Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಗ್ರಾಮೀಣ ಕರ್ನಾಟಕದ ಸೊವಡು ರಾಗಿ ಮುದ್ದೆ

ದಾಂಪತ್ಯಕ್ಕೆ ಅಡಿ ಇಡುವುದಕ್ಕೂ ಮುನ್ನಾ ದಿನಗಳನ್ನು ಈಗಲೂ ನೆನೆಯಬೇಕು. ಆಗೆಲ್ಲಾ ನಾವು ಸರದಿ ಪ್ರಕಾರ ರೂಮಿನಲ್ಲಿ ಅಡುಗೆ ಮಾಡುತ್ತಿದ್ದ ರುದ್ರ ರಮಣೀಯ ನೆನಪುಗಳು. ಒಬ್ಬ ಮುದ್ದೆ ಮಾಡಿದರೆ ಮಗದೊಬ್ಬ ಹುಳಿ ಮಾಡುತ್ತಿದ್ದ. ಒಂದು ಮೂಲೆಯಲ್ಲಿ ಎಫ್ ಎಂ ರೇಡಿಯೋ ತನ್ನ ಪಾಡಿಗೆ ತಾನು ಹಾಡ್ತಾ ಇರುತ್ತಿತ್ತು. ಮುದ್ದೆ ಊಟ ಎಂಥ ರುಚಿ ಅಂತೀರಿ, ಬಾಯಿ ಲೊಟ್ಟೆ ಹಾಕಿಕೊಂಡು ಉಣ್ಣುತ್ತಿದ್ದೆವು. ಮದ್ವೆ ಆದ್ಮೇಲಂತೂ ನನಗೆ ಮುದ್ದೆ ಮಾಡಕ್ಕೆ ಬರುತ್ತದೆ ಎಂದು ಹೆಂಡತಿ ಬಳಿ ಬಾಯ್ಬಿಡುವಂತಿಲ್ಲ. ಯಾಕೆಂದರೆ ಎಲ್ಲಿ ಮುದ್ದೆ ಕಲೆಸುವ ಕೆಲಸ ಖಾಯಂ ಆಗಿ ಬಿಡುತ್ತದೋ ಎಂಬ ಅಳುಕು! ಇರಲಿ ಇವೆಲ್ಲಾ ವೈಯಕ್ತಿಕ ಸಂಕಷ್ಟಗಳು ನಿಮಗ್ಯಾಕೆ, ಮುದ್ದೆ ಮಾಡಲು ಅಣಿಯಾಗೋಣ!
ಮುದ್ದೆ ಮಾಡಲು ಕೈಹಾಕುವುದಕ್ಕೂ ಮುನ್ನ ಒಂಚೂರು ರಾಗಿ ಮುದ್ದೆ ಮಹಾತ್ಮೆ ಹೇಳಲೇಬೇಕು ಅನ್ನಿಸುತ್ತಿದೆ. ಮುಖ್ಯವಾಗಿ ಗ್ರಾಮೀಣ ಕರ್ನಾಟಕದ ಸೊವಡು ಅಡಗಿರುವುದೇ ರಾಗಿಮುದ್ದೆಯಲ್ಲಿ. ರಟ್ಟೆ ಮುರಿಯುವಂತೆ ಕೆಲಸ ಮಾಡುವ ಕೂಲಿಕಾರರ, ಹೊಲಗಳಲ್ಲಿ ಬೆವರರಿಸುವ ರೈತಾಪಿ ಜನರ ಜೀವದ್ರವ್ಯ ನಮ್ಮ ರಾಗಿ ಮುದ್ದೆ. ಪ್ರಮುಖವಾಗಿ ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ರಾಗಿ ಮುದ್ದೆ ಶಾನೆ ಜನಪ್ರಿಯ. ಖರೆ ಹೇಳಬೇಕು ಎಂದರೆ, ಮುದ್ದೆ ಊಟ ಕೊಡುವ ತೃಪ್ತಿ ಮಾತ್ಯಾವುದೇ ಊಟ ಕೊಡಲಾರದು. ಎಲ್ಲ ವಯೋಮಾನದವರಿಗೂ ಒಗ್ಗುವ ಆಹಾರ. ರಾಗಿಮುದ್ದೆಯನ್ನು ಹಲವಾರು ಮಂದಿ ಹಲವಾರು ವಿಧವಾಗಿ ಮಾಡುತ್ತಾರೆ. ನಾನು ಬ್ರಹ್ಮಚಾರಿಯಾಗಿದ್ದಾಗ ಮಾಡುತ್ತಿದ್ದ ರಾಗಿಮುದ್ದೆಯನ್ನು ಇಲ್ಲಿ ನೀಡಿದ್ದೇನೆ. ಆಗೆಲ್ಲಾ ನಾಲ್ಕೈದು ರಾಗಿ ಮುದ್ದೆಗಳನ್ನು ಗುಳುಂ ಮಾಡುತ್ತಿದ್ದೆವು!
ಮುದ್ದೆಗೆ ಬೇಕಾದ ಪದಾರ್ಥಗಳು
ರಾಗಿ ಹಿಟ್ಟು: 1 ಅಳತೆ
ನೀರು: 2 ಅಳತೆ
ಬೇಕಿದ್ದರೆ ಉಪ್ಪು: ರುಚಿಗೆ ತಕ್ಕಷ್ಟು
2 ಗ್ಲಾಸ್ ನೀರನ್ನು ಬಿಸಿ ಮಾಡಿ, ಉಪ್ಪನ್ನು ಸೇರಿಸಿ. ಚಿಕ್ಕ ಕಪ್ ನಲ್ಲಿ 2 ಟೀ ಚಮಚದಷ್ಟು ರಾಗಿಹಿಟ್ಟನ್ನು ಹಾಗಿ ಉಗುರು ಬೆಚ್ಚಗಿನ ನೀರಿನಲ್ಲಿ ಕಲೆಸಿಕೊಳ್ಳಿ. ನೀರು ಕುದಿಯಲು ಪ್ರಾರಂಭಿಸಿದ ಕೂಡಲೆ ರಾಗಿಹಿಟ್ಟಿನ ಪೇಸ್ಟ್ ನ್ನು ಹಾಕಿ ಚೆನ್ನಾಗಿ ಕಲಕುತ್ತಿರಿ( ಕಲಕದೆ ಹಾಗೇ ಬಿಟ್ಟರೆ ರಾಗಿಹಿಟ್ಟು ಪಾತ್ರೆಯ ತಳಕ್ಕೆ ಅಂಟಿಕೊಳ್ಳುತ್ತದೆ). ನೀರು ಕೊತಕೊತನೆ ಕುದಿಯಲು ಬಿಡಿ.
ಈಗ 1 ಪ್ರಮಾಣದ ರಾಗಿಹಿಟ್ಟನ್ನು ಕುದಿಯುತ್ತಿರುವ ನೀರಿಗೆ ಹಾಕಿ, ಉರಿಯನ್ನು ಸಣ್ಣಗೆ ಮಾಡಿ. 3ರಿಂದ 4 ನಿಮಿಷಗಳ ಕಾಲ ಕುದಿಯಲು ಬಿಡಿ. ಉಕ್ಕಿದರೆ...ಉರಿಯನ್ನು ಮತ್ತಷ್ಟು ಕಡಿಮೆ ಮಾಡಿ.3 ನಿಮಿಷಗಳ ನಂತರ ಹಿಟ್ಟಿನ ಪಾತ್ರೆಯನ್ನು ಒಲೆಯಿಂದ ಕೆಳಗಿಳಿಸಿ ಹಿಟ್ಟು ಕೋಲಿನಿಂದ ಚೆನ್ನಾಗಿ ಗೊಟಾಯಿಸಿ. ಮುದ್ದೆ ಗೊಟಾಯಿಸಬೇಕಾದರೆ (ಕಲೆಸಲು) ರಟ್ಟೆಗಳು ಗಟ್ಟಿಯಾಗಿರಬೇಕು. ಮುದ್ದೆಯಲ್ಲಿ ಗಂಟುಗಳಿಲ್ಲದಂತೆ ಹಿಟ್ಟು ಕೋಲನ್ನು ತಿರುವುತ್ತಾ ನಿಮ್ಮ ಭುಜ ಬಲ ಪರಾಕ್ರಮವನ್ನು ತೋರಿಸಬೇಕು. ಈಗಲೂ ಅಷ್ಟೆ ಮುದ್ದೆ ಕಲೆಸುವುದರಲ್ಲಿ ನಮ್ಮ ಹಳ್ಳಿ ಕಡೆ ಪುರುಷರದ್ದೇ ಮೇಲುಗೈ. ಈ ವಿಚಾರದಲ್ಲಿ ಮಹಿಳೆಯರು ಸ್ವಲ್ಪ ಹಿಂದುಳಿದಿದ್ದಾರೆ ಎಂದೇ ಹೇಳಬೇಕು. ಈ ವಿಷ್ಯ ಈಗ್ಯಾಕೆ ಬಿಡಿ.
ಮುದ್ದೆ ತೊಳೆಸುವ ವಿಧಾನ
ಅನ್ನದ ಕೈಯನ್ನು ತೇವ ಮಾಡಿಕೊಂಡು ಹಿಟ್ಟನ್ನು ಅಂಚಿಲ್ಲದ ಸಪಾಟಾದ ಪ್ಲೇಟಿಗೆ ಹಾಕಿಕೊಳ್ಳಿ. ಪ್ಲೇಟ್ ಸಹ ಒದ್ದೆಯಾಗಿರಬೇಕು. ಈಗ ಕೈಯನ್ನು ಒದ್ದೆ ಮಾಡಿಕೊಂಡು ಗುಂಡಗೆ ಮುದ್ದೆಯನ್ನು ಕಲೆಸಿ. ಬೇಕಿದ್ದರೆ ಮುದ್ದೆಯ ಮೇಲೆ ಸಣ್ಣ ಹಳ್ಳ ಮಾಡಿ ಒಂದು ಹನಿ ತುಪ್ಪ ಹಾಕಿ. ಬಿಸಿಬಿಸಿಯಾದ ಎರಡು ಮುದ್ದೆಗಳನ್ನು ತಟ್ಟೆಗೆ ಹಾಕಿಕೊಂಡು ಮಸ್ಸೊಪ್ಪಿನೊಂದಿಗೆ ಉಂಡರೆ ಹಾಗೇ ಜೋಂಪು ಹತ್ತಿ ಗಡದ್ದಾಗಿ ನಿದ್ದೆಗೆ ಜಾರಿಕೊಳ್ಳುತ್ತೀರಿ.
ಕೊನೆ ಗುಟುಕು
ಮುದ್ದೆ ಮಾಡಲು ದಪ್ಪ ತಳದ ಹಿತ್ತಾಳೆ ಪಾತ್ರೆ ಅಥವಾ ಅಲ್ಯುಮಿನಿಯಂ ಪಾತ್ರೆಯನ್ನು ಬಳಸಬಹುದು.ಮುದ್ದೆ ಗೊಟಾಯಿಸಲು ಮರದ ಕೋಲು ಬೇಕಾಗುತ್ತದೆ. ನಮ್ಮ ಹೆಣ್ಮಕ್ಕಳಂತೂ ಮದುವೆಯಾದ ಹೊಸದರಲ್ಲಿ ತವರಿನಿಂದ ಹಿಟ್ಟು ಕೋಲನ್ನ್ನು ಬಳುವಳಿಯಾಗಿ ಪಡೆಯುತ್ತಿದ್ದರು. ಆಗೆಲ್ಲಾ ಗ್ಯಾಸ್ ಸ್ಟವ್ ಇರಲಿಲ್ಲ. ಸೌದೆ ಒಲೆ, ಮಣ್ಣಿನ ಕುಡಿಕೆಗಳನ್ನು ಬಳಸಿ ಮುದ್ದೆ ಕಲಸುತ್ತಿದ್ದರು. ಆಗಿನ ರುಚಿ ಈಗಿನ ರಾಗಿ ಮುದ್ದೆಗೆ ಇಲ್ಲ ಎನ್ನುವುದು ಕಠೋರ ಸತ್ಯ. ಎಲ್ಲಾ ತರಕಾರಿಗಳಿಂದ ಮಾಡಿದ ಹುಳಿ, ಎಲೆ-ಹೂ-ಕೋಸು, ಸೀಮೆಬದ್ನೇಕಾಯಿ,ಸಿಹಿ-ಅಥವಾ-ಬೂದು ಕುಂಬಳ್ಕಾಯಿ, ಕಡ್ಳೆಕಾಳ್ಹುಳಿ, ಬದ್ನೆಕಾಯಿ, ಚಿಕ್ಕೀರುಳ್ಳಿ, ನುಗ್ಗೆಕಾಯಿ, ಸಬ್ಬಸ್ಗೆ ಸೊಪ್ಪಿನ ಸಾರು ರಾಗಿಮುದ್ದೆ ಜೋಡಿ ಬಲು ವೈನಾಗಿರುತ್ತದೆ. [ಅಂದ ಹಾಗೆ, ರಾಗಿ ಮುದ್ದೆ ಹೆಸರಲ್ಲೂ ಒಂದು ಸಿನೆಮಾ ಬರುತ್ತಿದೆ]



Click it and Unblock the Notifications
