ಆಯುಧ ಪೂಜೆಯನ್ನು ನೀವು ಹೇಗೆ ಮಾಡಬೇಕು? ವಿವರಣೆ ಇಲ್ಲಿದೆ ನೋಡಿ

Posted By:
Subscribe to Boldsky

ಮಹಾ ನವರಾತ್ರಿ ಎನ್ನುವುದು ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದು. ಒಂಭತ್ತು ದಿನಗಳ ಕಾಲ ಆಚರಿಸುವ ಈ ಹಬ್ಬದ ಒಂದೊಂದು ದಿನವೂ ವಿಶೇಷ ಪೂಜೆಯನ್ನು ಕೈಗೊಳ್ಳಲಾಗುತ್ತದೆ. ಒಂದು ದಿನ ಸರಸ್ವತಿ ಪೂಜೆ, ಒಂದುದಿನ ಆಯುಧ ಪೂಜೆ ಹೀಗೆ ವಿಭಿನ್ನ ದಿನಗಳಾಗಿ ಆಚರಿಸುತ್ತಾರೆ. ಅದರಲ್ಲಿ ಆಯುಧ ಪೂಜೆಯ ದಿನವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುವುದು. ಮನೆಯಲ್ಲಿರುವ ಪ್ರಮುಖ ವಸ್ತುಗಳನ್ನು ಹಾಗೂ ವಾಹನಗಳನ್ನು ಪೂಜಿಸಲಾಗುತ್ತದೆ.

ಸಾಮಾನ್ಯವಾಗಿ ನವರಾತ್ರಿಯೆಂದರೆ ದುರ್ಗಾ ಪೂಜೆಯ ಹಬ್ಬ, ಹಲವು ಬಗೆಯ ತಿಂಡಿಗಳನ್ನು ತಯಾರಿಸುತ್ತಾರೆ, ಮುತ್ತೈದೆಯರಿಗೆ ಹೂವು-ಹಣ್ಣು ಕೊಡುತ್ತಾರೆ ಎನ್ನುವುದನ್ನು ನಾವೆಲ್ಲರೂ ಸಾಮಾನ್ಯವಾಗಿ ತಿಳಿದಿದ್ದೇವೆ. ಆದರೆ ಇದರ ದಂತಕಥೆ, ಆಚಾರ, ನಿಯಮ ಸೇರಿದಂತೆ ಅನೇಕ ವಿಚಾರಗಳು ಅಷ್ಟಾಗಿ ತಿಳಿದಿಲ್ಲ. ಈ ಹಬ್ಬದ ಕುರಿತು ಇನ್ನಷ್ಟು ವಿಶೇಷ ಮಾಹಿತಿಗಳ ಪರಿಚಯವನ್ನು ನಾವಿಲ್ಲಿ ನೀಡಿದ್ದೇವೆ. 

Performing Ayudha Pooja

ದಂತಕಥೆ

ಆಯುಧ ಪೂಜೆಗೆ ಸಂಬಂಧಿಸಿದಂತೆ ಅನೇಕ ದಂತಕಥೆಗಳಿವೆ. ದುರ್ಗಾ ದೇವಿಯು ಚಾಮುಂಡೇಶ್ವರಿಯ ರೂಪ ತಾಳಿ ಮಹಿಷಾಸುರನನ್ನು ಸಂಹರಿಸಿದಳು. ಆ ಸಂದರ್ಭದಲ್ಲಿ ದೇವಿ ಉಪಯೋಗಿಸಿದ ಆಯುಧಗಳನ್ನು ಮತ್ತೆ ಬಳಸದೆ ಬಿಸಾಡಿದಳು. ಆ ಆಯುಧಗಳನ್ನು ನಂತರ ಪೂಜಿಸಲಾಯಿತು ಎನ್ನುವ ದಂತ ಕಥೆಯಿದೆ. ಹಾಗಾಗಿಯೇ ನವರಾತ್ರಿಯ ನವಮಿಯ ದಿನ ಆಯುಧ ಪೂಜೆಯನ್ನು ಆಚರಿಸಲಾಗುತ್ತದೆ. ಮಹಾಭಾರತದಲ್ಲೂ ಆಯುಧ ಪೂಜೆಯ ಕುರಿತು ಕೆಲವು ಉಲ್ಲೇಖಗಳಿವೆ. ಪಾಂಡವರು ಅಜ್ಞಾತ ವಾಸದಲ್ಲಿರುವಾಗ ತಮ್ಮ ಆಯುಧಗಳನ್ನು ಮರಗಳ ಒಳಗೆ ಮರೆಮಾಚಿ ಇಟ್ಟಿದ್ದರು. ನಂತರ ಅಜ್ಞಾತ ವಾಸ ಮುಗಿದ ನಂತರ ಆಯುಧಗಳನ್ನು ಹೊರ ತೆಗೆದು ಆಯುಧ ಪೂಜೆಯ ದಿನ ಪೂಜಿಸಿದರು. ಹಾಗಾಗಿಯೇ ಕುರುಕ್ಷೇತ್ರ ಯುದ್ಧದಲ್ಲಿ ವಿಜಯಶಾಲಿಗಳಾದರು ಎನ್ನಲಾಗುತ್ತದೆ.

Performing Ayudha Pooja

ಇಂದಿನ ದಿನ

ಆ ಕಾಲದಲ್ಲಿ ಅಸುರರು ಹಾಗೂ ದುಷ್ಟರ ಜೊತೆ ಹೋರಾಡಲು ಯುದ್ಧ ಮಾಡಬೇಕಾಗಿತ್ತು. ಅದಕ್ಕಾಗಿ ಅಸ್ತ್ರಗಳು ಹಾಗೂ ಶಸ್ತ್ರಾಸ್ತ್ರಗಳನ್ನು ಉಪಯೋಗಿಸುತ್ತಿದ್ದರು. ಆದರೆ ಈಗ ನಮ್ಮ ಜೀವನದಲ್ಲಿ ನಾವು ವಿಭಿನ್ನ ಸಮಸ್ಯೆಗಳ ವಿರುದ್ಧ ಹೋರಾಡುತ್ತಿರುತ್ತೇವೆ. ಅದಕ್ಕೆ ಯಾವುದೇ ಅಸ್ತ್ರಗಳ ಅಗತ್ಯವಿರುವುದಿಲ್ಲ. ಅದಕ್ಕೆ ನಮ್ಮ ಬುದ್ಧಿ, ಸೌಮ್ಯ ಸ್ವಭಾವ ಹಾಗೂ ನೀತಿಯುತವಾದ ನಡವಳಿಕೆ ಅಗತ್ಯವಾಗಿರುತ್ತದೆ. ಹಾಗಾಗಿಯೇ ನಾವು ಶ್ರದ್ಧಾ ಭಕ್ತಿಯಿಂದ ದೇವರನ್ನು ನೆನೆಯಬೇಕು ಮತ್ತು ಪೂಜಿಸಬೇಕು. ಅವು ಹೇಗಿರ ಬೇಕು? ಅದಕ್ಕೆ ಅಗತ್ಯತೆಗಳು ಏನೇನು ಎನ್ನುವುದನ್ನು ಈಕೆಳಗಿರುವುದನ್ನು ಓದಿ ತಿಳಿಯಿರಿ....

ಪೂಜೆ ಮಾಡುವ ಮೊದಲು

1. ಮೊದಲು ನೀವು ಪೂಜೆ ಮಾಡುವ ಜಾಗವನ್ನು ಆಯ್ದುಕೊಳ್ಳಿ. ನಂತರ ಆಯುಧಗಳನ್ನು ಇಡಿ. ಅವುಗಳನ್ನು ಅಲ್ಲಿ ಪದೇ ಪದೇ ತೆಗೆದು ಜಾಗ ಬದಲಿಸಬಾರದು.

2. ನೀವು ಪೂಜೆ ಮಾಡಬೇಕಾದ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಅದು ದಿನನಿತ್ಯದ ಬಳಕೆಯ ವಸ್ತುವೂ ಆಗಿರಬಹುದು. ಸಂಗೀತಗಾರ ತನ್ನ ಸಂಗೀತ ವಾದ್ಯಗಳನ್ನು, ವಿದ್ಯಾರ್ಥಿಗಳು ತಮ್ಮ ಪಟ್ಟಿ-ಪುಸ್ತಕ ಮತ್ತು ಲೇಖನಿಯನ್ನು ಹೀಗೆ ನಿಮಗೆ ಅನುಕೂಲ ತಂದುಕೊಡುತ್ತಿರುವ ವಸ್ತುಗಳನ್ನು ಪೂಜಿಸಬಹುದು.

3. ಪೂಜೆಗೆ ಆಯ್ಕೆ ಮಾಡಿಕೊಂಡ ವಸ್ತುಗಳನ್ನು ಪೂಜಿಸುವ ಮೊದಲು ಸ್ವಚ್ಛಗೊಳಿಸಿ ಇಡಲು ಮರೆಯಬಾರದು.

Performing Ayudha Pooja

ಪೂಜೆಗೆ ಬೇಕಾಗುವ ವಸ್ತುಗಳು

1. ಅರಿಶಿನ

2. ಸಿಂಧೂರ ಅಥವಾ ಕುಂಕುಮ

3. ಅಡಿಕೆ

4. ವೀಳ್ಯದೆಲೆ

5. ಮಂಡಕ್ಕಿ/ಚುರುಮುರಿ

6. ಬಿಳಿ ಕುಂಬಳಕಾಯಿ ಅಥವಾ ನಿಂಬೆ ಹಣ್ಣು

7. ಬಾಳೆ ಹಣ್ಣು

8. ಹಣ್ಣುಗಳು

9. ಕಬ್ಬುಗಳ ತುಂಡು

10. ಪುಡಿಮಾಡಿದ ಬೆಲ್ಲ

11. ತೆಂಗಿನಕಾಯಿ (ತುಂಡರಿಸಿದ ತೆಂಗಿನಕಾಯಿ+ ಒಂದು ಇಡೀ ತೆಂಗಿನಕಾಯಿ)

12. ಬಾಳೆ ಎಲೆ

13. ಅಗರಬತ್ತಿ

14. ಕರ್ಪೂರ

15. ನೈವೇದ್ಯದ ತಿನಿಸುಗಳು

ಪೂಜಾ ವಿಧಾನ:

1. ಅರಿಶಿನ ಕುಂಕುಮ ಅಥವಾ ಸಿಂಧೂರದ ಬಟ್ಟು/ಚುಕ್ಕೆಯನ್ನು ಪೂಜೆಗೆ ಇಟ್ಟ ಆಯುಧಗಳಿಗೆ ಹಚ್ಚಬೇಕು. ಪುಸ್ತಕ ಪಟ್ಟಿ ಆಗಿದ್ದರೆ ತೊಂದರೆ ಆಗದ ಜಾಗದಲ್ಲಿ ಇಡಬೇಕು.

2. ಬಾಳೆಯ ಗಿಡವನ್ನು ನೀವು ಪೂಜೆ ಮಾಡುವ ಆಯುಧಕ್ಕೆ ಅಥವಾ ವಾಹನಕ್ಕೆ ಕಟ್ಟಬಹುದು. ಅದು ನಿಮ್ಮ ಆಯ್ಕೆಗೆ ಬಿಟ್ಟಿರುವುದು.

3. ಪೂಜೆಗೆ ಇಟ್ಟ ಆಯುಧಗಳಿಗೆ ಹೂವನ್ನು ಏರಿಸಿ/ಹಾಕಿ.

4. ಬಾಳೆ ಎಲೆಯಲ್ಲಿ ವೀಳ್ಯದೆಲೆ, ಅಡಿಕೆ, ಬಾಳೆ ಹಣ್ಣು, ಕಬ್ಬಿನ ತುಂಡು ಹಾಗೂ ಇತರ ಹಣ್ಣುಗಳನ್ನು ಹಾಕಿ ಇಡಿ.

5. ಮಂಡಕ್ಕಿ/ಚುರುಮುರಿ ಮತ್ತು ಬೆಲ್ಲದ ಚೂರನ್ನು ಮಿಶ್ರಗೊಳಿಸಿ ಬಾಳೆ ಎಲೆಯ ಮೇಲೆ ಇಡಿ.

6. ಒಂದು ತೆಂಗಿನಕಾಯಿಯನ್ನು ಒಡೆದು ಆ ಬಾಳೆ ಎಲೆಯಮೇಲೆ ಇಡಬೇಕು.

7. ಅಗರಬತ್ತಿ ಮತ್ತು ಕರ್ಪೂರವನ್ನು ಬೆಳಗಿಸಿ ಆರತಿ ಮಾಡಿ.

8. ಕುಂಬಳಕಾಯಿ ಅಥವಾ ನಿಂಬೆ ಹಣ್ಣನ್ನು ಕೆಟ್ಟ ದೃಷ್ಟಿ ಬೀಳದಂತೆ, ದೃಷ್ಟಿ ಬಟ್ಟಿನ ರೂಪದಲ್ಲಿ ಬಳಸಲಾಗುವುದು.

9. ಹಣ್ಣು, ವೀಳ್ಯದೆಲೆ ಹಾಗೂ ನೈವೇದ್ಯಗಳನ್ನು ಸ್ನೇಹಿತರಿಗೆ ಹಾಗೂ ಕುಟುಂಬದವರಿಗೆ ನೀಡಿ.

10. ಪೂಜೆಗೆ ಇಟ್ಟ ಆಯುಧ ಅಥವಾ ವಸ್ತುಗಳನ್ನು ತೆಗೆಯಬಹುದು ಅಥವಾ ವಿಜಯ ದಶಮಿಯ ದಿನ ಬಳಸಬಹುದು.

English summary

Method Of Performing Ayudha Pooja

Maha Navaratri is popular all over India in its various forms. But in the South Indian states of Karnataka, Andhra Pradesh, Tamilnadu and Kerala, it is celebrated as Ayudha Pooja. Ayudha Pooja is also known as Shastra Pooja and Astra Pooja. In Kerala, it is celebrated as Saraswati Pooja to honour the Goddess of learning.
Story first published: Tuesday, September 12, 2017, 23:31 [IST]
Subscribe Newsletter