For Quick Alerts
ALLOW NOTIFICATIONS  
For Daily Alerts

ಈ ಯೋಗಾಸನಗಳನ್ನು ಮಾಡಿದರೆ ಮೈಗ್ರೇನ್ ಸಮಸ್ಯೆ ಇಲ್ಲವಾಗುವುದು

|

ಮೈಗ್ರೇನ್‌ ಕಾಣಿಸಿತು ಎಂದರೆ ಆ ದಿನ ಹಾಳಾದಂತೆ ಲೆಕ್ಕ. ಅದು ನೀಡುವ ಅಸಾಧ್ಯ ತಲೆ ನೋವು, ಕುತ್ತಿಗೆ ನೋವು, ವಾಕರಿಕೆ, ತಲೆಸುತ್ತು ದೃಷ್ಟಿ ಮಂದವಾಗುವುದು ಇವುಗಳಿಂದ ದೇಹ ಬಳಲಿ ಹೋಗುವುದು. ಕೆಲವರಿಗೆ ಮೈಗ್ರೇನ್ ಕಾಣಿಸಿದರೆ ಒಂದು ದಿನದಲ್ಲಿ ಕಡಿಮೆಯಾಗುತ್ತದೆ, ಇನ್ನು ಕೆಲವರಿಗೆ 2-3 ದಿನವಾದರೂ ಅದರಿಂದ ಹೊರಬರಲು ಸಾಧ್ಯವಾಗುವುದಿಲ್ಲ.

 Migraine

ಅಮೆರಿಕದ ಮೈಗ್ರೇನ್‌ ಫೌಂಡೇಷನ್ ಪ್ರಕಾರ ಮೈಗ್ರೇನ್ ಕಾಯಿಲೆ ಪುರುಷರಿಗಿಂತ ಮಹಿಳೆಯರಲ್ಲಿ ಮೂರು ಪಟ್ಟು ಹೆಚ್ಚಾಗಿ ಕಂಡು ಬರುತ್ತದೆ, ಅದರಲ್ಲೂ 10ವರ್ಷದಿಂದ 40ವರ್ಷದೊಳಗಿನ ಪ್ರಾಯದವಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುವುದು. ಕೆಲವರಿಗೆವಯಸ್ಸು 50 ದಾಟುತ್ತಿದ್ದಂತೆ ಈ ಸಮಸ್ಯೆ ಕಡಿಮೆಯಾಗುವುದು.

ಮೈಗ್ರೇನ್‌ಗೆ ನಿರ್ಧಿಷ್ಟ ಕಾರಣವೇನೆಂದು ವೈದ್ಯಲೋಕಕ್ಕೂ ತಿಳಿದಿಲ್ಲ. ಇದು ಕೆಲವರಲ್ಲಿ ಅನುವಂಶೀಯವಾಗಿ ಕಂಡು ಬಂದರೆ, ಇನ್ನು ಕೆಲವರಿಗೆ ಮಾನಸಿಕ ಒತ್ತಡ, ಅತ್ಯಧಿಕ ಕೆಫೀನ್ ಇರುವ ಆಹಾರಗಳ ಸೇವನೆ, ಬಿಸಿಲಿನಲ್ಲಿ ಓಡಾಡಿದಾಗ, ವಾತಾವರಣದಲ್ಲಿ ಬದಲಾವಣೆಯಾದಾಗ ಕಾಣಿಸಿಕೊಳ್ಳುವುದು. ಮೆದುಳಿನಲ್ಲಿ ರಕ್ತ ಸಂಚಾರದಲ್ಲಿ ವ್ಯತ್ಯಾಸ ಉಂಟಾದಾಗ ಮೈಗ್ರೇನ್ ತಲೆನೋವು ಕಂಡು ಬರುವುದು ಎಂದು ಹಲವಾರು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಮೈಗ್ರೇನ್ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ಯೋಗ ತುಂಬಾ ಪರಿಣಾಮಕಾರಿಯಾಗಿದೆ.

ಮೈಗ್ರೇನ್ ಸಮಸ್ಯೆ ಇರುವವರು ಪ್ರತಿನಿತ್ಯ ಈ ಆಸನಗಳನ್ನು ಅಭ್ಯಾಸ ಮಾಡುವುದರಿಂದ ಮೈಗ್ರೇನ್ ಸಮಸ್ಯೆ ಹೋಗಲಾಡಿಸಬಹುದು:

ಹಸ್ತ ಪಾದಾಸನ

ಹಸ್ತ ಪಾದಾಸನ

ಈ ಆಸನ ಮಾಡುವುದು ಸುಲಭ. ಬೆನ್ನು ಮೂಳೆ ನೇರವಾಗಿಟ್ಟುಕೊಂಡು ನಿಧಾನಕ್ಕೆ ಉಸಿರು ಮೇಲೆ ಎತ್ತುತ್ತಾ ಎರಡು ಕೈಗಳನ್ನು ಮೇಲಕ್ಕೆ ಎತ್ತಿ, ಈಗ ನಿಧಾನಕ್ಕೆ ಉಸಿರು ಬಿಡುತ್ತಾ ಸೊಂಟದಿಂದ ಮುಂದಕ್ಕೆ ಬಗ್ಗಿ. ಪೂರ್ಣವಾಗಿ ಉಸಿರನ್ನು ಹೊರಹಾಕಿದ ನಂತರ ಕೈಗಳನ್ನು ಪಾದದ ಪಕ್ಕಕ್ಕೆ ನೆಲದ ಮೇಲಿರಿಸಿ. ಸಾಧ್ಯವಾದರೆ ನಿಮ್ಮ ಮಂಡಿಯನ್ನು ಬಗ್ಗಿಸಿ ಅಂಗೈಗಳನ್ನು ನೆಲದ ಮೇಲಿರಿಸಿ. ಈ ರೀತಿ ಮೊದಲಿಗೆ ಸಾಧ್ಯವಾಗುವುದಿಲ್ಲ, ಅಭ್ಯಾಸ ಮಾಡುತ್ತಾ ಸಾಧ್ಯವಾಗುವುದು. ನೇರವಾಗಿ ನಿಂತು ಮುಂದಕ್ಕೆ ಬಗ್ಗಿ ಪಾದಗಳನ್ನು ಮುಟ್ಟುವುದರಿಂದ ನರವ್ಯವಸ್ಥೆಗೆ ರಕ್ತಚಲನೆ ಹೆಚ್ಚಿ, ನರವ್ಯವಸ್ಥೆಯ ಉತ್ತೇಜನವಾಗುವುದು, ಇದರಿಂದ ಮೆದುಳಿಗೆ ರಕ್ತ ಸಂಚಾರ ಚೆನ್ನಾಗಿ ಅಗುತ್ತದೆ, ಮನಸ್ಸೂ ಪ್ರಶಾಂತವಾಗುತ್ತದೆ.

ಸೇತುಬಂಧಾಸನ

ಸೇತುಬಂಧಾಸನ

ಇದನ್ನು ಬ್ರಿಡ್ಜ್‌ಪೋಸ್‌ ಎಂದು ಕೂಡ ಕರೆಯುತ್ತಾರೆ. ಈ ಆಸನದಲ್ಲಿ ಮೈಯನ್ನು ಸೇತುವೆ ರೀತಿ ಬಾಗಿಸುವುದು. ಈ ಆಸನ ಮಾಡಲು ಮ್ಯಾಟ್‌ ಮೇಲೆ ಅಂಗಾತ ಮಲಗಬೇಕು, ನಂತರ ಕಾಲುಗಳನ್ನು ಮಡಚಿ, ಕೈಗಳನ್ನು ಮೇಲಕ್ಕೆ ಎತ್ತಿ ಹಿಂದಕ್ಕೆ ಮ್ಯಾಟ್‌ ಮೇಲೆ ಊರಿ, ಈಗ ಸೊಂಟವನ್ನು ನಿಧಾನಕ್ಕೆ ಮೇಲಕ್ಕೆ ಎತ್ತಿ, ತಲೆ ಮ್ಯಾಟ್‌ಗೆ ತಾಗುವಂತೆ ಇರಲಿ, ಉಸಿರಾಟ ಸಹಜವಾಗಿರಲಿ, ಈ ರೀತಿ ಒಂದು ನಿಮಿಷ ಇದ್ದು, ಈಗ ನಿಧಾನಕ್ಕೆ ಉಸಿರನ್ನು ಬಿಡುತ್ತಾ ಶವಾಸನ ಸ್ಥಿತಿಗೆ ಬಂದು ವಿಶ್ರಾಂತಿ ಪಡೆಯಿರಿ. ಈ ಆಸನ ಅಭ್ಯಾಸ ಮಾಡಿದಾಗ ಮೆದುಳಿಗೆ ರಕ್ತಸಂಚಾರ ಸರಾಗವಾಗಿ ನಡೆಯುವುದು, ಇದರಿಂದ ಮಾನಸಿಕ ಒತ್ತಡ ಕೂಡ ಕಡಿಮೆಯಾಗಿ ಮೈಗ್ರೇನ್‌ ಸಮಸ್ಯೆ ಇಲ್ಲವಾಗುವುದು.

ಶಿಶು ಆಸನ /ಬಾಲಾಸನ

ಶಿಶು ಆಸನ /ಬಾಲಾಸನ

ಈ ಆಸನದಲ್ಲಿ ಶಿಶುವಿನ ರೀತಿ ಮಂಡಿ ಮಡಚಿ, ಕೈಗಳನ್ನು ಮುಂದಕ್ಕೆ ಚಾಚಿ ಮಲಗುವುದು, ಈ ಆಸನ ಮಾಡುವುದು ಬಲು, ಈ ಆಸನ ಮಾಡಲು ಹೊಟ್ಟೆ ಮೇಲೆ ಮಲಗಬೇಕು, ನಂತರ ನಿಧಾನಕ್ಕೆ ಕಾಲುಗಲನ್ನು ಮಡಚಿ, ಕೈಗಳನ್ನು ಮುಂದಕ್ಕೆ ಚಾಚಿ, ನೆತ್ತಿ ಮ್ಯಾಟ್‌ಗೆ ತಾಗುವಂತಿರಲಿ. ಈ ಆಸನ ಮಾಡಿದಾಗ ಮೆದುಳಿಗೆ ಹೆಚ್ಚು ರಕ್ತ ಸಮಚಾರವಾಗುತ್ತದೆ, ಇದರಿಂದ ಮೆದುಳಿಗೆ ಹೆಚ್ಚು ಆಮ್ಲಜನಕ ದೊರೆಯುತ್ತದೆ. ಈ ಆಸನ ಮಾಡುವುದರಿಂದ ನರವ್ಯವಸ್ಥೆಯು ಪ್ರಶಾಂತವಾಗುವುದಲ್ಲದೆ ಮೈಗ್ರೇನ್ ನೋವೂ ಪರಿಣಾಮಕಾರಕವಾಗಿ ಕಡಿಮೆಯಾಗುತ್ತದೆ.

ಮಾರ್ಜರಿ ಆಸನ

ಮಾರ್ಜರಿ ಆಸನ

ಇದನ್ನು ಬೆಕ್ಕು ಆಸನ ಎಂದು ಕೂಡ ಕರೆಯುತ್ತಾರೆ. ಈ ಆಸನ ಮಾಡುವ ಮುನ್ನ ಪರಿಣಿತರ ಸಹಾಯ ಪಡೆದುಕೊಳ್ಳಿ. ಈ ಆಸನದಲ್ಲಿ ಒಂದು ಮೊಣಕೈ ದೂರದಲ್ಲಿ ಎರಡೂ ಕೈಗಳನ್ನು ಸಮನಾಂತರವಾಗಿ ಊರಬೇಕು. ಈಗ ಉಸಿರನ್ನು ಎಳೆದುಕೊಂಡು, ಬೆನ್ನು ಮೂಳೆಯನ್ನು ಮೇಲಕ್ಕೆ ಎತ್ತಿ ತಲೆಯನ್ನು ಕೈಗಳೊಳಗೆ ಬರುವಂತೆ ಬಾಗಬೇಕು. ಈಗ ನಿಧಾನಕ್ಕೆ ಉಸಿರನ್ನು ಎಳೆಯುತ್ತಾ ತಲೆಯನ್ನು ಮೇಲಕ್ಕೆ ಎತ್ತಬೇಕು, ಆಗ ಬೆನ್ನು ಮೂಳೆ ನೇರವಾಗುತ್ತದೆ. ಈ ರೀತಿ 2-3 ಬಾರಿ ಮಾಡಿ. ಈಮಾರ್ಜರಿ ಆಸನದಿಂದ ರಕ್ತಚಲನೆಯು ಹೆಚ್ಚಿ ಮನಸ್ಸಿಗೆ ವಿಶ್ರಾಂತಿ ಸಿಗುತ್ತದೆ.

ಪಶ್ಚಿಮೊತ್ತಾಸನ

ಪಶ್ಚಿಮೊತ್ತಾಸನ

ಈ ಆಸನ ಮಾಡಲು ಮ್ಯಾಟ್‌ ಮೇಲೆ ಎರಡು ಕಾಲುಗಳನ್ನು ಮುಂದಕ್ಕೆ ಚಾಚಿ ನೇರವಾಗಿ ಕುಳಿತುಕೊಳ್ಳಿ, ಈಗ ನಿಧಾನಕ್ಕೆ ಉಸಿರನ್ನುಎಳೆದುಕೊಳ್ಳುತ್ತಾ ಕೈಗಳನ್ನು ಮೇಲಕ್ಕೆ ಎತ್ತಿ, ಉಸಿರನ್ನು ಬಿಡುತ್ತಾ ಮೆಲ್ಲನೆ ಬಾಗಿ ಕಾಲಿನ ಮಣಿಗಂಟನ್ನು ಹಿಡಿಯಿರಿ, ತಲೆ ಮಂಡಿಗೆ ತಾಗುವಂತಿರಲಿ. ಕಾಲುಗಳ ಮುಂದೆ ಬಗ್ಗುವಿಕೆಯ ಈ ಆಸನವು ಮೆದುಳನ್ನು ಪ್ರಶಾಂತಗೊಳಿಸುವುದಲ್ಲದೆ ಒತ್ತಡದ ನಿವಾರಣೆಯೂ ಆಗುತ್ತದೆ. ಈ ಯೋಗಾಸನದಿಂದ ಮೈಗ್ರೇನ್ ಸಮಸ್ಯೆ ಇಲ್ಲವಾಗುವುದು.

ಅಧೋಮುಖಶ್ವಾನಾಸನ

ಅಧೋಮುಖಶ್ವಾನಾಸನ

ಕೆಳಗಡೆ ಮುಖಮಾಡಿ ನಾಯಿ ಭಂಗಿಯ್ಲಿರುವ ಆಸನ ಇದಾಗಿದೆ. ಈ ಆಸನದಲ್ಲಿ ಮಂಡಿಗಳು ನೇರವಾಗಿರಬೇಕು. ಈ ಆಸನ ಮಾಡಲು ಉಸಿರನ್ನು ನಿಧಾನಕ್ಕೆ ಎಳೆದು, ಮೆಲ್ಲನೆ ಬಿಡುತ್ತಾ ಮುಂದಕ್ಕೆ ಬಾಗುತ್ತಾ, ಕೈಗಳನ್ನು ಮ್ಯಾಟ್‌ಗಳಿಗೆ ಊರಬೇಕು, ತಲೆ ಕೈಗಳ ಸಮನಾಂತರವಾಗಿರಬೇಕು, ದೃಷ್ಟಿ ನೆಲಕ್ಕೆ ನೆಟ್ಟಿರಬೇಕು. ಅಧೋಮುಖಶ್ವಾನಾಸನ ಆಸನದಿಂದ ಮೆದುಳಿಗೆ ರಕ್ತಚಲನೆ ಹೆಚ್ಚುವುದರಿಂದ ಮೈಗ್ರೇನ್, ತಲೆನೋವು ಸಮಸ್ಯೆ ಕಡಿಮೆಯಾಗುವುದು.

ಪದ್ಮಾಸನ

ಪದ್ಮಾಸನ

ಕಾಲುಗಳನ್ನು ಮಡಚಿ ಕೂತು ನಿಧಾನಕ್ಕೆ ಉಸಿರು ತೆಗೆದು,ನಿಧಾನಕ್ಕೆ ಉಸಿರನ್ನು ಬಿಡಿ. ಈ ಆಸನದಲ್ಲಿ ಓಂಕಾರ ಉಚ್ಛಾರಣೆ ಕೂಡ ತುಂಬಾ ಒಳ್ಳೆಯದು. ಪದ್ಮಾಸನದಿಂದ ಮನಸ್ಸು ನಿರಾಳವಾಗುತ್ತದೆ ಮತ್ತು ಮೈಗ್ರೇನ್‌ ಸಮಸ್ಯೆ ಇಲ್ಲವಾಗುವುದು. ಪದ್ಮಾಸನದಲ್ಲಿ ಮನಸ್ಸು ಎಚ್ಚರವಾಗಿರುತ್ತದೆ, ದೇಹ ಸಂಪೂರ್ಣ ವಿಶ್ರಾಂತಿಯನ್ನು ಪಡೆಯುವುದು. ತಿಂಗಳಿನಲ್ಲಿ ಎರಡು ಬಾರಿ ಯೋಗ ನಿದ್ರೆ ತೆಗೆದುಕೊಂಡರೆ ತುಂಬಾ ಒಳ್ಳೆಯದು.

ಶವಾಸನ

ಶವಾಸನ

ಎಲ್ಲಾ ಆಸನಗಳು ಮಾಡಿ ಮುಗಿಸಿದ ಬಳಿಕ ಶವಾಸನ ಮಾಡಿ. ಇದು ದೇಹಕ್ಕೆ ಸಂಪೂರ್ಣವಾಗಿ ವಿಶ್ರಾಂತಿಯನ್ನು ನೀಡುವ ಆಸನವಾಗಿದೆ. ಈ ಆಸನದಲ್ಲಿ ಅಂಗಾತ ಮಲಗಿ ಕಾಲುಗಳನ್ನು ಸ್ವಲ್ಪ ಅಗಲವಾಗಿ ಇಟ್ಟುಕೊಳ್ಳಿ, ಕೈಗಳು ದೇಹದ ಪಕ್ಕದಲ್ಲಿರಲಿ, ಹಸ್ತ ಆಕಾಶಕ್ಕೆ ಮುಖ ಮಾಡುವಂತಿರಲಿ. ಯೋಗಾಭ್ಯಾಸವನ್ನು ಮುಗಿಸಿದ ನಂತರ ಎರಡು ನಿಮಿಷಗಳವರೆಗೆ ಶವಾಸನದಲ್ಲಿ ಮಲಗಿ ವಿಶ್ರಮಿಸಿ.

English summary

Yoga Pose To Cure Migraine Headache

Even though there is no particular reason for migraine, but stress, weather condition, low supply of blood for brain will cause migraine, If you practice these yoga pose can cure migraine.
X
Desktop Bottom Promotion