Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಅಳಿಯನಿಗೆ ಉಳಿಯದ ಸಾರು

* ಸುಧಾ ಶಿವಕುಮಾರ್, ಭದ್ರಾವತಿ
ಮೂರು ವರ್ಷಗಳ ಹಿಂದೆ ನನ್ನ ಮಗಳ ಮದುವೆ ನಿಶ್ಚಯವಾಗಿತ್ತು. ಅದು ದೀಪಾವಳಿ ಸಮಯ. ನಿಶ್ಚಿತಾರ್ಥ ಆದ ನಂತರ ಮತ್ತು ಮದುವೆ ಮುಹೂರ್ತ ಆಗುವ ನಡುವೆ ಅಳಿಯಂದಿರು ಬೀಗರ ಮನೆಯಲ್ಲಿ ಊಟ ಮಾಡಬಾರದು ಎಂಬ ಪದ್ದತಿ ನಮ್ಮ ಮನೆಯಲ್ಲಿ ಇದೆ. ನಿಶ್ಚಿತಾರ್ಥವಾದ ನಂತರ ಒಂದು ದಿನ ನಮ್ಮ ಭಾವಿ ಅಳಿಯ ಮನೆಗೆ ದಯಮಾಡಿಸಿದ್ದರು. ಅವರು ಊಟ, ಅಂದರೆ ಅನ್ನ ಸಾರು ಹುಳಿ ಪಲಾವ್ ಮುಂತಾದ ಮುಸುರೆ ಪದಾರ್ಥಗಳನ್ನು ತಿನ್ನಬಾರದ ಕಾರಣ ಅವರಿಗೆ ಕೇವಲ ತಿಂಡಿ ಮಾಡಿ ಕೊಡುತ್ತಿದ್ದೆ. ಆವತ್ತು ಮನೆ ತುಂಬ ಮಕ್ಕಳು ಮರಿ ಜನವೋ ಜನ. ಎಲ್ಲರಿಗೂ ಅನ್ನ ಈರುಳ್ಳಿ ಹುಳಿ ಆಲೂಗೆಡ್ಡೆ ಹುಳಿ, ಹುರುಳಿಕಾಯಿ ಪಲ್ಯ, ಸೀಮೆ ಬದನೆಕಾಯಿ ಮೊಸರು ಸಾಸಿವೆ ಮಾಡಿದ್ದೆ. ಆದರೆ ಅಳಿಯಂದರಿಗೆ ಮಾತ್ರ ಸ್ಪೆಷಲ್ ಸಾರು ಮಾಡಿದ್ದೆ.
ಬೆಳಿಗ್ಗೆ ಎಲ್ಲರಿಗೋಸ್ಕರ ಇಡ್ಲಿ ಮಾಡಿದ್ದೆ. ಮಧ್ಯಾನ್ಹ ಅಳಿಯನಿಗೆ ಮತ್ತೆ ತಿಂಡಿ ಆಗಬೇಕು. ಸಭ್ಯ ಅಳಿಯ 'ಮತ್ತೆ ಯಾಕೆ ಬೇರೆ ಮಾಡ್ತೀರಾ, ಇಡ್ಲೀನೇ ಇದ್ರೆ ಕೊಡಿ ಪರವಾಗಿಲ್ಲ' ಎಂದರು. ಇಡ್ಲಿ ಹಿಟ್ಟು ಇತ್ತು ಆದರೆ ಚಟ್ನಿ ಖಾಲಿ ಆಗಿತ್ತು. ಮತ್ತೆ ಚಟ್ನಿ ಮಾಡುವುದಕ್ಕೆ ಬೇಜಾರಾಗಿ ಒಂಥರಾ ಹೊಸ ರುಚಿ ಟೊಮೆಟೋ ಸಾರು ಮಾಡಲು ತೀರ್ಮಾನಿಸಿದೆ. ಅಡುಗೆ ಆಯಿತು, ಊಟದ ಹೊತ್ತು ಸಮೀಪವಾಯಿತು. ಎಲ್ಲರೂ ಊಟದ ಟೇಬಲ್ಲಿಗೆ ಬಂದರು.
ಅಳಿಯ ಟೇಬಲ್ಲಿಗೆ ಬರುವಷ್ಟರಲ್ಲಿ ನನ್ನ ಇನ್ನೊಬ್ಬ ಮಗಳು, ಮೈದುನನ ಮಕ್ಕಳು ಊಟ ಶುರು ಮಾಡಿದ್ದರು. ಅಳಿಯನಿಗೆ ಮಾಡಿದ್ದ ಸಾರಿನ ರುಚಿಯನ್ನು ಸವಿದು ಯಾರೋ 'ಚೆನ್ನಾಗಿದೆ ಚೆನ್ನಾಗಿದೆ' ಎಂದು ಡಂಗುರ ಬಾರಿಸಿದ್ದರು. ಮಕ್ಕಳಿಗೆ ಸೂಕ್ಷ್ಮ ಗೊತ್ತಾಗೋದಿಲ್ಲ. ಮಹಾಜನತೆಗೆ ಮಾಡಿದ ಹುಳಿ ಬಿಟ್ಟು ಅಳಿಯನಿಗೆ ಮಾಡಿದ ಸಾರನ್ನು ಬಡಿಸಿಕೊಂಡು ತಿಂದು ಪಾತ್ರೆ ಖಾಲಿ ಮಾಡಿದರು. ಅಳಿಯ ಡೈನಿಂಗ್ ಟೇಬಲ್ಲಿಗೆ ಬಂದಾಗ ಸಾರು ಖಾಲಿ ಆಗಿ ನಾನು ಪೆಚ್ಚುಮೋರೆ ಹಾಕಿಕೊಳ್ಳಬೇಕಾಯಿತು. ಆನಂತರ ವಿಶಾಲ ಮನೋಭಾವದ ಅಳಿಯಂದಿರು ಚಟ್ನಿ ಪುಡಿ ತುಪ್ಪದಲ್ಲಿ ಇಡ್ಲಿ ತಿಂದು ಮುಗಿಸಿದರು. ಅಂತೂ ಅಳಿಯಂದಿರ ಆವತ್ತಿನ ಮಧ್ಯಾನ್ಹದ ಉಪಾಹಾರ ಕಾರ್ಯಕ್ರಮ ಮುಗಿಯಿತೆನ್ನಿ. ಈ ಪ್ರಸಂಗವನ್ನು ಕೇಳಿದವರೆಲ್ಲ ಉಳಿಯದ ಸಾರಿನ ರೆಸಿಪಿ ಕೇಳುತ್ತಾರೆ. ಅದು ಹೀಗಿದೆ:
ಬೇಕಾಗುವ ಪದಾರ್ಥ:
ಅಡುಗೆ ಎಣ್ಣೆ 6 ಚಮಚ
ದಪ್ಪನೆಯ ಮೂರು ಟೊಮೆಟೊ
ಕಾಯಿತುರಿ ಸ್ವಲ್ಪ
ಜೀರಿಗೆ 1/4 ಚಮಚ
ಸಾರಿನ ಪುಡಿ 2 ಚಮಚ
ಚೂರು ಬೆಲ್ಲ, ರುಚಿಗೆ ಹೊಂದುವಷ್ಟು ಉಪ್ಪು
ಮಾಡುವ ವಿಧಾನ :
ನಾಲಕ್ಕು ಚಮಚ ಎಣ್ಣೆಯನ್ನು ಬಾಣಲೆಗೆ ಹಾಕಿ ಗಾಲಿಗಾಲಿಯಾಗಿ ಹೆಚ್ಚಿಕೊಂಡ ಟೊಮೆಟೊ ಮತ್ತು ಜೀರಿಗೆ ಬೆರಸಿ ಬೇಯಿಸಬೇಕು. ಬೆಂದ ಬಳಿಕ ಕಾಯಿ ತುರಿ ಹಾಕಿ ಸ್ವಲ್ಪಹೊತ್ತು ಬಾಡಿಸಿ ಒಲೆಯಿಂದ ಕೆಳಗಿಳಿಸಿ ಮುಚ್ಚಿಡಬೇಕು. ಟೊಮೆಟೊ ಆರಿದ ನಂತರ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬುವುದು. ರುಬ್ಬಿದ ಪದಾರ್ಥವನ್ನು ಮತ್ತೆ ಒಲೆಯ ಮೇಲಿಟ್ಟು ಚೂರು ನೀರು ಬೆರೆಸಿ ಕುದಿಸಬೇಕು. ಕುದಿಯುವಾಗ ಉಪ್ಪು ಬೆಲ್ಲ ಹಾಕಬೇಕು. ಚೆನ್ನಾಗಿ ಕುದ್ದ ನಂತರ ಕೆಳಗಿಳಿಸಿ ಅದಕ್ಕೆ ಎರಡು ಚಮಚ ಎಣ್ಣೆ, ಸಾಸಿವೆ, ಎರಡು ಒಣ ಮೆಣಸಿನಕಾಯಿ, ಚಿಟಿಕೆ ಇಂಗಿನ ಒಗ್ಗರಣೆ ಕೊಡಬೇಕು. ಈ ಸಾರು ಗಟ್ಟಿಯಾಗಿರುತ್ತದೆ. ಗಟ್ಟಿಯಾದಾಗ ಇಡ್ಲಿ, ಚಪಾತಿಗೆ ಹೊಂದುತ್ತದೆ. ನೀರು ಹೆಚ್ಚಿಗೆ ಹಾಕಿದ್ದರೆ ಅನ್ನದ ಜತೆಗೂ ಸೈ.



Click it and Unblock the Notifications
