For Quick Alerts
ALLOW NOTIFICATIONS  
For Daily Alerts

ವಿಶ್ವ ಚಾಂಪಿಯನ್, ಬ್ಯಾಡ್ಮಿಂಟನ್ ತಾರೆ ಪಿ. ವಿ ಸಿಂಧು ಬಗ್ಗೆ ತಿಳಿದುಕೊಳ್ಳಿ

|
ಇದುವರೆಗೂ ಯಾರೂ ಮಾಡದ ಸಾಧನೆ ಮಾಡಿದ ಸಿಂಧು..? | PV Sindhu | Oneindia Kannada

ದೇಶದ ಯುವಜನತೆಗೆ ಕ್ರೀಡಾ ಜಗತ್ತಿನಲ್ಲಿ ಸ್ಪೂರ್ತಿದಾಯಕ ದಂತಕತೆಗಳು ಸಾಕಷ್ಟಿದೆ, ಅದಕ್ಕೆ ನೂತನ ಸೇರ್ಪಡೆ ನಮ್ಮ ನೆರೆರಾಜ್ಯದ ಹೆಮ್ಮೆ ಪಿ. ವಿ ಸಿಂಧು. ವಿಶ್ವ ರ್ಯಾಂಕಿಂಗ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಭಾರತದ ಅಗ್ರಮಾನ್ಯ ಶೆಟ್ಲರ್ ಪಿ. ವಿ ಸಿಂಧು ತಮ್ಮ ಪದಕಕ್ಕೆ ಚಿನ್ನದ ಲೇಪನಗೈದಿದ್ದಾರೆ. ತಮ್ಮ ಚೊಚ್ಚಲ ಬಂಗಾರದ ಕನಸನ್ನು ನನಸು ಮಾಡಿರುವ ಸಿಂಧು ತಾಯಿಯ ಹುಟ್ಟುಹಬ್ಬಕ್ಕೆ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನ ಚಿನ್ನದ ಪದಕವನ್ನೇ ಉಡುಗೊರೆಯಾಗಿ ನೀಡಿದ್ದಾರೆ ಕ್ರೀಡಾ ಜಗತ್ತಿನ ಶ್ರೇಷ್ಠ ಸಾಧಕಿ.

P V Sindhu

ಹೌದು, ನಮ್ಮ ನೆರೆರಾಜ್ಯ ಆಂಧ್ರ ಪ್ರದೇಶದ ಸಾಧಕಿ ಪುಸರ್ಲಾ ವೆಂಕಟ ಸಿಂಧು ಭಾನುವಾರ (ಆಗಸ್ಟ್ 25) ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಆಟಗಾರ್ತಿ ಎಂಬ ದಾಖಲೆಯನ್ನು ಬರೆದಿದ್ದಾರೆ. 2019ರಲ್ಲಿ ಸಿಂಧು ಜಯಿಸಿದ ಏಕೈಕ ಅಗ್ರಮಾನ್ಯ ಪ್ರಶಸ್ತಿ ಇದಾಗಿದೆ.

ಸಾಧಾರಣ ಕುಟುಂಬದಿಂದ ಬಂದ ಸಿಂಧು ಸಾಧನೆಯಪಥ ಎಂಥವರನ್ನು ಪ್ರೇರೇಪಿಸುವಂಥದ್ದು. ಸಿಂಧು ಬಾಲ್ಯ, ಸಾಧನೆ, ಪ್ರಶಸ್ತಿ ಕುರಿತ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.

ಬಾಲ್ಯದಲ್ಲೇ ಮೊಳೆತ ಆಸಕ್ತಿ

ಬಾಲ್ಯದಲ್ಲೇ ಮೊಳೆತ ಆಸಕ್ತಿ

ಪಿ.ವಿ ರಮಣ ಹಾಗೂ ಪಿ.ವಿಜಯ ಇಬ್ಬರೂ ಮಾಜಿ ವಾಲಿಬಾಲ್ ಆಟಗಾರರ ಕನಸಿನ ಕೂಸು ಸಿಂಧು ಹೈದರಾಬಾದ್ ನಲ್ಲಿ ಜನಿಸಿದರು. ವೃತ್ತಿಪರ ವಾಲಿಬಾಲ್ ಅಟಗಾರ ರಮಣ ಅವರೂ ಸಹ ಭಾರತ ಸರ್ಕಾರದ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಪಾತ್ರರಾಗಿದ್ದರು. ಖ್ಯಾತ ವಾಲಿಬಾಲ್ ಆಟಗಾರದ ಪುತ್ರಿ ಸಿಂಧು ಮಾತ್ರ ಬ್ಯಾಡ್ಮಿಂಟನ್ ಕಡೆಗೆ ಆಕರ್ಷಿತರಾದರು. ಎಂಟನೇ ವಯಸ್ಸಿಗೇ ಬ್ಯಾಡ್ಮಿಂಟನ್ ತರಬೇತಿ ಅರಂಭಿಸಿದ ಸಿಂಧು ಮೊದಲಿಗೆ ಸಿಕಂದರಾಬಾದ್ ನ ಭಾರತೀಯ ರೈಲ್ವೇ ಇನ್ಸ್ ಟಿಟ್ಯೂಟ್ ಆಫ್ ಸಿಗ್ನಲ್ ಎಂಜಿನಿಯರಿಂಗ್ ಮತ್ತು ದೂರಸಂಪರ್ಕ ಸಂಸ್ಥೆಯ ಬ್ಯಾಡ್ಮಿಂಟನ್ ಕೋರ್ಟ್ ಗಳಲ್ಲಿ ಮೆಹಬೂಬ್ ಅಲಿ ಅವರ ಮಾರ್ಗದರ್ಶನದಲ್ಲಿ ಪ್ರಾಥಮಿಕ ತರಬೇತಿ ಪಡೆದರು. ನಂತರ ಉನ್ನತ ತರಬೇತಿಗಾಗಿ ಪ್ರೇರಣಾ ಗುರು ಪುಲ್ಲೇಲ ಗೋಪಿಚಂದ್ ಅವರ ಗರಡಿಯಲ್ಲಿ ತರಬೇತಿ ಪಡೆದರು. ಸಿಂಧು ಸಾಧನೆಗೆ ಗೋಪಿಚಂದ್ ಮಾರ್ಗದರ್ಶನ ಪ್ರಮುಖ ಅಸ್ತ್ರವಾಗಿತ್ತು.

ಪೋಷಕರ ಶ್ರಮ

ಪೋಷಕರ ಶ್ರಮ

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನ ಚೊಚ್ಚಲ ಚಿನ್ನದ ಪದಕವನ್ನು ತಮ್ಮ ಪೋಷಕರಿಗೆ ಅರ್ಪಿಸಿದ ಸಿಂಧು ಸಾಧನೆಯ ಹಿಂದೆ ಪೋಷಕರ ಪರಿಶ್ರಮ ಅಪಾರವಿದೆ. ಸಿಂಧು ಸಾಧನೆಯ ಪ್ರತಿ ಹೆಜ್ಜೆಯಲ್ಲೂ ಸ್ವತಃ ಕ್ರೀಡಾಪಟುವಾಗಿರುವ ತಂದೆ ರಮಣ ಅವರ ಮರ್ಗದರ್ಶನವಿದೆ. ಮಗಳ ರಿಯೋ ಒಲಿಂಪಿಕ್ಸ್ ತಯಾರಿಗಾಗಿ ರಮಣ ಅವರು ತಮ್ಮ ರೇಲ್ವೆ ನೌಕರಿಗೇ 8 ತಿಂಗಳು ರಜೆ ಹಾಕಿದ್ದರು. ಪ್ರತಿನಿತ್ಯ ಮುಂಜಾನೆ 4 ಗಂಟೆಗೆ ಮಗಳನ್ನು ಗೋಪಿಚಂದ್ ಅಕಾಡೆಮಿಗೆ ಕರೆತಂದು ಪ್ರತಿ ಬಾರಿಯೂ ಆಟದ ಕುರಿತು ಮಗಳೊಂದಿಗೆ ಚರ್ಚಿಸಿ ಕೆಲ ಸಲಹೆ ಸೂಚನೆಗಳನ್ನು ನೀಡಿದ್ದ ತಂದೆಯ ಸೂಚನೆಗಳನ್ನೆಲ್ಲ ಸಿಂಧು ರಿಯೋನಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಲು ಪರೋಕ್ಷ ಕಾರಣ ಎನ್ನಲಾಗಿದೆ.

ಸಾಧನೆ ಮತ್ತು ಪದಕ

ಸಾಧನೆ ಮತ್ತು ಪದಕ

ಶಾಲಾಹಂತದಿಂದಲೇ ಸಾಕಷ್ಟು ಸ್ಪರ್ಧೆಗಳಲ್ಲಿ ಮಿಂಚಿದ್ದ ಸಿಂಧು ಇಂದು ವಿಶ್ವ ರ್ಯಾಂಕ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಅಗ್ರಮಾನ್ಯ ಕ್ರೀಡಾಳುವಾಗಿದ್ದಾರೆ. ಅಂತರರಾಷ್ಟ್ರೀಯ ವಲಯದಲ್ಲಿ 2009ರಲ್ಲಿ ಕೊಲಂಬೊದಲ್ಲಿ ನಡೆದ ಸಬ್ ಜೂನಿಯರ್ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಜಯಿಸಲು ಆರಂಭಿಸಿದ ಸಿಂದು ನಂತರ, 2010ರಲ್ಲಿ ಇರಾನ್ ಫಜ್ರ್ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಲೆಂಜ್ ಪಂದ್ಯಾವಳಿಯಲ್ಲಿ ಸಿಂಗಲ್ಸ್ ವಿಭಾಗದಲ್ಲಿ ಬೆಳ್ಳಿ ಪದಕ, 2010ರಲ್ಲಿ ಮೆಕ್ಸಿಕೋದಲ್ಲಿ ನಡೆದ ಕಿರಿಯರ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದರು. 2010ರ ಉಬರ್ ಕಪ್ ನಲ್ಲಿ ಭಾರತದ ರಾಷ್ಟ್ರೀಯ ತಂಡದಲ್ಲಿ ತಂಡದ ಸದಸ್ಯರಾಗಿದ್ದ ಅವರು, 2012 ನಡೆದ 19 ವರ್ಷದೊಳಗಿನವರ ಏಷ್ಯಾ ಯೂತ್ ಚ್ಯಾಂಪಿಯನ್ಷಿಪ್ ನಲ್ಲೂ ಸಾಧನೆಗೈದಿದ್ದರು. ಲಂಡನ್ ನಲ್ಲಿ ಜರುಗಿದ್ದ 2012ರ ಒಲಿಂಪಿಕ್ಸ್ ನಲ್ಲಿ ಸೆಮಿಫೈನಲ್ಸ್ ಪ್ರವೇಶಿಸಿದ್ದ 18ವರ್ಷದ 10ನೇ ಶ್ರೇಯಾಂಕದ ಸಿಂಧು ಏಳನೇ ಶ್ರೇಯಾಂಕಿತ ಚೀನೀ ಆಟಗಾರ್ತಿಯನ್ನು ಸೋಲಿಸಿ ವಿಶ್ವ ಚಾಂಪಿಯನ್ಶಿಪ್ನಲ್ಲಿ ಮಹಿಳೆಯರ ಸಿಂಗಲ್ಸ್ ನಲ್ಲಿ ಭಾರತಕ್ಕೆ ಮೊದಲ ಕಂಚಿನ ಪದಕವನ್ನು ತಂದಿದ್ದರು.

ಪ್ರಶಸ್ತಿಗಳು

ಪ್ರಶಸ್ತಿಗಳು

ರಿಯೊ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಜಯಿಸಿದ ಸಿಂಧು ಅವರಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ 2016ರಲ್ಲಿ ರಾಜೀವಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದರು ಅಲ್ಲದೇ, ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಶಿಪ್ ‌ನಲ್ಲಿ ಎರಡು ಬಾರಿ ಕಂಚಿನ ಪದಕ ಗೆದ್ದಿರುವ ಭಾರತದ ಉದಯೋನ್ಮುಖ ಪ್ರತಿಭೆ ಸಿಂಧು ಚೀನಾದ ಮಕಾವ್ ನಲ್ಲಿ 74.6 ಲಕ್ಷರೂ ಬಹುಮಾನ ಮೊತ್ತದ ಮಕಾವ್ ಓಪನ್ ಗ್ರ್ಯಾನ್ ಪ್ರಿ ಗೋಲ್ಡ್ ಟೂರ್ನಿಯಲ್ಲಿ ಪ್ರಶಸ್ತಿ ಗಳಿಸಿದರು. 2017ರಲ್ಲಿ ಸೈಯದ್ ಮೋದಿ ಗ್ರ್ಯಾನ್ಪ್ರಿ ಗೋಲ್ಡ್‌ ಪ್ರಶಸ್ತಿ ಪಡೆದ ಸಿಂಧು, 2016 ವರ್ಷ ರಿಯೊ ಡಿ ಜನೈರೊದಲ್ಲಿ ನಡೆದಿದ್ದ ಒಲಿಂಪಿಕ್ಸ್ ನ ಮಹಿಳೆಯರ ಸಿಂಗಲ್ಸ್ ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು

ಇನ್ನೂ ಸಾಧನೆ ಸಾಕಷ್ಟಿದೆ, ಸಾಧನೆಯ ಮೆಟ್ಟಿಲು ಏರುತ್ತಲೇ ಇದೆ. ಅವರ ಗರಿಮೆಯ ರೆಕ್ಕೆ ಇನ್ನಷ್ಟು ಎತ್ತರಕ್ಕೆ ಹಾರಲಿ, ಪ್ರಶಸ್ತಿ, ಪದಕಗಳ ಪಟ್ಟಿ ಮಿತಿಇಲ್ಲದೆ ಸಾಗಲಿ ಎಂಬುದೇ ಕನ್ನಡ ಬೋಲ್ಡ್ ಸ್ಕೈ ಹಾರೈಕೆ.

All Image Courtesy

Read more about: insync
English summary

P V Sindhu Biography, Life, Career and Awards

p v Sindhu is an Indian professional badminton player. She created history in her caree. Sindhu has won a medal at every world championships since 2013. Sindhu represented India at the 2016 summer olympics, becoming the first Indian badminton player to reach a final. here we tell you more about her childhood, career
Story first published: Tuesday, August 27, 2019, 15:53 [IST]
X
Desktop Bottom Promotion