For Quick Alerts
ALLOW NOTIFICATIONS  
For Daily Alerts

ವಾವ್! ಸೋಯಾ ಚಂಕ್ಸ್ ವೆಜಿಟೇಬಲ್ ಪುಲಾವ್!

By * ನಿವೇದಿತಾ ಪ್ರಭಾಕರ್, ಬೆಂಗಳೂರು
|
Soya chunks vegetable pulao
ಸೋಯಾ ಚಂಕ್ಸ್ ಸೇವಿಸುವುದರಿಂದ ಆರೋಗ್ಯದ ಮೇಲಾಗುವ ಪರಿಣಾಮವನ್ನು ನೋಡಿದರೆ, ಇದನ್ನು ತಿನ್ನಲು ಮನಸಾಗದೆ ಇರದು. ಸೋಯಾ ಚಂಕ್ಸ್ ಬಳಸಿ ಮಾಡಿದ ವೆಜಿಟೇಬಲ್ ಪುಲಾವ್ ಎಂಥಾ ರುಚಿ ಗೊತ್ತಾ? ವಾರಾಂತ್ಯದ ದಿನವನ್ನು ಈ ರೆಸಿಪಿ ತಯಾರಿಸಲು ಮೀಸಲಿಟ್ಟುಬಿಡಿ. ಹೌ ಅಬೌಟ್ ಶನಿವಾರ ಅಥವಾ ಭಾನುವಾರ?

ಮಾಂಸ, ಮೊಟ್ಟೆ, ಹಾಲು ಮತ್ತು ಗೋಧಿಯಲ್ಲಿ ಇರುವ ಪ್ರೊಟೀನ್ ಗಿಂತ ಸೋಯಾ ಚಂಕ್ಸ್ ನಲ್ಲಿ ಹೆಚ್ಚು ಪ್ರೊಟೀನ್ ಇರುತ್ತದೆ. ಕೊಲೆಸ್ಟ್ರಾಲ್ ಕಡಿಮೆ ಮಾಡುವ ಇದು ಹೃದ್ರೋಗಿಗಳಿಗೆ ಹೇಳಿ ಮಾಡಿಸಿದ ಖಾದ್ಯ. ಅಧಿಕ ವಿಟಮಿನ್, ಫೈಬರ್, ಕ್ಯಾಲ್ಶಿಯಂ, ಕಬ್ಬಿಣದ ಅಂಶವಿರುವುದರಿಂದ ಮಕ್ಕಳ ಬೆಳವಣಿಗೆಗೆ ಸಹಕಾರಿ.

ವಾರಾಂತ್ಯಕ್ಕೇ ಏಕೆಂದರೆ, ಈ ರುಚಿಕರವಾದ ಭಾತ್ ಮಾಡುವಾಗ ಬೇಕಾಗುವ ಸಾಮಗ್ರಿಗಳು ಮತ್ತು ತಗಲುವ ಸಮಯ ಸ್ವಲ್ಪ ಜಾಸ್ತಿ. ಬೊಂಬಾಟ್ ಆಗಿ ಮಾಡಬೇಕೆಂದರೆ ಎಲ್ಲ ಪದಾರ್ಥಗಳು ಇರಲೇಬೇಕು ಮತ್ತು ಕ್ರಮಬದ್ಧವಾಗಿ ತಯಾರಿಸಿದರೆ ಸೂಪರಾಗಿರುತ್ತದೆ.

ಬೇಕಾಗುವ ಸಾಮಗ್ರಿಗಳು

ಬಾಸುಮತಿ ಅಕ್ಕಿ 1 ಪಾವು
ಸೋಯಾ ಚಂಕ್ಸ್ 1 ಕಪ್
ತರಕಾರಿಗಳು - ಬೀನ್ಸ್, ಕ್ಯಾರೆಟ್, ಹಸಿ ಬಟಾಣಿ, ಆಲೂ
ಹಸಿಮೆಣಸಿನಕಾಯಿ 2
ಬೆಳ್ಳುಳ್ಳಿ, ಹಸಿಶುಂಠಿ ಪೇಸ್ಟ್ 1 ಚಮಚ
ಜೀರಿಗೆ 1 ಚಮಚ
ದನಿಯಾ ಪುಡಿ, ಜೀರಿಗೆ ಪುಡಿ ಅರ್ಧ ಚಮಚ
ಗರಂ ಮಸಾಲೆ 1 ಚಮಚ
ಅಚ್ಚ ಖಾರದ ಪುಡಿ 1 ಚಮಚ
ತುಪ್ಪ, ಎಣ್ಣೆ
ಲವಂಗ 4
ಉಪ್ಪು
ಕೊತ್ತಂಬರಿ ಸೊಪ್ಪು

ತಯಾರಿಸುವ ವಿಧಾನ

* ಬಾಸುಮತಿ ಅಕ್ಕಿಯನ್ನು ಕುಕ್ಕರಲ್ಲಿ ಹಾಕಿ, ಉದುರುದುರಾಗಿ ಬೇಯಿಸಿಟ್ಟುಕೊಳ್ಳಿ.

* ಸೋಯಾ ಚಂಕ್ಸ್ ನ್ನು ನೀರಿನಲ್ಲಿ ಹಾಕಿ ಮೆತ್ತಗಾಗುವವರೆಗೆ ಕುದಿಸಿಡಿ. ಗಟ್ಟಿಯಾಗಿದ್ದರೆ ಚೆನ್ನಾಗಿರುವುದಿಲ್ಲ.

* ಮುಂದಿನ ಸ್ಟೆಪ್, ಹಸಿ ಮೆಣಸಿನಕಾಯಿ ಪೇಸ್ಟ್ ಮತ್ತು ಬೆಳ್ಳುಳ್ಳಿ-ಹಸಿಶುಂಠಿ ಮಿಶ್ರಣದ ಪೇಸ್ಟನ್ನು ಬೇರೆಬೇರೆಯಾಗಿ ರುಬ್ಬಿಕೊಳ್ಳಿ.

* ಪೇಸ್ಟ್ ತಯಾರಿಸುವ ಮುನ್ನ ತರಕಾರಿಗಳನ್ನು ಸಣ್ಣದಾಗಿ ಹೆಚ್ಚಿಕೊಂಡು ಮೆತ್ತಗಾಗುವಂತೆ ಬೇಯಿಸಿಡಿ.

* ಈಗ, ಒಂದು ಅಗಲ ತಳದ ಪಾತ್ರೆಯಲ್ಲಿ ಮೂರು ಚಮಚ ತುಪ್ಪ ಮತ್ತು ಐದು ಟೇಬಲ್ ಚಮಚ ಎಣ್ಣೆ ಹಾಕಿ ಬಿಸಿಯಾದ ನಂತರ ಜೀರಿಗೆ, ಲವಂಗ, ಹಸಿಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಎರಡು ನಿಮಿಷ ತಾಳಿಸಿ.

* ಬೇಯಿಸಿಟ್ಟುಕೊಂಡ ತರಕಾರಿ ಹಾಕಿ ಕೈಯಾಡಿಸಿ. ಇದಕ್ಕೆ ದನಿಯಾ, ಜೀರಿಗೆ ಮತ್ತು ಅಚ್ಚ ಖಾರದ ಪುಡಿ, ಗರಂ ಮಸಾಲಾ ಹಾಕಿರಿ. ಮಸಾಲೆ ಘಾಟು ಹೋಗುವವರೆಗೆ ತಾಳಿಸಿ.

* ನಂತರ ಅನ್ನ ಸುರುವಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಎರಡು ನಿಮಿಷ ಒಲೆಯ ಮೇಲೆ ಮುಚ್ಚಿಡಿ. ಇದನ್ನು ಸರ್ವಿಂಗ್ ಬೌಲಿಗೆ ಸುರುವಿಕೊಂಡು ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ರುಚಿರುಚಿಯಾದ ಸೋಯಾ ಚಂಕ್ಸ್ ವೆಜಿಟೇಬಲ್ ಪುಲಾವ್ ತಯಾರ್.

* ಬಿಸಿಬಿಸಿಯಾದ ಪುಲಾವನ್ನು ಸೌತೆಕಾಯಿ ರಾಯತದೊಂದಿಗೆ ತಿನ್ನಲು ಚೆನ್ನಾಗಿರುತ್ತದೆ. ಬೇಕಿದ್ದರೆ ಟೊಮೆಟೊ ಸಾಸ್ ನ್ನು ಕೂಡ ಬಳಸಬಹುದು.

ರಾಯತ : ಒಂದು ಬುಟ್ಟಿಯಲ್ಲಿ ಮೊಸರು ತೆಗೆದುಕೊಂಡು ಅದಕ್ಕೆ ಸಣ್ಣಗೆ ಹೆಚ್ಚಿಕೊಂಡ ಸೌತೆಕಾಯಿ, ಈರುಳ್ಳಿ ಹಾಕಿ ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಇಂಗಿನ ಪುಡಿ, ಕೊತ್ತಂಬರಿ ಸೊಪ್ಪು ಹಾಕಿದರೆ ಸೌತೆಕಾಯಿ ರಾಯತ ಸಿದ್ಧ.

;
English summary

Soya chunks vegetable pulao | Health benefits of Soya | Weekend special recipe | ಸೋಯಾ ಚಂಕ್ಸ್ ವೆಜಿಟೇಬಲ್ ಪುಲಾವ್ | ಆರೋಗ್ಯಕರ ತಿನಿಸು

Soya chunks vegetable pulao is healthy and fantastic recipe for any occasion. It has many health benefits, as it reduces cholestrol and helps growing children. Fix a weekend for preparing this delicious south indian cuisine.
Story first published: Friday, July 15, 2011, 15:21 [IST]
X
Desktop Bottom Promotion