Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ರೊಟ್ಟಿ ಬೊಂಬಾಟಾಗಿದೆ ಬೊಂಬಾಟಾಗಿದೆ!

ನಾನು ಊರಿಗೆ ಬರಲಿ ಎಂದೇ ಕಾಯುತ್ತಿದ್ದ ಇವರೆಲ್ಲ ಈಗ ಬಂದಕೂಡಲೇ 'ಅದು ಮಾಡೆ, ಇದು ಮಾಡಮ್ಮಾ' ಎಂದು ಅಡುಗೆ ತಿಂಡಿಗಳ ಪಟ್ಟಿ ಹಿಡಿದುಕೊಂಡು ನಿಂತಿದ್ದರು. ನಾಲಗೆ ಕೆಟ್ಟಿರಬೇಕು, ಪಾಪ. ಆದರೆ, ಅಡುಗೆ ಮನೆ ಖಾಲಿ ಖಾಲಿ. ಯಾರೂ ಕೂಡ ತಿಂಗಳ ಸಾಮಾನುಗಳನ್ನು ಸೊಸೈಟಿಗೆ ಹೋಗಿ ತಂದಿಟ್ಟಿರಲಿಲ್ಲ. ಮನೆಯಲ್ಲಿ ತರಕಾರಿಗಳೂ ಇರಲಿಲ್ಲ. ಯೋಚನೆ ಮಾಡುತ್ತಿರುವಾಗ ಅಷ್ಟುಹೊತ್ತಿಗೆ ಸರಿಯಾಗಿ ಕೈಗಾಡಿ ತರಕಾರಿಯ ಪುಣ್ಯಾತ್ಮ ಲಕ್ಷ್ಣಣ ಮನೆಮುಂದೆ ಬಂದ. ಬಾರಪ್ಪಾ ಬಾರಪ್ಪಾ ಎಂದು ಬುಟ್ಟಿ ಹಿಡಿದು ಹೋದರೆ ಗಾಡಿಯಲ್ಲಿ ಅಂಥದೇನೂ ತಾಜಾ ತರಕಾರಿ ಕಾಣಿಸಲಿಲ್ಲ.
ಗಾಡಿಯ ಮೂಲೆಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಸ್ವಲ್ಪ ಅವರೇಕಾಯಿ ಇಟ್ಟಿದ್ದ. ಈಗ ಎಚ್ಚೆತ್ತುಕೊಂಡೆ. ಹೌದಲ್ಲಾ! ಈ ಸೀಸನ್ನಿನಲ್ಲಿ ನಾನು ಅವರೇಕಾಯಿ ಅಡುಗೆ ಮಾಡೇ ಇಲ್ಲವಲ್ಲಾ ಎಂದುಕೊಂಡು 1 ಕೆಜಿ ಖರೀದಿಸಿದೆ. ಕಾಯಿ ಒಣಗಿತ್ತು. ಸೀಸನ್ ಹೋಗುತ್ತಿದೆ, ಈಗ ಬಿಟ್ಟರೆ ಆಮೇಲೆ ಸಿಕ್ಕಲ್ಲ ಎಂದು 'ಹೇಗಾದರೂ ಇರಲಿ ಕೊಡಪ್ಪಾ' ಎಂದು ಲಕ್ಷ್ಣಣನಿಗೆ ಹೇಳಿದೆ.
ಕಾಯಿ ಸುಲಿದರೆ ಬರೀ ಹುಳ. ಕಾಯಿಗಳೂ ಚಪ್ಪಟೆ ಚಪ್ಪಟೆ. ಚೆನ್ನಾದ ಕಾಯಿಗಳು ಕೆಲವು ಇದ್ದವು. ಆದರೆ ಕಾಳುಗಳು ಕಪ್ಪುಕಪ್ಪು, ಸ್ವಲ್ಪ ಬಲಿತಿತ್ತು ಕೂಡ. ಅದನ್ನೇ ಹಾಗೂ ಹೀಗೂ ಕ್ಲೀನ್ ಮಾಡಿ ಸುಲಿದೆ. ಎರಡು ಕಪ್ಪು ಕಾಳು ರೆಡಿ ಆಯಿತು. ಅಡುಗೆ ಮನೆಯ ಶೆಲ್ಫ್ ನಾನು ಆಸ್ಟ್ರೇಲಿಯಾಗೆ ಹೋದಾಗ ಹೇಗೆ ಇಟ್ಟಿದ್ದೇನೋ ಹಾಗೇ ಇತ್ತು. ಧೂಳು ಕೂಡ ಒರೆಸಿರಲಿಲ್ಲ. ನಾನಷ್ಟೇ ಉಪಯೋಗಿಸುವ ಸಾಮಾನುಗಳನ್ನು ನಮ್ಮ ಮನೆಯಲ್ಲಿ ಯಾರೂ ಮುಟ್ಟಿಕೂಡ ನೋಡುವುದಿಲ್ಲ. ತುಂಬಾ ಒಳ್ಳೆ ಜನ. ಶೆಲ್ಫ್ ನಲ್ಲಿ ಸ್ಟೀಲ್ ಡಬ್ಬಿಯಲ್ಲಿ ಇಟ್ಟಿದ್ದ ಅಕ್ಕಿ ಹಿಟ್ಟು ಹಾಗೇ ಇತ್ತು. ಪುಣ್ಯಕ್ಕೆ ಕೆಟ್ಟುಹೋಗಿರಲಿಲ್ಲ. ಅದನ್ನೇ ಇನ್ನೊಂದು ಸರತಿ ಜರಡಿ ಹಿಡಿದು ನಾಲಕ್ಕು ಕಪ್ಪು ಹಿಟ್ಟಿಗೆ ಸ್ವಲ್ಪ ಮಜ್ಜಿಗೆ ಸ್ವಲ್ಪ ನೀರು ಉಪ್ಪು ಹಾಕಿ ಕಲಸಿಟ್ಟೆ.
ಹಿತ್ತಲಲ್ಲಿ ಕರಿಬೇವು ಎಲೆ ಬಿಡಿಸಿ ತಂದೆ. ಒಣ ಮೆಣಸಿನಕಾಯಿ ಹೇಗೂ ಸ್ಟಾಕ್ ಇದ್ದೇ ಇರತ್ತೆ. ಅದನ್ನೇ ಒಂದಿಷ್ಟು ಕೈಯಲ್ಲೇ ಪುಡಿಪುಡಿ ಮಾಡಿ ಹಿಟ್ಟಿಗೆ ಸೇರಿಸಿ ಕಲಸಿದೆ. ಕುಕ್ಕರ್ ನಲ್ಲಿ ಬೆಂದು ಇನ್ನಷ್ಟು ಕಪ್ಪು ಕಪ್ಪಾಗಿದ್ದ ಅವರೇಕಾಳುಗಳನ್ನು ಹಿಟ್ಟಿಗೆ ಹಾಕಿದೆ. ಎಣ್ಣೆ ಸವರಿ ಬಾಣಲಿ ರೊಟ್ಟಿ ಮಾಡಿದರೆ "ಅಕ್ಕಿ ರೊಟ್ಟಿ ಬೊಂಬಾಟಾಗಿದೆ ಬೊಂಬಾಟಾಗಿದೆ" ಎಂದು ಬರಗೆಟ್ಟವರಂತೆ ಎಲ್ಲಾ ತಿಂದು ಖಾಲಿಮಾಡಿದರು. ಇವರಿಗೆಲ್ಲ ನಾನು ಮಾಡುವ ಅಡುಗೆ ಬೆಲೆ ಗೊತ್ತಾಗಬೇಕಾದರೆ ಮತ್ತೆ ನಾನು ಮೆಲ್ಬೋರ್ನ್ ಮಗಳ ಮನೆಗೆ ಹೋಗಬೇಕು ಅಂದು ಮನಸ್ಸಿನಲ್ಲೇ ಅಂದುಕೊಂಡೆ. ಇದೇ ಜೀವನವಲ್ಲವೇ?
(ನಿರೂಪಣೆ : ದಟ್ಸ್ ಕನ್ನಡ ಅಡುಗೆ ಶಾಲೆ)



Click it and Unblock the Notifications
