟೆಗೂ ಹೆಚ್ಚು ಕಾಲ ಮಗು ಕಿರಿಕಿರಿ ಮಾಡುವುದು, ಅಳುವುದು
* ನೋವಿನಿಂದ ಗುನುಗುವುದು ಮತ್ತು ನೋವಿನಿಂದಾಗಿ ಮುಖ ಮುಚ್ಚಿಕೊಳ್ಳುವುದು
* ಪದೇ ಪದೇ ಉಗುಳುವುದು
* ಉಬ್ಬಿದ ಹೊಟ್ಟೆ ಅಥವಾ ಗ್ಯಾಸ್‌ನಿಂದಾಗಿ ತುಂಬಿದ ಹೊಟ್ಟೆ
* ಮಗು ಹೊಟ್ಟೆಯ ವಿರುದ್ಧ ಕಾಲುಗಳನ್ನು ಮೇಲೆ ಎಳೆಯುವುದು ಮತ್ತು ನೋವಿನಿಂದ ಅಳುವುದು
* ಕಡಿಮೆ ಹಾಲುಕುಡಿಯುವುದು ಅಥವಾ ಹಾಲು ಕುಡಿಯಲು ನಿರಾಕರಿಸುವುದು
* ನಿದ್ದೆಯಲ್ಲಿ ಎದ್ದು ಅಳುವುದು ಅಥವಾ ನಿದ್ದೆ ಮಾಡದೇ ಅಳುವುದು

ಮಗುವಿಗೆ ಗ್ಯಾಸ್‌ ಆಗಲು ಕಾರಣಗಳು

ನಿಮ್ಮ ಮಗುವಿಗೆ ಗ್ಯಾಸ್ ಆಗಲು ಹಲವಾರು ಅಂಶಗಳಿವೆ.

1. ಅಭಿವೃದ್ಧಿಗೊಳ್ಳುತ್ತಿರುವ ಜೀರ್ಣಾಂಗ ವ್ಯವಸ್ಥೆ

ಮಗುವಿನ ಜೀರ್ಣಾಂಗ ವ್ಯವಸ್ಥೆಯು ದೀರ್ಘಕಾಲದವರೆಗೆ ಅಭಿವೃದ್ಧಿಗೊಳ್ಳುತ್ತದೆ. ಇನ್ನೂ ಅಪಕ್ವವಾದ ಅಥವಾ ಅಭಿವೃದ್ಧಿ ಹೊಂದುತ್ತಿರುವ ಕರುಳುಗಳು ಸಂಪೂರ್ಣ ಜೀರ್ಣವಾಗದೇ ಇರುವ ಆಹಾರವು ಚಲಿಸಲು ಅನುಮತಿಸುತ್ತದೆ ಮತ್ತು ಇದು ಹೆಚ್ಚು ಅನಿಲ ಶೇಖರಣೆಗೆ ಕಾರಣವಾಗುತ್ತದೆ.

2. ಹಾಲನ್ನು ಸರಿಯಾದ ವಿಧಾನದಲ್ಲಿ ಚೀಪದೇ ಇರುವುದು

ಮಗುವಿಗೆ ಲಾಚಿಂಗ್ ತುಂಬಾ ಮುಖ್ಯವಾಗಿದೆ ಏಕೆಂದರೆ ಇದು ನವಜಾತ ಶಿಶುವಿಗೆ ಆರೋಗ್ಯಕರವಾಗಿ ಬೆಳೆಯಲು ಸಾಕಷ್ಟು ಹಾಲು ಪಡೆಯಲು ಸಹಾಯ ಮಾಡುತ್ತದೆ. ಲಾಚಿಂಗ್‌ ಸರಿಯಿರದೇ ಇದ್ದಾಗ ಮಗು ಹೆಚ್ಚು ಗಾಳಿಯನ್ನು ನುಂಗುತ್ತದೆ. ಇದು ಗ್ಯಾಸ್‌ ಸಮಸ್ಯೆಗೆ ಕಾರಣವಾಗುತ್ತದೆ.

3. ಹಾಲುಣಿಸುವ ಸಮಯದಲ್ಲಿ ಸರಿಯಾಗಿ ಮಲಗಿಸದೇ ಇರುವುದು

ಹಾಲುಣಿಸಲೂ ಕೂಡಾ ನಿರ್ದಿಷ್ಟ ಸ್ಥಾನಗಳಿವೆ ಮತ್ತು ಅದನ್ನು ಸರಿಯಾಗಿ ಮಾಡದಿದ್ದರೆ, ನಿಮ್ಮ ಮಗುವಿಗೆ ಗ್ಯಾಸ್ ಸಮಸ್ಯೆ ಬರಬಹುದು. ಯಾವಾಗಲೂ ಮಗುವಿಗೆ ಹಾಲುಣಿಸುವಾಗ ಮಗುವಿನ ತಲೆಯನ್ನು ಹೊಟ್ಟೆಗಿಂತ ಎತ್ತರದಲ್ಲಿ ಇಡಬೇಕು.

4. ಬಾಟಲ್ ಫೀಡಿಂಗ್

ನೀವು ಫೀಡಿಂಗ್‌ ಬಾಟಲ್‌ನಲ್ಲಿ ಮಗುವಿಗೆ ಹಾಲು ನೀಡುತ್ತಿದ್ದರೆ,ಗಾಳಿಯನ್ನು ಅತಿಯಾಗಿ ನುಂಗುವ ಸಾಧ್ಯತೆಗಳಿವೆ.

5. ಫಾರ್ಮುಲಾ ಫೀಡಿಂಗ್

ಕೆಲವು ತಾಯಂದಿರು ಎದೆಹಾಲಿನ ಕೊರತೆ ಇದ್ದಾಗ ಫಾರ್ಮುಲಾ ಹಾಲು ಕೊಡುತ್ತಾರೆ.ಆದರೆ ಅತಿಯಾದ ಲ್ಯಾಕ್ಟೋಸ್ ಮಗುವಿನಲ್ಲಿ ಗ್ಯಾಸ್‌ಗೆ ಕಾರಣವಾಗಬಹುದು.

6 ವಿಪರೀತ ಅಳುವುದು

ಮಕ್ಕಳು ಅಳುವಾಗ ಗಾಳಿಯನ್ನು ನುಂಗುತ್ತಾರೆ. ಇದು ಅವರಿಗೆ ಗ್ಯಾಸ್‌ ಉಂಟುಮಾಡುತ್ತದೆ. ಹಸಿವಿಗಾಗಿ ಮಗು ಅಳುವಾಗ, ಅಥವಾ ನ್ಯಾಪಿ ಒದ್ದೆಯಾಗಿ ಮಗು ಅಳುವಾಗ ಆಗಲಿ ತಕ್ಷಣವೇ ಮಗುವಿನ ಅಗತ್ಯತೆಗಳಿಗೆ ಗಮನ ಕೊಡಿ. ಮಗುವನ್ನು ಸುಮ್ಮನೇ ಅಳುವುದಕ್ಕೆ ಬಿಟ್ಟರೆ ಅಳುವಾಗ ಹೆಚ್ಚಿನ ಗಾಳಿಯನ್ನೂ ನುಂಗಿ ಹೊಟ್ಟೆಯಲ್ಲಿ ಅನಿಲ ಶೇಕರಣೆಯಾಗಲು ಕಾರಣವಾಗುತ್ತದೆ. ಇದರಿಂದಾಗಿ ಮಗು ಇನ್ನಷ್ಟು ಹೆಚ್ಚು ಅಳಬಹುದು.

7 ಸಣ್ಣ ಜೀರ್ಣಕಾರಿ ತೊಂದರೆಗಳು

ಶಿಶುಗಳು ಮಲಬದ್ಧತೆಯಾದಾಗ ಗ್ಯಾಸ್ ಉಂಟಾಗಬಹುದು. ಅಲ್ಲದೇ ವಾಂತಿ, ಅತಿಸಾರ, ಮಗುವಿಗೆ ಎದೆಹಾಲು ಹೊರತುಪಡಿಸಿ ಇತರ ಆಹಾರಗಳನ್ನು ನೀಡಲು ಆರಂಭಿಸಿದರೆ ಆ ಆಹಾರದಿಂಲೂ ಗ್ಯಾಸ್‌ ಆಗಬಹುದು.

ಮಗುವಿಗೆ ಗ್ಯಾಸ್‌ ಸಮಸ್ಯೆ ಆಗದಿರಲು ಹೀಗೆ ಮಾಡಿ

ಮಗು ಹಸಿವಿನಿಂದ ದೀರ್ಘಕಾಲ ಅಳುವ ಮೊದಲೇ ಆಹಾರ ನೀಡಿ

ಹಾಲುಣಿಸುವ ಮೊದಲು ಮಗು ತುಂಬಾ ಅಳುತ್ತಿದ್ದರೆ, ಅದು ಚಿಕ್ಕ ಮಗುವಿನಲ್ಲಿ ಗ್ಯಾಸ್‌ ಉಂಟು ಮಾಡಬಹುದು. ಮಗುವಿನ ಆಹಾರದ ದಿನಚರಿಯನ್ನು ನೋಡಿಕೊಳ್ಳಿ. ಮಗುವಿಗೆ ಹಸಿವೆಯಾಗಿ ಅಳುವ ಮುನ್ನವೇ ಆಹಾರ ನೀಡಿ.

ಹಾಲುಣಿಸುವ ಸ್ಥಾನವನ್ನು ನೋಡಿಕೊಳ್ಳಿ

ಸ್ತನ್ಯಪಾನ ಮಾಡುವಾಗ ನಿಮ್ಮ ಮಗುವನ್ನು ಸರಿಯಾದ ರೀತಿಯಲ್ಲಿ ಹಿಡಿದುಕೊಳ್ಳಿ ಮತ್ತು ಲಾಚಿಂಗ್‌ನತ್ತ ಗಮನಹರಿಸಿ. ಇದು ಮಗುವಿಗೆ ಗ್ಯಾಸ್‌ ಆಗದಂತೆ ತಡೆಯುತ್ತದೆ.

ಮಗುವಿಗೆ ತೇಗು ಬರಿಸುವುದು

ಮಗುವಿಗೆ ಹಾಲು ನೀಡುವ ಮಧ್ಯದಲ್ಲಿ, ಹಾಲುಣಿಸಿದ ನಂತರ ಮಗುವನ್ನು ಭುಜದಲ್ಲಿ ಮಲಗಿಸಿಕೊಂಡು ನಿಧಾನವಾಗಿ ಬೆನ್ನನ್ನು ತಟ್ಟುವ ಮೂಲಕ ತೇಗು ಬರಿಸಿ. ಇಲ್ಲವಾದರೆ ಮಗುವಿಗೆ ಹಾಲುಣಿಸಿದ ನಂತರ ಭುಜದ ಮೇಲೆ ಮಲಗಿಸಿಕೊಂಡು ಸ್ವಲ್ಪ ಓಡಾಡಿ.

ಫೀಡಿಂಗ್‌ ಬಾಟಲ್‌ ಪರೀಕ್ಷಿಸಿ

ಬಾಟಲಿಯ ತೊಟ್ಟು ಹಾಲಿನಿಂದ ತುಂಬಿರಬೇಕು ಮತ್ತು ಗಾಳಿಯಿದೆಯೇ ಎನ್ನುವುದನ್ನು ನೋಡಿ. ಬಾಟಲಿಯ ತೊಟ್ಟುಗಳನ್ನು ಹೀರುವಾಗ ಬಾಟಲಿಯು ನೇರವಾಗಿರುವಂತೆ ನೋಡಿಕೊಳ್ಳಿ. ಬಾಟಲಿಯ ತೊಟ್ಟು ಅದು ತುಂಬಾ ದೊಡ್ಡದಾಗಿ ಅಥವಾ ತುಂಬಾ ಚಿಕ್ಕದಾಗಿರಬಾರದು. ನೀವು ಮಕ್ಕಳಿಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಿದ ಆಂಟಿ-ಗ್ಯಾಸ್ ಬಾಟಲಿಗಳು ಮತ್ತು ಮೊಲೆತೊಟ್ಟುಗಳನ್ನು ಬಳಸಬಹುದು.

ಬೈಸಿಕಲ್ ವ್ಯಾಯಾಮ

ನಿಮ್ಮ ಮಗುವಿನ ಕಾಲುಗಳನ್ನು ಹಿಡಿದುಕೊಳ್ಳಿ ಮತ್ತು ಪೆಡ್ಲಿಂಗ್ ಮಾಡುವ ರೀತಿಯಲ್ಲಿ ಕಾಲುಗಳನ್ನು ಮೇಲೆ ಕೆಳಗೆ ಮಾಡಿಸಿ.

ಟಮ್ಮಿ ಟೈಮ್‌

ಟಮ್ಮಿ ಟೈಮ್‌ ಅಂದರೆ ಮಗುವನ್ನು ಅದರ ಹೊಟ್ಟೆಯ ಮೇಲೆ ಮಲಗಿಸುವುದು. ಬೆನ್ನಿನ ಮೇಲೆ ನಿಧಾನವಾಗಿ ಮಸಾಜ್ ಮಾಡಿ. ಹಾಲುಣಿಸಿದ ಇಪ್ಪತ್ತರಿಂದ ಮೂವತ್ತು ನಿಮಿಷಗಳ ನಂತರ ತೇಗು ಬರಿಸಿ ಬೋರಲು ಮಲಗಿಸಿ. ಮಗುವನ್ನು ಹೊಟ್ಟೆಯ ಮೇಲೆ ತೆವಳಲು ಬಿಡುವುದು ಹೊಟ್ಟೆಯಲ್ಲಿ ಸೇರಿರುವ ವಾಯುವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅಲ್ಲದೇ ಮಗುವನ್ನು ಮಲಗಿಸಿ ತಲೆಯನ್ನು ಸ್ವಲ್ಪ ಹೊಟ್ಟೆಗೆ ನೇರವಾಗಿ ಮೇಲಕ್ಕೆತ್ತಬೇಕು.

ಕಾರ್‌ನಲ್ಲಿ ಸುತ್ತಾಡಿಸಿ

ಮಗು ಕಾರಿನಲ್ಲಿ ಸುತ್ತಾಡಲು ಇಷ್ಟಪಟ್ಟರೆ ಕರೆದುಕೊಂಡು ಹೋಗಿ. ಮೆಲುವಾಗಿ ಕಾರ್‌ ರಾಕಿಂಗ್‌ ನೋವನ್ನು ಕಡಿಮೆ ಮಾಡುತ್ತದೆ ಮತ್ತು ಮಗುವನ್ನು ಶಾಂತಗೊಳಿಸುತ್ತದೆ.

ಸ್ವಾಡಲ್‌ ಮಾಡಿ

ನವಜಾತ ಶಿಶುಗಳನ್ನು ಮೃದುವಾದ ಹತ್ತಿಯ ಬಟ್ಟೆಯಲ್ಲಿ ಕಟ್ಟುವುದನ್ನು ನೀವು ನೋಡಿರಬಹುದು. ಇದು ಕೂಡಾ ಗ್ಯಾಸ್‌ ರಿಲೀಸ್‌ ಮಾಡಲು ಸಹಾಯ ಮಾಡುತ್ತದೆ. ಇದು ಕೆಲವು ಮಕ್ಕಳಿಗೆ ಉಪಯೋಗವಾಗದಿರಬಹುದು.

ಹೊಟ್ಟೆಯ ಮೇಲೆ ಮಸಾಜ್‌

ಮಗುವಿನ ಹೊಟ್ಟೆಯನ್ನು ಮೃದುವಾಗಿ ಉಜ್ಜುವುದು ಗ್ಯಾಸ್‌ ರಿಲೀಸ್‌ ಮಾಡಲು ಸಹಕಾರಿ. ನೀವು ಮಗುವಿನ ಹೊಟ್ಟೆಯ ಮೇಲೆ ಪ್ರದಕ್ಷಿಣಾಕಾರವಾಗಿ ಹಾಗೂ ಅಪ್ರದಕ್ಷಿಣಾಕಾರವಾಗಿ ಮೃದುವಾಗಿ ಒತ್ತುತ್ತಾ ಮಸಾಜ್‌ ಮಾಡಿ. ಈ ಒತ್ತಡವು ಮಗುವಿನ ಹೊಟ್ಟೆಯಲ್ಲಿ ಶೇಖರಣೆಯಾಗಿರುವ ಗ್ಯಾಸ್‌ ಕಡಿಮೆಯಾಗಲು ಸಹಕರಿಸುತ್ತದೆ.

ಗ್ಯಾಸ್‌ ಡ್ರಾಪ್‌ಗಳನ್ನು ನೀಡಿ

ದ್ರವದ ಹನಿಗಳು ಗ್ಯಾಸ್‌ ಹಾದುಹೋಗಲು ಸಹಾಯ ಮಾಡುತ್ತದೆ, ಆದರೆ ನಿಮ್ಮ ಮಗುವಿಗೆ ಸಿಮೆಥಿಕೋನ್ ಹನಿಗಳನ್ನು ನೀಡುವ ಮೊದಲು ಡೋಸ್ ಮತ್ತು ನೀಡುವ ಅವಧಿಗಾಗಿ ನಿಮ್ಮ ಮಕ್ಕಳ ವೈದ್ಯರನ್ನು ಸಂಪರ್ಕಿಸಿ.

ಕೆಲವು ಪ್ರೋಬಯಾಟಿಕ್ಗಳನ್ನು ನೀಡಿ

ಲ್ಯಾಕ್ಟೋಬಾಸಿಲಸ್ ರಿಯುಟೆರಿಯಂತಹ ಪ್ರೋಬಯಾಟಿಕ್‌ಗಳು ಉತ್ತಮ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುವ ಮೂಲಕ ಗ್ಯಾಸ್‌ ಸಮಸ್ಯೆ ಕಡಿಮೆ ಮಾಡುತ್ತದೆ

ಫಾರ್ಮುಲಾ ಫೀಡಿಂಗ್ ಕಡಿಮೆ ಮಾಡುತ್ತಾ ಬನ್ನಿ

ನಿಮ್ಮ ಮಗುವಿಗೆ ಲ್ಯಾಕ್ಟೋಸ್ ಅಥವಾ ಪ್ರೋಟೀನ್ ಹೈಡ್ರೊಲೈಸೇಟ್ ಕಡಿಮೆ ಕೊಡಲು ಪ್ರಯತ್ನಿಸಿ, ಆದರೆ ಮಕ್ಕಳ ವೈದ್ಯರೊಂದಿಗೆ ಸಮಾಲೋಚಿಸಿದ ನಂತರವೇ ಮಾಡಿ.

ಮಗುವಿಗೆ ಗ್ಯಾಸ್‌ ಆಗಿ ಅಳು ನಿಲ್ಲಿಸದಿದ್ದರೆ ಅವರ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸಿ. ಅವರಿಗಿಷ್ಟವಾದ ಹಾಡು ಹಾಡುವುದು, ಆಟಿಕೆಗಳನ್ನು ನೀಡುವುದು ಅಥವಾ ಅವರೊಂದಿಗೆ ಮಾತನಾಡಿ. ಜೊತೆಗೆ ಟಮ್ಮಿ ಟೈಮ್‌ ಮಗುವಿಗೆ ಕಿರಿಕಿರಿಯುಂಟು ಮಾಡುತ್ತಿರುವ ಗ್ಯಾಸ್‌ ನಿವಾರಣೆಗೆ ಸಹಾಯ ಮಾಡಬಹುದು.

English summary

Gassy Problem In baby: Signs And Ways to Help Your Infant Get Relief in Kannada

Gassy Problem In baby:How to help your infant get relief read on...
Story first published: Saturday, January 21, 2023, 19:00 [IST]
X
Desktop Bottom Promotion