Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಡಬ್ಬಿ ತುಂಬ ಭಕ್ಕರಿ ಅಲ್ಲ ಅಮ್ಮನ ಪ್ರೀತಿ ಇತ್ತು

ಇಪ್ಪತ್ತೈದು ವರ್ಷದಿಂದ ಹಂಗೇ ಇರೋ ಧಾರವಾಡ, ಬಸ್ ಸ್ಟ್ಯಾಂಡಿನಿಂದ ನಡಕೋತ ಹೋದರ ಹದಿನೈದು ನಿಮಿಷದಾಗ ತಲುಪಬಹುದಾದ ಮಹೀಂದ್ರಕರ ಚಾಳ, ಅಲ್ಲಿರೋ ನಮ್ ಮನಿ, ಬೆಂಗಳೂರಿನ್ಯಾಗ ಏನು ಮಾಡ್ಲಿಕತ್ತಾನೋ ತಿಂದಾನೋ ಇಲ್ಲೋ ಅಂತ ಯಾವಾಗಲೂ ನೆನೆಸುತ್ತಾ ಇರೋ ಅಪ್ಪ ಅಮ್ಮ, ವಾರದಾಗ ಏಳು ದಿನಾನೂ ಅಮ್ಮ ಮಾಡಿ ಬಡಿಸುತ್ತಿದ್ದ ಭಕ್ಕರಿ ಪಲ್ಯಾ, ಕಟಕ ಭಕ್ಕರಿ ಸಿಹಿ ಮೊಸರು, ಅವರ ಪ್ರೀತಿ, ನನ್ನ ಒಂಟಿತನ ಎಲ್ಲಾ ನೆನಪಾಗಿ ಬುಳಕ್ ಅಂತ ಕಣ್ಣಾಲಿಗಳು ತುಂಬಿಕೊಂಡವು.
ಯಾಕ ಬೇಕಿತ್ತಪಾ ಈ ಬೆಂಗಳೂರು ಅಂಚ ಅನಸಲಿಕ್ಕೆ ಸುರು ಮಾಡಿತು. ಇಲ್ಲಿ ಎಲ್ಲಾ ಇದ್ದೂ ಏನೂ ಇಲ್ಲದಂಥ ಸ್ಥಿತಿ. ಕೆಲಸ, ರೊಕ್ಕ, ಮಸ್ತಿ ಮಜಾ ಎಲ್ಲಾ ಅದ. ಆದರ ಇಲ್ಲದಿರೋದಂದ್ರ ಅಮ್ಮನ ಸನಿಹ, ದೊಡ್ಡ ಪರಾತ ಇಟಗೊಂಡು ಟಪಟಪ ಅಂತ ಬಡಿದು ಮಣ್ಣಿನ ಒಲಿ ಮ್ಯಾಲ ಕಬ್ಬಿಣದ ಹಂಚಿಟ್ಟು ಕಟಿಗಿ ಉರಿ ಹಚ್ಚಿ ಬೇಯಿಸಿ ಕೊಡತಿದ್ದ ಬಿಸಿಬಿಸಿ ಭಕ್ಕರಿ ರುಚಿ.
ನಾವು ಬಿಜಾಪುರದ ಮಂದಿನ ಹಾಂಗ. ಪ್ರತಿದಿನ ನ್ಯಾರಿಗೆ ಜ್ವಾಳದ ಭಕ್ಕರಿ ಬದನಿಕಾಯಿ ಪಲ್ಯಾ ಅಥವಾ ಝುಣಕ ಇಲ್ಲದಿದ್ದರ ಆವತ್ತಿನ ದಿನಾನ ಮುಂದ ಹೋಗೋದಿಲ್ಲ. ಇಂಥಾಪರಿ ಭಕ್ಕರಿಗೆ ಅಡಿಕ್ಟ್ ಆಗಿರ್ತೇವಿ. ಭಕ್ಕರಿ ಇಲ್ಲದಿದ್ದರ ಹೊಟ್ಟಿ ತಾಳಮೇಳ ತಪ್ಪಿ ಮನಸಿಗೆ ಮಂಕು ಬಡಿದಹಾಗೆ ಆಗಿಬಿಡ್ತದ.
ತಮಾಷೆ ಅಂದ್ರ, ಬೆಂಗಳೂರಿನ್ಯಾಗ ಭಕ್ಕರಿ ಬಿಸಿನೆಸ್ಸು ಭಾರೀ ನಡೀತದ. ಕಾಮತ್ ಯಾತ್ರಿ ನಿವಾಸ ಹೊಟೇಲ್ ಹಿಡಕೊಂಡು ಎಲ್ಲಾ ಕಡೆ ಭಕ್ಕರಿ ಊಟ ಸಿಗತದ. ಬಿಜಾಪುರ, ಬಾಗಲಕೋಟಿ ಮಂದಿ ಇಡೀ ಸಂಸಾರ ಸಮೇತ ಗುಳೆ ಎದ್ದು ಬಂದು ಬೆಂಗಳೂರಿನ್ಯಾಗ ಠಿಕಾಣಿ ಹೂಡ್ಯಾರ. ಇರೋ ಕಡೆನ ಜೋಳದ ರೊಟ್ಟಿ ಊಟ ಸಿಗುತ್ತದೆ ಅಂತ ಬೋರ್ಡ್ ಹಾಕ್ಕೊಂಡು ಬಿಸಿನೆಸ್ ಶುರು ಮಾಡ್ಯಾರ. ಅಡ್ಡಿಯಿಲ್ಲ, ಭಕ್ಕರಿ ಅಂತೂ ಮಿಸ್ ಆಗಿಲ್ಲ ಅಂದ್ಕೊಂಡ್ರೂ ಅಮ್ಮ ಮಾಡಿದ ಭಕ್ಕರಿ ಪಲ್ಯಾ ರುಚಿ ಬಂದೀತ?
ದೊಡ್ಡ ಪರಾತದಾಗ ನುಣ್ಣಗ ಬೀಸಿದ ಜ್ವಾಳದ ಹಿಟ್ಟಿಗೆ ಬಿಸಿಬಿಸಿ ಕಾದ ನೀರು ಹಾಕಿ, ಹನಿ ಎಣ್ಣಿ ಸೈತ ಮುಟ್ಟಸ್ದ ಚಂದಗ ಹುಣ್ಣಿಮೆ ಚಂದ್ರಾಮನಂಗ ತಟ್ಟಿದ ಭಕ್ಕರಿ ಬಡೀತಿದ್ದರ, ಅಮ್ಮ ಭಕ್ಕರಿ ಅಲ್ಲ ನಮಗ ಚುಕ್ಕೂ ಬಡಿಲಿಕತ್ತಾಳ ಅಂತ ಅನಸತಿತ್ತು. ಪೂರಿ ಹಂಗ ಉಬ್ಬಿದ ಬಿಸಿಬಿಸಿ ಭಕ್ಕರಿ ಹೊಟ್ಟಿ ಒಳಗ ಇಳಸತಿದ್ದರ ನಿಗಿನಿಗಿ ಉರೀತಿದ್ದ ಬೆಂಕಿ ಮುಂದ ಅಮ್ಮನ ಮುಖದ ಸಂತಸ ನೂರ್ಮಡಿ ಆಗಿರ್ತಿತ್ತು. ಕಾದ ಹಂಚಿನ ಅಂಚಿಗೆ ತಾಕಿ ಆದ ಗಾಯಗಳಿಗೆ ಲೆಕ್ಕ ಇರ್ತಿರಲಿಲ್ಲ. ಆದರೂ ಭಕ್ಕರಿ ಬಡದು ಬಡಿಸೋದು ಬಿಡ್ತಿರಲಿಲ್ಲ.
ಬಿಸಿಬಿಸಿ ಅಲ್ಲ ಒಣಗಿದ ಭಕ್ಕರಿನ ಲಟಲಟ ಮುರಿದು, ತಟಕು ಉಪ್ಪು ಮ್ಯಾಲ ಸಿವಿ ಮೊಸರು, ಗುರೆಳ್ಳು ಚಟ್ನಿಪುಡಿ ಹಾಕಿಕೊಂಡು ಹೊಡದ್ರ ಹೆಂಗಿರತಿತ್ತು. ಬೆಂಗಳೂರಿಗೆ ಅಪ್ಪ ಬಂದಾಗ ಡಬ್ಬಿ ತುಂಬ ಎಂಟು ದಿನಕ್ಕಾಗೋವಷ್ಟು ಭಕ್ಕರಿ ಮಾಡಿ ಕಳಿಸಿರತಿದ್ದಳು ಅಮ್ಮ. ಡಬ್ಬಿ ತಗದ ನೋಡಿದ್ರ ಭಕ್ಕರಿ ಇರತಿದ್ದಿದ್ದಿಲ್ಲ, ಬರೇ ಪ್ರೀತಿ ತುಂಬಿರೋದು ಕಾಣಿಸ್ತಿತ್ತು. ಮುಖಾ ಅತ್ಲಾಗ ಮಾಡಿ ಎಷ್ಟು ಸತಿ ಕಣ್ಣೀರು ಒರೆಸಿಕೊಂಡೇನೋ ಲೆಕ್ಕಾ ಇಟ್ಟಿಲ್ಲ. ಹೋಗ್ಲಿ ಇಲ್ಲೇ ಬರ್ರಿ ಅಂದ್ರ, ಹಳೇ ಹಂಚಿನ ಮನಿ, ದೊಡ್ಡ ಅಡಗಿಮನಿ, ಸಾರಿಸಿದ ಮಣ್ಣಿನ ಒಲಿ, ಧಾರವಾಡದ ಆ ವಾತಾವರಣವನ್ನ ಬಿಟ್ಟು ಬರಲಿಕ್ಕೆ ಅಮ್ಮ ತಯಾರಿಲ್ಲ.
ನಾಳೆ, ಅಂದ್ರ ಮೇ 9 ಮದರ್ಸ್ ಡೇ ಅಂತ. ಅಮ್ಮನ ಪ್ರೀತಿಯ ಗುಟುಕು ಎಲ್ಲಾರಿಗೂ ಸಿಗಲಿ.



Click it and Unblock the Notifications
