For Quick Alerts
ALLOW NOTIFICATIONS  
For Daily Alerts

ಹಬ್ಬಗಳಿಗೆ ಮುನ್ನುಡಿಯಾಗಿ ಬರುತ್ತಿರುವ ನಾಗರಪಂಚಮಿ

|

ಹಬ್ಬಗಳ ಮುನ್ನುಡಿಯಂತೆ ಸಾಲು- ಸಾಲು ಹಬ್ಬಗಳನ್ನು ಹೊತ್ತು ಬರುವ ನಾಗರಪಂಚಮಿಯೆಂದರೆ ಹಿಂದೂಗಳಿಗೆ ಎಲ್ಲಿಲ್ಲದ ಸಂಭ್ರಮ. ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸುವ ಈ ಹಬ್ಬದಲ್ಲಿ ಸಹೋದರ-ಸಹೋದರಿಯ ಸಂಬಂಧಕ್ಕೂ ಹೆಚ್ಚು ಒತ್ತು ನೀಡಲಾಗುವುದು.

ಮದುವೆಯಾದ ಹೆಣ್ಣು ಮಕ್ಕಳಿಗೆ ತಾಯಿ ಮನೆಗೆ ಹೋಗಿ ತಮ್ಮ ಸಹೋದರನ ಬೆನ್ನಿನ ಮೇಲೆ ತಾಳೆ ಹೂವಿನಿಂದ ಹಾಲು ಚಿಮಿಕಿಸಿ, ಅವನನ್ನು ಹಾರೈಸಿ, ಅವನು ಕೊಟ್ಟ ಉಡುಗೊರೆ ಸ್ವೀಕರಿಸಿ ತನ್ನ ತವರಿನವರ ಜೊತೆ ಸ್ವಲ್ಪ ಸಮಯ ಕಳೆದು ಬರುವ ಸಂಭ್ರಮ. ಮಕ್ಕಳಿಗಂತೂ ಮನೆಯಲ್ಲಿ ಮಾಡುವ ಎಳ್ಳುಂಡೆ, ತಂಬಿಟ್ಟು ಈ ರೀತಿಯ ಸಿಹಿ ತಿಂಡಿಗಳನ್ನು ಸವಿಯುವ ಸಂಭ್ರಮ, ಒಟ್ಟಿನಲ್ಲಿ ಸಂಭ್ರಮ, ಸಡಗರದ ಹಬ್ಬವನ್ನು ಸ್ವಾಗತಿಸಲು ಇಡೀ ನಾಡೇ ಸಿದ್ಧವಾಗಿದೆ.

Nagara Panchami Festival 2013

ನಾಗರ ಹಾವಿನ್ನು ಕಂಡರೆ ಭಯ ಪಡದವರು ತುಂಬಾ ವಿರಳ, ಆದರೆ ಈ ದಿನದಂದು ತಮ್ಮ ಭಯವನ್ನು ಬದಿಗಿರಿಸಿ, ನಾಗ ರಾಜನಿಗೆ ಭಯ, ಭಕ್ತಿಯಿಂದ ಹಾಲು ಎರೆದರೆ ನಮಗೆ ಏನೂ ಕೆಡಕು ಮಾಡುವುದಿಲ್ಲ, ನಮ್ಮನ್ನು ಹಾರೈಸುತ್ತಾನೆ ಎಂಬ ನಂಬಿಕೆಯೇ ಧೈರ್ಯವಾಗಿ ಮಾರ್ಪಟ್ಟು ಹಾವಿನ ಹುತ್ತಕ್ಕೆ ಹಾಲು ಎರೆದು ಬರುತ್ತಾರೆ! ಊರಿನಲ್ಲಿರುವ ನಾಗರ ಹಾವಿನ ಮೂರ್ತಿಗಳಿಗೂ ಹಾಲಿನ ಅಭಿಷೇಕ ಮಾಡಿಸಲಾಗುವುದು.

ನಾಗದೋಷವಿದ್ದರೆ ಕೆಡಕು ಉಂಟಾಗುತ್ತದೆ ಎಂಬ ನಂಬಿಕೆ ಇರುವವರಿಗೆ ತಮ್ಮ ನಾಗದೋಷ ಪರಿಹಾರಕ್ಕೆ ಇಂದು ಸುದಿನ. ತಾವು ನಾಗದೋಷದಿಂದ ಮುಕ್ತರಾಗಲು ಈ ದಿನ ನಾಗಪೂಜೆ ಮಾಡಿಸುತ್ತಾರೆ. ವಾಸುಕಿ, ತಕ್ಷಕ, ಕಾಲಿಯ, ಮಣಿಭದ್ರಕ, ಐರಾವತ, ಧೃತರಾಷ್ಟ್ರ, ಕಾರ್ಕೋಟಕ ಮತ್ತು ಧನಂಜಯ ಎಂಬ ನಾಗದೇವತೆಗಳಿಗೆ ಈ ದಿನ ವಿಶೇಷ ಪೂಜೆ ಸಲ್ಲಿಸಲಾಗುವುದು.

ನಾಗರ ಪಂಚಮಿಯೆಂದು ನಮ್ಮದೊಂದು ಕೋರಿಕೆ
ನಾಗರ ಹಾವಿಗೆ ಹಾಲೆರೆದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿಂದ ಪೂಜಿಸುವ ನಾವು, ನಿಜವಾದ ನಾಗರಾಜ ಕಾಣಿಸಿದಾಗ ಭಯಬಿದ್ದು ಅದನ್ನು ಸಾಯಿಸುವ ನಿರ್ಧಾರಕ್ಕೆ ಬರಬಾರದು, ನಾವು ಭಯಬಿದ್ದು ಕಿರುಚಾಡಲು ಪ್ರಾರಂಭಿಸಿದರೆ ಹಾವು ಕೂಡ ಭಯಬಿದ್ದು ನಮ್ಮತ್ತ ಹರಿದು ಬರಬಹುದು, ಆದ್ದರಿಂದ ಹಾವು ಕಾಣಿಸಿದರೆ ಅದನ್ನು ಕೊಲ್ಲುವ ಬದಲು ಹಾವು ಹಿಡಿಯುವವರಿಗೆ ಫೋನ್ ಮಾಡಿ, ಹಾವನ್ನು ಹಿಡಿಯುವ ಪ್ರವೀಣರು ಸಾಕಷ್ಟು ಮಂದಿ ನಮ್ಮ ನಡುವೆ ಇದ್ದಾರೆ, ಅವರು ಅದನ್ನು ಹಿಡಿದು ಕಾಡಿಗೆ ಬಿಡುತ್ತಾರೆ. ಇದರಿಂದ ನಿಮಗೂ, ಹಾವಿಗೂ ಯಾವುದೇ ಅಪಾಯ ಉಂಟಾಗುವುದಿಲ್ಲ.

ಈ ನಾಗರ ಪಂಚಮಿ ಹಬ್ಬ ನಿಮಗೆ ಶುಭವನ್ನು ತರಲಿ- ಕನ್ನಡ ಬೋಲ್ಡ್ ಸ್ಕೈ

English summary

Nagara Panchami Festival 2013

Nagara Panchami is a festival celebrated on fifth day of Shukla Paksha of Hindu calendar month of Shraavana. This Festival will build the strong between brother and sister and a big celebration to married young women Because visit their premarital households to celebrate the festival.
X
Desktop Bottom Promotion