Latest Updates
-
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು -
ಉದ್ದಿನ ಬೇಳೆ ಇದ್ರೆ ಸಾಕು! ಈ 4 ಹೊಸ ಬಗೆಯ ತಿಂಡಿ ಮಾಡಿ ನೋಡಿ.. ಎಲ್ಲರೂ ಇಷ್ಟಪಟ್ಟು ತಿಂತಾರೆ -
ಹಳೇ ಅನ್ನ ಎಸೆಯಬೇಡಿ! 10 ನಿಮಿಷದಲ್ಲಿ ಮಾಡಿ ಈ ಸ್ವಾದಿಷ್ಟ ದೋಸೆ.. ಉಳಿದ ಅನ್ನದ ಮ್ಯಾಜಿಕ್ ರೆಸಿಪಿ -
March 20 Horoscope: ಸ್ನೇಹ ಸಂಬಂಧಗಳಲ್ಲಿ ಶುಭಫಲ! -
ಅವಿವಾಹಿತರಿಗೆ ಇಂದು ಬಹಳ ಶುಭ ದಿನ! ಲವ್ಗೆ ಕುಟುಂಬದ ಬೆಂಬಲ -
ಜೀವನದಲ್ಲಿ ನೆಮ್ಮದಿ ಬೇಕಾ..? ಈ 5 ಕೆಲಸಗಳನ್ನು ಮಾಡುವಾಗ ಅತಿ ಹೆಚ್ಚು ತಾಳ್ಮೆ ಇರಲಿ! ಸಕ್ಸಸ್ ಮಂತ್ರ ಇಲ್ಲಿದೆ -
ಹೊರಗಿನ ಜ್ಯೂಸ್ ಬಿಡಿ..!! ಬಿಸಿಲಿಗೆ ಕಿಕ್ ಕೊಡೋ ಸ್ಪೆಷಲ್ ಶರಬತ್ತುಗಳಿವು! ಮನೆಯಲ್ಲಿ ಸಿಂಪಲ್ ಆಗಿ ಮಾಡಿ -
Dum Idli: ಇದು ಬ್ರೇಕ್ ಫಾಸ್ಟ್ನ ರಾಜ! ಉಳಿದ ಇಡ್ಲಿಗಳಿಂದ ಸ್ಪೈಸಿ ದಮ್ ಇಡ್ಲಿ.. ಹೋಟೆಲ್ ಶೈಲಿಯಲ್ಲಿ ಮಾಡೋದು ಹೇಗೆ? -
ಯುಗಾದಿ ದಿನ ಈ 5 ಕೆಲಸ ಮಾಡಲೇಬೇಕು! ಪಚಡಿ ತಿನ್ನುವಾಗ ಈ ಶ್ಲೋಕ ಹೇಳಿ.. ಧರ್ಮಸಿಂಧು ರಹಸ್ಯ ಇಲ್ಲಿದೆ -
Ugadi Special Recipes: ನಿಮಿಷಗಳಲ್ಲಿ 3 ಸೂಪರ್ ರೆಸಿಪಿಗಳು! ಅಡುಗೆ ಬಾರದವರಿಗೂ ಇದು ಸುಲಭ
ವಯಸ್ಸು ಮೂವತ್ತು ದಾಟಿದ ಬಳಿಕ ತಪ್ಪದೇ ಸೇವಿಸಬೇಕಾದ ಆಹಾರಗಳು
ಆರೋಗ್ಯ ಉತ್ತಮವಾಗಿರಬೇಕಾದರೆ ಆಹಾರವೂ ಉತ್ತಮವಾಗಿರಬೇಕು ಎಂದು ನಮಗೆಲ್ಲಾ ಗೊತ್ತು. ಸೂಕ್ತ ಸಮಯದಲ್ಲಿ ಸೂಕ್ತ ಆಹಾರಗಳನ್ನು ಸೇವಿಸುವ ಮೂಲಕ ಶಕ್ತಿಯುತ ದೇಹ ಹಾಗೂ ಚುರುಕು ಬುದ್ಧಿಯನ್ನು ಪಡೆಯಬಹುದು ಹಾಗೂ ವಯಸ್ಸಾಗುತ್ತಾ ಹೋದಂತೆ ಹೆಚ್ಚು ಕಾಲ ದೃಢಕಾಯವನ್ನು ಉಳಿಸಿಕೊಳ್ಳಲು ಸಾಧ್ಯ. ವಯಸ್ಸಾಗುವುದು ಪ್ರತಿಯೊಬ್ಬರಿಗೂ ಅನಿವಾರ್ಯವಾದ ನಿಸರ್ಗನಿಯಮವಾಗಿದ್ದು ವಯಸ್ಸಾಗುತ್ತಾ ಹೋದಂತೆ ದೇಹವೂ ಶಿಥಿಲವಾಗುತ್ತಾ ಹೋಗುತ್ತದೆ.
ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ಶಿಥಿಲವಾಗುವುದನ್ನು ತಡವಾಗಿಸ ಬಹುದು. ಅಂತೆಯೇ ವಯೋಮಾನಕ್ಕನುಗುಣವಾಗಿ ಆಹಾರವನ್ನೂ ಬದಲಿಸಿಕೊಳ್ಳುತ್ತಾ ಸಾಗಿದರೆ ತಾರುಣ್ಯವನ್ನು ಹೆಚ್ಚು ಕಾಲ ಮುಂದುವರೆಸಬಹುದು. ವಯಸ್ಸಾಗುತ್ತಾ ಹೋದಂತೆಯೇ ದೇಹದಲ್ಲಿ ಆಗುವ ಬದಲಾವಣೆಗಳ ಮೂಲಕ ಅಂಗಾಂಗಳು ಹಿಂದಿನಷ್ಟು ಹೆಚ್ಚಾಗಿ ಕಾರ್ಯನಿರ್ವಹಿಸುವುದಿಲ್ಲ. ಅಲ್ಲದೇ ಇಪ್ಪತ್ತರ ಹರೆಯದಲ್ಲಿದ್ದಾಅಗ ತಿನ್ನಲು ಸಾಧ್ಯವಿದ್ದ ಆಹಾರಗಳನ್ನು ಈಗ ಸೇವಿಸಲೂ ಸಾಧ್ಯವಾಗದು, ಸೇವಿಸಿದರೂ ಪೂರ್ಣವಾಗಿ ಜೀರ್ಣಿಸಿಕೊಳ್ಳಲೂ ಸಾಧ್ಯವಾಗಲಾರದು.
ಸಾಮಾನ್ಯವಾಗಿ ನಮ್ಮ ದೇಹ ಮೂವತ್ತು ದಾಟಿದ ಬಳಿಕ ಬದಲಾವಣೆಗೆ ಒಳಪಡಲು ಪ್ರಾರಂಭಿಸುತ್ತದೆ. ಈ ಬದಲಾವಣೆ ಕೇವಲ ನೋಟದಲ್ಲಿ ಮಾತ್ರವೇ ಅಲ್ಲ, ಕಾರ್ಯವಿಧಾನದಲ್ಲಿಯೂ ಇರುತ್ತದೆ. ಆಹಾರವನ್ನು ಜೀರ್ಣಿಸಿಕೊಳ್ಳಲು ಈಗ ಹೆಚ್ಚಿನ ಸಮಯ ಬೇಕಾಗುತ್ತದೆ. ಹಿಂದಿನಷ್ಟು ಬಾಯಾರಿಕೆಯಾಗದ ಕಾರಣ ಈಗ ಮೊದಲಿನಷ್ಟು ಪ್ರಮಾಣದಲ್ಲಿ ನೀರನ್ನೂ ಕುಡಿಯಲಾಗದು. ಕೆಲವು ಆಹಾರಗಳು ನಾಲಿಗೆಗೆ ರುಚಿಸದೇ ಹೋಗುತ್ತವೆ ಹಾಗೂ ಈ ಮೂಲಕ ಆ ಆಹಾರಗಳಲ್ಲಿ ಆಸಕ್ತಿಯೇ ಹೊರಟು ಹೋಗಬಹುದು. ಆಹಾರವನ್ನು ಅಗಿಯಲೂ ಕೊಂಚ ಹೆಚ್ಚೇ ಶ್ರಮವಹಿಸಬೇಕಾಗಿ ಬರಬಹುದು. ಅಡುಗೆ ಹಿಂದೆ ಇಷ್ಟದ ಕಾರ್ಯವಾಗಿದ್ದು ಈಗ ಅಡುಗೆ ಮಾಡಲಿಕ್ಕೇ ಮನಸ್ಸಾಗುವುದಿಲ್ಲ. ಆಹಾರ ತಜ್ಞರು ಸದಾ ಆರೋಗ್ಯಕರ ಆಹಾರ ಸೇವಿಸಿ, ಇದರಿಂದ ಮುಂದಿನ ದಿನಗಳಲ್ಲಿ ಎದುರಾಗುವ ತೊಂದರೆಗಳಿಂದ ತಪ್ಪಿಸಿಕೊಳ್ಳಬಹುದು ಎಂದು ಎಚ್ಚರಿಸುತ್ತಲೇ ಇರುತ್ತಾರೆ. ಆದರೆ ಯಾವ ಆಹಾರಗಳನ್ನು ಸೇವಿಸಬೇಕು? ತಜ್ಞರು ಇದಕ್ಕೆ ನೀಡುವ ಉತ್ತರ ಇಲ್ಲಿದೆ:

ಬ್ಲೂಬೆರಿ ಹಣ್ಣುಗಳು
ಈ ಹಣ್ಣುಗಳಲ್ಲಿ ವಿಟಮಿನ್ ಸಿ, ವಿಟಮಿನ್ ಇ ಸಹಿತ ವಿವಿಧ ಆಂಟಿ ಆಕ್ಸಿಡೆಂಟುಗಳು ಲಭ್ಯವಿದ್ದು ದೇಹದ ಪ್ರತಿ ಜೀವಕೋಶವೂ ಆರೋಗ್ಯದಿಂದಿರಲು ನೆರವಾಗುತ್ತದೆ. ಇವುಗಳಲ್ಲಿ ಸಮೃದ್ದವಾಗಿರುವ ಪೋಷಕಾಂಶಗಳು ಹಲವು ರೀತಿಯಲ್ಲಿ ಆರೋಗ್ಯವನ್ನು ವೃದ್ದಿಸುತ್ತವೆ. ಬ್ಲೂಬೆರಿ ಹಣ್ಣುಗಳ ಸೇವನೆಯಿಂದ ತ್ವಚೆಗೆ ಹೆಚ್ಚಿನ ಪ್ರಯೋಜನವಿದೆ. ಅಲ್ಲದೇ ಕ್ಯಾನ್ಸರ್ ನಿಂದಲೂ ರಕ್ಷಿಸುತ್ತದೆ ಹಾಗೂ ಗರ್ಭಿಣಿಯರಿಗೂ ಉತ್ತಮವಾಗಿದೆ ಮತ್ತು ಹೃದಯದ ಆರೋಗ್ಯವನ್ನೂ ಹೆಚ್ಚಿಸುತ್ತದೆ.

ಹೆಚ್ಚಿನ ನಾರುಯುಕ್ತ ತರಕಾರಿಗಳು
ನಿಮ್ಮ ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಕರಗದ ನಾರು ಹೆಚ್ಚಿರುವ ಹಸಿ ತರಕಾರಿಗಳು, ದ್ವಿದಳ ಧಾನ್ಯಗಳು, ಹಣ್ಣುಗಳು ಹಾಗೂ ಮೊಳಕೆ ಬರಿಸಿದ ಕಾಳುಗಳು ಮೊದಲಾದವು ಹೆಚ್ಚಿರುವಂತೆ ನೋಡಿಕೊಳ್ಳಿ. ಈ ಆಹಾರಗಳು ನಿಮ್ಮ ಜೀರ್ಣಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕರಗದ ನಾರು ಮಲಬದ್ದತೆಯಾಗದಂತೆ ರಕ್ಷಿಸುವ ಜೊತೆಗೇ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸುವುದು, ಅಧಿಕ ರಕ್ತದೊತ್ತಡವನ್ನು ತಹಬಂದಿಗೆ ತರುವುದು ಹಾಗೂ ಉರಿಯೂತವಾಗದಂತೆಯೂ ನೋಡಿಕೊಳ್ಳುತ್ತದೆ. ಅಲ್ಲದೇ ಈ ಆಹಾರಗಳ ಸೇವನೆಯಿಂದ ಹೃದಯದ ಆರೋಗ್ಯವೂ ಉತ್ತಮವಾಗಿಯೇ ಇರುತ್ತದೆ.

ಕೊಬ್ಬುಯುಕ್ತ ಮೀನು
ಸಾಲ್ಮನ್, ಬಂಗಡೆ, ಬೂತಾಯಿ ಮೊದಲಾದ ತೈಲಯುಕ್ತ ಮೀನುಗಳನ್ನು ಆಗಾಗ ಸೇವಿಸಬೇಕು. ಇವುಗಳಲ್ಲಿ ಒಮೆಗಾ ೩ ಕೊಬ್ಬಿನ ಆಮ್ಲಗಳು ಹೆಚ್ಚಿನ ಪ್ರಮಾಣದಲ್ಲಿದ್ದು ಹೃದಯದ ತೊಂದರೆಗಳಿಂದ ರಕ್ಷಿಸುವ ಜೊತೆಗೇ ಹೃದಯಸ್ತಂಭನದಿಂದಲೂ ರಕ್ಷಣೆ ಒದಗಿಸುತ್ತವೆ. ಉತ್ತಮ ಆರೋಗ್ಯಕ್ಕಾಗಿ ವಾರಕ್ಕೆರಡು ಬಾರಿಯಾದರೂ ಮೀನಿನ ಪದಾರ್ಥವನ್ನು ಸೇವಿಸಬೇಕು.

ಆಲಿವೆ ಎಣ್ಣೆ
ನಿಮ್ಮ ನಿತ್ಯದ ಆಹಾರಗಳನ್ನು ಆಲಿವ್ ಎಣ್ಣೆಯನ್ನು ಉಪಯೋಗಿಸಿ ತಯಾರಿಸುವ ಮೂಲಕ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾ (LDL) ಕಡಿಮೆಯಾಗುತ್ತದೆ ಹಾಗೂ ಒಳ್ಳೆಯ ಕೊಲೆಸ್ಟ್ರಾಲ್ (HDL) ಮಟ್ಟ ಹೆಚ್ಚುತ್ತದೆ. ಆಲಿವ್ ಎಣ್ಣೆಯನ್ನು ಚಪಾತಿಗೆ ಸವರುವ, ಸಲಾಡ್ ಗಳಲ್ಲಿ ಬೆರೆಸಿ, ಅನ್ನದ ಮೇಲೆ ಸುರುವಿಕೊಂಡು ಸೇವಿಸುವ ಮೂಲಕ ಹೆಚ್ಚಿನ ಪ್ರಯೋಜನ ಪಡೆಯಬಹುದು.

ಮೊಸರು
ವಯಸ್ಸಾಗುತ್ತಾ ಹೋದಂತೆ ಮೂಳೆಗಳೂ ಶಿಥಿಲವಾಗುತ್ತಾ ಹೋಗುತ್ತವೆ. ಮೊಸರಿನಲ್ಲಿ ಅತ್ಯುತ್ತಮ ಪ್ರಮಾಣದ ಕ್ಯಾಲ್ಸಿಯಂ ಇದೆ ಹಾಗೂ ಮೊಸರನ್ನು ನಿತ್ಯದ ಆಹಾರದಲ್ಲಿ ಸೇವಿಸುವ ಮೂಲಕ ಮೂಳೆಗಳು ಶಿಥಿಲಗೊಳ್ಳುವುದರಿಂದ ತಪ್ಪಿಸಿಕೊಳ್ಳಬಹುದು. ಮೊಸರಿನಲ್ಲಿರುವ ಪ್ರೋಟೀನ್ ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ ಹಾಗೂ ಶಕ್ತಿಯನ್ನೂ ಒದಗಿಸುತ್ತದೆ. ಮೊಸರನ್ನು ಇತರ ಹಣ್ಣುಗಳ ಜೊತೆಗೆ ಸೇವಿಸಿದಾಗ ಇನ್ನೂ ಹೆಚ್ಚಿನ ಪ್ರಯೋಜನ ಪಡೆಯಬಹುದು.

ಟೊಮಾಟೋ
ಟೊಮಾಟೋ ವಾಸ್ತವವಾಗಿ ಒಂದು ಹಣ್ಣು, ಇದನ್ನು ನಾವು ತರಕಾರಿಯ ರೂಪದಲ್ಲಿ ಬಳಸುತ್ತೇವೆ. ಈ ಹಣ್ಣಿನಲ್ಲಿರುವ ಲೈಕೋಪೀನ್ ಎಂಬ ಪೋಷಕಾಂಶ ಪ್ರಾಸ್ಟೇಟ್ ಕ್ಯಾನ್ಸರ್ ನಿಂದ ರಕ್ಷಿಸುತ್ತದೆ ಹಾಗೂ ಶ್ವಾಸಕೋಶದ ಕ್ಯಾನ್ಸರ್ ನಿಂದಲೂ ರಕ್ಷಣೆ ಒದಗಿಸಬಹುದು. ಟೊಮಾಟೋಗಳನ್ನು ಬೇಯಿಸಿ, ಹಿಂಡಿ ರಸ ತೆಗೆದು, ಅರೆದು ಜಾಮ್ ಅಥವಾ ಸಾಸ್ ಗಳ ರೂಪದಲ್ಲಿಯೂ ಸೇವಿಸಬಹುದು. ತಾಜಾ ಹಣ್ಣಿನ ಸೇವನೆಗಿಂತಲೂ ಸಾಸ್, ಜಾಮ್ ಮೊದಲಾದ ಸಂಸ್ಕರಿಸಿದ ರೂಪದ ಟೊಮಾಟೋ ಸೇವನೆಯಿಂದ ಹೆಚ್ಚಿನ ಪ್ರಯೋಜನವಿದೆ ಎಂದು ಆಹಾರತಜ್ಞರು ಅಭಿಪ್ರಾಯಪಡುತ್ತಾರೆ.

ಕೆಂಪು ವೈನ್
ಕೆಂಪು ವೈನ್ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ, ರಕ್ತ ಹೆಪ್ಪುಗಟ್ಟುವುದನ್ನು ತಡೆಗಟ್ಟಬಹುದು ಹಾಗೂ ರಕ್ತದೊತ್ತಡವನ್ನೂ ನಿಯಂತ್ರಿಸಬಹುದು. ಆದರೆ ಸೇವನೆಯ ಪ್ರಮಾಣ ಮಿತಿಯಲ್ಲಿರುವುದು ಅಗತ್ಯ. ಪುರುಷರು ಗರಿಷ್ಟ ಮುನ್ನೂರು ಮಿಲೀ ಹಾಗೂ ಮಹಿಳೆಯರು ಗರಿಷ್ಟ ನೂವೈವತ್ತು ಮಿಲಿಲೀಟರ್ ಕೆಂಪು ವೈಸ್ ಸೇವಿಸಬಹುದು.

ಬ್ರೋಕೋಲಿ
ಈ ತರಕಾರಿಯಲ್ಲಿ ಬಹುತೇಕ ಎಲ್ಲಾ ವಿಧದ ವಿಟಮಿನ್ನುಗಳು, ಖನಿಜಗಳು ಹಾಗೂ ಆಂಟಿ ಆಕ್ಸಿಡೆಂಟುಗಳಿವೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಕರಗದ ನಾರು ಸಹಾ ಇದೆ ಹಾಗೂ ಹಲವು ವಿಧದ ಕ್ಯಾನ್ಸರ್ ನಿಂದ ರಕ್ಷಣೆ ಒದಗಿಸುತ್ತದೆ.

ಒಣಫಲಗಳು
ಒಣಫಲಗಳಲ್ಲಿ ಹೆಚ್ಚಿನ ಪ್ರಮಾಣದ ಒಮೆಗಾ ೩ ಕೊಬ್ಬಿನ ಆಮ್ಲಗಳು, ಕರಗುವ ನಾರು ಹಾಗೂ ಪ್ರೋಟೀನ್ ಇವೆ. ಅಲ್ಲದೇ ಹೃದಯದ ಆರೋಗ್ಯವನ್ನು ಹೆಚ್ಚಿಸುವ ಪೋಷಕಾಂಶಗಳೂ ಇವೆ. ಬಾದಾಮಿ, ಗೋಡಂಬಿ, ಹೇಜಲ್ ನಟ್, ಮಾಕಾಡಮಿಯಾ, ಶೇಂಗಾ ಹಾಗೂ ಅಕ್ರೋಟು ಮೊದಲಾದ ಒಣಫಲಗಳನ್ನು ನಿತ್ಯವೂ ಸೇವಿಸಿ. ಒಂದು ವಾರದ ಅವಧಿಯಲ್ಲಿ ವಿವಿಧ ಒಣಫಲಗಳನ್ನು ಕೊಂಚ ಕೊಂಚವಾಗಿ ಸೇವಿಸುತ್ತಾ ಬನ್ನಿ.

ವಿವಿಧ ಬಣ್ಣಗಳ ಹಣ್ಣು ಮತ್ತು ತರಕಾರಿಗಳು
ಗಾಢ ಹಸಿರು, ಹಳದಿ, ಕಿತ್ತಳೆ ಬಣ್ಣದ ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸಿ. ಇವುಗಳಲ್ಲಿ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ಒದಗಿಸುವ ಪೋಷಕಾಂಶಗಳಿವೆ. ಈ ಬಣ್ಣಗಳು ಇವುಗಳಲ್ಲಿರುವ ವಿಟಮಿನ್ನು ಮತ್ತು ಆಂಟಿ ಆಕ್ಸಿಡೆಂಟುಗಳ ಪುರಾವೆಯೂ ಆಗಿದೆ. ಅಲ್ಲದೇ ಗಾಢ ಹಸಿರು ಬಣ್ಣದ ಹಣ್ಣುಗಳು, ಬ್ಲೂಬೆರಿ, ಕೆಂಪು ರಾಸ್ಪೆರಿ, ಗಾಢವರ್ಣದ ಚೆರ್ರಿಗಳು, ಪಾಲಕ್, ಕೇಲ್ ಎಲೆಗಳು ಹಾಗೂ ಹಸಿಯಾಗಿ ತಿನ್ನಬಹುದಾದ ಸ್ವಿಸ್ ಚಾರ್ಡ್ ಮೊದಲಾದ ಸೊಪ್ಪುಗಳನ್ನೂ ಸೇವಿಸಬಹುದು.



Click it and Unblock the Notifications











