For Quick Alerts
ALLOW NOTIFICATIONS  
For Daily Alerts

ಹಾಸಿಗೆಯಿಂದ ತಿಗಣೆಗಳನ್ನು ಹೊಡೆದೋಡಿಸಲು ಫಲಪ್ರದ ಸಲಹೆ

By Super
|

ಸಾಮಾನ್ಯವಾಗಿ ಪ್ರತಿ ಮನೆಯಲ್ಲಿಯೂ ತಿಗಣೆಗಳ ಕಾಟ ಇದ್ದೇ ಇರುತ್ತದೆ. ಸುಲಭವಾಗಿ ಕಣ್ಣಿಗೆ ಬೀಳದ ಇವು ನಿದ್ದ ಬಂದ ಬಳಿಕ ಯಾವುದೋ ಮಾಯದಲ್ಲಿ ನಮ್ಮ ಹಾಸಿಗೆ, ಹೊದಿಕೆಗಳ ಒಳನುಗ್ಗಿ ಕಚ್ಚಿ ರಕ್ತಕುಡಿದು ಪರಾರಿಯಾಗುತ್ತವೆ. ಬರೇ ರಕ್ತ ಕುಡಿದು ಪರಾರಿಯಾದರೆ ಅಷ್ಟೊಂದು ದುಃಖವಾಗುತ್ತಿರಲಿಲ್ಲ, ಆದರೆ ಪರಾರಿಯಾದ ಬಳಿಕ ಕಚ್ಚಿದ ಜಾಗದಲ್ಲಿ ಭಯಂಕರ ಉರಿ ತರಿಸಿ ನಿದ್ದೆಯನ್ನು ಹಾಳುಮಾಡಿಬಿಡುತ್ತದೆ. ವಿಶ್ವವ್ಯಾಪಿಯಾದ ಈ ತಿಗಣೆಗಳ ಕಾಟದಿಂದ ಪಾರಾಗಲು ಜನರು ಪ್ರತಿದಿನ ಪ್ರಯತ್ನಪಡುತ್ತಾರೆ.

ಉರಿಯುತ್ತಿರುವ ಚರ್ಮವನ್ನು ಉಜ್ಜಿಕೊಳ್ಳುತ್ತಾ ನಿದ್ದೆಯಿಂದೆದ್ದು ಹಾಸಿಗೆ ಹೊದೆಕೆಯನ್ನೆಲ್ಲಾ ಕೊಸರಾಡಿ ಕಣ್ಣಿಗೆ ಕಂಡಷ್ಟು ತಿಗಣೆಗಳನ್ನೆಲ್ಲಾ ಹೊಸಕಿ ಹಾಕಿ, ಇನ್ನು ನಿರಾಳವಾಗಿ ನಿದ್ದೆ ಮಾಡಬಹುದೆಂದು ಪವಡಿಸಿದ ಬಳಿಕ ಇನ್ನೆಲ್ಲಿಂದಲೋ ಬಂದ ಬೇರೆ ತಿಗಣೆಗಳು ಈಗ ತಾನೇ ಹತ್ತಿದ ನಿದ್ದೆಯನ್ನು ಮತ್ತೆ ಹಾಳುಮಾಡುತ್ತವೆ. ಇದರ ಕಡಿತದಿಂದ ಮಾರಕವಲ್ಲದಿದ್ದರೂ ಸ್ವಾಸ್ಥ್ಯ ಕೆಡಿಸಬಲ್ಲ ಕೆಲವು ಕಾಯಿಲೆಗಳು ಒಬ್ಬರಿಂದೊಬ್ಬರಿಗೆ ಹರಡುತ್ತದೆ.

ಈ ತೊಂದರೆಯಿಂದ ಪಾರಾಗಲು ತಿಗಣೆಗಳಿಂದ ಸಂಪೂರ್ಣವಾಗಿ ಮುಕ್ತಿ ಪಡೆಯುವುದೊಂದೇ ಮಾರ್ಗ. ಆದರೆ ಇದರಿಂದ ಬಿಡುಗಡೆ ಪಡೆಯುವುದು ಅಷ್ಟು ಸುಲಭವಲ್ಲ. ಏಕೆಂದರೆ ತಿಗಣೆಗಳ ಬಗ್ಗೆ ನಮಗೆ ಕಣ್ಣಿಗೆ ಕಾಣುವುದಕ್ಕಿಂತ ಎಷ್ಟೋ ಹೆಚ್ಚು ಮಾಹಿತಿ ನಾವು ನೋಡದ ಬಿರುಕು, ಸಂದಿಗಳಲ್ಲಿರುತ್ತವೆ. ಗೆದ್ದಲು ಹುಳಗಳನ್ನು ನಿವಾರಿಸಲು ನೈಸರ್ಗಿಕ ಸಲಹೆಗಳು

ಹಾಸಿಗೆಯಿಂದ ತಿಗಣೆಗಳನ್ನು ಹೊಡೆದೋಡಿಸಲು ಫಲಪ್ರದ ಸಲಹೆ

ಮನುಷ್ಯ ಸೇರಿ ಇತರ ಸಸ್ತನಿಗಳ ಬಿಸಿರಕ್ತವನ್ನು ಕುಡಿದೇ ಜೀವಿಸುವ ತಿಗಣೆ, ಜಿಗಟ ಮೊದಲಾದ ಕ್ರಿಮಿಗಳು ಚಪ್ಪಟೆಯಾಕಾರದ ದೇಹ ಹೊಂದಿದ್ದು ತಮ್ಮ ಭಾರದ ನಾಲ್ಕೈದುಪಟ್ಟು ರಕ್ತ ಕುಡಿಯುವ ಸಾಮರ್ಥ್ಯ ಹೊಂದಿರುತ್ತವೆ. ಇವು ದಿನವಿಡೀ ಮಂಚ, ತಲೆದಿಂಬಿನ ಒಳಭಾಗ, ಹಾಸಿಗೆಯ ಒಳಭಾಗ, ಕಬ್ಬಿಣದ ಮಂಚವಾದರೆ ವೆಲ್ಡಿಂಗ್ ಮಾಡಿದ ಸ್ಥಳದಲ್ಲಿ ಬಿಟ್ಟ ಸೂಕ್ಷ್ಮವಾದ ಖಾಲಿ ಜಾಗ, ಪೈಪಿನ ಒಳಭಾಗ ಮೊದಲಾದವೆಡೆ ಅವಿತು ಕುಳಿತುಕೊಂಡಿರುತ್ತವೆ.

ರಾತ್ರಿ ನಮಗೆ ನಿದ್ದೆ ಬಂದ ಬಳಿಕವೇ ಅವು ಹೊರಬಂದು ಚರ್ಮವನ್ನು ಕಡಿದು ಹೊರಬಂದ ರಕ್ತವನ್ನು ಕುಡಿಯುತ್ತವೆ. ಈಗ ಭಾರವಾದ ಹೊಟ್ಟೆಯನ್ನು ಎಳೆದುಕೊಳ್ಳುತ್ತಾ ಮತ್ತೆ ಬಿರುಕನ್ನು ಸೇರುತ್ತವೆ. ಇವು ಹೇಗೆ ನಮ್ಮ ದೇಹವನ್ನು ಪತ್ತೆ ಮಾಡುತ್ತವೆ ಎಂದರೆ ಗಾಳಿಯಲ್ಲಿ ತೇಲಿ ಬರುವ ನಮ್ಮ ನಿಃಶ್ವಾಸದ ಇಂಗಾರದ ಡೈ ಅಕ್ಸೈಡ್ ಅನ್ನು ಅನುಸರಿಸಿ ಬರುತ್ತವೆ. ಕುತೂಹಲಕರ ಮಾಹಿತಿ ಎಂದರೆ ಒಮ್ಮೆ ರಕ್ತ ಕುಡಿದು ಬಿರುಕಿನಲ್ಲಿ ಸೇರಿದ ತಿಗಣೆ ಮತ್ತೆ ರಕ್ತ ಕುಡಿಯಲು ಬರುವುದು ಇನ್ಯಾವಾಗಲೋ, ಕೆಲವೊಮ್ಮೆ ತಿಂಗಳುಗಳ ಬಳಿಕ. ನಾಳೆ ಬರುವುದು ಬೇರೆಯೇ ತಿಗಣೆ.

ಮೊಟ್ಟೆಯಿಂದ ಈಗತಾನೇ ಹೊರಬಂದ ಮರಿಯೂ ಚರ್ಮವನ್ನು ಹರಿಯಬಲ್ಲಷ್ಟು ಸದೃಢವಾದ ಹಲ್ಲುಗಳನ್ನು ಹೊಂದಿದ್ದು ತಮ್ಮ ಆಹಾರವನ್ನು ತಾನೇ ಸಂಪಾದಿಸಿಕೊಳ್ಳುತ್ತದೆ. ಇವು ಹಾರಲಾರವು, ನೆಗೆಯಲಾರವು. ಇವುಗಳ ನಿವಾರಣೆಗೆ ಕೆಲವು ಉಪಯುಕ್ತ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

ತೊಂದರೆಯ ಮೂಲವನ್ನು ಹುಡುಕಿ ತೆಗೆಯಿರಿ
ನಿಮ್ಮ ಹಾಸಿಗೆಯ ಮೇಲೆ ಬಂದಿದ್ದ ತಿಗಣೆಯನ್ನು ಹೊಸಕುವುದರಿಂದ ತಾತ್ಕಾಲಿಕವಾದ ಉಪಶಮನ ದೊರಕುವುದೇ ಹೊರತು ಈಗಾಗಲೇ ಬಿರುಕುಗಳ, ಹಾಸಿಗೆಗಳ, ದಿಂಬುಗಳ, ಸೋಫಾಗಳ, ಕುರ್ಚಿಗಳ ಬಿರುಕುಗಳ ಮೊದಲಾದೆಡೆ ಅತ್ಯಂತ ಆಳದಲ್ಲಿ ಮನೆಮಾಡಿಕೊಂಡಿರುವ ಇತರ ತಿಗಣೆಗಳನ್ನು ಹೊಡೆಯಲು ಸಾಧ್ಯವಿಲ್ಲ. ಇದಕ್ಕಾಗಿ ಕೊಂಚ ಶ್ರಮವಹಿಸುವುದು ಅಗತ್ಯ. ಮೊದಲಿಗೆ ನಿಮ್ಮ ಕೋಣೆಯ ಎಲ್ಲಾ ವಸ್ತುಗಳನ್ನು ಹೊರತೆಗೆದು ಮಂಚವನ್ನು ಬೋರಲಾಗಿಸಿ ಸೂಕ್ಷ್ಮವಾಗಿ ಎಲ್ಲಾ ಬಿರುಕುಗಳನ್ನು ಗಮನಿಸಿ. ಮಕ್ಕಳ ಸಮವಸ್ತ್ರಗಳ ಮೇಲಿನ ಕಲೆಗಳ ನಿವಾರಣೆಗೆ ಸೂಕ್ತ ಸಲಹೆ

ಎಲ್ಲೆಲ್ಲಿ ಬಿರುಕುಗಳಿವೆಯೋ, ಎಲ್ಲೆಲ್ಲಿ ಚಿಕ್ಕ ಚಿಕ್ಕ ಮೊಟ್ಟೆಗಳು ಕಾಣುತ್ತಿವೆಯೋ ಅಲ್ಲೆಲ್ಲಾ ಕೀಟನಾಶವನ್ನು ಸಿಂಪಡಿಸಿ. ಸಾಮಾನ್ಯವಾಗಿ ಅತಿಹೆಚ್ಚು ತಿಗಣೆಗಳು ಮನೆಮಾಡಿರುವ ಬಿರುಕಿನ ಬಾಗಿಲಿನ ಭಾಗ ತಿಗಣೆಗಳ ಉಚ್ಛಿಷ್ಟದಿಂದ ಕಪ್ಪಗಾಗಿರುತ್ತದೆ. ಈ ಬಿರುಕುಗಳನ್ನು ಬಿಸಿಯಾದ ಮೇಣ ಅಥವಾ ಎಂ. ಸೀಲ್ ಅನ್ನು ಉಪಯೋಗಿಸಿ ಮುಚ್ಚಿಬಿಡಿ. ಇದರಿಂದ ತಿಗಣೆಗಳು ಒಳಗೇ ಸಮಾಧಿಯಾಗುತ್ತವೆ. ಕಬ್ಬಿಣದ ಪೈಪುಗಳಿಂದ ಮಾಡಿರುವ ಮಂಚ, ಸೋಫಾ ಮೊದಲಾದವುಗಳಲ್ಲಿ ವೆಲ್ಡಿಂಗ್ ಮಾಡಿರುವ ಕಡೆ ಸೂಕ್ಷ್ಮವಾಗಿ ಗಮನಿಸಿ. ಯಾವುದೇ ತೂತು ಕಂಡುಬಂದರೂ ಅದನ್ನು ಮುಚ್ಚಿ. ಇದೇ ರೀತಿ ಹಾಸಿಗೆ, ಹೊದಿಕೆ, ದಿಂಬು, ಸೋಫಾದ ಮೇಲಿರುವ ಹೊದಿಕೆ ಮೊದಲಾದವುಗಳನ್ನೂ ಗಮನಿಸಿ, ಮೊಟ್ಟೆಗಳಿದ್ದರೆ ಕೂಡಲೇ ಒಗೆಯಲು ಹಾಕಿ. ಅಂತೆಯೇ ಗೋಡೆಗಳ, ನೆಲದಲ್ಲಿರುವ ಮೂಲೆಗಳಲ್ಲಿರುವ ಬಿರುಕುಗಳನ್ನೂ ಗಮನಿಸಿ ಮುಚ್ಚಿಬಿಡಿ.

ಹಾಸಿಗೆ, ಹೊದಿಕೆಗಳನ್ನು ಒಗೆಯಿರಿ, ತೀವ್ರವಾಗಿ ಪೀಡಿತವಾಗಿದ್ದರೆ ಎಸೆದುಬಿಡಿ
ಹಾಸಿಗೆಯ ಒಳಭಾಗವನ್ನು ಹೊಕ್ಕ ತಿಗಣೆಗಳನ್ನು ಹೊರತೆಗೆಯುವುದು ಭಾರೀ ಕಷ್ಟಕರ ಕೆಲಸ. ಏಕೆಂದರೆ ಒಳಗಣ ಹತ್ತಿ ಅಥವಾ ಸ್ಪಂಜುಗಳಲ್ಲಿ ಮನೆಮಾಡಿಕೊಂಡಿರುವ ಇವುಗಳ ಬಳಿ ತಲುಪುವುದೇ ಕಷ್ಟ. ಹೊದಿಕೆ, ಬೆಡ್ ಶೀಟ್ ಮೊದಲಾದವುಗಳನ್ನು ನೇರವಾಗಿ ಒಗೆಯಲು ಹಾಕಿರಿ. ಒಗೆಯಲು ಸಾಧ್ಯವಿಲ್ಲದ ಹಾಸಿಗೆ ತಲೆದಿಂಬು, ಟೆಡ್ಡಿ ಬೇರ್ ನಂತಹ ಹತ್ತಿ ತುಂಬಿದ ಗೊಂಬೆಗಳು ಮೊದಲಾದವುಗಳನ್ನು ದೊಡ್ಡದಾದ ಪ್ಲಾಸ್ಟಿಕ್ ನೊಳಗೆ ಹಾಕಿ ಜ್ವಾಲೆಯ ಮೂಲಕ ಎಲ್ಲಾ ಕಡೆಗಳನ್ನು ಗಾಳಿಯಾಡದಂತೆ ಮುಚ್ಚಿ ಬಿಡಿ. ಬಳಿಕ ಇವುಗಳನ್ನು ಬಿಸಿಲಿನಲ್ಲಿಡಿ. ಇಡಿಯ ದಿನದ ಬಿಸಿಲಿನಲ್ಲಿ ಆಮ್ಲಜನಕವಿಲ್ಲದೇ ಎಲ್ಲಾ ತಿಗಣೆಗಳು ಒಳಗೇ ಸಾಯುತ್ತವೆ. ಒಂದು ವೇಳೆ ಹಾಸಿಗೆ ಅಷ್ಟು ಹೊಸತಲ್ಲದಿದ್ದರೆ ಅಥವಾ ದುಬಾರಿಯಲ್ಲದಿದ್ದರೆ ಇವುಗಳನ್ನು ತ್ಯಜಿಸುವುದೇ ಕ್ಷೇಮ. ಕೊಂಚ ದುಬಾರಿಯಾದರೂ ಸರಿ, ತಿಗಣೆಗಳು ಒಳಪ್ರವೇಶಿಸಲಾಗದ ಮೆಡಿಕೇಟೆಡ್ ಮ್ಯಾಟ್ರೆಸ್ ಕೊಳ್ಳಿರಿ.

ಆವಿಯ ಮೂಲಕ ತಿಗಣೆಗಳನ್ನು ಕೊಲ್ಲಿರಿ
ಒಂದು ವೇಳೆ ಹಾಸಿಗೆ ದುಬಾರಿಯಾಗಿದ್ದು ತಿಗಣೆಗಳಿಂದ ತುಂಬಿಹೋಗಿದ್ದರೆ ಆವಿ ಹಾಯಿಸುವ ಮೂಲಕ ಮುಕ್ತಿ ಪಡೆಯಬಹುದು. ಮಾರುಕಟ್ಟೆಯಲ್ಲಿ ಆವಿಯನ್ನು ಹಾಯಿಸುವ ಯಂತ್ರಗಳು ಲಭ್ಯವಿವೆ. ಆದರೆ ಸುಲಭವಾದ ಆವಿಯನ್ನು ತಯಾರಿಸುವ ಉಪಕರಣ ನಿಮ್ಮ ಮನೆಯಲ್ಲಿಯೇ ಇದೆ. ಅದೇ ಪ್ರೆಶರ್ ಕುಕ್ಕರ್. ಇದರಲ್ಲಿ ಸುಮಾರು ಅರ್ಧಭಾಗ ನೀರು ಹಾಕಿ ಮುಚ್ಚಳ ಮುಚ್ಚಿ ಒಲೆಯ ಮೇಲಿಟ್ಟು ಮಧ್ಯಮ ಜ್ವಾಲೆಯಲ್ಲಿ ಕುದಿಸಿ. ಸೀಟಿ ಇಡುವ ಕೊಳವೆಯ ಮೂಲಕ ಪೈಪೊಂದನ್ನು ಅಳವಡಿಸಿ. ನೀರು ಕುದಿಯಲು ಪ್ರಾರಂಭವಾಗುತ್ತಿದ್ದಂತೆ ಪೈಪಿನ ಮೂಲಕ ಬಿಸಿಯಾದ ಹಬೆ ಹೊರಡಲು ತೊಡಗುತ್ತದೆ. ಈ ಹಬೆಯನ್ನು ನಿಮ್ಮ ಹಾಸಿಗೆ, ತಲೆದಿಂಬು ಮೊದಲಾದ ವಸ್ತುಗಳು ಪೂರ್ಣವಾಗಿ ಆವರಿಸುವಂತೆ ಹಾಯಿಸಿ. ವಿಶೇಷವಾಗಿ ಮೂಲೆಗಳಲ್ಲಿ ಹೆಚ್ಚು ಹೊತ್ತು ಹಾಯಿಸಿ, ಏಕೆಂದರೆ ತಿಗಣೆಗಳು ಹೆಚ್ಚಾಗಿ ಮೂಲೆಗಳಲ್ಲಿಯೇ ವಾಸಿಸುತ್ತವೆ. ಆವಿಯಿಂದ ತಿಗಣೆಗಳು ಹಾಗೂ ಮೊಟ್ಟೆಗಳು ಸಾಯುತ್ತವೆ. ಕೀಟನಾಶಕಗಳಿಂದ ಮೊಟ್ಟೆಗಳು ನಾಶವಾಗದ ಕಾರಣ ಕೀಟನಾಶಕ ಹೊಡೆದ ಕೆಲದಿನಗಳಲ್ಲಿಯೇ ಮತ್ತೆ ಪ್ರಕಟವಾಗಲು ಇದೇ ಕಾರಣ.

ವ್ಯಾಕ್ಯೂಂ ಉಪಯೋಗಿಸಿ
ನಿಮ್ಮ ಹಾಸಿಗೆ, ಹೊದಿಕೆ, ದಿಂಬು ಮೊದಲಾದವುಗಳನ್ನು ವ್ಯಾಕ್ಯೂಂ ಕ್ಲೀನರ್ ಉಪಯೋಗಿಸಿ ಸ್ವಚ್ಛಗೊಳಿಸಿ. ವಿಶೇಷವಾಗಿ ಮೂಲೆಗಳಲ್ಲಿ ಮತ್ತು ಅಂಚುಗಳಲ್ಲಿ ಹೆಚ್ಚಿನ ಒತ್ತು ನೀಡಿ. ವ್ಯಾಕ್ಯೂಂ ಮುಗಿಬ ಬಳಿಕ ಮರೆಯದೇ ಕಸವನ್ನು ಹೊರತೆಗೆದು ಪ್ಲಾಸ್ಟಿಕ್ ಪೊಟ್ಟಣವೊಂದರಲ್ಲಿ ಗಟ್ಟಿಯಾಗಿ ಗಂಟು ಹಾಕಿ ಕೂಡಲೇ ಮನೆಯಿಂದ ಹೊರಗೆ ತ್ಯಜಿಸಿಬಿಡಿ. ತಿಗಣೆಗಳ ಕಾಟದಿಂದ ಮುಕ್ತಿ ಪಡೆಯಲು ಇದೊಂದು ಸುಲಭವಾದ ವಿಧಾನವಾಗಿದೆ. ಬಟ್ಟೆಗಳು ದೀರ್ಘಕಾಲ ಬಾಳಿಕೆ ಬರಲು 10 ಸೂತ್ರಗಳು

ವೃತ್ತಿಪರರ ಸಲಹೆ ಪಡೆಯಿರಿ
ಕೆಲವೊಮ್ಮೆ ತಿಗಣೆಗಳ ಕಾಟ ನಾವು ಎಣಿಸಿದ್ದಕ್ಕಿಂತಲೂ ಅತಿ ಹೆಚ್ಚಾಗಿದ್ದರೆ ವೃತ್ತಿಪರರ ಸಲಹೆ ಪಡೆಯಿರಿ. ಇವರ ಬಳಿ ನಮ್ಮ ಮನೆಯಲ್ಲಿ ಉಪಯೋಗಿಸುವ ಉಪಕರಣಗಳಿಗಿಂತಲೂ ಪ್ರಬಲವಾದ ಹಾಗೂ ಈ ಕೆಲಸಕ್ಕೆಂದೇ ತಯಾರಿಸಲಾದ ಉಪಕರಣಗಳಿರುತ್ತವೆ. ಅಲ್ಲದೇ ಸಾಧಾರಣವಾಗಿ ಮಾರುಕಟ್ಟೆಯಲ್ಲಿ ಸಾರ್ವಜನಿಕರಿಗೆ ಅಲಭ್ಯವಾದ, ಕೇವಲ ವೃತ್ತಿಪರರಿಗೆ ಮಾತ್ರ ಲಭ್ಯವಿರುವ ಕೆಲವು ಪ್ರಬಲ ರಾಸಾಯನಿಕ ಕೀಟನಾಶಕ ಹಾಗೂ ಸುರಕ್ಷತಾ ಕವಚ ಮತ್ತು ಸಾಧನಗಳಿರುತ್ತವೆ. ಇವುಗಳ ನೆರವಿನಿಂದ ವೃತ್ತಿಪರರು ನಾವು ಸುಲಭವಾಗಿ ತಲುಪಲು ಸಾಧ್ಯವಾಗದ ಮೂಲೆ ಮತ್ತು ಬಿರುಕಿನ ಆಳಕ್ಕೆ ತಲುಪಿ ತಿಗಣೆಗಳನ್ನು ನಾಮಾವಶೇಷ ಮಾಡುತ್ತಾರೆ. ಇದಕ್ಕಾಗಿ ಕೊಂಚ ವೆಚ್ಚ ವ್ಯಯವಾದರೂ ಲಭ್ಯವಾಗುವ ನೆಮ್ಮದಿಯ ನಿದ್ದೆಗೆ ಸಾಟಿಯಲ್ಲ ತಾನೆ!

English summary

ಹಾಸಿಗೆಯಿಂದ ತಿಗಣೆಗಳನ್ನು ಹೊಡೆದೋಡಿಸಲು ಫಲಪ್ರದ ಸಲಹೆ

Bed bugs can be one of the main reasons to spoil your good sleep. Bed bugs are considered as pests, which feed on blood and cause itchy bites. This is indeed a public health issue found in almost any part of the world. The following are a few ways that can used on how to clean bed bug mattress.
X
Desktop Bottom Promotion