ಕೆಲಸದ ಒತ್ತಡ ಹಗುರಾಗಿಸಲು 9 ಸರಳ ಸಲಹೆಗಳು

By Super

ಇಂದಿನ ದಿನಗಳಲ್ಲಿ ಸೌಲಭ್ಯ ಹೆಚ್ಚಿದಷ್ಟೂ ಕೆಲಸದಲ್ಲಿ ಒತ್ತಡವೂ ಹೆಚ್ಚುತ್ತಿದೆ. ಇಷ್ಟೇ ಹೊತ್ತಿನಲ್ಲಿ ಇಂತಿಷ್ಟು ಕೆಲಸ ಆಗಲೇಬೇಕೆಂಬ ನಿಯಮದಡಿಯಲ್ಲಿ ಎಲ್ಲರೂ ನರಳುತ್ತಿದ್ದಾರೆ. ವಿಳಂಬವಾದರೆ ಸ್ಪರ್ಧೆಯಲ್ಲಿ ಹಿಂದುಳಿಯುವ ಚಿಂತೆ ಇನ್ನಷ್ಟು ದುಗುಡವನ್ನು ಕಲೆಹಾಕುತ್ತಿದೆ. ಯಾವುದೋ ಕಾರಣದಿಂದ ಕೆಲಸದಲ್ಲಿ ಏನಾದರೂ ತೊಂದರೆ ಉಂಟಾದರೆ ಒಮ್ಮೆಲೇ ಭಯ ಉಕ್ಕಿ ಹರಿಯುತ್ತದೆ. ಆ ತೊಂದರೆಯನ್ನು ನಿವಾರಿಸುವ, ಸರಿಪಡಿಸುವ ಬಗ್ಗೆ ತಲೆ ಓಡುವುದೇ ಇಲ್ಲ. ಪರಿಣಾಮವಾಗಿ ಆರೋಗ್ಯ ಕೆಡುತ್ತಿದೆ. ಕೆಲಸದ ಒತ್ತಡಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಆದರೆ ಆ ಒತ್ತಡಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಸಮರ್ಥವಾಗಿ ಎದುರಿಸಿ ಕೆಲಸವನ್ನು ನಿಭಾಯಿಸುವುದೇ ಜಾಣತನದ ಲಕ್ಷಣ. ಆದರೆ ಮೊದಲೇ ಒತ್ತಡದಿಂದ ಬಳಲಿರುವ ಮನಸ್ಸು ಹೆಚ್ಚಿನ ಒತ್ತಡವನ್ನು ಬಯಸುವುದಿಲ್ಲ. ಈ ಪರಿಸ್ಥಿತಿಯಲ್ಲಿ ಮನಸ್ಸನ್ನು ಹಗುರಾಗಿಸಿಕೊಳ್ಳಲು ಹಾಗೂ ಎದುರಿರುವ ಹೊಸ ಒತ್ತಡಗಳನ್ನು ಸಮರ್ಥವಾಗಿ ಎದುರಿಸಲು ಈ ಕೆಳಗಿನ ಒಂಭತ್ತು ಸಲಹೆಗಳನ್ನು ತಜ್ಞರು ನೀಡಿದ್ದಾರೆ.

9 Simple Ways To Reduce Stress

1) ಮನಸ್ಸು ಹಗುರಾಗುವಷ್ಟು ನಕ್ಕುಬಿಡಿ

ವಿರಾಮ ಸಿಕ್ಕಾಗಲೆಲ್ಲಾ ಸಹೋದ್ಯೋಗಿಗಳೊಂದಿಗೆ ಕೆಲವು ನಗು ತರಿಸುವಂತಹ ಜೋಕು, ಪ್ರಸಂಗಗಳನ್ನು ಹೇಳಿ ನಿರಾಳವಾಗಿ ನಕ್ಕು ಬಿಡಿ. ನಾಲ್ವರು ಜೊತೆಗೇ ನಗುವಾಗ ಯಾರೂ ಅಪಹಾಸ್ಯ ಮಾಡುವುದಿಲ್ಲ. ಆದರೆ ಒಬ್ಬರೇ ಇದ್ದಾಗ ಜೋರಾಗಿ ನಕ್ಕಾಗ ಮಾತ್ರ ಅಪಹಾಸ್ಯಕ್ಕೆ ಎಡೆ ಮಾಡಿ ಕೊಟ್ಟಂತಾಗುತ್ತದೆ. ಈ ಸಂದರ್ಭದಲ್ಲಿ ಹೊಟ್ಟೆಯ ಗಾಳಿಯನ್ನು ನಿಃಶ್ವಾಸದ ಮೂಲಕ ಹೊರಬಿಡುವುದರ ಮೂಲಕ ಅಂಗಾಂಗಗಳಿಗೆ ಒದಗುವ ರಕ್ತಪರಿಚಲನೆಯಲ್ಲಿ ವೃದ್ಧಿ ಹೊಂದಿ ಒತ್ತಡ ಕಡಿಮೆಯಾಗುತ್ತದೆ. ಮನಸ್ಸು ನಿರಾಳವಾಗುತ್ತದೆ. ಮನಬಿಚ್ಚಿ ನಗಲು ಕೆಲವೆಡೆ ಸಾಧ್ಯವಾಗದೇ ಇರಬಹುದು. ಆದರೆ ಕೆಲಸದ ಬಳಿಕ, ಅಥವಾ ಮನೆಯಲ್ಲಿ ಸಿಕ್ಕ ಸಂದರ್ಭಗಳನ್ನು ಧಾರಾಳವಾಗಿ ಬಳಸಿ. ಸಹೋದ್ಯೋಗಿಗಳು, ನೆರೆಹೊರೆಯವರು, ಮನೆಯವರು ಜೊತೆಗೂಡಿ ನಕ್ಕರೆ ಪ್ರತ್ಯಕ್ಷಕ್ಕಿಂತ ಪರೋಕ್ಷ ಲಾಭವೇ ಹೆಚ್ಚು.

2) ನಿಮ್ಮ ಸಾಕುಪ್ರಾಣಿಯೊಂದಿಗೆ ಪ್ರತಿದಿನ ಕೊಂಚ ಕಾಲ ಕಳೆಯಿರಿ

ನಿಯತ್ತಿಗೆ ಇನ್ನೊಂದು ಹೆಸರು ನಾಯಿ. ನಾಯಿಯ ಹೊರತಾಗಿ ಇನ್ನೂ ಹಲವು ಸಾಕುಪ್ರಾಣಿಗಳು ಮನುಷ್ಯನ ಒಡನಾಡಿಗಳಾಗಿವೆ. ನಿಮ್ಮ ನೆಚ್ಚಿನ ಪ್ರಾಣಿಯೊಂದಿಗೆ ಪ್ರತಿದಿನ ಕೆಲಕಾಲ ಕಳೆಯುವುದು ಒತ್ತಡ ಕಳೆಯಲು ತುಂಬಾ ಸಹಕಾರಿ ಎಂದು ಸಂಶೋಧನೆಗಳು ಸಾಬೀತುಪಡಿಸಿವೆ. ನಮ್ಮ ಪ್ರೀತಿಗೆ ಸ್ಪಂದಿಸುವ ಸಾಕುಪ್ರಾಣಿಯ ಒಡನಾಟದಿಂದ ನಮ್ಮ ದೇಹದಲ್ಲಿ ಸೆರೋಟೋನಿನ್, ಪ್ರೊಲಾಕ್ಟಿನ್ ಹಾಗೂ ಆಕ್ಸಿಟೋಸಿನ್ ನಂತಹ ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ಈ ಹಾರ್ಮೋನುಗಳು ಒತ್ತಡಕ್ಕೆ ಕಾರಣವಾಗುವ ಹಾರ್ಮೋನುಗಳಿಗೆ ರಾಮಬಾಣದಂತಿರುವ ಕಾರಣ ಒತ್ತಡ ತನ್ನಿಂತಾನೇ ಕಡಿಮೆಯಾಗುತ್ತದೆ. ಆದರೆ ಸಾಕುಪ್ರಾಣಿಗಳ ಒಡನಾಟದಲ್ಲಿ ವಹಿಸಬೇಕಾದ ಎಚ್ಚರವನ್ನು ಮಾತ್ರ ಖಂಡಿತಾ ವಹಿಸಬೇಕು. ಸಾಕುಪ್ರಾಣಿಗಳಿಗೆ ಅಗತ್ಯವಾದ ಲಸಿಕೆಗಳನ್ನು ಹಾಕಿಸಿ ಆರೋಗ್ಯವಾಗಿರುವಂತೆ ನೋಡಿಕೊಳ್ಳಬೇಕು. ಪ್ರಾಣಿಗಳ, ವಿಶೇಷವಾಗಿ ಬೆಕ್ಕಿನ, ಕೂದಲುಗಳು, ಜೊಲ್ಲು ಮೊದಲಾದವು ಆಹಾರದ ಮೂಲಕ ನಮ್ಮ ಜಠರ ಸೇರದಂತೆ ಎಚ್ಚರ ವಹಿಸಬೇಕು. ಅವುಗಳ ಚರ್ಮದಲ್ಲಿ ಉಣ್ಣಿ, ಚಿಗಟ ಮೊದಲಾದ ರಕ್ತಹೀರುವ ಕೀಟಗಳು ಬರದಂತೆ ಕ್ರಮ ಕೈಗೊಳ್ಳಬೇಕು.

3) ನಿಮ್ಮ ಕೆಲಸ ಸ್ಥಳದಲ್ಲಿ ಅಗತ್ಯವಾದಷ್ಟು ಮಾತ್ರ ವಸ್ತುಗಳಿರಲಿ

ನೀವು ಕೆಲಸ ಮಾಡುತ್ತಿರುವ ಸ್ಥಳವನ್ನು ಅವಲೋಕಿಸಿರಿ. ಅಲ್ಲಿರುವ ಭಾರೀ ಸಾಮಾಗ್ರಿಗಳನ್ನು ನೋಡುತ್ತಿದ್ದಂತೆಯೇ ಭಾರೀ ಕೆಲಸದ ಹೊರೆ ಇರುವಂತೆ ಭಾಸವಾಗುತ್ತದೆ. ಆದುದರಿಂದ ಕಣ್ಣಿಗೆ ಕಾಣುವಂತೆ ಕೇವಲ ಅಗತ್ಯವಿರುವಷ್ಟು ಸಾಮಾಗ್ರಿಗಳನ್ನು ಮಾತ್ರ ಇರಿಸಿಕೊಂಡು ಉಳಿದವುಗಳನ್ನು ಮೇಜಿನ ಕೆಳಗೋ ಅಥವಾ ಅನಗತ್ಯ ಎನಿಸಿದ್ದನ್ನು ತ್ಯಜಿಸಿ ಮೇಜಿನ ಖಾಲಿ ಸ್ಥಳವನ್ನು ಹೆಚ್ಚಿಸಿ. ಕಡಿಮೆ ಸಾಮಾಗ್ರಿಗಳಿರುವುದು ಕಡಿಮೆ ಕೆಲಸ ಇರುವಂತೆ ಭಾಸವಾಗುವುದರಿಂದ ಅನಗತ್ಯವಾಗಿ ಒತ್ತಡ ಹೇರುವುದು ತಪ್ಪುತ್ತದೆ. ಕಳುವಾಗುವ, ಅಥವಾ ಸುಲಭವಾಗಿ ಕಾಣೆಯಾಗಬಹುದಾದ ವಸ್ತುಗಳನ್ನು ಇತರರಿಗೆ ಸುಲಭವಾಗಿ ದಕ್ಕದ ಸ್ಥಳದಲ್ಲಿರಿಸಿ. ಸರಿಸುಮಾರು ಎಲ್ಲಾ ಕಛೇರಿಗಳಲ್ಲಿ ಮಾಯವಾಗುವುದು ಪೆನ್ನು. ನೂರಕ್ಕೆ ತೊಂಭತ್ತು ಜನ ಪೆನ್ನನ್ನು ತಮ್ಮೊಂದಿಗೆ ಒಯ್ಯುವುದಿಲ್ಲ. ಅಗತ್ಯಬಿದ್ದಾಗ ಮೇಜಿನ ಮೇಲಿರುವ ನಿಮ್ಮ ಪೆನ್ನನ್ನು ಬಳಸಲು ಪಡೆದವರು ಹಿಂದಿರುಗಿಸಲು ಮರೆಯುತ್ತಾರೆ. ಇದು ಸರ್ವೇ ಸಾಮಾನ್ಯ. ಮೇಜಿನ ಮೇಲೆ ಪೆನ್ನನ್ನು ಕಾಣದೇ ಒತ್ತಡಕ್ಕೆ ಒಳಗಾಗುವ ಬದಲು ಕಡಿಮೆ ಮೌಲ್ಯದ, ಆದರೆ ಉತ್ತಮವಾಗಿ ಬರೆಯುವ 'ಯೂಸ್ ಅಂಡ್ ಥ್ರೋ' ಮಾದರಿಯ ಪೆನ್ನುಗಳ ಒಂದು ಡಬ್ಬಿಯನ್ನೇ ಇರಿಸಿಕೊಳ್ಳುವುದು ಉತ್ತಮ. ಪೆನ್ನು ಕಾಣೆಯಾಯಿತೋ, ಚಿಂತೆ ಬೇಡ, ಒಂದು ಹೊಸ ಪೆನ್ನು ತೆಗೆದರಾಯಿತು. ಅಂದರೆ ದಿನಕ್ಕೆ ಒಂದು ರೂಪಾಯಿಯಲ್ಲಿ ಅನಗತ್ಯ ಒತ್ತಡವನ್ನು ಕಡಿಮೆ ಮಾಡಿಕೊಂಡಂತಾಯಿತು. ಅಂತೆಯೇ ನಿಮ್ಮ ಒತ್ತಡವನ್ನು ಹೆಚ್ಚಿಸುವ ಇಂತಹ ಚಿಕ್ಕ ಚಿಕ್ಕ ಉಪದ್ರವಗಳನ್ನು ನೀವೇ ನಿವಾರಿಸಿಕೊಳ್ಳುವ ಮೂಲಕ ಹೆಚ್ಚಿನ ಒತ್ತಡದಿಂದ ಪಾರಾಗಬಹುದು.

4) ನಿಮ್ಮ ಮನೆಗೆಲಸವನ್ನು ನೀವೇ ಮಾಡಿಕೊಳ್ಳಿ

ಮನೆಗೆಲಸ ಎಂದಾಕ್ಷಣ ಅದು ಮನೆಯ ಹೆಂಗಸರ ಕೆಲಸ ಎಂಬ ನಂಬಿಕೆ ನಮ್ಮೆಲ್ಲರಲ್ಲಿ ಬಲವಾಗಿ ಊರಿಬಿಟ್ಟಿದೆ. ಮನೆ ತಲುಪಿದಾಕ್ಷಣ ನಮ್ಮ "to do" ಲಿಸ್ಟ್ ನಲ್ಲಿ ಮನೆಕೆಲಸ ಒಂದು ಬಿಟ್ಟು ಬೇರೆ ಎಷ್ಟೋ ಕೆಲಸಗಳು ಜಮಾ ಆಗಿ ಬಿಡುತ್ತವೆ. ಟೀವಿ ನೋಡುತ್ತಾ ಗಂಟೆಗಟ್ಟಲೇ ಕ್ರಿಕೆಟ್ ನೋಡಲು ಸಾಧ್ಯವಿರುವ ನಮಗೆ ಅದೇ ಎದುರಿನ ಮೂಲೆಯಲ್ಲಿ ಜೇಡ ಕಟ್ಟಿರುವ ಬಲೆಯನ್ನು ತೆಗೆಯಲೂ ಪುರುಸೊತ್ತಿರುವುದಿಲ್ಲ. ಒಂದು ಬಾರಿ ಮನೆ ತಲುಪಿದ ಬಳಿಕ ಸ್ವಲ್ಪ ವಿಭಿನ್ನವಾಗಿ ಯೋಚಿಸಿ. ಮನೆಗೆ ಅಗತ್ಯವಾದ, ಅದು ಎಷ್ಟೇ ಚಿಕ್ಕದಿರಲಿ, (ಉದಾಹರಣೆಗೆ ಮಕ್ಕಳು ಗೋಡೆಯ ಮೇಲೆ ಪೆನ್ಸಿಲ್ ನಿಂದ ಗೀಚಿದ ಒಂದು ಚಿತ್ರವನ್ನು ರಬ್ಬರ್ ನಿಂದ ಅಳಿಸುವುದು) ಅವುಗಳನ್ನು ಪಟ್ಟಿ ಮಾಡಿ. ಅವುಗಳಲ್ಲಿ ಇಂದು ಎಷ್ಟು ಮಾಡುತ್ತೇನೆ ಎಂದು ಗುರುತು ಹಾಕಿಕೊಳ್ಳಿ. ಅತ್ತ ನಿಮ್ಮ ಮೆಚ್ಚಿನ ಕ್ರಿಕೆಟ್ ಅಥವಾ ಧಾರಾವಾಹಿ ನಡೆಯುತ್ತಲೇ ಇರಲಿ, ಇತ್ತ ಈ ಕೆಲಸವನ್ನು ಮಾಡಿ ಮುಗಿಸಿ. ಆ ದಿನ ಮಾಡುತ್ತೇನೆ ಎಂದು ಟಿಕ್ ಮಾಡಿಕೊಂಡ ಕೆಲಸಗಳನ್ನು ಪೂರೈಸಿದ ಮೇಲೆ ಆಗಿರುವ ಬದಲಾವಣೆಯನ್ನು ಗಮನಿಸಿ. ನಿಮಗೇ ಅಚ್ಚರಿಯಾಗುವಂತೆ ನಿಮ್ಮಲ್ಲಿ ಸಂತೋಷ ಉಕ್ಕಿ ಹರಿಯುತ್ತದೆ. ಅತ್ತ, ನಿಮ್ಮ ನೆಚ್ಚಿನ ಧಾರಾವಾಹಿ ಅಥವಾ ಕ್ರಿಕೆಟ್ ನಲ್ಲಿ ಸಂಭವಿಸಿರುವುದು ಸಹಾ ನಿಮಗೆ ತಿಳಿದಿದೆ. ಅಂದರೆ ಸುಮ್ಮನೇ ಕುಳಿತು ವ್ಯರ್ಥ ಮಾಡಿರುವ ಕಾಲವನ್ನು ನೀವು ಸಮರ್ಥವಾಗಿ ಬಳಸಿಕೊಂಡಿದ್ದೀರಿ. ಹೀಗೇ ಹುಡುಕುತ್ತಾ ಹೋದರೆ ಮನೆಯಲ್ಲಿ ನೂರಾರು ಕೆಲಸಗಳು ಕಾಣುತ್ತವೆ. ಇಸ್ತ್ರಿ ಹಾಕುವುದು, ಮಕ್ಕಳ ಹೋಂ ವರ್ಕ್ ನಲ್ಲಿ ಸಹಾಯ ಮಾಡುವುದು, ಸೋಫಾ ಟೇಬಲ್ಲುಗಳನ್ನು ಹೊರತೆಗೆದು ಮೂಲೆಯಲ್ಲಿ ಗುಂಪಾಗಿದ್ದ ಕಸ ತೆಗೆಯುವುದು, ಮನೆಯಾಕೆಯ ಕೈಯಲ್ಲಿ ಸಾಧ್ಯವಾಗದ ಚಿಕ್ಕ ಪುಟ್ಟ ಕೆಲಸಗಳು.. ಪಟ್ಟಿ ಮಾಡಿದರೆ ನೂರಾರು ಸಿಗುತ್ತವೆ. ಕೆಲವು ಹೆಚ್ಚು ಸಮಯ ತೆಗೆದುಕೊಂಡರೆ ಕೆಲವು ಕೆಲಸಗಳಿಗೆ ಬೇರೆಯವರ ಅಥವಾ ಕುಶಲಕರ್ಮಿಗಳ ಸಹಾಯ ಬೇಕಾಗುತ್ತದೆ. ಆದರೆ ಒಮ್ಮೆ ಆ ಕೆಲಸ ಮಾಡಲು ತೊಡಗಿದರೆ ಸಾಕು, ಇನ್ನುಳಿದ ಸಹಾಯಗಳು ತಮ್ಮಿಂತಾನೇ ಏರ್ಪಾಡಾಗುತ್ತವೆ, ಬೇಕಾದರೆ ಪರಾಂಬರಿಸಿ ನೋಡಿ. ಹೀಗೇ ಎಂದೋ ಮರೆತಿದ್ದ, ಮಾಡಬೇಕೆಂದಿದ್ದ ಹವ್ಯಾಸಗಳಿಗೂ ಮರುಹುಟ್ಟು ಬರಬಹುದು. ಮಕ್ಕಳು ತಾವಾಗಿ ನಿಮ್ಮ ಸಹಾಯವನ್ನು ಬಯಸಬಹುದು. ಈ ಒಡನಾಟ ನಿಮ್ಮಲ್ಲಿ ಹೊಸ ಹುರುಪನ್ನು ಮೂಡಿಸಬಹುದು.

5) ಸಾಧ್ಯವಾದಷ್ಟು ವಿಟಮಿನ್ ಸಿ ಇರುವ ಹಣ್ಣಿನ ರಸಗಳನ್ನು ಸೇವಿಸಿ

ವಿಟಮಿನ್ ಸಿ ಹೆಚ್ಚಾಗಿರುವ ಲಿಂಬೆ, ಮೂಸಂಬಿ, ಗ್ರೇಪ್ ಫ್ರುಟ್, ಸ್ಟ್ರಾಬೆರಿ, ಕಿತ್ತಳೆ ಮೊದಲಾದ ಹಣ್ಣುಗಳ (ಸಿಟ್ರಸ್ ಜ್ಯೂಸ್) ಗಳನ್ನು ದಿನದಲ್ಲಿ ಒಂದೆರಡು ಲೋಟಗಳನ್ನಾದರೂ ಕುಡಿಯಿರಿ. ಈ ರಸದ ಸೇವನೆಯ ಮೂಲಕ ದೇಹದಲ್ಲಿ ಕಾರ್ಟಿಸೋಲ್ ಎಂಬ ಹಾರ್ಮೋನಿನ ಪರಿಣಾಮಗಳನ್ನು ಕಡಿಮೆ ಮಾಡಿಕೊಳ್ಳಬಹುದು.

ನಮ್ಮ ಅಡ್ರಿನಲ್ ಗ್ರಂಥಿಯಿಂದ ಸ್ರವಿಸಲ್ಪಡುವ ಈ ಕಾರ್ಟಿಸೋಲ್ ನಮ್ಮ ದೇಹದ ಗ್ಲೋಕೋಸ್ ಜೀವರಾಸಾಯನಿಕ ಕ್ರಿಯೆ, ರಕ್ತದೊತ್ತಡ, ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಗ್ರಹಿಸುವ ಇನ್ಸುಲಿನ್, ರೋಗನಿರೋಧಕ ಶಕ್ತಿ, ಪ್ರಚೋದನಾ ಶಕ್ತಿಗಳ ಮೇಲೆ ಪರಿಣಾಮ ಬೀರುತ್ತದೆ. ನಮ್ಮಲ್ಲಿ ಹೆಚ್ಚಿನವರಿಗೆ ದಿನದಲ್ಲಿ ನಾಲ್ಕೈದು ಬಾರಿ ಟೀ ಕಾಫಿ ಕುಡಿಯುವ ಅಭ್ಯಾಸವಿರುತ್ತದೆ. ಕಿತ್ತಳೆ ಜ್ಯೂಸ್ ಅಂದಾಕ್ಷಣ ಎದುರಿಗೆ ಏನೂ ಹೇಳದಿದ್ದರೂ ಮನದಲ್ಲಿ ಅದು ದುಬಾರಿ ಎಂಬ ಭಾವನೆ ಬಂದು ಬಿಡುತ್ತದೆ. ಆದರೆ ದಿನದಲ್ಲಿ ಐದು ಕಾಫಿಗೆ ಖರ್ಚು ಮಾಡುವ ಬೆಲೆ ಒಂದು ಲೋಟ ಕಿತ್ತಳೆ ರಸಕ್ಕೆ ಮಾಡುವ ಖರ್ಚಿಗಿಂತ ಹೆಚ್ಚಿರುತ್ತದೆ. ನಿಧಾನವಾಗಿ ಕಾಫಿ ಟೀ ಬದಲಿಗೆ ಹಣ್ಣಿನ ರಸವನ್ನು ಸೇವಿಸುವುದು (ಐದು ಟೀ ಬದಲಿಗೆ ಎರಡು ಲೋಟ ಜ್ಯೂಸ್) ಆರೋಗ್ಯದ ದೃಷ್ಟಿಯಿಂದಲೂ ಉತ್ತಮ ಹಾಗೂ ಜೇಬಿಗೂ ಹೊರೆಯಾಗುವುದಿಲ್ಲ.

6) ಬಾಥ್ ರೂಂ ಗಾಯಕರಾಗಿ

ಒತ್ತಡ ಕಡಿಮೆ ಮಾಡಿಕೊಳ್ಳಲು ಪಾಶ್ಚಾತ್ಯ ದೇಶಗಳಲ್ಲಿ ಒಂದು ವಿಧಾನವಿದೆ. ಅದಕ್ಕವರು "destruction therapy" ಎಂದು ಹೆಸರಿಟ್ಟಿದ್ದಾರೆ. ಈ ಥೆರಪಿಯಲ್ಲಿ ಕೊಂಚ ಹಣ ಕೊಟ್ಟು ಸುತ್ತಿಗೆಯೊಂದನ್ನು ಬಾಡಿಗೆಗೆ ಪಡೆದುಕೊಳ್ಳಬಹುದು. ನಂತರ ಕಣ್ಣಿಗೆ ಕಂಡ ಏನನ್ನು ಬೇಕಾದರೂ ಒಡೆದು ನಿಮ್ಮ ಸಿಟ್ಟನ್ನು ಹೊರಹಾಕಬಹುದು. ಅದು ಕಾರು, ಲಾರಿ, ಬಸ್ಸು, ಮೊಬೈಲು, ಏನು ಬೇಕಾದರೂ ಆಗಿರಬಹುದು. * 1

ಆದರೆ ನಮ್ಮಲ್ಲಿ ಇದೇ ರೀತಿ ಯಾವುದಾದರೂ ಕಾರನ್ನು ಬಡಿದರೆ ಕೋಳ ಖಾತರಿ. ಆದರೆ ಇದೇ ಪರಿಣಾಮವನ್ನು ಅತಿ ಸುಲಭವಾಗಿ ಮನೆಯಲ್ಲಿಯೇ ಪಡೆದುಕೊಳ್ಳಬಹುದು. ಸ್ನಾನಕ್ಕೆಂದು ಸ್ನಾನಗೃಹದ ಬಾಗಿಲು ಹಾಕಿದ ಬಳಿಕ ನಿಮ್ಮ ನೆಚ್ಚಿನ ಗೀತೆಯನ್ನು ಎಷ್ಟು ಸಾಧ್ಯವೋ ಅಷ್ಟು ದೊಡ್ಡ ದನಿಯಲ್ಲಿ ಹಾಡಬೇಕು. ನಿಮ್ಮ ಹಾಡು ಎಷ್ಟೇ ಕರ್ಕಶವಾಗಿರಲಿ, ಗಾರ್ದಭಸಮನಾಗಿರಲಿ, ಆ ಕ್ಷಣ ನೀವೇ ಮೊಹಮ್ಮದ್ ರಫಿ, ನೀವೇ ಎಸ್.ಪಿ ಬಾಲಸುಭ್ರಹ್ಮಣ್ಯಂ, ನೀವೇ ಲತಾ ಮಂಗೇಶ್ಕರ್. ಹೊರಗೆ ಯಾರೇ ಕೇಳಲಿ ಬಿಡಲಿ ಈ ಕ್ಷಣ ನೀವೇ ಸುಪರ್ ಸ್ಟಾರ್. ಈ ಸಂದರ್ಭದಲ್ಲಿ ನಿಮ್ಮ ಉಸಿರಾಟ, ಹೃದಯಬಡಿತ ಹೆಚ್ಚುವುದರಿಂದ ಹಾಗೂ ಹೆಚ್ಚು ಹೆಚ್ಚು ಆನಂದ ಹೊಂದುವುದರಿಂದ ಮೈ ಮನಗಳು ಸಡಿಲಗೊಳ್ಳುತ್ತವೆ (relax). ನಂತರದ ಸಮಯವನ್ನು ಸಂತೋಷದಿಂದ ಕಳೆಯಲು ಸಾಧ್ಯವಾಗುತ್ತದೆ. ಹೊರಗೆ ನಿಮ್ಮ ಸಂಗೀತ ಆಲಿಸಿದವರೂ ನಗುತ್ತಲೇ ನಿಮ್ಮನ್ನು ಸ್ವಾಗತಿಸುತ್ತಾರೆ. ಸಂತೋಷದ ನಿಮಿಷಗಳೇ ಜೀವನದ ಸ್ವಾರಸ್ಯವಲ್ಲವೇ!

7) ಪ್ರತಿದಿನ ಸ್ವಲ್ಪ ದೂರವಾದರೂ ನಡೆಯಿರಿ

ದೇಹಕ್ಕೆ ಕಡಿಮೆ ಶ್ರಮದಲ್ಲಿ ಎಲ್ಲಾ ಸ್ನಾಯುಗಳಿಗೆ ಹೆಚ್ಚು ಕೆಲಸ ನೀಡುವ ವ್ಯಾಯಾಮಗಳೆಂದರೆ ಈಜು ಹಾಗೂ ನಡಿಗೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಈಜು ಸುಲಭವಾಗಿ ಸಾಧ್ಯವಾಗುವುದಿಲ್ಲ. ಆಗ ಸುಲಭವಾಗಿ ಸಾಧ್ಯವಾಗುವುದೇ ನಡಿಗೆ. ಪ್ರತಿದಿನ ಸುಮಾರು ಅರ್ಧ ಘಂಟೆಯ ಕಾಲ ನಡೆದರೆ ದೇಹದಲ್ಲಿ ಎಂಡಾರ್ಫಿನ್ ಗಳು ಬಿಡುಗಡೆಯಾಗಿ ಸಂತೋಷವನ್ನು (mood) ಹೆಚ್ಚಿಸುತ್ತವೆ. ಪ್ರತಿದಿನದ ನಿಮಗೆ ಅನುಕೂಲ ಎನಿಸಿದ ಹೊತ್ತಿನ ಅರ್ಧ ಘಂಟೆಯ ನಡಿಗೆ ಉತ್ತಮ ಆರೋಗ್ಯಕ್ಕೆ ಪೂರಕ ಎಂದು ಸಂಶೋಧನೆಗಳು ಸಾಬೀತುಪಡಿಸಿವೆ. ನಿಮ್ಮ ವಯಸ್ಸಿಗೆ ಹಾಗೂ ದೈಹಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ನಡೆಗೆಯ ವೇಗ ಹಾಗೂ ದೂರವನ್ನು ನೀವೇ ನಿರ್ಧರಿಸಿಕೊಳ್ಳಿ. ಯೋಗ ಶಿಕ್ಷಕರು ಈ ನಡಿಗೆಯಲ್ಲಿ ಪ್ರಾಣಾಯಾಮ ಮಾಡುವುದು ಶ್ರೇಯಸ್ಕರ ಎಂದು ಅಭಿಪ್ರಾಯಪಡುತ್ತಾರೆ. ಅಂದರೆ ಒಂದೇ ಗತಿಯಲ್ಲಿ ನಡೆಯುತ್ತಿರುವಾಗ ಎರಡು ಹೆಜ್ಜೆ ಇಡುವಾಗ ಪೂರ್ತಿಯಾಗಿ ಉಸಿರು ಮೇಲೆಳೆದುಕೊಂಡು, ಮುಂದಿನ ಎರಡು ಹೆಜ್ಜೆಗಳ ಕಾಲ ಉಸಿರನ್ನು ತಡೆಹಿಡಿದು, ಮುಂದಿನ ಎರಡು ಹೆಜ್ಜೆಗಳಲ್ಲಿ ಪೂರ್ತಿಯಾಗಿ ಉಸಿರನ್ನು ಹೊರಗೆ ಬಿಟ್ಟು ನಂತರದ ಎರಡು ಹೆಜ್ಜೆಗಳನ್ನು ಉಸಿರು ಎಳೆದುಕೊಳ್ಳದೇ ಮುಂದುವರೆಯುವ ಮೂಲಕ ಉತ್ತಮ ಆರೋಗ್ಯವನ್ನು ಹೊಂದಬಹುದು.

8) ಲೈಂಗಿಕ ಕ್ರಿಯೆಯಿಂದ ದೂರವಾಗದಿರಿ

ಉತ್ತಮ ಆರೋಗ್ಯಕ್ಕೆ ಸಂಗಾತಿಯ ಸಂಗವೂ ಅಗತ್ಯ. ಒತ್ತಡ ಇದೆ ಎಂಬ ಕಾರಣದಿಂದ ಸಂಗದಿಂದ ದೂರವಿರದಿರಿ. ಸಂಗದ ಬಳಿಕ ದೇಹದಲ್ಲಿ ಉತ್ಪತ್ತಿಯಾಗುವ ಆಕ್ಸಿಟೋಸಿನ್ ಎಂಬ ಹಾರ್ಮೋನು ಸಂಗಾತಿಗಳ ಬಾಂಧವ್ಯ ಬೆಸೆಯುತ್ತದೆ. ತಾಯಿ ಮಗುವಿನ ನಡುವೆ ಬಾಂಧವ್ಯ ಉಂಟುಮಾಡಲೂ ಇದೇ ಹಾರ್ಮೋನು ಕಾರಣವಾಗಿದೆ. ಸುಖಕರ ನಿದ್ದೆಗೂ ಈ ಹಾರ್ಮೋನು ಆಗತ್ಯ. ನಿಯಮಿತವಾದ ಸಂಸರ್ಗದಿಂದ ಉತ್ತಮವಾದ ಆರೋಗ್ಯವನ್ನೂ ಸಂತೋಷಕರವಾದ ಸಂಸಾರವನ್ನೂ ದೀರ್ಘಕಾಲದವರೆಗೆ ಪಡೆಯಬಹುದು.

9) ದೀರ್ಘ ಉಸಿರು - ಜೀವನದ ಹಸಿರು

ನಾವು ಅನೈಚ್ಛಿಕವಾಗಿ ನಡೆಸುತ್ತಿರುವ ಕಾರ್ಯಗಳಲ್ಲಿ ಉಸಿರು ಸಹಾ ಒಂದು. ವಿಚಿತ್ರವೆಂದರೆ ನಾವು ಎಂದೂ ನಮ್ಮ ಸಂಪೂರ್ಣ ಸಾಮರ್ಥ್ಯದ ಉಸಿರನ್ನು ಒಳಗೆಳೆದುಕೊಳ್ಳುವುದೇ ಇಲ್ಲ. ಪೂರ್ಣ ಉಸಿರನ್ನು ಐಚ್ಛಿಕವಾಗಿಯೇ ಪಡೆದುಕೊಳ್ಳಬೇಕು. ಉದ್ವೇಗ, ಭಯ ಅಥವಾ ಆಯಾಸದ ಸಮಯದಲ್ಲಿ ಮಾತ್ರ ನಮ್ಮ ಉಸಿರಾಟ ಹೆಚ್ಚುತ್ತದೆ ಆದರೆ ಪೂರ್ಣ ಉಸಿರನ್ನು ಆಗಲೂ ನಾವು ತೆಗೆದುಕೊಳ್ಳುವುದಿಲ್ಲ. ಪ್ರಾಣಾಯಾಮದಲ್ಲಿ ಪೂರ್ಣ ಉಸಿರಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ದಿನದ ಯಾವುದೇ ಹೊತ್ತಿನಲ್ಲಿ, ಯಾವಾಗ ನೆನಪು ಬಂತೋ ಆಗ, ಸಾಧ್ಯವಾದಷ್ಟು ಮಟ್ಟಿಗೆ ಗಾಳಿಯನ್ನು ಒಳಗೆಳೆದುಕೊಂಡು ಶ್ವಾಸಕೋಶಗಳನ್ನು ಭರ್ತಿಮಾಡಿಕೊಳ್ಳಿ. ಈಗ ಉಸಿರು ಕಟ್ಟಿ ಎಷ್ಟು ಹೊತ್ತು ಸಾಧ್ಯವೋ ಅಷ್ಟು ಹೊತ್ತು ಇರಿ. ಬಳಿಕ ಪೂರ್ಣವಾಗಿ ಶ್ವಾಸದಿಂದ ಉಸಿರನ್ನು ಹೊರಹಾಕಿ. ಈ ರೀತಿಯ ದೀರ್ಘ ಉಸಿರಿನಿಂದ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ರಕ್ತಕ್ಕೆ ಪೂರೈಕೆಯಾಗುತ್ತದೆ. ಪರಿಣಾಮವಾಗಿ ರಕ್ತದಲ್ಲಿರುವ ಕಾರ್ಟಿಸೋಲ್ ಹಾರ್ಮೋನಿನ ಪ್ರಭಾವವನ್ನು ನಿಗ್ರಹಿಸಿ ದೇಹ ಉಲ್ಲಾಸಭರಿತವಾಗುತ್ತದೆ. ನಿಮ್ಮ ನೆಚ್ಚಿನ ಸುಗಂಧವನ್ನು ಕೋಣೆಯಲ್ಲಿ ಪಸರಿಸುವುದೂ ಉತ್ತಮ ಸಲಹೆ. ಆದರೆ ಹಲವರು ಊದುಬತ್ತಿ, ಲೋಬಾನ ಮೊದಲಾದವುಗಳ ಹೊಗೆಯಿಂದ ಕೋಣೆಯಲ್ಲಿ ಸುವಾಸನೆಯನ್ನು ಪಡೆಯುತ್ತಾರೆ. ಆದರೆ ಯಾವುದೇ ಹೊಗೆ (ಅದು ಸುಗಂಧಭರಿತವಾಗಿದ್ದರೂ) ಶ್ವಾಸಕೋಶಗಳಿಗೆ ಮಾರಕ ಎಂದು ಇತ್ತೀಚಿನ ಸಂಶೋಧನೆಗಳು ಪ್ರಕಟಿಸಿವೆ. ದೀರ್ಘ ಉಸಿರನ್ನು ಮುಂಜಾನೆಯ ಹೊತ್ತಿನಲ್ಲಿ ಪಡೆಯುವುದು ಹೆಚ್ಚಿನ ಫಲ ನೀಡುತ್ತದೆ ಎಂದೂ ಸಂಶೋಧನೆಗಳು ತಿಳಿಸಿವೆ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

Story first published: Tuesday, October 15, 2013, 17:06 [IST]
X
Desktop Bottom Promotion