Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ಬೇಸಿಗೆಯಲ್ಲಿ ತಂಪು ತಂಪು ಎಳ್ಳು ಜ್ಯೂಸ್!
ಕಾಂಕ್ರೀಟ್ ಕಾಡಿನಲ್ಲಿ ವಾಸಿಸುವ ನಮಗೆ ‘ಅಂತಸ್ತಿನ ಬದುಕಿಗೆ’ ಪೆಪ್ಸಿ, ಕೋಕ್‌ಗಳತ್ತ ಆಸೆಮೂಡಬಹುದಾದರೂ ಅಸಲಿಗೆ ಗ್ರಾಮೀಣ ಪೇಯಗಳನ್ನು ಮಾಡಿ ಕುಡಿದರೆ ಲಾಭ ಅನೇಕ. ಇತ್ತ ಬಾಯಾರಿಕೆ ತಣಿಸಿದಂತೆಯೂ ಆಯ್ತು, ಅಂಥಾ ಪರಿಯಲ್ಲಿ ಖರ್ಚೂ ಇಲ್ಲ, ಮತ್ತು ಎಲ್ಲಕ್ಕಿಂತ ಮೇಲಾಗಿ ನಮ್ಮ ದೇಹಾರೋಗ್ಯಕ್ಕೆ ಈ ಪೇಯಗಳು ತುಂಬ ಒಳ್ಳೆಯವು. ಮತ್ತೆ, ಕಡೆಯುವಕಲ್ಲು ಇಲ್ಲದಿದ್ರೇನಂತೆ ಮಿಕ್ಸಿಯಲ್ಲೇ ಇವನ್ನು ಮಾಡಬಹುದು!
ದಕ್ಷಿಣ ಭಾರತದಲ್ಲಿ ಇನ್ನೇನು ಬೇಸಿಗೆ ಮುಗಿದು ಮಾನ್ಸೂನ್ ಕಾಲಿಡುತ್ತಿದೆ, ಆದರೆ ಉತ್ತರ ಭಾರತ, ಯುರೋಪ್-ಅಮೆರಿಕ ಮುಂತಾಗಿ ಕೆಲ ಪ್ರದೇಶಗಳಲ್ಲಿ ಮುಂದಿನ ಮೂರ್ನಾಲ್ಕು ತಿಂಗಳೂ ಬೇಸಿಗೆಯ ಧಗಧಗ ಬಿಸಿಲು, ಸೆಕೆ, ಬೆವರು ಇರುತ್ತದಲ್ಲ ? ಮನೆಗಳಿಗೆ ಕೂಲರ್ ಅಥವಾ ಏ.ಸಿ ಇದ್ದರೂ ದೇಹಪ್ರಕೃತಿಯಿಂದಾಗಿ ನಮಗೆ ಬಳಲಿಕೆ, ದಾಹ ಇದ್ದೇ ಇರುತ್ತದೆ. ಬ್ರಿಡ್ಜ್ ತೆರೆದು ಪೆಪ್ಸಿನೋ ಅಥವಾ ಕೋಕ್ ಬಾಟಲ್ಲೊ ತೆಗೆದು ಒಂದಿಷ್ಟು ಗಟಗಟಾಯಿಸಿ ಉಸ್ಸಪ್ಪಾ ಅಂತಂದರೂ ವಾಸ್ತವವಾಗಿ ಈ ಪೆಪ್ಸಿ, ಕೋಕ್ ಒಮ್ಮೆ ಮಾತ್ರ ತಂಪಿನ ಅನುಭವ ನೀಡಿ ಮತ್ತೆ ಬಾಯಾರಿಕೆಯನ್ನು ಹೆಚ್ಚಿಸುತ್ತವೆ. ನಮ್ಮ ದೇಹಕ್ಕೂ ಇವು ಒಳ್ಳೆಯದಲ್ಲ. ಹಾಗೆಯೇ ಖಾಯಂ ಐಸ್-ನೀರು ಕುಡಿಯುತ್ತಿದ್ದರೂ ಅದು ಉಷ್ಣಕಾರಕ.
ಇಂಥಾದ್ದರಲ್ಲಿ ಬೇಸಿಗೆಯ ಬವಳಿಯಿಂದ ಪಾರಾಗಲು ಸುಲಭೋಪಾಯ ಎಂದರೆ ನಮ್ಮ ಹಳ್ಳಿಗಳಲ್ಲಿ ಅಜ್ಜಿ-ಅಮ್ಮಂದಿರು ಮಾಡಿ ನಮಗೆ ಕುಡಿಸುತ್ತಿದ್ದ ಎಳ್ಳು ಜ್ಯೂಸ್, ರಾಗಿ ಜ್ಯೂಸ್ ಇತ್ಯಾದಿ. ಅದೂ ಹೇಗಂತೀರಾ, ಕಡೆಯುವ ಕಲ್ಲಿನಲ್ಲಿ ರುಬ್ಬಿ! ಆಹಾ ಅದರ ರುಚಿಯೇ ಸೊಗಸು.
ಬನ್ನಿ, ನಾವೂ ನೀವೂ ಒಮ್ಮೆ ಎಳ್ಳಿನ ಶರಬತ್ತು ಮಾಡಿ ಕುಡಿಯೋಣ.
ಬೇಕಾಗುವ ಪದಾರ್ಥಗಳು : ಎಳ್ಳು 100 ಗ್ರಾಂನಷ್ಟು, ಮತ್ತು ಅಷ್ಟೇ ಪ್ರಮಾಣದಲ್ಲಿ ಬೆಲ್ಲ. ಎಳ್ಳನ್ನು 10-15 ನಿಮಿಷವಾದರೂ ನೀರಲ್ಲಿ ನೆನೆಸಿಟ್ಟು ಆಮೇಲೆ ಮಿಕ್ಸಿಗೆ ಹಾಕಿ, ಸ್ವಲ್ಪ ನೀರು ಸೇರಿಸಿ ಕಡೆಯಬೇಕು. ಎಳ್ಳು ಸರಿಯಾಗಿ ಹುಡಿಯಾಗಿದೆಯೆಂದು ಖಾತರಿಪಡಿಸಿದ ನಂತರ ಅದಕ್ಕೇ ಬೆಲ್ಲವನ್ನೂ ಸೇರಿಸಿ ಇನ್ನೂ ಸ್ವಲ್ಪ ಹೊತ್ತು ರುಬ್ಬಬೇಕು. ಈಗ ಈ ಮಿಶ್ರಣವನ್ನು ಬಟ್ಟೆಯಲ್ಲಿ ಅಥವಾ ಚಹಬಸಿಯುವ ಪಾತ್ರೆ ಬಳಸಿ ಸೋಸಿಕೊಳ್ಳಬೇಕು. ಕುಡಿಯಲು ತಂಪಾದ, ದೇಹಾರೋಗ್ಯಕ್ಕೆ ಹಿತಕರವಾದ ಎಳ್ಳು ಜ್ಯೂಸ್ ತಯಾರ್!
ಇದೇ ವಿಧಾನದಲ್ಲಿ ರಾಗಿಯನ್ನು ನೆನೆಸಿ ರುಬ್ಬಿ ಶರಬತ್ತು ಮಾಡಿಕೊಳ್ಳಬಹುದು. ಹಾಗೆಯೇ ಹೆಸರುಕಾಳು ಸಹ ನೆನೆಸಿ ಬೆಲ್ಲದೊಟ್ಟಿಗೆ ರುಬ್ಬಿದರೆ ಕುಡಿಯಲು ಚೆನ್ನಾಗಿರುತ್ತದೆ. ಅಷ್ಟೇ ಏಕೆ, ಕರಾವಳಿಯಲ್ಲಿ (ಮಂಗಳೂರು ಸೌತೆ ಹೆಚ್ಚಾಗಿ ಬೆಳೆದು ಬಳಸುವುದರಿಂದ) ಮಂಗಳೂರು ಸೌತೆಯ ಬೀಜಗಳನ್ನು ಸಂಗ್ರಹಿಸಿಟ್ಟು ಅವನ್ನು ನೆನೆಸಿ ಬೆಲ್ಲದೊಂದಿಗೆ ರುಬ್ಬಿ, ಬೇಕಿದ್ದರೆ ಪರಿಮಳಕ್ಕೆ ಕಡಿಯುವಾಗಲೇ ಸ್ವಲ್ಪ ಏಲಕ್ಕಿ ಸಹ ಸೇರಿಸಿ, ಶರಬತ್ತು ಮಾಡಿ ಕುಡಿಯುತ್ತಾರೆ!
ಕೋಕ್, ಪೆಪ್ಸಿಗಳಿಗೆ ಖೊಕ್ ಕೊಟ್ಟು ನಮ್ಮ ಗ್ರಾಮೀಣ ಹಿನ್ನೆಲೆಯ ಪೇಯಗಳನ್ನು ಕುಡಿಯುವುದೇ ಒಳಿತಲ್ಲವೇ? ಅದೂ ಮೈಮನಸ್ಸುಗಳಿಗೆ ಅವು ತುಂಬ ಹಿತಕರವಾಗಿರುವ ದೃಷ್ಟಿಯಿಂದ ಮತ್ತು ಹೆಚ್ಚಿನ ಖರ್ಚಿಲ್ಲದೆ ಮನೆಯಲ್ಲೇ ತಯಾರಿಸಿ ಕುಡಿಯಬಹುದಾದ್ದರಿಂದ. ಈ ಬೇಸಿಗೆಯಲ್ಲಿ ಒಮ್ಮೆಯಾದರೂ ಎಳ್ಳು ಜ್ಯೂಸ್ ಮಾಡಿ ಕುಡಿದು ನೋಡಿ, ಆಗ ನನ್ನ ಮಾತನ್ನು ನೀವೂ ಸಮರ್ಥಿಸುತ್ತೀರಿ!



Click it and Unblock the Notifications
