For Quick Alerts
ALLOW NOTIFICATIONS  
For Daily Alerts

ರಂಜಾನ್‌ ಆಚರಣೆ ಮೇಲೆ ಕೋವಿಡ್‌ 19 ಪ್ರಭಾವ ಹೇಗಿದೆ?

|

ಮುಸ್ಲಿಂ ಧರ್ಮ ಐದು ಕಡ್ಡಾಯ ನಿರ್ವಹಣೆಗಳ ಮೇಲೆ ಆಧಾರಗೊಂಡಿದೆ. ಇದೆಂದರೆ ಕಲ್ಮಾ (ಏಕದೇವ ನಿಷ್ಠೆ), ನಮಾಜ್ (ಪ್ರಾರ್ಥನೆ) ರೋಜಾ (ಉಪವಾಸ) ಜಕಾತ್ (ಕಡ್ಡಾಯ ದಾನ) ಮತ್ತು ಹಜ್ (ಹಜ್ ಯಾತ್ರೆ). ಇದರಲ್ಲಿ ಮೊದಲ ಎರಡು ನಿತ್ಯದ ಕರ್ಮಗಳಾದರೆ ಮೂರನೆಯ ರೋಜಾ ವರ್ಷದಲ್ಲಿ ಒಂದು ತಿಂಗಳು ಪಾಲಿಸಬೇಕಾದ ಉಪವಾಸವಾಗಿದೆ. ನಾಲ್ಕನೆಯದು ವರ್ಷಕ್ಕೊಂದು ಬಾರಿ ಕಡ್ಡಾಯವಾದರೂ ಐಚ್ಛಿಕವಾಗಿ ಹೆಚ್ಚು ದಾನವನ್ನು ಮಾಡಬಹುದು. ಐದನೆಯ ಹಜ್ ಜೀವಮಾನದಲ್ಲಿ ಕನಿಷ್ಟ ಒಂದು ಬಾರಿ ನಿರ್ವಹಿಸಬೇಕಾದ ಧಾರ್ಮಿಕ ವಿಧಿಯಾಗಿದೆ.

ಸಾಮಾನ್ಯವಾಗಿ ರಂಜಾನ್ ಉಪವಾಸ ಎಂದಾಕ್ಷಣ ಬೆಳಗ್ಗೆ ನಾಲ್ಕೂವರೆಯಿಂದ ಸೂರ್ಯಾಸ್ತ ಸಮಯದವೆರೆಗೂ ಊಟ ನೀರು ಕುಡಿಯದೇ ಇರುವುದು ಮಾತ್ರ ಎಂದು ಹೆಚ್ಚಿನವರು ತಿಳಿದುಕೊಂಡಿದ್ದಾರೆ. ವಾಸ್ತವದಲ್ಲಿ, ಇವು ಉಪವಾಸದ ಭಾಗಗಳೇ ಹೊರತು ಇದೇ ಉಪವಾಸವಲ್ಲ. ನಿಜವಾದ ಉಪವಾಸವೆಂದರೆ ಐಹಿಕ ಜೀವನದ ಯಾವುದೇ ಬಯಕೆಗಳನ್ನು ಈ ಸಮಯದಲ್ಲಿ ಹತ್ತಿಕ್ಕುವುದು. ಇದು ಬಹುತೇಕ ಮಾನಸಿಕವೇ ಆಗಿದೆ. ದೈಹಿಕವಾಗಿ ಊಟ ತಿಂಡಿ ಬಿಡುವುದು ಎಂದರೆ ಹೊಟ್ಟೆಗೆ ಹಾಕಬೇಕಾದ ಆಹಾರದ ಬಯಕೆಯನ್ನು ಹತ್ತಿಕ್ಕುವುದೇ ಆಗಿದೆ.

 How Covid Effecting Ramadhan Rituals

ಉಪವಾಸ ಇರುವಷ್ಟೂ ಸಮಯ ಮನಸ್ಸನ್ನು ಕಟ್ಟು ನಿಟ್ಟಿನ ಸ್ಥಿಮಿತದಲ್ಲಿರಿಸಿ ಯಾವುದೇ ಪ್ರಲೋಭನೆಗೆ ಒಳಗಾಗದಿರುವುದು, ಇಂದ್ರಿಯಗಳ ಬಯಕೆಗಳನ್ನು ತಡೆಯುವುದೂ ಇದರ ಭಾಗಗಳಾಗಿವೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಉಪವಾಸವಿದ್ದೇನೆ ಎಂದು ಮನಸ್ಸಿನಲ್ಲಿ ಗಟ್ಟಿಯಾಗಿರಿಸಿ ಎಲ್ಲಾ ಕಟ್ಟುಪಾಡುಗಳನ್ನು ಅನುಸರಿಸಬೇಕು. ಸುಳ್ಳು ಹೇಳುವುದು, ಮೋಸ ಮಾಡುವುದು, ದ್ರೋಹ ಎಸಗುವ ಮನಸ್ಸು ಎಲ್ಲವನ್ನೂ ಈ ಸಮಯದಲ್ಲಿ ಕಡ್ಡಾಯವಾಗಿ ಹತ್ತಿಕ್ಕಿಕೊಳ್ಳಬೇಕು.

ಅಂದರೆ ರಂಜಾನ್ ಮುಗಿದ ಬಳಿಕ ಇವನ್ನು ಮತ್ತೆ ಪ್ರಾರಂಭಿಸುವುದು ಎಂದರ್ಥವಲ್ಲ, ಬದಲಿಗೆ ಒಂದು ತಿಂಗಳ ಕಠಿಣ ತರಬೇತಿಯ ಬಳಿಕ ಮುಂದಿನ ದಿನಗಳಲ್ಲಿಯೂ ಇದೇ ಮಾನಸಿಕ ದೃಢತೆಯನ್ನು ಮುಂದುವರೆಸಿಕೊಂಡು ಹೋಗಬೇಕಾಗುತ್ತದೆ. ಒಂದು ವೇಳೆ ನೆನಪಿಲ್ಲದೇ ಊಟ ಮಾಡಿದರೂ ಉಪವಾಸ ಅಸಿಂಧುವಾಗುವುದಿಲ್ಲ. ಆದರೆ ನೆನಪಿದ್ದೂ ಉಪ್ಪಿನ ಒಂದು ಕಾಳನ್ನು ನೆಕ್ಕಿದರೂ ಉಪವಾಸ ಭಂಗಗೊಳ್ಳುತ್ತದೆ. ಈ ವಿಷಯ ಅರ್ಥವಾದರೆ ಉಳಿದೆಲ್ಲಾ ವಿಷಯಗಳು ಸ್ಪಷ್ಟವಾದಂತೆ.

ಈ ವರ್ಷದ ರಂಜಾನ್ ಕೋವಿಡ್ ಗೃಹಬಂಧನದ ಸಮಯದಲ್ಲಿ ಆಗಮಿಸಿದೆ. ವೈರಸ್ ಹರಡುವಿಕೆಯನ್ನು ತಡೆಯುವ ಎಲ್ಲಾ ಕ್ರಮಗಳಲ್ಲಿ ಸಾರ್ವಜನಿಕ ಸಂಪರ್ಕಕ್ಕೂ ಅನಿವಾರ್ಯ ತಡೆಯುಂಟಾಗಿರುವುದು ರಂಜಾನ್ ತಿಂಗಳ ನಿರ್ವಹಣೆಯ ಮೇಲೂ ಗಾಢ ಪ್ರಭಾವ ಬೀರಿದೆ. ಇದರಲ್ಲಿ ಅತಿ ಪ್ರಮುಖವಾದದು ಎಂದರೆ ಸಾಮೂಹಿಕ ಪ್ರಾರ್ಥನೆ. ಈ ತಿಂಗಳ ಪ್ರತಿ ಹೊತ್ತಿನ ಪ್ರಾರ್ಥನೆಗೂ ಉಳಿದ ಸಮಯಕ್ಕಿಂತಲೂ ಹೆಚ್ಚಿನ ಫಲವಿದೆ ಎಂದೇ ಹೆಚ್ಚಿನ ಭಕ್ತರು ಯಾವುದೇ ಪ್ರಾರ್ಥನೆಯನ್ನು ಮಸೀದಿಯಲ್ಲಿ ಸಾಮೂಹಿಕವಾಗಿ ನಿರ್ವಹಿಸಲು ಆಗಮಿಸುತ್ತಾರೆ. ಆದರೆ ಈ ವರ್ಷ ಹೀಗಾಗದೇ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳಲ್ಲಿಯೇ ಪ್ರತ್ಯೇಕವಾಗಿ ನಿರ್ವಹಿಸಬಹುದು ಅಥವಾ ಕುಟುಂಬದ ಸದಸ್ಯರು ಮಾತ್ರವೇ ಮನೆಯೊಳಗೇ ಸಾಮೂಹಿಕ ಪ್ರಾರ್ಥನೆ ಸಲ್ಲಿಸಬಹುದು.

ಉಪವಾಸ ಮತ್ತು ರೋಗ ನಿರೋಧಕ ಶಕ್ತಿಯ ಉಡುಗುವಿಕೆ

ಉಪವಾಸ ಮತ್ತು ರೋಗ ನಿರೋಧಕ ಶಕ್ತಿಯ ಉಡುಗುವಿಕೆ

ರಂಜಾನ್ ಆಚರಣೆಯ ಉಪವಾಸದ ಕುರಿತು ಅತಿ ಹೆಚ್ಚು ಕಾಳಜಿಯ ಪ್ರಶ್ನೆ ಎಂದರೆ ಈ ಸಮಯದಲ್ಲಿ ಉಪವಾಸವಿರುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಉಡುಗುವುದಿಲ್ಲವೇ? ಹೀಗಾಗರೆ ಕೊರೋನಾ ವೈರಸ್ ಸೋಂಕು ಆವರಿಸುವ ಸಾಧ್ಯತೆ ಪ್ರತಿ ಉಪವಾಸಿಗನಿಗೂ ಹೆಚ್ಚುವುದಿಲ್ಲವೇ? ಈ ಪ್ರಶ್ನೆಗೆ ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಆರೋಗ್ಯ ತಜ್ಞರು ಈಗಾಗಲೇ ನೀಡಿರುವ ಶಿಫಾರಸ್ಸುಗಳ ಪ್ರಕಾರ, ಜನರು ಸಾಕಷ್ಟು ದ್ರವಗಳನ್ನು ಕುಡಿಯಲು ಸೂಚಿಸಲಾಗಿದೆ, ವಿಶೇಷವಾಗಿ ಬೆಚ್ಚಗಿನ ನೀರು ಮತ್ತು ಕುಡಿಯುವ ದ್ರವಗಳಿಂದ ತಮ್ಮ ಗಂಟಲು ಮತ್ತು ಉಸಿರಾಟದ ಪ್ರದೇಶವನ್ನು ತೇವವಾಗಿಡಬೇಕು.

ಆರೋಗ್ಯ ತಜ್ಞರು ಹೇಳುವಂತೆ ಕುಡಿಯುವ ನೀರು ನಿರ್ಜಲೀಕರಣವನ್ನು ತಡೆಯುತ್ತದೆ, ಆದರೆ ಇದು ಹೊಸ ಕರೋನವೈರಸ್ ಸೋಂಕಿನಿಂದ ರಕ್ಷಣೆ ನೀಡುವುದಿಲ್ಲ. ಅಂದರೆ ದಿನದ ಹೊತ್ತು ಏರುತ್ತಾ ಹೋದಂತೆ ದೇಹದಲ್ಲಿ ನೀರಿನ ಪ್ರಮಾಣ ತಗ್ಗುತ್ತಾ ಹೊಗುತ್ತದೆ ಮತ್ತು ಗಂಟಲು ಹಾಗೂ ಇತರ ಭಾಗಗಳು ಇತರರಿಗಿಂತ ಕೊಂಚ ಹೆಚ್ಚೇ ಒಣಗುತ್ತವೆ. ಅಂದರೆ ಇರಬೇಕಾದುದಷ್ಟು ತೇವಾಂಶ ಲಭಿಸಬೇ ಹೋಗಬಹುದು.

ಇದು ಕೊರೋನಾ ಸಹಿತ ಯಾವುದೇ ವೈರಸ್ ಸೋಂಕು ತಗಲಲು ಸೂಕ್ತ ವಾತಾವರಣವಾಗಿದೆ. ಆದರೆ ವಾಸ್ತವದಲ್ಲಿ, ಹೀಗಾಗಿದ್ದರೆ ಪ್ರತಿ ಉಪವಾಸ ಹಿಡಿಯುವ ವ್ಯಕ್ತಿಗೆ ತಕ್ಷಣವೇ ಶೀತವಾಗಬೇಕಿತ್ತು. ಹಾಗಾಗುವುದಿಲ್ಲ. ಇದಕ್ಕೆ ನಮ್ಮ ದೇಹದ ವಿಶಿಷ್ಟ ಶಕ್ತಿಯೇ ಕಾರಣ. ಯಾವಾಗ ನಮ್ಮ ದೇಹಕ್ಕೆ ನೀರು ಅಥವಾ ಆಹಾರದ ಕೊರತೆಯಾಗುತ್ತದೆಯೋ ಆಗ ದೇಹವೇ ಇರುವ ನೀರಿನ ಬಳಕೆಯನ್ನು ಗರಿಷ್ಟ ಮಟ್ಟದಲ್ಲಿ ಬಳಸಿಕೊಳ್ಳಲು ಯತ್ನಿಸುತ್ತದೆ. ಹಾಗಾಗಿ ಅಗತ್ಯವಿರುವಲ್ಲೆಲ್ಲಾ ತೇವಾಂಶ ಅಷ್ಟೇ ಇರುತ್ತದೆ. ಉದಾಹರಣೆಗೆ ಬೆಳಗ್ಗಿನಿಂದ ಉಪವಾಸವಿರುವ ವ್ಯಕ್ತಿಯ ಗಂಟಲ ಒಳಗಿನ ತೇವಾಂಶಕ್ಕೂ ಬೆಳಗ್ಗಿನಿಂದ ಸಾಕಷ್ಟು ನೀರು ಕುಡಿದಿರುವ ವ್ಯಕ್ತಿಯ ಗಂಟಲ ತೇವಾಂಶಕ್ಕೂ ವ್ಯತ್ಯಾಸವೇ ಇರುವುದಿಲ್ಲ.

ಈ ಶಕ್ತಿಯನ್ನು ಉಪವಾಸದ ಮೂಲಕ ಹೆಚ್ಚು ಹೆಚ್ಚು ಸಬಲಗೊಳಿಸಿದರೆ ದೇಹದ ಹಲವಾರು ತೊಂದರೆಗಳು ಇಲ್ಲವಾಗುತ್ತವೆ ಎಂದು ಇಂಗ್ಲೆಂಡಿನ National Institute on Aging ಸಂಸ್ಥೆ ಹಲವಾರು ಅಧ್ಯಯನಗಳ ಬಳಿಕ ಧೃಢೀಕರಿಸಿದೆ. ಹಾಗಾಗಿ, ಉಪವಾಸವಿದ್ದರೆ ರೋಗ ನಿರೋಧಕ ಶಕ್ತಿ ಉಡುಗುತ್ತದೆ ಎಂಬ ಮಾತಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ಆದರೆ ಈಗಾಗಲೇ ರೋಗ ನಿರೋಧಕ ಶಕ್ತಿ ಕುಂಠಿತಗೊಂಡಿದ್ದು ಅನಾರೋಗ್ಯದಲ್ಲಿರುವ ವ್ಯಕ್ತಿಗಳಿಗೆ ಉಪವಾಸದ ಪ್ರಭಾವದಿಂದ ಕೊಂಚ ಅನಾನುಕೂಲತೆ ಕಾಣಿಸಿಕೊಳ್ಳಬಹುದು. ಇದು ಆಯಾ ವ್ಯಕ್ತಿಗಳ ಕಾಯಿಲೆ ಮತ್ತು ಚಿಕಿತ್ಸೆಯನ್ನು ಅವಲಂಬಿಸಿರುತ್ತದೆ ಹಾಗೂ ಇವರಿಗೆ ಚಿಕಿತ್ಸೆ ನೀಡುವ ವೈದ್ಯರೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕೇ ಹೊರತು ಎಲ್ಲಾ ರೋಗಿಗಳು ಉಪವಾಸ ಇರಬೇಕು ಅಥವಾ ಇರಬಾರದು ಎಂದು ನಿರ್ಧರಿಸಲಾಗದು.

ಸಾಮೂಹಿಕ ಪ್ರಾರ್ಥನೆ

ಸಾಮೂಹಿಕ ಪ್ರಾರ್ಥನೆ

ಹೌದು, ಇತರ ಎಲ್ಲಾ ಕಡೆಯಲ್ಲಾದಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಸಾಮೂಹಿತ ಪ್ರಾರ್ಥನೆಯ ಮೇಲೆ ಅಪಾರ ಪ್ರಭಾವ ಬೀರಿದೆ. ಈ ವರ್ಷದಲ್ಲಿ ದಿನದ ಎಲ್ಲಾ ಐದು ಹೊತ್ತಿನ ಕಡ್ಡಾಯ ಪ್ರಾರ್ಥನೆಗಳನ್ನೂ, ರಾತ್ರಿಯ ಹೊತ್ತು ನಿರ್ವಹಿಸಲಾಗುವ ದೀರ್ಘಾವಧಿಯ ಐಚ್ಛಿಕ ಪಾರ್ಥನೆಯನ್ನೂ ಸಾಮೂಹಿಕವಾಗಿ ಮಸೀದಿಗಳಲ್ಲಿ ಕೈಗೊಳ್ಳುವಂತಿಲ್ಲ, ಕೈಗೊಳ್ಳಲೂಬಾರದು. ಪ್ರತಿ ವ್ಯಕ್ತಿಗಳೂ ತಮ್ಮ ಮನೆಯಲ್ಲಿಯೇ ನಿರ್ವಹಿಸಬೇಕು ಹಾಗೂ ಕೇವಲ ಮನೆಯ ಸದಸ್ಯರು ಮಾತ್ರವೇ ಮನೆಯೊಳಗೆ ಸಾಮೂಹಿಕ ಪ್ರಾರ್ಥನೆ ಮಾಡಬಹುದು.

ಮಕ್ಕಾ ಮದೀನಾ ನಗರಗಳಲ್ಲಿಯೂ ಸಾಮೂಹಿಕ ಪ್ರಾರ್ಥನೆಗೆ ತಡೆ

ಮಕ್ಕಾ ಮದೀನಾ ನಗರಗಳಲ್ಲಿಯೂ ಸಾಮೂಹಿಕ ಪ್ರಾರ್ಥನೆಗೆ ತಡೆ

ಈ ಎರಡು ಪವಿತ್ರ ನಗರಗಳಲ್ಲಿರುವ ಮಸೀದಿಗಳಲ್ಲಿ ಇತಿಹಾಸದ ಯಾವುದೇ ದಿನದಲ್ಲಿಯೂ ಒಂದು ಹೊತ್ತೂ ಪ್ರಾರ್ಥನೆ ಇಲ್ಲದ ದಿನವಿರಲಿಲ್ಲ. ಆದರೆ 1450 ವರ್ಷಗಳ ಇಸ್ಲಾಮಿಕ್ ಇತಿಹಾಸದಲ್ಲಿ ವರ್ಷಕ್ಕೊಂದು ಬಾರಿ ನಿರ್ವಹಿಸಲಾಗುವ ಹಜ್ ಯಾತ್ರೆ ಇದುವರೆಗೆ ನಲವತ್ತು ಬಾರಿ ನಿರ್ವಹಿಸಲಾಗಿಲ್ಲ. (ಮೊದಲ ಬಾರಿ 629 AD, 930-940 AD- ಸತತ ಹತ್ತು ವರ್ಷ ಹಜ್ ಇರಲಿಲ್ಲ, 967 AD- ಪ್ಲೇಗ್, 983 - 991 AD- ಯುದ್ದ, 1256 ರಿಂದ 1260 AD- ರಾಜಕೀಯ ಕಾರಣಗಳು, 1831-ಪ್ಲೇಗ್, 1837 - 1858 ಮಾರಣಾಂತಿಕ ಸಾಂಕ್ರಾಮಿಕ ರೋಗಗಳು, 1840.,1846 , 1858-ಕಾಲರಾ ರೋಗ, 1837 ರಿಂದ 1858 ನಡುವೆ ಮೂರು ಬಾರಿ ಪ್ಲೇಗ್ ಕಾರಣ.) ಯುದ್ದ, ಮಾರಣಾಂತಿಕ ಕಾಯಿಲೆ ಅಥವಾ ರಾಜಕೀಯ ಕಾರಣಗಳಿಂದ ಇದುವರೆಗೆ ನಲವತ್ತು ಬಾರಿ ರದ್ದಾಗಿದೆ.

ಆ ಪ್ರಕಾರ, ಹಜ್ ಅಥವಾ ರಮಧಾನ್ ನ ಸಾಮೂಹಿಕ ಪ್ರಾರ್ಥನೆಗಳು ರದ್ದಾಗಿರುವುದು ಇದೇ ಮೊದಲ ಬಾರಿಯೇನೂ ಅಲ್ಲ. ಈ ವರ್ಷದ ರಮಧಾನ್ ತಿಂಗಳಲ್ಲಿ ಯಾವುದೇ ಇಫ್ತಾರ್ ಕೂಟಗಳು ಅಥವಾ ವಿಶೇಷ ಪ್ರಾರ್ಥನೆಗಳು ಇರುವುದಿಲ್ಲ ಎಂದು ಸೌದಿ ಅರೇಬಿಯಾ ಸರ್ಕಾರ ಈಗಾಗಲೇ ಘೋಷಿಸಿಯಾಗಿದೆ. ಭಾರತದಲ್ಲಿಯೂ ಈಗಾಗಲೇ ಎಲ್ಲಾ ಮಸೀದಿಗಳಲ್ಲಿ ಇದೇ ಪ್ರಕಾರದ ಘೋಷಣೆಗಳನ್ನು ಮಾಡಲಾಗಿದ್ದು ಹಿಂದಿನ ವರ್ಷಗಳಂತೆ ಇಫ್ತಾರ್ ಕೂಟಗಳು ಇರುವುದಿಲ್ಲ.

ಆಹಾರ ಹಂಚಿಕೊಳ್ಳುವಿಕೆಗೆ ತಡೆ

ಆಹಾರ ಹಂಚಿಕೊಳ್ಳುವಿಕೆಗೆ ತಡೆ

ರಮಧಾನ್ ತಿಂಗಳ ಇನ್ನೊಂದು ಮುಖ್ಯ ಅಂಗವೆಂದರೆ ಜಕಾತ್ ಅಥವಾ ಕಡ್ಡಾಯ ದಾನ. ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವವರು ತಮ್ಮ ಆದಾಯದ ಇಷ್ಟು ಭಾಗವನ್ನು ಸಮಾಜದ ಕೆಳಸ್ತರದ ವ್ಯಕ್ತಿಗಳಿಗೆ ನೀಡಿ ಅವರೂ ಸಬಲರಾಗಲು ನೆರವಾಗಬೇಕು ಎಂಬುದೇ ಇದರ ಹಿಂದಿರುವ ತತ್ವವಾಗಿದೆ. ಈ ಜಕಾತ್ ಕೇವಲ ಹಣದ ರೂಪದಲ್ಲಿ ಇರಬೇಕಾಗಿಲ್ಲ, ಆಹಾರ, ಬಟ್ಟೆ, ನೆರವು, ದಿನಬಳಕೆಯ ವಸ್ತುಗಳು ಅಥವಾ ಇನ್ನಾವುದೇ ರೂಪದಲ್ಲಿರಬಹುದು.

ಆದರೆ ಕೊರೋನಾ ಈ ಎಲ್ಲಾ ಪ್ರಕ್ರಿಯೆಗಳಿಗೆ ತಡೆಯೊಡ್ಡಿದೆ. ಯಾವುದೇ ವಸ್ತುಗಳನ್ನು ನೀಡುವಾಗ ಅಥವಾ ಪಡೆಯುವಾಗ ಸೋಂಕು ಹರಡುವ ಸಾಧ್ಯತೆ ಇದ್ದೇ ಇರುತ್ತದೆ. ಹಾಗಾಗಿ ಈ ಕ್ರಿಯೆಯಲ್ಲಿ ಭಾಗಿಯಾಗುವ ಯಾರಿಗೇ ಆದರೂ ಸೋಂಕು ಆವರಿಸುವ ಭಯ ಇದ್ದೇ ಇರುತ್ತದೆ. ಯಾವುದೇ ಸ್ಥಳದಲ್ಲಿ ಇಫ್ತಾರ್ ವ್ಯವಸ್ಥೆ ಇರುವುದಿಲ್ಲ ಎಂದು ಈಗಾಗಲೇ ಘೋಷಿಸಿರುವ ಕಾರಣ ಆಹಾರವನ್ನು ಏನಿದ್ದರೂ ಕೇವಲ ಪ್ಯಾಕೆಟ್ಟುಗಳಲ್ಲಿ ಮಾತ್ರವೇ ಹಂಚಲು ಸಾಧ್ಯ. ಅದರೆ, ಈ ಪ್ರಕ್ರಿಯೆಯೂ ಸೋಂಕಿನ ಸಾಧ್ಯತೆಗಳಿಂದ ಹೊರತಾಗಿಲ್ಲ. ಹಾಗಾಗಿ ಆಹಾರ ತಯಾರಿಸುವವರು, ಹಂಚಿಕದಾರರು ಮತ್ತು ಪಡೆಯುವವರು ಎಲ್ಲರೂ ಸೂಕ್ತ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕಾಗುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿರುವ ಪ್ರಣಾಳಿಕೆ

ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿರುವ ಪ್ರಣಾಳಿಕೆ

  • ಇತರ ವರ್ಷಗಳಂತೆ ಈ ವರ್ಷ ಪರಸ್ಪರ ಶುಭಾಶಯಗಳನ್ನು ಕೈ ಕುಲುಕದೇ ದೂರದಿಂದಲೇ ಕೈಬೀಸುವ ಮೂಲಕ ವಿನಿಮಯ ಮಾಡಿಕೊಳ್ಳಿ.
  • ಸಾರ್ವಜನಿಕ ಸ್ಥಳದಲ್ಲಿ ಅನಿವಾರ್ಯವಾದ ಹೊರತು ಹೊರಗೆ ಹೋಗದಿರಿ. ಹೋಗಬೇಕಾದರೆ ಕನಿಷ್ಟ ಒಂದು ಮೀಟರ್ ಅಥವಾ ಮೂರು ಅಡಿಯಾದರೂ ಅಂತರ ಕಾಪಾಡಿಕೊಳ್ಳಿ.
  • ಮನರಂಜನಾ ಸ್ಥಳಗಳು, ಮಾರುಕಟ್ಟೆ, ಅಂಗಡಿ ಮೊದಲಾದ ಸ್ಥಳಗಳಲ್ಲಿ ಆದಷ್ಟೂ ಜನಸಂದಣಿ ಇರದಂತೆ ನೋಡಿಕೊಳ್ಳಿ.Rama ಮನರಂಜನಾ ಸ್ಥಳಗಳು, ಮಾರುಕಟ್ಟೆಗಳು ಮತ್ತು ಅಂಗಡಿಗಳಂತಹ ರಂಜಾನ್ ಚಟುವಟಿಕೆಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಸೇರುವುದನ್ನು ನಿಲ್ಲಿಸಿ.
  • ಒಂದು ವೇಳೆ ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ ಅಥವಾ COVID-19 ನ ಯಾವುದೇ ರೋಗಲಕ್ಷಣಗಳನ್ನು ತೋರುತ್ತಿದ್ದರೆ ಉಪವಾಸ ಹಿಡಿಯದಿರಿ ಮತ್ತು ವೈದ್ಯರಿಂದ ಪರಿಶೀಲನೆಗೆ ಒಳಗಾಗಿ.
  • ವೃದ್ದರು, ಮಕ್ಕಳು, ಕಾಯಿಲೆ ಇರುವ ವ್ಯಕ್ತಿಗಳು ತಮ್ಮ ವೈದ್ಯರ ಅನುಮತಿಯಿಂದಲೇ ಉಪವಾಸ ಆಚರಿಸಿ.
  • COVID-19 ಸಾಂಕ್ರಾಮಿಕ ಸಮಯದಲ್ಲಿ ನಿರ್ವಹಿಸಬೇಕಾದ ವ್ಯಾಯಾಮಗಳು

    COVID-19 ಸಾಂಕ್ರಾಮಿಕ ಸಮಯದಲ್ಲಿ ನಿರ್ವಹಿಸಬೇಕಾದ ವ್ಯಾಯಾಮಗಳು

    ಉಪವಾಸ ಎಂದರೆ ಇಡಿಯ ದಿನ ಮಲಗಿ ಕಾಲ ಕಳೆಯುವುದು ಎಂದರ್ಥವಲ್ಲ. ಸಾಕಷ್ಟು ದೈಹಿಕ ಚಟುವಟಿಕೆಯ ಅಗತ್ಯವೂ ಇದೆ. ಆದರೆ ಉಪವಾಸ ಇರುವ ಸಮಯದಲ್ಲಿ ಭಾರೀ ವ್ಯಾಯಾಮಗಳನ್ನು ಮಾಡಬಾರದು. ಉಳಿದಂತೆ ಲಘು ವ್ಯಾಯಾಮಗಳಾದ ನಡಿಗೆ, ಮೆಟ್ಟಿಲೇರುವುದು, ಗೃಹ ಕೆಲಸಗಳು ಮೊದಲಾದವುಗಳನ್ನು ತಪ್ಪದೇ ಮಾಡಬೇಕು.

    COVID-19 ಸಾಂಕ್ರಾಮಿಕ ಸಮಯದಲ್ಲಿ ಸೇವಿಸಬೇಕಾದ ಆಹಾರ ಮತ್ತು ಪಾನೀಯಗಳು

    COVID-19 ಸಾಂಕ್ರಾಮಿಕ ಸಮಯದಲ್ಲಿ ಸೇವಿಸಬೇಕಾದ ಆಹಾರ ಮತ್ತು ಪಾನೀಯಗಳು

    ಮುಂಜಾನೆ ಸೂರ್ಯೋದಯಕ್ಕೂ ಮುನ್ನಾ ಹೊತ್ತಿನಲ್ಲಿ ಸೇವಿಸಬೇಕಾದ ಉಪಾಹಾರ (ಸೆಹರಿ) ಉತ್ತಮ ಪ್ರಮಾಣದ ಪೌಷ್ಟಿಕ ಆಹಾರವನ್ನು ಒಳಗೊಂಡಿರಬೇಕು. ಇಡಿಯ ದಿನ ಉಪವಾಸ ಇರಬೇಕಾದ ಕಾರಣ ನಿಧಾನವಾಗಿ ಜೀರ್ಣವಾಗುವ ಆಹಾರಗಳೇ ಸೂಕ್ತ. ಇಡಿಯ ಗೋಧಿ, ಪಾಲಿಶ್ ಮಾಡದ ಅಕ್ಕಿ, ಕುಚ್ಚಿಗೆ ಅಕ್ಕಿ, ರಾಗಿ ಮೊದಲಾದವು ಒಳ್ಳೆಯದು. ಸಂಸ್ಕರಿತ, ಬಿಳಿ ಅಕ್ಕಿಯ ಆಹಾರಗಳು ಅಷ್ಟು ಒಳ್ಳೆಯದಲ್ಲ. ಅಲ್ಲದೇ ಸಾಕಷ್ಟು ನೀರನ್ನೂ ಕುಡಿಯಬೇಕು. ಇಫ್ತಾರ್ ಸಮಯದಲ್ಲಿಯೂ ಅತಿ ಹೆಚ್ಚು ಸಕ್ಕರೆ ಇರುವ ಅಹಾರಗಳನ್ನು ಸೇವಿಸಬಾರದು. ಬದಲಿಗೆ ಆದಷ್ಟೂ ತಾಜಾ ಹಣ್ಣು ತರಕಾರಿಗಳು ಮತ್ತು ದ್ರವಾಹಾರಗಳನ್ನೇ ಸೇವಿಸಬೇಕು.

    ಮಾನಸಿಕ ಸ್ಥಿತಿ ಮತ್ತು ಮಾನಸಿಕ ಆರೋಗ್ಯವನ್ನು ಉತ್ತೇಜಿಸುವುದು

    ಮಾನಸಿಕ ಸ್ಥಿತಿ ಮತ್ತು ಮಾನಸಿಕ ಆರೋಗ್ಯವನ್ನು ಉತ್ತೇಜಿಸುವುದು

    ಈ ವರ್ಷದ ಅಭ್ಯಾಸಗಳು ಖಂಡಿತವಾಗಿಯೂ ಭಿನ್ನವಾಗಿದ್ದು ಹೆಚ್ಚಿನವರು ಈ ಬಗ್ಗೆ ತಮ್ಮ ಅಸಮಾಧಾನವನ್ನು ಖಂಡಿತಾ ವ್ಯಕ್ತಪಡಿಸಬಹುದು. ಆದರೆ, ಈ ಕ್ರಮ ಅನಿವಾರ್ಯ ಮತ್ತು ಪ್ರತಿಯೊಬ್ಬರೂ ಈ ಕಡ್ಡಾಯ ಕ್ರಮಗಳನ್ನು ಅನುಸರಿಸುವುದರಿಂದ ಮಾತ್ರವೇ ಸಾಂಕ್ರಾಮಿಕ ರೋಗ ಹರಡುವುದನ್ನು ತಪ್ಪಿಸಬಹುದು. ರಮಧಾನ್ ತಿಂಗಳು ಬಂದಿದೆ ಎಂದ ಮಾತ್ರಕ್ಕೇ ಈ ಕ್ರಮಗಳಿಗೇನೂ ವಿನಾಯಿತಿ ಇಲ್ಲ ಮತ್ತು ನೀಡಲೂಬಾರದು.

    ಹಾಗಾಗಿ, ಮಾನಸಿಕ ಪ್ರಭಾವವನ್ನೂ ನಾವು ಎದುರಿಸಬೇಕಾಗಿ ಬರಬಹುದು. ಈ ಕಟ್ಟುಪಾಡುಗಳ ಜೊತೆಗೇ ರಮಧಾನ್ ನ ಕಟ್ಟುಪಾಡುಗಳನ್ನೂ ಅನುಸರಿಸುವ ಮೂಲಕ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಯಾವುದಕ್ಕೂ ಧೃತಿಗೆಡಬಾರದು. ಈಗ ಸಿಕ್ಕಿರುವ ಸಮಯವನ್ನು ಧನಾತ್ಮಕ ಧೋರಣೆಯಿಂದ ಬಳಸಿಕೊಳ್ಳುವತ್ತ ಪ್ರಯತ್ನ ನಡೆಸಿದರೆ ಉಪವಾಸದ ಅವಧಿ ಸುಲಭವಾಗಿ ಕಳೆಯುತ್ತದೆ. ಈ ಹೊತ್ತನ್ನು ಆದಷ್ಟೂ ಧಾರ್ಮಿಕ ಗ್ರಂಥಗಳ ಪಾರಾಯಣ, ಇದುವರೆಗೂ ನಿಮಗೆ ಗೊತ್ತಿಲ್ಲದೇ ಇದ್ದ ಮತ್ತು ನೀವು ಅರಿಯಲು ಯತ್ನಿಸುವ ವಿಷಯಗಳನ್ನು ಅರಿಯಲು, ಹೊಸತನ್ನು ಕಲಿಯಲು, ಮೊದಲಾದವುಗಳಿಗೆ ಮೀಸಲಿಡುವ ಮೂಲಕ ಮಾನಸಿಕ ದಾರ್ಢ್ಯತೆ ಮತ್ತು ಪರಿಸ್ಥಿತಿಯನ್ನು ಎದುರಿಸುವ ಸ್ಥೈರ್ಯವನ್ನು ಪಡೆಯಬಹುದು.

English summary

Coronavirus and Ramadan: How the Muslim Month of Fasting Will Differ This Year

Here we are discussing about how covid effecting ramadhan rituals. Fasting is one of the five pillars of Islam, and Muslims are required to fast during Ramadan, the ninth month of the Islamic calendar. Read more.
X
Desktop Bottom Promotion