ಸಂಗಾತಿಯಾಗುವವರಲ್ಲಿ ನೀವು ಅಪೇಕ್ಷಿಸುವ ಗುಣಗಳೇನು?

By Super

ಪ್ರಾಪ್ತ ವಯಸ್ಸಿಗೆ ಬಂದ ಬಳಿಕ ಜೀವನದಲ್ಲಿ ಓರ್ವ ಸಂಗಾತಿಯ ಅವಶ್ಯಕತೆ ಇರುವುದು ನಿಸರ್ಗದ ನಿಯಮವಾಗಿದೆ. ಇಂದಿನ ದಿನಗಳಲ್ಲಿ ಸೂಕ್ತ ಜೀವನ ಸಂಗಾತಿಯನ್ನು ಆರಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಏಕೆಂದರೆ ಪ್ರತಿಯೊಬ್ಬರ ಮನಃಸ್ಥಿತಿಯೂ ಬೇರೆಬೇರೆ ತರಹದ್ದಾಗಿದ್ದು ಒಬ್ಬರನ್ನೊಬ್ಬರಿಗೆ ಪೂರಕವಾಗಿದ್ದರೆ ಮಾತ್ರ ಸಂಸಾರ ಅಪ್ಯಾಯಮಾನವಾಗಿರುತ್ತದೆ. ಒಂದು ವೇಳೆ ವಿರುದ್ದವಾಗಿದ್ದರೆ? ಸಂಸಾರ ಡೋಲಾಯಮಾನ!

ಸಂಗಾತಿಯ ಆಯ್ಕೆಯಲ್ಲಿ ಪ್ರಧಾನವಾಗಿ ವಹಿಸುವ ಅಂಶ ಯಾವುದು? ಈ ಪ್ರಶ್ನೆಗೆ ಯಾವ ದೇಶದಲ್ಲಿಯೂ ಸಮರ್ಪಕ ಉತ್ತರ ದೊರಕುವುದಿಲ್ಲ. ಭಾರತೀಯ ಸಂಸ್ಕೃತಿಯ ಪ್ರಕಾರ ಒಮ್ಮೆ ವಿವಾಹವಾದ ಬಳಿಕ ಸಂಗಾತಿ ಯಾವ ತರಹವೇ ಇದ್ದರೂ ಅವರೊಂದಿಗೆ ಹೊಂದಿಕೊಂಡು ಹೋಗುವುದು ಈ ಸಮಸ್ಯೆಗೆ ಪರಿಹಾರವಾಗಿದೆ. ಸಾಮಾನ್ಯವಾಗಿ ಯುವಕರು ತಮ್ಮ ಸಂಗಾತಿಯಾಗುವವಳಲ್ಲಿ ಸೌಂದರ್ಯವನ್ನೂ ಯುವತಿಯರು ತಮ್ಮ ಭವಿಷ್ಯದ ಸುರಕ್ಷತೆಯನ್ನೂ ಬಯಸುತ್ತಾರೆ.

ಆದರೆ ಇವು ಕೇವಲ ಮೇಲ್ನೋಟಕ್ಕೆ ಕಾಣುವ ಅಂಶಗಳಾಗಿವೆ. ಆದರೆ ವಿವಾಹದ ಬಳಿಕ ತಮ್ಮ ಆಯ್ಕೆ ತಪ್ಪು ಎಂದು ಅರಿವಾಗಿ ಇಬ್ಬರಲ್ಲಿಯೂ ಅಸಮಾಧಾನದ ಹೊಗೆಯಾಡತೊಡಗುತ್ತದೆ. ಇದು ದಾಂಪತ್ಯದಲ್ಲಿ ಬಿರುಕಿಗೆ ಕಾರಣವಾಗುತ್ತದೆ. ಹಾಗಾದರೆ ಪರಿಗಣಸಬೇಕಾದುದು ಏನನ್ನು? ಹೊಂದಾಣಿಕೆಯೇ ಅಥವಾ ಆಕರ್ಷಣೆಯೇ?


ಒಂದರ್ಥದಲ್ಲಿ ಎರಡೂ ಅವಶ್ಯಕವಾಗಿವೆ. ಆಕರ್ಷಣೆಯಿಲ್ಲದಿದ್ದರೆ ಸಾಮೀಪ್ಯವೇ ಇರುವುದಿಲ್ಲ. ಹೊಂದಾಣಿಕೆಯಿಲ್ಲದೇ ಸಂಸಾರ ಸಾಧ್ಯವಿಲ್ಲ. ಇವೆರಡರ ಸಂಯೋಜನೆಯ ಒಂದು ಆಯ್ಕೆ ಸಮರ್ಪಕವಾಗಿದೆ. ಈ ಬಗ್ಗೆ ಕೊಂಚ ಗಾಢವಾಗಿ ಸಮಾಲೋಚಿಸೋಣ. ನಿಶ್ಚಿತಾರ್ಥದ ನಂತರ ಮದುವೆಗೆ ತಡ ಮಾಡಬಾರದೇ?

ಆಕರ್ಷಣೆಯಿದ್ದಲ್ಲಿ ಹತ್ತಿರಾಗುವ ಹುಚ್ಚು ಬಯಕೆ ಇರುತ್ತದೆ
ಪ್ರತಿ ಯುವತಿಯೂ ತಾನು ಆಕರ್ಷಕವಾಗಿ ಕಾಣಬೇಕೆಂಬ ಬಯಕೆಯಿಂದ ಸೌಂದರ್ಯ ಪ್ರಸಾದನಗಳಿಂದ ಹಿಡಿದು ಆಕರ್ಷಕ ಉಡುಗೆಗಳ ವರೆಗೆ ಎಲ್ಲಾ ವರಸೆಗಳನ್ನು ಉಪಯೋಗಿಸುತ್ತಾಳೆ. ಇದರಿಂದ ಆಕರ್ಷಿತರಾದ ಯುವಕನೊಂದಿಗೆ ಸಲುಗೆ ಬೆಳೆದು, ಸಲುಗೆ ಪ್ರೀತಿಗೆ ತಿರುಗುತ್ತದೆ. ನಂತರದ ಪ್ರತಿ ಕ್ಷಣವೂ ಸಂತೋಷಕರವಾಗಿ ಕಳೆಯುತ್ತದೆ. ಕ್ರಮೇಣ ಹತ್ತಿರಾಗುವ ಬಳಿಕ ಒಬ್ಬರನ್ನೊಬ್ಬರು ಬಿಟ್ಟಿರಲಾರದಂತಹ ಘಳಿಗೆ ಬರುತ್ತದೆ. ನೀನೇ ನನ್ನ ಪ್ರಾಣ, ನೀನೇ ನನ್ನ ದೈವ ಎನ್ನುವ ಸಂದರ್ಭ ಎದುರಾಗುತ್ತದೆ. ಆದರೆ ಕ್ರಮೇಣ ಈ ಆಕರ್ಷಣೆ ಕುಂದುತ್ತಾ ಬಂದಂತೆ ಮೇಕಪ್ಪಿನ ಹಿಂದಿನ ನೈಜ ವ್ಯಕ್ತಿ ಹೊರಬರುತ್ತಾರೆ. ಇಬ್ಬರಿಗೂ ಪರಸ್ಪರರ ಕುಂದುಕೊರತೆಗಳು ಕಾಣಲು ತೊಡಗುತ್ತವೆ.


ಒಮ್ಮೆ ಅತ್ಯಂತ ಪ್ರಿಯವಾಗಿದ್ದ ವಿಷಯಗಳೇ ಈಗ ದ್ವೇಶ ಮೂಡಿಸುವ ನೆವಗಳಾಗುತ್ತವೆ. ಹೊಂದಾಣಿಕೆಯಿಲ್ಲದ ದಾಂಪತ್ಯ ಕ್ರಮೇಣ ಮುರಿದುಬೀಳುತ್ತದೆ. ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಕೊಂಚ ಕಾಲ ದಾಂಪತ್ಯವನ್ನು ಮುಂದುವರೆಸಿದರೂ ಕ್ರಮೇಣ ಇದೂ ಕೂಡಾ ಒಂದು ಹೊರೆಯಾಗಿ ಕಂಡುಬರುತ್ತದೆ. ದಂಪತಿಗಳ ಕಲಹದಲ್ಲಿ ಎಂದಿಗೂ ಇಂತಹ ಮಾತುಗಳು ಬಾರದಿರಲಿ!

ಆಕರ್ಷಣೆ ಇಲ್ಲದ ಹೊಂದಾಣಿಕೆ ಪೇಲವವಾಗಿರುತ್ತದೆ
ಒಂದು ವೇಳೆ ಸಂಗಾತಿಯರಲ್ಲಿ ಹೊಂದಾಣಿಕೆ ಇದ್ದರೆ ಈ ಸಂಬಂಧ 'ಮರಣವು ನಮ್ಮಿಬ್ಬರಲ್ಲಿ ಒಬ್ಬರನ್ನು ಬೇರ್ಪಡಿಸುವವರೆಗೆ' ಎಂಬರ್ಥದಲ್ಲಿ ಮುಂದುವರೆಯುತ್ತದೆ. ಪರಸ್ಪರ ಹೊಂದಾಣಿಕೆ ಇರುವ ದಂಪತಿಗಳು ಯಾವುದೇ ವಿಷಯದಲ್ಲಾದರೂ ಆರೋಗ್ಯಕರವಾದ ಚರ್ಚೆ ನಡೆಸಬಲ್ಲರು. ಎಷ್ಟು ಹೊತ್ತು ಜೊತೆಗಿದ್ದರೂ ಒಬ್ಬರನ್ನೊಬ್ಬರಿಗೆ ಬೇಸರ ತರಿಸಲಾರರು. ಪರಸ್ಪರ ಮಾಹಿತಿ ವಿನಿಮಯದಿಂದ ಇಬ್ಬರೂ ಮಾನಸಿಕವಾಗಿ ಬೆಳೆಯಬಲ್ಲರು.


ಆದರೆ ಇಬ್ಬರಲ್ಲಿ ಒಂದು ಪರಸ್ಪರ ಆಕರ್ಷಣೆ ಇಲ್ಲದಿದ್ದರೆ ಸಮರ್ಥರಿದ್ದರೂ ಲೈಂಗಿಕ ಬಯಕೆಗಳು ಮೂಡುವಲ್ಲಿ ವಿಫಲರಾಗುತ್ತಾರೆ. ಹಾಗಾಗಿ ದಂಪತಿಗಳ ನಡುವೆ ಆಕರ್ಷಣೆ ಇರುವುದೂ ಅತಿ ಅಗತ್ಯ. ಈ ಸಂಬಂಧ ಹೊರನೋಟಕ್ಕೆ ಅತ್ಯುತ್ತಮವಾದ ಸಂಬಂಧದಂತೆ ಕಂಡುಬಂದರೂ ವಾಸ್ತವವಾಗಿ ಒಂದೇ ಕೋಣೆಯಲ್ಲಿ ಬಂದಿಗಳಾಗಿರುವ ಕೈದಿಗಳಂತಿರುತ್ತದೆ.

ಹಾಗಾದರೆ ಜೀವನಸಂಗಾತಿಯಾಗುವವರಲ್ಲಿ ಏನನ್ನು ಅಪೇಕ್ಷಿಸಬೇಕು?
ನಿಮ್ಮ ಜೀವನಸಂಗಾತಿಯನ್ನು ಕಂಡಾಕ್ಷಣ ಒಂದು ರೀತಿಯ ಆಕರ್ಷಣೆ ಮೂಡುವ ಜೊತೆಗೆ ಇಬ್ಬರೂ ಒಂದೇ ತೆರನಾಗಿ ಯೋಚಿಸುವ ಮೂಲಕ ಹೊಂದಿಕೊಳ್ಳುವವರಾಗಿದ್ದರೆ ಈ ಸಂಬಂಧ ಅತ್ಯುತ್ತಮವಾಗಿದೆ. ಇದರಲ್ಲಿ ಕೇವಲ ಸೌಂದರ್ಯಕ್ಕೆ ಅಥವಾ ವ್ಯಕ್ತಿತ್ವಕ್ಕೆ ಮಾತ್ರ ಬೆಲೆ ನೀಡಲಾಗುವುದಿಲ್ಲ. ಇಬ್ಬರೂ ಒಬ್ಬರಿಗೊಬ್ಬರು ಹೊಂದಿಕೊಳ್ಳುವಂತಹವರಾಗಿದ್ದು ಪರಸ್ಪರ ಗೌರವ ನೀಡುವಂತಿರಬೇಕು.


ದಂಪತಿಗಳಾದ ಬಳಿಕ ಇಬ್ಬರಲ್ಲಿಯೂ'ನನ್ನ ಸಂಗಾತಿಗಾಗಿ ನಾನು' ಎಂಬ ಭಾವನೆ ಮೂಡಬೇಕು. ಜೀವನದಲ್ಲಿ ಸಿಗುವ ಎಲ್ಲಾ ಸುಖ ದುಃಖಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಮನೆಯಲ್ಲಿನ ಯಾವುದೇ ವಸ್ತುಗಳು ನನ್ನದು ಎನ್ನುವ ಬದಲು ನಮ್ಮದು ಎಂದಾಗಬೇಕು. ಇಬ್ಬರೂ ಒಬ್ಬರಿಗೊಬ್ಬರು ಸಮಾನವಾಗಿ ಸಮಯ ನೀಡಬೇಕು. ಎಲ್ಲಾ ವಿಷಯಗಳನ್ನು ಮನಬಿಚ್ಚಿ ಮಾತನಾಡಬೇಕು. ಆಗಲೇ ಜೀವನದ ಸುಖ ಆಜೀವನ ಉಳಿಯುವಂತಾಗುತ್ತದೆ.

X
Desktop Bottom Promotion