ಅವಿನಾಭಾವ ಸಂಬಂಧಕ್ಕೆ ಪ್ರೀತಿ, ವಿಶ್ವಾಸವೇ ರಹದಾರಿ

By Arshad

ಮರ್ಯಾದಾ ಪುರುಷೋತ್ತಮನೆಂಬ ಬಿರುದನ್ನು ರಾಮ ಪಡೆಯಲು ಅತಿ ಮುಖ್ಯವಾದ ಕಾರಣ ಆತ ಏಕಪತ್ನೀವ್ರತಸ್ಥನಾಗಿದ್ದುದು. ಮಹಾಭಾರತ ರಾಮಾಯಣಗಳಲ್ಲಿ ಬಹುಪತಿತ್ವ, ಬಹುಪತ್ನಿತ್ವ ಜಾರಿಯಲ್ಲಿತ್ತು, ಅದರಲ್ಲೂ ಹೆಣ್ಣಿಗಾಗಿ ಯುದ್ದಗಳೇ ನಡೆಯುತ್ತಿತ್ತು. ಆ ಸಮಯದಲ್ಲಿಯೂ ರಾಮ ಸೀತೆ ಇಬ್ಬರೂ ಪರಸ್ಪರರಿಗೆ ಮಾತ್ರ ಬದ್ದರಾಗಿದ್ದರು. ಈ ಬದ್ಧತೆಯನ್ನು ಪ್ರಾಣಿಜಗತ್ತಿನಲ್ಲಿ ಇನ್ನೂ ಹಲವು ವರ್ಗಗಳಲ್ಲಿ ನೋಡಬಹುದು. ಉದಾಹರಣೆಗೆ ಬೂದುಪಾರಿವಾಳ ಜೋಡಿ (mourning dove) ಇಡಿಯ ಜೀವಮಾನ ಒಬ್ಬರಿಗೊಬ್ಬರು ಮಾತ್ರ ಬದ್ಧರಾಗಿರುತ್ತವೆ.

ನಮ್ಮ ಸಮಾಜದ ವಿವಾಹ ಪದ್ದತಿಯೂ ಏಕನಿಷ್ಠ ಸಂಬಂಧವನ್ನೇ ಬೆಂಬಲಿಸುತ್ತವೆ. ಶಾಸ್ತ್ರೋಕ್ತ ವಿವಾಹದಲ್ಲಿಯೂ ಶಾಸ್ತ್ರಗಳು ಜೀವಮಾನವಿಡೀ ಎಂಬ ಪದವನ್ನೇ ಬಳಸುತ್ತವೆ. ಏಕನಿಷ್ಠ ಸಂಬಂಧದಿಂದ ದೈಹಿಕವಾದುದಕ್ಕಿಂತಲೂ ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಹೆಚ್ಚಿನ ಫಲವಿದೆ. ಜೀವನಸಂಗಾತಿಯಾಗುವವರು ತಮ್ಮ ಅಭಿರುಚಿ, ನಡತೆ, ಸಾಮಾಜಿಕ ಸ್ಥಾನಮಾನ ಮೊದಲಾದವುಗಳಿಗೆ ತಕ್ಕಂತಿರಬೇಕು ಎಂದು ಹುಡುಕುತ್ತಾ ವರ್ಷ ಮೂವತ್ತು ದಾಟಿದರೂ ಅವಿವಾಹಿತರಾಗಿಯೇ ಉಳಿದಿರುವುದನ್ನು ನೋಡಬಹುದು. ಯಾವುದೇ ವಯಸ್ಸಿನಲ್ಲಿ ಮದುವೆಯಾದರೂ ನಂತರ ಜೀವಮಾನವಿಡೀ ಏಕಸಂಗಾತಿಗೆ ನಿಷ್ಠರಾಗಿರುವುದು ನೆಮ್ಮದಿಯ ಜೀವನದ ಮುಖ್ಯ ಅಂಗವಾಗಿದೆ. ಹಾಲು- ಜೇನಿನಂತಹ ಸುಖ ಸಂಸಾರಕ್ಕೆ ಸರಳ ಸೂತ್ರಗಳು

ಏಕನಿಷ್ಠ ಸಂಬಂಧದಿಂದ ಜೀವನ ಬೇಸರ ಎನಿಸುವುದಿಲ್ಲವೇ? ಇದು ಹಲವರ ಪ್ರಶ್ನೆ, ವಾಸ್ತವವಾಗಿ ಏಕನಿಷ್ಠ ಸಂಬಂಧದಿಂದಲೇ ಜೀವನ ಸುಖಮಯವಾಗಿರುವುದನ್ನು ನಮ್ಮ ಸುತ್ತಮುತ್ತಲಿರುವ ಏಕನಿಷ್ಠ ಸಂಬಂಧ ಹೊಂದಿರುವ ಜನರಿಂದಲೇ ಸ್ಪಷ್ಟವಾಗುತ್ತದೆ. ಇದರಲ್ಲಿ ಅತ್ಯಂತ ಮುಖ್ಯವಾದುದು ತನಗಾಗಿ ಒಂದು ಜೀವ ಮಿಡಿಯುತ್ತಿದೆ, ಆ ಜೀವಕ್ಕಾಗಿ ನಾನು ಬದುಕಬೇಕು, ಆ ಜೀವವನ್ನು ಕಾಳಜಿಯಿಂದ ನೋಡಿಕೊಳ್ಳಬೇಕು, ಆ ಜೀವ ಸುಖವಾಗಿರುವಂತೆ ನೋಡಿಕೊಳ್ಳಬೇಕು ಎಂಬ ಭಾವನೆ ಮನಸ್ಸಿನಾಳದಲ್ಲಿ ಮೊಳೆದು ಆ ಭಾವನೆಗೆ ಬದ್ಧನಾಗಿರುವುದೇ ಜೀವನದ ಸಾರ್ಥಕತೆಯಾಗಿದೆ.

ಈ ಸಂಬಂಧ ಪತಿ ಪತ್ನಿಯರಿಗೆ ಮಾತ್ರ ಸೀಮಿತವಲ್ಲ, ತಾಯಿ ಮಗು, ತಂದೆ ಮಗು, ಅಣ್ಣ ತಂಗಿ, ಸಹೋದರರ ನಡುವೆ, ಅಷ್ಟೇ ಏಕೆ, ಉತ್ತಮ ಸ್ನೇಹಿತರ ನಡುವೆಯೂ, ಒಂದು ಸಾಕುಪ್ರಾಣಿ (ಉದಾಹರಣೆಗೆ ನಾಯಿ)ಯ ಮೇಲೆಯೂ ಈ ಭಾವನೆ ಮೊಳೆಯಬಹುದು. ಅಲ್ಲದೇ ಈ ಭಾವನೆಯೇ ಜೀವನವನ್ನು ಸುಖಮಯವನ್ನಾಗಿಸಲು ಕಾರಣ. ಒಂದು ವೇಳೆ ಈ ಸಂಬಂಧದಲ್ಲಿ ಬಿರುಕುಂಟಾದರೆ, ಅಥವಾ ಬಿರುಕುಂಟಾದ ಅನುಮಾನವೂ ಉಂಟಾದರೆ ಜೀವನದ ಸುಖವೇ ಹಾಳಾಗಬಹುದು. ಪತಿ ಪತ್ನಿಯರಲ್ಲಿ ಏಕನಿಷ್ಠ ಸಂಬಂಧದ ಕೆಲವು ಅನುಕೂಲಗಳನ್ನು ಇಲ್ಲಿ ಚರ್ಚಿಸಲಾಗಿದೆ.

ನಿಮ್ಮಿಂದ ಸಂದೇಶವನ್ನು ನಿರೀಕ್ಷಿಸಲಾಗುತ್ತದೆ

The Benefits Of A Committed Relationship

ಸಂದೇಶಗಳು ಏಕನಿಷ್ಠ ಸಂಬಂಧದ ಮತ್ತು ಅವಿನಾಭಾವದ ಅತಿಮುಖ್ಯ ಭಾಗವಾಗಿದೆ. ತಮ್ಮ ಸಂಗಾತಿ ದೂರವಿದ್ದಾಗ ಅವರ ಬಗ್ಗೆ ಕಾಳಜಿ ವಹಿಸುತ್ತಿರುವುದನ್ನು ಈ ಸಂದೇಶಗಳು ಸ್ಪಷ್ಟಪಡಿಸುತ್ತವೆ. ನಿಮ್ಮ ಸಂದೇಶವನ್ನು ನಿರೀಕ್ಷಿಸಲಾಗುತ್ತಿದೆ ಎಂಬ ಭಾವನೆಯೇ ನಿಮ್ಮ ಚಿರಯೌವನಕ್ಕೆ ಪೂರಕವಾಗಿದೆ. ಹಿಂದೆ ಸಂದೇಶಗಳನ್ನು ಪಾರಿವಾಳಗಳ ಮೂಲಕ ಕಳುಹಿಸಲಾಗುತ್ತಿತ್ತು. ರಾಮಾಯಣದಲ್ಲಿ ರಾಮನ ಸಂದೇಶವನ್ನು ಹನುಮಂತ ಸಮುದ್ರದ ಮೇಲೆಹಾರಿ ಅಶೋಕವನದಲ್ಲಿದ್ದ ಸೀತೆಗೆ ತಲುಪಿಸಿದ್ದ. ಆಗ ಸೀತೆಗೆ ತನ್ನ ರಾಮ ತನಗಾಗಿ ಬರುತ್ತಿದ್ದಾನೆ ಎಂಬ ಸಂದೇಶವೇ ಜೀವನದಲ್ಲಿ ಹುರುಪು ಮೂಡಿಸಿತ್ತು. ಹಾಗಾಗಿ ನಿಮ್ಮ ಸಂಗಾತಿಗೆ (ಅಥವಾ ಸಂಗಾತಿಯಾಗುವವರಿಗೆ) ನಿಯಮಿತವಾಗಿ ಕರೆ ಅಥವಾ ಪಠ್ಯಸಂದೇಶ ಕಳುಹಿಸಿ ಕ್ಷೇಮ ವಿಚಾರಿಸುತ್ತಿರುವುದು ಅಗತ್ಯವಾಗಿದೆ. ಗೋಮುಖ ವ್ಯಾಘ್ರನಂತೆ ವರ್ತಿಸುವ ಹುಡುಗರ ಬಗ್ಗೆ ಎಚ್ಚರದಿಂದಿರಿ!

ಶಾಂತಿ ಮತ್ತು ಸುಭದ್ರೆತೆಯ ಜೀವನ ನಿಮ್ಮದಾಗುವುದು


ಅವಿನಾಭಾವ ಸಂಬಂಧದಿಂದ ಜೀವನದಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸುವುದು. ಹದಿಹರೆಯದಲ್ಲಿಯೇ ಮನ ಸಂಗಾತಿಯತ್ತ ಆಕರ್ಷಣೆಗೊಳಪಟ್ಟು ಅತ್ತಿತ್ತ ಚಲಿಸುತ್ತಿದ್ದುದು ಸಂಗಾತಿಯ ಆಗಮನದ ಮೂಲಕ ಕೊನೆಗೊಳ್ಳಬೇಕು. ವಾಸ್ತವವಾಗಿ ನಾವು ಸಂಗಾತಿಯಿಂದ ಅಪೇಕ್ಷಿಸಬಹುದಾದ ಎಲ್ಲಾ ಗುಣಗಳೂ ಒಂದೇ ವ್ಯಕ್ತಿಯಲ್ಲಿರಲು ಸಾಧ್ಯವಿಲ್ಲ. ತನ್ನ ಪತಿಯಿಂದ ಹಲವು ಗುಣಗಳನ್ನು ತಪಸ್ಸಿನ ಮೂಲಕ ಬೇಕೇ ಬೇಕೆಂದು ಹಠಹಿಡಿದ ದ್ರೌಪದಿಗೂ ಒಂದೇ ವ್ಯಕ್ತಿಯಲ್ಲಿ ಆ ಗುಣಗಳೆಲ್ಲಾ ಸಿಗಲಿಲ್ಲ, ಬದಲಿಗೆ ಐವರು ಪತಿಯರ ಮೂಲಕ ಸಿಕ್ಕಿತ್ತು. ಆದುದರಿಂದ ನಿಮ್ಮ ಜೀವನಸಂಗಾತಿಯನ್ನು ಆರಿಸಿ, ಮೆಚ್ಚಿ ವಿವಾಹವಾದ ಬಳಿಕ ಆ ವ್ಯಕ್ತಿಯಲ್ಲಿರುವ ಗುಣಗಳಿಗೆ ಹೊಂದಿಕೊಂಡು ಅದಕ್ಕಿಂತ ಹೆಚ್ಚಿನದನ್ನು ಅಪೇಕ್ಷಿಸದೇ ಇರುವುದು ಜಾಣತನ ಮತ್ತು ಸುಖವಾದ ಜೀವನಕ್ಕೆ ಮೂಲ. ಉದಾಹರಣೆಗೆ ಗುಣದಲ್ಲಿ ಚೆನ್ನಾಗಿದ್ದರೂ ನೋಡಲು ಚೆನ್ನಾಗಿಲ್ಲವೆಂದು ಹುಡುಗನನ್ನು ಬೇಡ ಎಂದ ಯುವತಿ ಬಳಿಕ ನೋಡಲು ಚೆನ್ನಾಗಿದ್ದ ಯುವಕನನ್ನೇ ವರಿಸಿದ್ದಳು. ವಿವಾಹದ ಬಳಿಕವೇ ನೋಡಲು ಸುಂದರನಾಗಿದ್ದರೂ ಏಕಾಂತದಲ್ಲಿ ಆತ ರಾಕ್ಷಸ ಎಂದು ಅರಿತು ಜೀವಮಾನವಿಡೀ ಕಣ್ಣೀರಿನಲ್ಲಿ ಕೈ ತೊಳೆಯುವಂತಾಯ್ತು. ಇದಕ್ಕೇ ಹಿರಿಯರು 'ಗುಣ ನೋಡಿ ಹೆಣ್ಣು ಕೊಡು' ಎಂಬ ಗಾದೆಯನ್ನು ಆಡಿದ್ದಾರೆ.

ಜೀವನದಲ್ಲಿ ಬೆಂಬಲ ದೊರಕುವುದು


ಮನುಷ್ಯ ಸಂಘಜೀವಿ. ಒಂಟಿಯಾಗಿ ಇರುವುದು ಆತನಿಗೆ ಸಾಧ್ಯವಿಲ್ಲ. ಅಂತೆಯೇ ಸಮಾಜದಲ್ಲಿದ್ದಾಗ ಎಲ್ಲಾ ಕೆಲಸಗಳೂ ಓರ್ವನಿಂದಲೇ ಆಗಲು ಸಾಧ್ಯವಿಲ್ಲ. ಇದಕ್ಕೆ ಹಲವರ ಸಹಕಾರದ ಅಗತ್ಯವಿದೆ. ಈ ಸಹಕಾರ ನಿಮ್ಮ ಜೀವನಸಂಗಾತಿಯಿಂದ ಪ್ರಮುಖವಾಗಿ ಬರಬೇಕು. ಈ ಸಹಕಾರ ನಿಃಸ್ವಾರ್ಥವಾಗಿದ್ದು ಸಂಗಾತಿಗೆ ತಾನು ನೀಡುತ್ತಿರುವ ಬೆಂಬಲ ಎಂದೇ ತಿಳಿಯಬೇಕು. ಆಗಲೇ ಜೀವನ ಆನಂದಸಾಗರವಾಗುವುದು. ಕಾಯಾ ವಾಚಾ ಮನಸಾ ಎಂದು ವಿವಾಹದ ಬೋಧನೆ ತಿಳಿಸುವುದು ಇದನ್ನೇ. ಜೀವನದಲ್ಲಿನ ಎಲ್ಲಾ ಕ್ಷಣಗಳು ಸುಖಮಯವಾಗಿರಲು ಸಾಧ್ಯವಿಲ್ಲ, ಅಂತೆಯೇ ದುಃಖಕರವಾಗಿರಲೂ ಸಾಧ್ಯವಿಲ್ಲ. ಸುಖಬಂದಾಗಲೂ, ಕಷ್ಟದ ಸಮಯದಲ್ಲಿಯೂ ಸಮಾನವಾಗಿ ಜೀವನವನ್ನು ಹಂಚಿಕೊಳ್ಳುವವರೇ ನಿಜವಾದ ಜೀವನಸಂಗಾತಿಗಳು.

ಜೀವನದಲ್ಲಿ ಪ್ರೇರಣೆ ಮತ್ತು ನಂಬಿಕೆಯನ್ನು ಪಡೆಯಲು ಸಾಧ್ಯವಾಗುವುದು
ಯಾವುದೇ ವ್ಯಕ್ತಿಯ ಏಳ್ಗೆಯ ಹಿಂದೆ ಹೆಣ್ಣಿನೊಬ್ಬಳ ಕೈ ಇರುತ್ತದೆ ಎಂಬುದು ಒಂದು ಗಾದೆ. (ಅಂತೆಯೇ ಹಾಳಾಗಲು ಇಬ್ಬರು ಹೆಂಗಸರ ಕೈವಾಡವೂ ಇರುತ್ತದಂತೆ). ಪ್ರತಿಯೊಬ್ಬರಲ್ಲಿಯೂ ಯಾವುದಾದರೊಂದು ಪ್ರತಿಭೆ ಇರುತ್ತದೆ. ಇದನ್ನು ನಿಮಗಿಂತಲೂ ನಿಮ್ಮ ಸಂಗಾತಿ ಅಥವಾ ನಿಮ್ಮ ಅಭಿಮಾನಿಗಳು ಹೆಚ್ಚಾಗಿ ಗುರುತಿಸಬಲ್ಲರು. ಆದರೆ ಈ ಪ್ರತಿಭೆಯಿಂದ ಈಗ ನೀವು ಸಾಧಿಸುತ್ತಿರುವುದಕ್ಕಿಂತಲೂ ಹೆಚ್ಚಿನದನ್ನು ಸಾಧಿಸಬಹುದು ಎಂಬ ಪ್ರೇರಣೆಯನ್ನು ಮಾತ್ರ ಸಂಗಾತಿಯೇ ನೀಡಬಹುದು. ಈ ಪ್ರೇರಣೆಯೇ ಜೀವನದಲ್ಲಿ ಮುನ್ನಡೆಯಲು ಹಾಗೂ ಉನ್ನತ ಸಾಧನೆ ಸಾಧಿಸಲು ಕಾರಣವಾಗಿದೆ. ತನ್ಮೂಲಕ ಸಂಬಂಧ ಇನ್ನಷ್ಟು ಗಟ್ಟಿಗೊಂಡು ಪರಸ್ಪರರಲ್ಲಿ ನಂಬಿಕೆಯೂ ಹೆಚ್ಚುವುದು.

ಜೀವನ ಸಂಪನ್ನ ಎಂಬ ಭಾವನೆಯನ್ನು ಮೂಡಿಸುವುದು
ಏಕನಿಷ್ಠ ಸಂಗಾತಿಯಲ್ಲಿರುವವರು ಜೀವನದಲ್ಲಿ ಬೇಕಾದುದನ್ನೆಲ್ಲಾ ತಮ್ಮ ಸಂಗಾತಿಯಿಂದಲೇ ಪಡೆದಿರುವುದರಿಂದ ಹೊರಗೆ ಹುಡುಕಲು ಹೋಗುವುದಿಲ್ಲ. ಇದರಿಂದ ಹೆಚ್ಚಿನ ಸಮಯವನ್ನು ತಮ್ಮ ಸಂಗಾತಿಯೊಡನೆ ಕಳೆಯುತ್ತಾ ಸುಖಮಯ ಜೀವನವನ್ನು ಅನುಭವಿಸಲು ಸಾಧ್ಯವಾಗುತ್ತದೆ. ಇದರ ವಿರುದ್ಧವಾದವರು ಸುಖವನ್ನರಸುತ್ತಾ ಜಗತ್ತನ್ನೆಲ್ಲಾ ತಿರುಗಿ ಯಾವುದೇ ನೆಲೆ ಕಂಡುಕೊಳ್ಳಲಾಗದೇ, ಇರುವ ಸಂಬಂಧಗಳನ್ನೂ ಉಳಿಸಿಕೊಳ್ಳಲಾಗದೇ ಜೀವನ ನಿಃಸಾರವಾಗಿರುತ್ತದೆ.

ನಿಮ್ಮ ಬಗ್ಗೆ ಹೆಮ್ಮೆ ಮೂಡಿಸುತ್ತದೆ
ಸಮಾಜದಲ್ಲಿ ನಿಮ್ಮ ಅವಿನಾಭಾವ ಸಂಬಂಧದ ಬಗ್ಗೆ ಸದಭಿಪ್ರಾಯ ಮೂಡುವುದರಿಂದ ನಿಮ್ಮ ಸಂಗಾತಿ ಹಾಗೂ ಸಂಬಂಧದ ಬಗ್ಗೆ ನಿಮಗೆ ಹೆಮ್ಮೆಯೆನಿಸುತ್ತದೆ. ಅದರಲ್ಲಿಯೂ ಹಲವು ಜನರಿದ್ದಾಗ ಶ್ರೀಮತಿ ಮತ್ತು ಶ್ರೀ ಎಂದು ಸಂಬೋಧಿಸುವ ವೇಳೆ ಮನ ಪ್ರಫುಲ್ಲವಾಗುತ್ತದೆ. ಈ ಪ್ರಫುಲ್ಲತೆಯನ್ನು ಹಣವಾಗಲೀ, ಸ್ಥಾನಮಾನವಾಗಲೀ ನೀಡಲು ಸಾಧ್ಯವಿಲ್ಲ. ಅದರಲ್ಲೂ ವರ್ಷಗಳು ಕಳೆದಂತೆ ನಿಮ್ಮ ಸಂಬಂಧ ಇನ್ನಷ್ಟು ಗಟ್ಟಿಯಾಗಿ ಜೀವನ ಸುಖಮಯವಾಗುತ್ತದೆ. ಗಂಡ-ಹೆಂಡತಿ ಸಂಬಂಧಕ್ಕೆ ಹುಳಿ ಹಿಂಡುವ 'ಮಾತ್ಸರ್ಯ‌ದ' ಸೂಚನೆಗಳೇನು?

ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಂಕೋಚವಿಲ್ಲದೇ ಭಾಗವಹಿಸಲು ಸಾಧ್ಯವಾಗುತ್ತದೆ
ಸಾಮಾನ್ಯವಾಗಿ ವ್ಯಕ್ತಿಯ ವೈಯಕ್ತಿಕ ವಿಷಯಗಳು ಚರ್ಚೆಗೊಳಪಡುವುದು ಸಾಮಾಜಿಕ ಕಾರ್ಯಕ್ರಮ ಅಥವಾ ಪಾರ್ಟಿಗಳಲ್ಲಿಯೇ. ಏಕನಿಷ್ಠ ಸಂಬಂಧವಿಲ್ಲದವರು ಮತ್ತು ಸುಖವನ್ನು ಹೊರಗೆ ಅರಸುವವರು ಎಷ್ಟೇ ಜಾಗರೂಕರಾಗಿದ್ದರೂ ಸಮಾಜದ ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ವಿಷಯಗಳು ಪಾರ್ಟಿಯಲ್ಲಿ ಪ್ರಸ್ತಾಪಿಸಲ್ಪಟ್ಟು ಮುಜುಗರಕ್ಕೆ ಕಾರಣವಾಗಬಹುದು. ಆದರೆ ಏಕನಿಷ್ಠ ಸಂಗಾತಿಗಳ ಬಗ್ಗೆ ಯಾರಿಗೂ ಎದುರು ಮಾತನಾಡಲು ಸಾಧ್ಯವಿಲ್ಲದಿರುವುದರಿಂದ ಯಾವುದೇ ಕಾರ್ಯಕ್ರಮದಲ್ಲಿ ನಿಸ್ಸಂಕೋಚವಾಗಿ ಭಾಗವಹಿಸಲು ಸಾಧ್ಯವಾಗುತ್ತದೆ.

Story first published: Friday, March 6, 2015, 23:21 [IST]
X
Desktop Bottom Promotion