For Quick Alerts
ALLOW NOTIFICATIONS  
For Daily Alerts

ನಾಭಿಯ ಬಗ್ಗೆ ನಿಮಗೆ ಗೊತ್ತಿಲ್ಲದೇ ಇರುವ ಅಚ್ಚರಿಯ ಸಂಗತಿಗಳು

|

ನಮ್ಮ ದೇಹದ ಕೆಲವು ಭಾಗಗಳು ನಮಗೆ ಅಗತ್ಯವೇ ಇಲ್ಲದಂತೆ ಕಾಣಿಸುತ್ತದೆ. ಉದಾಹರಣೆಗೆ ಪುರುಷರ ಎದೆಯಲ್ಲಿರುವ ಸ್ತನತೊಟ್ಟುಗಳು. ಅಂತೆಯೇ ಹೊಕ್ಕಳು ಅಥವಾ ನಾಭಿ. ವಾಸ್ತವದಲ್ಲಿ ನಾಭಿ ಎಂದರೆ ಮಗು ಗರ್ಭದಲ್ಲಿದ್ದಾಗ ತಾಯಿಯಿಂದ ಪೋಷಕಾಂಶಗಳನ್ನು ಪಡೆಯುವ ಕರುಳುಬಳ್ಳಿ ಹೊಟ್ಟೆಗೆ ತಗಲಿರುವ ಭಾಗವಾಗಿದೆ. ಜನನದ ಬಳಿಕ ಹೊಕ್ಕುಳ ಬಳ್ಳಿ ಬಿದ್ದು ಹೋಗಿ ಈ ಭಾಗದಲ್ಲಿ ಕೊಂಚ ಆಳವಾದ, ಆದರೆ ಮುಚ್ಚಿರುವ ತೂತೊಂದು ಉಳಿದಂತೆ ಕಾಣುತ್ತದೆ. ಜನನದ ಬಳಿಕ ಇದಕ್ಕೆ ಯಾವುದೇ ಕೆಲಸವಿಲ್ಲವೆಂದು ಹೆಚ್ಚಿನವರು ಇದರ ಬಗ್ಗೆ ಗಮನ ಹರಿಸುವುದೇ ಇಲ್ಲ. ಎಲ್ಲಿಯವರೆಗೆ ಇಲ್ಲಿ ನೋವು ಕಾಣಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಈ ನಾಭಿಯೊಂದು ನಮ್ಮ ದೇಹದಲ್ಲಿದೆ ಎಂದೇ ನಮಗೆ ಮರೆತು ಹೋಗಿರುತ್ತದೆ. ಕೆಲವರಂತೂ ಸ್ನಾನದ ಸಮಯದಲ್ಲಿ ಈ ಭಾಗವನ್ನು ಸ್ವಚ್ಛಗೊಳಿಸಲೂ ಮರೆಯುತ್ತಾರೆ.

Navel

ಬಹುತೇಕ ಎಲ್ಲರೂ ಕಡೆಗಣಿಸುವ ಈ ಭಾಗ ವಾಸ್ತವದಲ್ಲಿ ಸಂಕೀರ್ಣವಾಗಿರುವ ಅಂಗವೇ ಆಗಿದ್ದು ನಾವೆಲ್ಲರೂ ಇದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದೇವೆ. ಹುಟ್ಟಿದ ಬಳಿಕ ಕರುಳುಬಳ್ಳಿ ಬಿದ್ದು ಹೋದ ಬಳಿಕ ಹೊಕ್ಕಳಲ್ಲಿ ಹೊರಚಾಚಿದ್ದ ಭಾಗ ಒಣಗುತ್ತಾ ನಿಧಾನವಾಗಿ ಒಳಸರಿಯುತ್ತಾ ಕೆಲತಿಂಗಳುಗಳಲ್ಲಿಯೇ ವಯಸ್ಕರಂತಹ ರೂಪ ಪಡೆದುಕೊಳ್ಳುತ್ತದೆ. ಆದರೆ ಜೀವಮಾನವಿಡೀ ಇದೇ ರೂಪದಲ್ಲಿರದೇ ದೇಹದ ಗಾತ್ರಕ್ಕೆ ತಕ್ಕಂತೆ ಕೊಂಚ ಬದಲಾಗುತ್ತಲೂ ಇರುತ್ತದೆ. ನಮ್ಮ ದೇಹ ತನ್ನನ್ನು ತಾನೇ ರಿಪೇರಿ ಮಾಡಿಕೊಳ್ಳುವ ಅಧ್ಬುತ ಸೃಷ್ಟಿಯಾಗಿದ್ದು ನಿಜ ಹೇಳಬೇಕೆಂದರೆ ವೈದ್ಯರು ಔಷಧಿಗಳ ಮೂಲಕ ಈ ಶಕ್ತಿಯನ್ನೇ ಕೊಂಚ ಸರಿಯಾಗಿ ನಿರ್ವಹಿಸಲು ಸಹಕರಿಸುತ್ತಾರೆಯೇ ವಿನಃ ಔಷಧಿಗಳೇ ಪರಿಪೂರ್ಣವಾಗಿ ಇದನ್ನು ಸರಿಪಡಿಸಲಾರದು. ಈ ಕ್ರಿಯೆಯಲ್ಲಿ ಹೊಕ್ಕುಳ ಪಾತ್ರವಿದೆ. ಹಾಗಾಗಿ, ಇದನ್ನು ಕಡೆಗಣಿಸದೇ ಈ ಬಗ್ಗೆ ಅರಿತುಕೊಳ್ಳುವುದು ಆರೋಗ್ಯದ ಕಾಳಜಿ ವಹಿಸುವ ಪ್ರತಿಯೊಬ್ಬರಿಗೂ ಅವಶ್ಯವಾಗಿದೆ.

ಹೊಕ್ಕುಳ ಬಗ್ಗೆ ಕೆಲವು ಸಂಗತಿಗಳು ಅಚ್ಚರಿ ಮೂಡಿಸುವಂತಿವೆ. ಕೆಲವೊಮ್ಮೆ ಸ್ವಚ್ಛವಾಗಿರಿಸಿಕೊಂಡರೂ ಒಳಗೆ ಕೊಳೆ ಹೇಗೆ ಸೇರಿಕೊಳ್ಳುತ್ತದೆ ಎಂಬುದು ಆಶ್ಚರ್ಯ ಮೂಡಿಸುತ್ತದೆ. ಅಷ್ಟೇ ಅಲ್ಲ, ಕೆಲವೊಮ್ಮೆ ಕೆಲವು ಅನಾರೋಗ್ಯಗಳ ಸೂಚನೆಯೂ ಇಲ್ಲಿ ದೊರಕುತ್ತದೆ. ಬನ್ನಿ, ನೋಡೋಣ:

1. ಗರ್ಭಾವಸ್ಥೆಯಲ್ಲಿ ಹೊಕ್ಕುಳು ಹೊರಚಾಚುತ್ತದೆ.

1. ಗರ್ಭಾವಸ್ಥೆಯಲ್ಲಿ ಹೊಕ್ಕುಳು ಹೊರಚಾಚುತ್ತದೆ.

ಸಾಮಾನ್ಯವಾಗಿ ಒಳಮುಖ ಸರಿದಿರುವ ಹೊಕ್ಕಳು ಗರ್ಭಾವಸ್ಥೆಯ ಕೊನೆಯ ತಿಂಗಳುಗಳು ಹತ್ತಿರ ಬರುತ್ತಿದ್ದಂತೆಯೇ ಒಳಗಿನಿಂದ ಗಾಳಿಯೂದಿ ಪುಟ್ಟ ಬೆಲೂನನ್ನು ಹೊರಬಿಟ್ಟಂತೆ ಹೊರಚಾಚುತ್ತದೆ. ಆದರೆ ಎಲ್ಲಾ ಗರ್ಭಿಣಿಯರಲ್ಲಿಯೂ ಇದು ಆಗಬೇಕೆಂದೇನಿಲ್ಲ. ಕೆಲವರಿಗೆ ಕಡಿಮೆ, ಕೆಲವರಿಗೆ ಹೆಚ್ಚಾಗಬಹುದು. ವಾಸ್ತವದಲ್ಲಿ ಇದು ಗರ್ಭದಲ್ಲಿರುವ ಮಗುವಿಗೆ ಹೆಚ್ಚಿನ ಸ್ಥಳಾವಕಾಶ ಒದಗಿಸಲೆಂದೇ ನಿಸರ್ಗ ಒದಗಿಸಿರುವ ವ್ಯವಸ್ಥೆಯಾಗಿದೆ. ಹೆರಿಗೆಯ ಬಳಿಕ ಬಾಣಂತನದ ಅವಧಿಯಲ್ಲಿ ಇದು ಮತ್ತೊಮ್ಮೆ ಒಳಸರಿದು ಹಿಂದಿನಂತಾಗುತ್ತದೆ.

2. ಹೊಕ್ಕುಳಿಗೆ ಚುಚ್ಚಿಕೊಳ್ಳುವ ಆಭರಣ ಸೋಂಕಿಗೆ ಕಾರಣವಾಗಬಹುದು.

2. ಹೊಕ್ಕುಳಿಗೆ ಚುಚ್ಚಿಕೊಳ್ಳುವ ಆಭರಣ ಸೋಂಕಿಗೆ ಕಾರಣವಾಗಬಹುದು.

ಸಾಮಾನ್ಯವಾಗಿ ಕಿವಿ, ಮೂಗಿಗೆ ಚುಚ್ಚಿಸಿಕೊಂಡು ಆಭರಣ ತೊಟ್ಟುಕೊಳ್ಳುವ ತೂತುಗಳಲ್ಲಿ ಸೋಂಕಾಗುವುದು ಕಡಿಮೆ. ಆದರೆ ಹೊಕ್ಕುಳ ಭಾಗದಲ್ಲಿ ಚುಚ್ಚಿಸಿಕೊಂಡು ತೊಡುವ ಆಭರಣದಿಂದಾಗಿ ಇಲ್ಲಿ ಅತಿ ಸೋಂಕು ತಗಲುವ ಸಾಧ್ಯತೆ ಇದೆ. ಏಕೆಂದರೆ ಈ ಭಾಗದಲ್ಲಿ ಹೆಚ್ಚಿನ ವಿಧದ ಬ್ಯಾಕ್ಟೀರಿಯಾಗಳು ಮನೆ ಮಾಡಿಕೊಂಡಿರುತ್ತವೆ. ಇದೇ ಕಾರಣಕ್ಕೆ ಈ ಭಾಗದಲ್ಲಿ ಚುಚ್ಚಿಸಿಕೊಂಡಾಗ ಆಗಿರುವ ಗಾಯ ಮಾಗಲು ಸುಮಾರು ಒಂದು ವರ್ಷವೇ ಬೇಕು. ಹಾಗಾಗಿ, ಈ ವ್ಯಕ್ತಿಗಳು ಹೊಕ್ಕುಳ ಭಾಗದ ಸ್ವಚ್ಛತೆಯನ್ನು ಅತಿ ಹೆಚ್ಚಾಗಿ ಕಾಪಾಡಿಕೊಂಡು ಸೋಂಕು ಉಂಟಾಗುವ ಸಾಧ್ಯತೆಯನ್ನು ಕನಿಷ್ಟಗೊಳಿಸಬೇಕಾಗುತ್ತದೆ.

3. ಈ ಕುಳಿಯಲ್ಲಿ 2,400 ದಷ್ಟು ಬಗೆಯ ಬ್ಯಾಕ್ಟೀರಿಯಾಗಳಿರಬಹುದು

3. ಈ ಕುಳಿಯಲ್ಲಿ 2,400 ದಷ್ಟು ಬಗೆಯ ಬ್ಯಾಕ್ಟೀರಿಯಾಗಳಿರಬಹುದು

PLOS ONE ಎಂಬ ಮಾಧ್ಯಮದಲ್ಲಿ ಪ್ರಕಟವಾದ ವರದಿಯ ಪ್ರಕಾರ, ಸುಮಾರು ಅರವತ್ತು ಜನರ ಹೊಕ್ಕುಳ ಭಾಗದಲ್ಲಿರುವ ಕೊಳೆಯನ್ನು ಪರೀಕ್ಷೆಗೊಳಪಡಿಸಿದಾಗ ಸುಮಾರು 2,368 ವಿಧದ ಬ್ಯಾಕ್ಟೀರಿಯಾಗಳಿದ್ದುದು ಪತ್ತೆಯಾಗಿದೆ. ಅದರಲ್ಲೂ ಹೆಚ್ಚಿನವು ಕೆಲವರ ದೇಹದಲ್ಲಿ ಮಾತ್ರವೇ ಸಿಗುವ ಅಪರೂಪದ ಬ್ಯಾಕ್ಟೀರಿಯಾಗಳಾಗಿವೆ. ಅಂದರೆ 2,188ರಷ್ಟು ಬ್ಯಾಕ್ಟೀರಿಯಾಗಳು ಶೇಖಡಾ ಹತ್ತರಷ್ಟು ವ್ಯಕ್ತಿಗಳಲ್ಲಿ ಮಾತ್ರವೇ ಕಂಡುಬಂದಿವೆ. ವಾಸ್ತವದಲ್ಲಿ, ವ್ಯಕ್ತಿಯ ಹೊಕ್ಕುಳಲ್ಲಿ ಯಾವ ಬಗೆಯ ಬ್ಯಾಕ್ಟೀರಿಯಾಗಳಿರಬಹುದು ಎಂಬುದನ್ನು ಊಹಿಸಬಹುದಾಗಿದ್ದು ಇವೆಲ್ಲವೂ ಎಂಟು ಪ್ರಮುಖ ಗುಂಪಿಗೆ ಸೇರಿದ ಬ್ಯಾಕ್ಟೀರಿಯಾಗಳೇ ಆಗಿರುತ್ತವೆ.

4. ಹೊಟ್ಟೆಯ ಭಾಗದಲ್ಲಿ ಕೂದಲಿರುವ ವ್ಯಕ್ತಿಗಳಲ್ಲಿ ಹೊಕ್ಕುಳ ಕೊಳೆ ಹೆಚ್ಚೇ ಇರುತ್ತದೆ

4. ಹೊಟ್ಟೆಯ ಭಾಗದಲ್ಲಿ ಕೂದಲಿರುವ ವ್ಯಕ್ತಿಗಳಲ್ಲಿ ಹೊಕ್ಕುಳ ಕೊಳೆ ಹೆಚ್ಚೇ ಇರುತ್ತದೆ

ಹೊಟ್ಟೆಯ ಭಾಗದಲ್ಲಿ ರೋಮಗಳಿರುವ ಪುರುಷರಿಗೆ ಎದೆಯಿಂದ ಹೊಟ್ಟೆಯ ನಟ್ಟ ನಡುವೆ ಒಂದು ಗೆರೆಯಂತೆ ಹೆಚ್ಚು ಕೂದಲುಗಳಿರುವುದನ್ನು ಗಮನಿಸಬಹುದು. ಇವು ನೇರವಾಗಿ ಹೊಕ್ಕುಳ ಮೂಲಕವೇ ಹಾದು ಹೋಗುತ್ತವೆ. ಅಂದರೆ, ಕೂದಲುಗಳ ಮೂಲಕವೂ ಕೊಳೆ ಹೊಕ್ಕುಳ ಭಾಗದಲ್ಲಿ ಹೆಚ್ಚು ಸಂಗ್ರಹಗೊಳ್ಳಬಹುದು. ಆಸ್ಟ್ರೇಲಿಯಾದ ಸಿಡ್ನಿಯ ಸಂಶೋಧಕ ಕಾರ್ಲ್ ಕ್ರುಸ್ಜೆಲ್ನಿಕಿಯವರ ಪ್ರಕಾರ, ನಡುವಯಸ್ಸಿನ, ದೇಹದ ತುಂಬಾ ರೋಮಗಳಿರುವ ಪುರುಷರಿಗೆ ಹೆಚ್ಚು ಹೊಕ್ಕುಳ ಕೊಳೆ ಇರುತ್ತದೆ. ಈ ವ್ಯಕ್ತಿಗಳು ಹೊಕ್ಕುಳ ಭಾಗದ ಕೂದಲುಗಳನ್ನು ಶೇವಿಂಗ್ ಮಾಡಿ ನಿವಾರಿಸಿದರೆ ಈ ತೊಂದರೆಯನ್ನು ಬಹಳಷ್ಟು ತಗ್ಗಿಸಬಹುದು ಎಂದು ವಿವರಿಸುತ್ತಾರೆ.

5. ಚೀನೀ ಚಿಕಿತ್ಸಾ ಪದ್ದತಿಯ ಆಕ್ಯುಪಂಕ್ಚರ್ ನಲ್ಲಿ ಪ್ರಮುಖ ಬಿಂದುವಾಗಿದೆ.

5. ಚೀನೀ ಚಿಕಿತ್ಸಾ ಪದ್ದತಿಯ ಆಕ್ಯುಪಂಕ್ಚರ್ ನಲ್ಲಿ ಪ್ರಮುಖ ಬಿಂದುವಾಗಿದೆ.

ಅತಿ ಸಪೂರವಾದ, ಚೂಪಾಗಿನ ಸೂಜಿಗಳನ್ನು ದೇಹದ ಕೆಲವು ಪ್ರಮುಖ ಸ್ಥಾನಗಳಿಗೆ ಚುಚ್ಚಿ ನೀಡುವ ಚೀನೀ ವೈದ್ಯಪದ್ದತಿಯಾದ ಆಕ್ಯುಪಂಕ್ಚರ್ ನಲ್ಲಿ ನಾಭಿಗೆ ವಿಶೇಷ ಮಹತ್ವವಿದೆ. ಚೀನೀ ವೈದ್ಯರ ಪ್ರಕಾರ, ನಾಭಿ ಇಡಿಯ ದೇಹಕ್ಕೆ ಸಂಪರ್ಕ ಹೊಂದಿದೆ. ಹಾಗಾಗಿ, ಇಲ್ಲಿ ಚುಚ್ಚುವ ಮೂಲಕ ದೇಹದ ಯಾವುದೇ ಭಾಗದಲ್ಲಿ ನೋವು ಉಂಟಾಗಿದ್ದರೂ ಇದನ್ನು ನಿವಾರಿಸಲು ಸಾಧ್ಯವಾಗುತ್ತದೆ. ಜನನಕ್ಕೂ ಮುನ್ನ ಮಗುವಿನ ದೇಹ ಪಡೆದಿದ್ದ ಶಕ್ತಿಯನ್ನು ಈ ಮೂಲಕ ಪಡೆಯಲು ಮತ್ತು ಆರೋಗ್ಯವನ್ನು ಮರುಪಡೆಯಲು ಸಾಧ್ಯವಾಗುತ್ತದೆ ಎಂಬುದು ಈ ಪದ್ದತಿಯ ಸಿದ್ದಾಂತವಾಗಿದೆ.

6. ಹೊಕ್ಕುಳನ್ನು ’ಸರಿಪಡಿಸುವ’ ಶಸ್ತ್ರಚಿಕಿತ್ಸೆಯೂ ಇದೆ:

6. ಹೊಕ್ಕುಳನ್ನು ’ಸರಿಪಡಿಸುವ’ ಶಸ್ತ್ರಚಿಕಿತ್ಸೆಯೂ ಇದೆ:

ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಕೆಲವು ಆಸ್ಪತ್ರೆಗಳಲ್ಲಿ ಹೊಕ್ಕುಳನ್ನು ಸರಿಪಡಿಸುವ ಶಸ್ತ್ರಚಿಕಿತ್ಸೆಯನ್ನೂ ನಡೆಸಲಾಗುತ್ತದೆ. umbilicoplasty ಎಂಬ ಹೆಸರಿನ ಈ ಚಿಕಿತ್ಸೆಯನ್ನು ಮಾಡಿಸಿಕೊಳ್ಳಲು ಸಾವಿರಾರು ಜನರು ಪ್ರತಿವರ್ಷ ಆಸ್ಪತ್ರೆಗೆ ದಾಖಲಾಗುತ್ತಾರೆ. ಈ ಶಸ್ತ್ರಚಿಕಿತ್ಸೆಯಲ್ಲಿ ಹೊರಚಾಚಿದ್ದ ಹೊಕ್ಕಳನ್ನು ಒಳಸರಿಸಲಾಗುತ್ತದೆ. ಅಮೇರಿಕಾದಲ್ಲಿ ಈ ಚಿಕಿತ್ಸೆಗೆ $2,400 ಖರ್ಚು ಬರುತ್ತದೆ. ಚಿಕಿತ್ಸೆಯ ಬಳಿಕ ಇವರಿಗೆ ತಮ್ಮ ಹೊಟ್ಟೆ ಈಗ ಸುಂದರವಾಗಿ ಕಾಣಿಸುತ್ತದೆ ಎಂಬ ಭಾವನೆಯೇ ಆತ್ಮವಿಶ್ವಾಸ ಮೂಡಿಸಲು ಕಾರಣವಾಗಿರುವುದು ಮಾತ್ರ ಸುಳ್ಳಲ್ಲ.

7. ಹೊಕ್ಕಳು ಪ್ರತಿಯೊಬ್ಬರಲ್ಲಿಯೂ ಇರಲೇಬೇಕೆಂದಿಲ್ಲ

7. ಹೊಕ್ಕಳು ಪ್ರತಿಯೊಬ್ಬರಲ್ಲಿಯೂ ಇರಲೇಬೇಕೆಂದಿಲ್ಲ

ಅಪರೂಪದ ಸಂದರ್ಭಗಳಲ್ಲಿ ಕೆಲವು ಶಿಶುಗಳಲ್ಲಿ ಹೊಕ್ಕುಳ ಬಳ್ಳಿ ಇರಬೇಕಾದುದಲ್ಲಿ ಕೊಂಚ ದೊಡ್ಡದೇ ಆದ ತೂತು ಇರುತ್ತದೆ ಹಾಗೂ ಈ ಭಾಗದಿಂದ ಹೊಟ್ಟೆಯೊಳಗಿನ ಕರುಳುಗಳು ಹೊರಚಾಚುವಂತಿರುತ್ತವೆ. ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ಈ ತೂತನ್ನು ಮುಚ್ಚುತ್ತಾರಾದರೂ ಹೊಕ್ಕುಳ ಭಾಗ ಇರಲಿ ಎಂದು ಕೃತಕವಾಗಿ ಹೊಕ್ಕಳ ರಂಧ್ರವನ್ನು ಮೂಡಿಸುತ್ತಾರೆ.

8. ಹೊಕ್ಕುಳ ಭಾಗದಿಂದಲೂ ಶಿಲೀಂಧ್ರದ ಸೋಂಕು ಎದುರಾಗಬಹುದು

8. ಹೊಕ್ಕುಳ ಭಾಗದಿಂದಲೂ ಶಿಲೀಂಧ್ರದ ಸೋಂಕು ಎದುರಾಗಬಹುದು

ಹೊಕ್ಕುಳ ಭಾಗ ಬ್ಯಾಕ್ಟೀರಿಯಾಗಳ ವಂಶಾಭಿವೃದ್ದಿಯ ತಾಣವಾಗಿದೆ. ಹಾಗಾಗಿ ಇಲ್ಲಿ ಶಿಲೀಂಧ್ರಗಳೂ ಬೆಳೆಯಬಾರದು ಎಂದೇನಿಲ್ಲ, ಇವೂ ಅನಪೇಕ್ಷಿತ ಅತಿಥಿಗಳಾಗಿ ಆಗಮಿಸಿ ಬ್ಯಾಕ್ಟೀರಿಯಾಗಳೊಂದಿಗೆ ಸಹಬಾಳ್ವೆ ನಡೆಸುತ್ತವೆ. ವಿಶೇಷವಾಗಿ ಕ್ಯಾಂಡಿಡಾಸಿಸ್ (Candidasis) ಎಂಬ ಸೋಂಕು ಕ್ಯಾಂಡಿಡಾ ಎಂಬ ಬಗೆಯ ಶಿಲೀಂಧ್ರ ಇಲ್ಲಿ ಬೆಳೆಯುವ ಮೂಲಕ ಹರಡುತ್ತದೆ. ಸಾಮಾನ್ಯವಾಗಿ ಶಿಲೀಂಧ್ರಗಳಿಗೆ ತೇವವಿರುವ, ತಣ್ಣಗಿನ ಮತ್ತು ಕತ್ತಲಿನ ಸ್ಥಳವೇ ಬೇಕು. ಇದೇ ಕಾರಣಕ್ಕೆ ಶಿಲೀಂಧ್ರದ ಸೋಂಕು ಗುಪ್ತಾಂಗಗಳ ಭಾಗದಲ್ಲಿ ಗರಿಷ್ಟವಾಗಿರುತ್ತದೆ. ಆದರೆ ಈ ಕ್ಯಾಂಡಿಡಾ ಶಿಲಿಂಧ್ರ ಇದಕ್ಕೆ ಅಪವಾದವಾಗಿದ್ದು ಕಡಿಮೆ ತೇವ, ಕಡಿಮೆ ತಣ್ಣಗಿರುವ ಮತ್ತು ಕಡಿಮೆ ಕತ್ತಲೆ ಇರುವ ಹೊಕ್ಕುಳ ಭಾಗದಲ್ಲಿಯೂ ಸುಲಭವಾಗಿ ಬೆಳೆಯುತ್ತದೆ. ಹಾಗಾಗಿ ಈ ಸೋಂಕಿಗೆ ಒಳಗಾಗದಂತೆ ತಡೆಯಲು ಸದಾ ಈ ಭಾಗವನ್ನು ಸ್ವಚ್ಛವಾಗಿರಿಸಿಕೊಳ್ಳುವುದೇ ಸುರಕ್ಷಿತ ವಿಧಾನವಾಗಿದೆ. ಒಂದು ವೇಳೆ ಇಲ್ಲಿ ತುರಿಕೆ, ಕೆಂಪಗಾಗುವುದು ಅಥವಾ ಕೆಟ್ಟ ವಾಸನೆ ಸೂಸುತ್ತಿದ್ದಲ್ಲಿ ತಕ್ಷಣವೇ ವೈದ್ಯರನ್ನು ಕಾಣಬೇಕು.

9. ಇಲ್ಲಿ ತನ್ನನ್ನು ತಾನೇ ಸ್ವಚ್ಛಗೊಳಿಸುವ ಯಾವುದೇ ವ್ಯವಸ್ಥೆಯಿಲ್ಲ

9. ಇಲ್ಲಿ ತನ್ನನ್ನು ತಾನೇ ಸ್ವಚ್ಛಗೊಳಿಸುವ ಯಾವುದೇ ವ್ಯವಸ್ಥೆಯಿಲ್ಲ

ಸಾಮಾನ್ಯವಾಗಿ ನಮ್ಮ ಕಿವಿ, ಮೂಗು, ಗಂಟಲು, ಬಾಯಿ, ಗುಪ್ತಾಂಗ ಮೊದಲಾದ ರಂಧ್ರಗಳಲ್ಲಿ ತಮ್ಮನ್ನು ತಾವೇ ಸ್ವಚ್ಛಗೊಳಿಸುವ ವ್ಯವಸ್ಥೆಯಿದೆ. ಇವುಗಳಿಂದ ಸೋರುವ ದ್ರವ ಒಳಭಾಗವನ್ನು ಸ್ವಚ್ಛವಾಗಿರಿಸುತ್ತವೆ. ಆದರೆ ಹೊಕ್ಕುಳಲ್ಲಿ ಇಂತಹ ಯಾವುದೇ ವ್ಯವಸ್ಥೆಯಿಲ್ಲ. ಹಾಗಾಗಿ ಇವುಗಳ ಸ್ವಚ್ಛತೆ ಅವರವರದ್ದೇ ಆಗಿದೆ. ಒಳಭಾಗವನ್ನು ಸ್ವಚ್ಛಗೊಳಿಸಲು ಕಿವಿಯನ್ನು ಸ್ವಚ್ಚಗೊಳಿಸಲು ಬಳಸುವ ಹತ್ತಿಸುತ್ತಿದ ಕಡ್ಡಿಯನ್ನು ರಬ್ಬಿಂಗ್ ಅಲ್ಕೋಹಾಲ್ ಅಥವಾ ಸೂಕ್ತವಾದ ಚರ್ಮವನ್ನು ಸ್ವಚ್ಛಗೊಳಿಸುವ ದ್ರಾವಣದಿಂದ ಒದ್ದೆಯಾಗಿಸಿ ಒಳಭಾಗವನ್ನು ಒತ್ತಿಒರೆಸಿಕೊಂಡು ಸ್ವಚ್ಛಗೊಳಿಸಬೇಕು. ಈ ಮೂಲಕ ಬ್ಯಾಕ್ಟೀರಿಯಾಗಳ ಧಾಳಿಯಿಂದ ಈ ಭಾಗ ರಕ್ಷಿಸಲ್ಪಡುತ್ತದೆ.

10. ಹೆಚ್ಚಿನವರ ಹೊಕ್ಕಳು ಒಳಮುಖ ಸೆಳೆದಿರುತ್ತವೆ

10. ಹೆಚ್ಚಿನವರ ಹೊಕ್ಕಳು ಒಳಮುಖ ಸೆಳೆದಿರುತ್ತವೆ

ಹೆರಿಗೆಯ ಬಳಿಕ ವೈದ್ಯರು ನಿರ್ವಹಿಸಬೇಕಾದ ಪ್ರಮುಖ ಕಾರ್ಯವೆಂದರೆ ಹೊಕ್ಕುಳ ಬಳ್ಳಿಯನ್ನು ಕತ್ತರಿಸುವುದು. ಎಷ್ಟು ಭಾಗ ಹೊರಗಿರುವಂತೆ ಇದನ್ನು ಕತ್ತರಿಸಬೇಕು ಎಂಬುದು ವೈದ್ಯರು ಮತ್ತು ದಾದಿಯರ ಅನುಭವಕ್ಕೆ ಬಿಟ್ಟ ವಿಚಾರವಾಗಿದೆ. ಕೆಲವರು ಕೊಂಚ ಹೆಚ್ಚೇ ಬಿಟ್ಟರೆ ಕೆಲವರು ಹೊಟ್ಟೆಗೆ ಅತಿ ಸಮೀಪವಾಗಿ ಕತ್ತರಿಸುತ್ತಾರೆ. ಆದರೆ ಕೆಲವೇ ದಿನಗಳಲ್ಲಿ ಹೊರಚಾಚಿದ್ದ ಕರುಳುಬಳ್ಳಿ ಒಣಗಿ ಇದರ ಬುಡ ಮಾತ್ರವೇ ಉಳಿಯುತ್ತದೆ. ಕೆಲವು ಮಕ್ಕಳಲ್ಲಿ ಈ ಬುಡ ಕೊಂಚ ದೊಡ್ಡದಾಗಿದ್ದು ಪೂರ್ಣವಾಗಿ ಒಳಸರಿಯಲು ಹೆಚ್ಚಿನ ವರ್ಷ ಕಾಲ ತೆಗೆದುಕೊಳ್ಳುತ್ತದೆ. ಆದರೆ ಹೆಚ್ಚಿನ ಮಕ್ಕಳಲ್ಲಿ ಒಂದೆರೆಡೇ ವರ್ಷದಲ್ಲಿ ಈ ಬುಡ ಸಂಪೂರ್ಣವಾಗಿ ಒಳಸರಿಯುವ ಕಾರಣ ಹೆಚ್ಚಿನ ಜನರಲ್ಲಿ ಈ ಪರಿಯ ಹೊಕ್ಕುಳೇ ಇರುತ್ತದೆ.

11. ಹೊಕ್ಕುಳನ್ನು ನೋಡಿಯೂ ವ್ಯಕ್ತಿಯ ಬಗ್ಗೆ ಜನರು ತಮ್ಮ ತೀರ್ಮಾನಕ್ಕೆ ಬರಬಹುದು

11. ಹೊಕ್ಕುಳನ್ನು ನೋಡಿಯೂ ವ್ಯಕ್ತಿಯ ಬಗ್ಗೆ ಜನರು ತಮ್ಮ ತೀರ್ಮಾನಕ್ಕೆ ಬರಬಹುದು

ಓರ್ವ ವ್ಯಕ್ತಿಯನ್ನು ನೋಟಮಾತ್ರದಿಂದಲೇ ಅಳೆಯುವುದು ವಿಜ್ಞಾನದ ಮೂಲಕವೂ ಸರಿ ಎಂದು ಸಾಬೀತಾಗಿದೆ. The FASEB Journal ಎಂಬ ಮಾಧ್ಯಮದಲ್ಲಿ ಪ್ರಕಟವಾದ ವರದಿಯ ಪ್ರಕಾರ, ಟಿ ಅಕ್ಷರದಂತಿರುವ ಅಥವಾ ಅಂಡಾಕಾರದಲ್ಲಿರುವ ಮತ್ತು ಮೇಲ್ಭಾಗದಲ್ಲಿ ಕೊಂಚ ಹೆಡೆಯಂತೆ ಅಗಲವಾಗಿರುವ ಹೊಕ್ಕಳಿರುವ ವ್ಯಕ್ತಿಗಳನ್ನು ಇಷ್ಟಪಡುತ್ತಾರೆ. ಹೊರಚಾಚಿರುವ ಹೊಕ್ಕಳಿರುವ ವ್ಯಕ್ತಿಗಳನ್ನು ಮೊದಲ ನೋಟಕ್ಕೇ ಯಾರೂ ಇಷ್ಟಪಡಲಾರರು. ಅಂದ ಹಾಗೇ ತೀರಾ ಆಳವಾಗಿರುವ ಮತ್ತು ದೊಡ್ಡದಾಗಿರುವ ಹೊಕ್ಕಳುಗಳೂ ಆಕರ್ಷಕವಲ್ಲ! ಓರ್ವ ಮಹಿಳೆಯ ಫಲವತ್ತತೆಯನ್ನು ಗುರುತಿಸಲೂ ಹೊಕ್ಕುಳನ್ನು ಗಮನಿಸಲಾಗುತ್ತದೆ ಎಂದು ಲೇಖಕರು ವಿವರಿಸುತ್ತಾರೆ. ಇದು ಎಷ್ಟರ ಮಟ್ಟಿಗೆ ನಿಜ ಎಂಬುದನ್ನು ಇನ್ನೂ ಸಾಬೀತುಪಡಿಸಬೇಕಾಗಿದೆಯಷ್ಟೇ.

English summary

Unknown Facts About Navel

Here are unknown facts about navel, take a look...
Story first published: Thursday, December 5, 2019, 17:25 [IST]
X
Desktop Bottom Promotion