Pitru Paksha 2025: ಪಿತೃ ಪಕ್ಷದಲ್ಲಿ ಹೊಸ ವಸ್ತು ಏಕೆ ಖರೀದಿಸಬಾರದು? ಇಲ್ಲಿದೆ ಅಸಲಿ ಕಾರಣ

ಪಿತೃ ಪಕ್ಷದಲ್ಲಿ ಹೊಸ ವಸ್ತುಗಳನ್ನು ಏಕೆ ಖರೀದಿಸಬಾರದು? ನಿಜವಾದ ಕಾರಣ ಇಲ್ಲಿದೆ. ಪ್ರತಿ ವರ್ಷವೂ ಗಣೇಶನ ವಿಸರ್ಜನೆಯ ನಂತರ, ಪಿತೃ ಪಕ್ಷದ (Pitru Paksha) ಪುಣ್ಯಕಾಲವು ಪ್ರಾರಂಭವಾಗುತ್ತದೆ. ಈ ಹದಿನೈದು ದಿನಗಳ ಅವಧಿಯಲ್ಲಿ ನಮ್ಮ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಲೆಂದು ವಿವಿಧ ಪೂಜೆ ಮತ್ತು ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ವರ್ಷ ಸೆಪ್ಟೆಂಬರ್ 7 ರಿಂದ (ಭಾದ್ರಪದ ಪೂರ್ಣಿಮಾ) ಸೆಪ್ಟೆಂಬರ್ 21 ರವರೆಗೆ (ಸರ್ವಪಿತೃ ಅಮಾವಾಸ್ಯೆ) ಪಿತೃ ಪಕ್ಷ ಇರುತ್ತದೆ. ಪಿತೃ ಪಕ್ಷವು ನಮ್ಮ ಪೂರ್ವಜರ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುವ ಸಮಯವಾದರೂ, ಈ ಅವಧಿಯಲ್ಲಿ ಹೊಸ ಕೆಲಸಗಳನ್ನು ಪ್ರಾರಂಭಿಸುವುದು ಅಥವಾ ದೊಡ್ಡ ಖರೀದಿಗಳನ್ನು ಮಾಡುವುದನ್ನು ಅಶುಭ ಅಥವಾ ನಿಷಿದ್ಧ ಎಂದು ಹೇಳಲಾಗುತ್ತದೆ.

ಪಿತೃ ಪಕ್ಷವು ಕೇವಲ ಒಂದು ಧಾರ್ಮಿಕ ಆಚರಣೆಯಲ್ಲ. ಇದು ನಮ್ಮ ಪೂರ್ವಜರನ್ನು ಸ್ಮರಿಸಲು ಮತ್ತು ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಲು ಮೀಸಲಾದ ಒಂದು ಅವಧಿ. ಈ ಹದಿನೈದು ದಿನಗಳಲ್ಲಿ ಪೂರ್ವಜರು ನಮ್ಮನ್ನು ಭೇಟಿ ಮಾಡಲು ಭೂಮಿಗೆ ಆಗಮಿಸುತ್ತಾರೆ ಎಂಬ ನಂಬಿಕೆ ಇದೆ. ಈ ಸಮಯದಲ್ಲಿ ಶ್ರಾದ್ಧ, ತರ್ಪಣ ಮತ್ತು ಇತರ ಆಚರಣೆಗಳನ್ನು ಮಾಡಲಾಗುತ್ತದೆ. ಈ ಆಚರಣೆಗಳು ಪೂರ್ವಜರಿಗೆ ಗೌರವ ಸಲ್ಲಿಸುವುದಲ್ಲದೆ, ಅವರ ಆತ್ಮಗಳಿಗೆ ಮುಕ್ತಿಯನ್ನು ನೀಡುತ್ತದೆ ಎಂದು ನಂಬಲಾಗಿದೆ. ಹಾಗಾಗಿ, ಈ ಅವಧಿಯನ್ನು ಆಧ್ಯಾತ್ಮಿಕವಾಗಿ ಅತ್ಯಂತ ಮಹತ್ವದ ಮತ್ತು ಪವಿತ್ರವೆಂದು ಪರಿಗಣಿಸಲಾಗುತ್ತದೆ.

Don t Buy These New Things During Pitru Paksha

ಹೊಸ ವಸ್ತುಗಳನ್ನು ಏಕೆ ಖರೀದಿಸಬಾರದು?

ಪಿತೃ ಪಕ್ಷದ (Pitru Paksha 2025) ಸಮಯದಲ್ಲಿ ಹೊಸ ವಸ್ತುಗಳನ್ನು ಖರೀದಿಸದಿರುವುದರ ಹಿಂದಿನ ಕಾರಣವನ್ನು ಪ್ರೇಮಾನಂದ ಮಹಾರಾಜ್ ಅವರು ಒಂದು ವಿಡಿಯೋದಲ್ಲಿ ವಿವರಿಸಿದ್ದಾರೆ. ಈ ಸಮಯದಲ್ಲಿ ಹೊಸ ವಸ್ತುಗಳನ್ನು ಖರೀದಿಸಿ ಅವುಗಳನ್ನು ಬಳಸುವುದರಿಂದ ನಮ್ಮ ಗಮನವು ಪೂರ್ವಜರಿಂದ ವಿಚಲಿತವಾಗುತ್ತದೆ. ನಾವು ನಮ್ಮ ಪೂರ್ವಜರನ್ನು ಸ್ಮರಿಸುವ ಬದಲು ಹೊಸ ವಸ್ತುಗಳತ್ತ ಆಕರ್ಷಿತರಾಗುತ್ತೇವೆ. ಇದರಿಂದ ಪೂರ್ವಜರ ಆತ್ಮಕ್ಕೆ ತೊಂದರೆಯಾಗಬಹುದು ಎಂಬ ನಂಬಿಕೆ ಇದೆ ಎಂದು ಪ್ರೇಮಾನಂದ ಮಹಾರಾಜ್ ಹೇಳಿದ್ಧಾರೆ.

ಯಾವ ವಸ್ತುಗಳ ಖರೀದಿ ಬೇಡ?

ಇದಲ್ಲದೆ, ಪ್ರೇಮಾನಂದ ಮಹಾರಾಜ್ ಅವರು ಇನ್ನೊಂದು ಮಹತ್ವದ ವಿಷಯವನ್ನು ಹೇಳಿದ್ದಾರೆ. ಪಿತೃ ಪಕ್ಷದ ಸಮಯದಲ್ಲಿ ಖರೀದಿಸಿದ ವಸ್ತುಗಳಲ್ಲಿ ಪೂರ್ವಜರ ಅಂಶವು ನೆಲೆಸುತ್ತದೆ. ಆ ಕಾರಣದಿಂದ, ಅಂತಹ ವಸ್ತುಗಳನ್ನು ಜೀವಂತ ವ್ಯಕ್ತಿಗಳು ಬಳಸಬಾರದು ಎಂದು ಹೇಳಲಾಗುತ್ತದೆ. ಆದ್ದರಿಂದ, ಈ ಸಮಯದಲ್ಲಿ ಮನೆ, ಕಾರು, ಅಥವಾ ಇತರ ದೊಡ್ಡ ಖರೀದಿಗಳನ್ನು ಮಾಡುವುದು, ಹೊಸ ವ್ಯವಹಾರಗಳನ್ನು ಪ್ರಾರಂಭಿಸಬಾರದು. ಜೊತೆಗೆ ಮದುವೆಯಂತಹ ಶುಭ ಕಾರ್ಯಕ್ರಮಗಳನ್ನು ಮಾಡುವುದನ್ನು ತಪ್ಪಿಸಲಾಗುತ್ತದೆ. ಈ ನಂಬಿಕೆಯು ಪಿತೃ ಪಕ್ಷದ ಆಧ್ಯಾತ್ಮಿಕ ಆಳವನ್ನು ಎತ್ತಿ ತೋರಿಸುತ್ತದೆ.

ಪಿತೃ ದೋಷಕ್ಕೆ ಪರಿಹಾರ ಏನು?

ಪಿತೃ ಪಕ್ಷವನ್ನು ಕೇವಲ ನಿಷಿದ್ಧಗಳ ಅವಧಿ ಎಂದು ಭಾವಿಸುವುದಕ್ಕಿಂತ, ಇದು ಪೂರ್ವಜರ ಆಶೀರ್ವಾದ ಪಡೆಯುವ ಒಂದು ಸುವರ್ಣಾವಕಾಶ ಎಂದು ಪರಿಗಣಿಸುವುದು ಸೂಕ್ತ. ಪ್ರೇಮಾನಂದ ಮಹಾರಾಜರು ಪಿತೃದೋಷದಿಂದ (Pitru Dosha) ಮುಕ್ತಿ ಪಡೆಯಲು ಕೆಲವು ಸರಳ ಉಪಾಯಗಳನ್ನು ತಿಳಿಸಿದ್ದಾರೆ. ನಾವು ಭಜನೆ ಮಾಡಿದಾಗ ಮತ್ತು ದೇವರ ನಾಮಸ್ಮರಣೆ ಮಾಡಿದಾಗ ಪೂರ್ವಜರು ತುಂಬಾ ಸಂತೋಷ ಪಡುತ್ತಾರೆ.

ಭಾಗವತ ಪಠಣ, ಗೋಪಾಲ ಸಹಸ್ರನಾಮ, ಮತ್ತು ಇತರ ಧಾರ್ಮಿಕ ವಿಧಿಗಳನ್ನು ನಡೆಸಿದಾಗ ಅವರು ಹೆಚ್ಚು ಪ್ರಸನ್ನರಾಗಿ ತಮ್ಮ ಸಂತಾನಕ್ಕೆ ಆಶೀರ್ವಾದ ಮಾಡುತ್ತಾರೆ. ಅವರ ಆಶೀರ್ವಾದದಿಂದ ವ್ಯಕ್ತಿಯು ಪ್ರಗತಿ ಸಾಧಿಸುತ್ತಾನೆ. ಜೊತೆಗೆ ಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾನೆ. ಪಿತೃ ಪಕ್ಷವು ಕೇವಲ ಪೂರ್ವಜರಿಗೆ ವಿದಾಯ ಹೇಳುವುದಲ್ಲ, ಬದಲಾಗಿ ನಮ್ಮ ಹಿಂದಿನ ಜನಾಂಗದವರನ್ನು ಸ್ಮರಿಸಿ, ಅವರ ಆಶೀರ್ವಾದ ಪಡೆಯುವ ಒಂದು ಪವಿತ್ರ ಸಮಯವಾಗಿದೆ.

English summary

Pitru Paksha 2025: Don't Buy These New Things During Pitru Paksha; Here's the Real Reason

Pitru Paksha 2025: Don't Buy These New Things During Pitru Paksha; Here's the Real Reason
Story first published: Thursday, September 4, 2025, 12:50 [IST]
X
Desktop Bottom Promotion