Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ತೂಕ ಇಳಿಸಿಕೊಳ್ಳುವ ರಹಸ್ಯ ಬೆಟ್ಟದ ನೆಲ್ಲಿಕಾಯಿಯಲ್ಲಿ ಅಡಗಿದೆ!
ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಎಣ್ಣೆಹೊಳೆ ಎಂಬ ಊರಿದೆ. ಈ ಹೆಸರು ಬರಲು ಅದರ ಮೂಲಕ ಹಾದು ಹೋಗುವ ಚಿಕ್ಕ ಹೊಳೆಯೇ ಕಾರಣ. ಆದರೆ ಈ ನೀರಿನಲ್ಲಿ ಎಣ್ಣೆಯೇನೂ ಇಲ್ಲ, ಬದಲಿಗೆ ಕಥೆಯೊಂದಿದೆ.
ಹಿಂದೆ ಅರಸರ ಕಾಲದಲ್ಲಿ ದೀಪಕ್ಕೆ ಎಣ್ಣೆ ಕೊಂಡುಹೋಗುವವನೊಬ್ಬನಿಗೆ ಯಾರೋ ನೆಲ್ಲಿಕಾಯಿ ಕೊಟ್ಟರಂತೆ. ನೆಲ್ಲಿಕಾಯಿ ತಿನ್ನುತ್ತಾ ಈ ಊರಿಗೆ ಬಂದವನು ನೀರಡಿಕೆಯಾಗಿ ಹೊಳೆಯ ನೀರು ಕುಡಿದನಂತೆ. ತುಂಬಾ ಸಿಹಿಯಾಗಿದ್ದ ಈ ನೀರು ಮತ್ತೆ ಸಿಗಲಾರದು ಎಂದೆಣೆಸಿ ಎಣ್ಣೆಯನ್ನೆಲ್ಲಾ ನೀರಿಗೆ ಸುರಿದು ಡಬ್ಬಿ ಭರ್ತಿ ಹೊಳೆನೀರು ತುಂಬಿಕೊಂಡು ಹೋದನಂತೆ. ಅದಕ್ಕೇ ಎಣ್ಣೆಹೊಳೆ ಎಂಬ ಹೆಸರು.
ಈ ಕಥೆಗೆ ಕಾರಣವಾದ ನೆಲ್ಲಿಕಾಯಿ ತಿಂದ ಬಳಿಕ ಕುಡಿದ ನೀರು ಸಿಹಿಯಾಗಲು ಇದರಲ್ಲಿರುವ ಪೋಷಕಾಂಶಗಳು ಕಾರಣ. ವಿಟಮಿನ್ ಸಿ ಹೇರಳವಾಗಿರುವ ಈ ನೆಲ್ಲಿಕಾಯಿ ತೂಕ ಇಳಿಸಲೂ ನೆರವಾಗುತ್ತದೆ ಎಂಬ ಮಾಹಿತಿ ನಿಮ್ಮಲ್ಲಿ ಇತ್ತೇ?
ಆಮ್ಲ, ಆಮ್ಲಕಾಯಿ ಎಂದೂ ಕರೆಯಲಾಗುವ ನೆಲ್ಲಿಕಾಯಿಯಲ್ಲಿ ವಿವಿಧ ಆಂಟಿ ಆಕ್ಸಿಡೆಂಟುಗಳಿದ್ದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಜೊತೆಗೇ ಮುಪ್ಪನ್ನು ಆವರಿಸುವ ಕಣಗಳ ವಿರುದ್ಧ ಹೋರಾಡಿ ವೃದ್ಧಾಪ್ಯವನ್ನು ದೂರವಿರಿಸುತ್ತದೆ.

ತೂಕ ಇಳಿಸಲು ನೆಲ್ಲಿಕಾಯಿ ಹೇಗೆ ನೆರವಾಗುತ್ತದೆ?
ಆಹಾರದ ಮೂಲಕ ಲಭ್ಯವಾದ ಪ್ರೋಟೀನುಗಳನ್ನು ಶೀಘ್ರವಾಗಿ ಪಚನಗೊಳಿಸಲು ನೆಲ್ಲಿಕಾಯಿ ನೆರವಾಗುತ್ತದೆ. ನಿಧಾನವಾಗಿ ಪಚನವಾದ ಆಹಾರದ ಮೂಲಕ ಹೆಚ್ಚು ಕೊಬ್ಬು ಸಂಗ್ರಹವಾಗುವುದರಿಂದ ಶೀಘ್ರವಾಗಿ ಜರುಗುವ ಜೀವರಾಸಾಯನಿಕ ಕ್ರಿಯೆಯಿಂದ ಕಡಿಮೆ ಕೊಬ್ಬು ಸಂಗ್ರಹವಾಗುತ್ತದೆ, ಜೊತೆಗೇ ಈ ಕ್ರಿಯೆಗೆ ಕರಗಿದ್ದ ಕೊಬ್ಬನ್ನು ಕರಗಿಸಬೇಕಾಗಿಯೂ ಬರುತ್ತದೆ. ಪರಿಣಾಮವಾಗಿ ತೂಕ ಇಳಿಯಲು ನೆರವಾಗುತ್ತದೆ.
ನೆಲ್ಲಿಕಾಯಿ ಉತ್ತಮ ವಿರೇಚಕವೂ ಆಗಿದೆ
ಮಲಬದ್ಧತೆಗೆ ನೆಲ್ಲಿಕಾಯಿ ಉತ್ತಮ ಪರಿಹಾರವಾಗಿದೆ. ಅತಿ ಹೆಚ್ಚಿನ ಮಲಬದ್ದತೆ ಇರುವವರಲ್ಲಿಯೂ ನೆಲ್ಲಿಕಾಯಿ ವಿಸರ್ಜನಾಕ್ರಿಯೆಯನ್ನು ಸುಲಭಗೊಳಿಸಿರುವುದು ಸಂಶೋಧನೆಗಳಿಂದ ತಿಳಿದುಬಂದಿದೆ. ಪಚನಕ್ರಿಯೆ ಸುಲಭಗೊಂಡು ತ್ಯಾಜ್ಯಗಳು ಕ್ಲುಪ್ತಕಾಲದಲ್ಲಿ ವಿಸರ್ಜನೆಗೊಳ್ಳುವ ಮೂಲಕ ತೂಕ ಇಳಿಯಲು ನೆರವಾಗುತ್ತದೆ. ಒಂದು ತಿಂಗಳಲ್ಲೇ ತೂಕ ಕಳೆದುಕೊಳ್ಳಲು ಸುಲಭ ಉಪಾಯಗಳು
ತೂಕ ಇಳಿಸಿಕೊಳ್ಳಲು ನೆಲ್ಲಿಕಾಯಿಯ ಪಾತ್ರ
ಚೆನ್ನಾಗಿ ತೊಳೆದ ನೆಲ್ಲಿಕಾಯಿಯ ಬೀಜವನ್ನು ನಿವಾರಿಸಿ ತಿರುಳನ್ನು ಮಿಕ್ಸಿಯಲ್ಲಿ ಹಾಕಿ ಕೊಂಚವೇ ನೀರಿನೊಡನೆ ಗೊಟಾಯಿಸಿ. ಬಳಿಕ ಸ್ವಚ್ಛವಾದ ಬಟ್ಟೆಯಲ್ಲಿ ಹಿಂಡಿ ರಸ ತೆಗೆಯಿರಿ. ಈ ರಸವನ್ನು ಹೆಚ್ಚಿನ ಪ್ರಮಾಣದಲ್ಲಿ ಶೇಖರಿಸಿ ಪ್ರತಿದಿನದ ಸೇವನೆಯಾಗಿ ಫ್ರಿಜ್ಜಿನಲ್ಲಿಡಿ. ಪ್ರತಿದಿನ ಬೆಳಿಗ್ಗೆ, ಅದರಲ್ಲೂ ಖಾಲಿಹೊಟ್ಟೆಯಲ್ಲಿ ಒಂದು ಲೋಟದಷ್ಟು ಒಂದು ಪ್ರಮಾಣ ನೆಲ್ಲಿಕಾಯಿ ರಸಕ್ಕೆ ಮೂರು ಪ್ರಮಾಣದಷ್ಟು ನೀರನ್ನು ಸೇರಿಸಿ ಕುಡಿಯಿರಿ. ಸಕ್ಕರೆ, ಬೆಲ್ಲ, ಜೇನು ಯಾವುದನ್ನೂ ಸೇರಿಸಬೇಡಿ.
ಬಳಿಕ ಕನಿಷ್ಟ ಮುಕ್ಕಾಲು ಘಂಟೆ ಏನನ್ನೂ ಸೇವಿಸಬೇಡಿ. ಈ ಹೊತ್ತಿನಲ್ಲಿ ನಿಮ್ಮ ನಿತ್ಯದ ವ್ಯಾಯಾಮ, ನಡಿಗೆ, ಪ್ರಾಣಾಯಾಮಗಳನ್ನು ನಡೆಸಿ. ಆ ಬಳಿಕ ಶೌಚಕ್ಕೆ ಅವಸರವಾದರೆ ಅದು ಉತ್ತಮ ಲಕ್ಷಣವಾಗಿದೆ. ಈ ಕ್ರಿಯೆಯಲ್ಲಿ ದೇಹದ ಎಲ್ಲಾ ವಿಷಕಾರಿ ವಸ್ತುಗಳು ಸುಲಭವಾಗಿ ವಿಸರ್ಜನೆಗೊಳ್ಳುತ್ತವೆ. ಬಳಿಕ ನಿಮ್ಮ ಇಡಿಯ ದಿನ ಉಲ್ಲಾಸಮಯವಾಗಿರುತ್ತದೆ. ಜೊತೆಗೇ ಚರ್ಮವೂ ಕಾಂತಿಯುಕ್ತವಾಗುತ್ತದೆ. ಪ್ರತಿದಿನವೂ ಈ ರಸ ಕುಡಿಯುವುದರಿಂದ ಶೀಘ್ರವೇ ತೂಕ ಇಳಿಯುವುದನ್ನು ನೋಡುವಿರಿ.
ನೆಲ್ಲಿಕಾಯಿಯನ್ನು ಹಸಿಯಾಗಿ ಸೇವಿಸುವುದು ಉತ್ತಮ
ನೆಲ್ಲಿಕಾಯಿಯ ಬೀಜವನ್ನು ಹೊರತುಪಡಿಸಿ ಇಡಿಯ ಭಾಗವನ್ನು ಹಸಿಯಾಗಿ ತಿನ್ನುವುದು ಆರೋಗ್ಯಕ್ಕೆ ಉತ್ತಮವಾಗಿದೆ. ಅದರಲ್ಲೂ ಬೆಳಗ್ಗಿನ ಹೊತ್ತು ತಿನ್ನುವುದು ಇನ್ನೂ ಉತ್ತಮ. ಮೇಲಿನ ಕಥೆಯಲ್ಲಿ ಹೇಳಿದಂತೆ ಪ್ರಾರಂಭದಲ್ಲಿ ಕೊಂಚ ಒಗರು ರುಚಿ ಇದ್ದರೂ ಕುಡಿಯುವ ನೀರು ಬಹಳ ಸಿಹಿಯಾಗಿರುತ್ತದೆ.
ಒಣಫಲಗಳನ್ನೂ ಬಳಸಬಹುದು
ನೆಲ್ಲಿಕಾಯಿ ವರ್ಷದ ಎಲ್ಲಾ ಕಾಲದಲ್ಲಿ ಉಪಲಬ್ಧವಾಗುವುದಿಲ್ಲ. ಹಸಿ ನೆಲ್ಲಿಕಾಯಿ ಸಿಗದ ದಿನಗಳಲ್ಲಿ ಬಿಸಿಲಿನಲ್ಲಿ ಒಣಗಿಸಿದ ನೆಲ್ಲಿಕಾಯಿಯನ್ನು ಖರೀದಿಸಿ ನೇರವಾಗಿ ಸೇವಿಸಬಹುದು. ಒಣ ನೆಲ್ಲಿಕಾಯಿಯ ರಸ ತೆಗೆಯಲು ಸಾಧ್ಯವಿಲ್ಲ. ಆದ್ದರಿಂದ ಯಾವಾಗ ಹಸಿವಾಗುತ್ತದೋ ಆಗೆಲ್ಲಾ ಒಂದು ಹೋಳು ಒಣನೆಲ್ಲಿಕಾಯಿಯನ್ನು ಬಾಯಿಗೆ ಹಾಕಿಕೊಳ್ಳಿ. ಚೆನ್ನಾಗಿ ಅಗಿದು ನುಂಗಿದ ಬಳಿಕ ತೂಕ ಇಳಿಸಲು ಕೊಬ್ಬನ್ನು ಕರಗಿಸುವುದರೊಂದಿಗೇ ಹಸಿವು ಮಾಯವಾಗುವುದರಿಂದ ಅನಗತ್ಯವಾಗಿ ತಿನ್ನಬಹುದಾಗಿದ್ದ ಆಹಾರವನ್ನೂ ತಿನ್ನದಂತೆ ಮಾಡಿ ತೂಕ ಇಳಿಸಲು ನೆರವಾಗುತ್ತದೆ.
ಮಾರುಕಟ್ಟೆಯಲ್ಲಿ ರುಚಿಗಾಗಿ ಕೊಂಚ ಉಪ್ಪನ್ನು ಅಥವಾ ಸಕ್ಕರೆಯನ್ನು ಸಿಂಪಡಿಸಿದ ನೆಲ್ಲಿಕಾಯಿ ಹೋಳು ದೊರಕುತ್ತದೆ. ಇದನ್ನು ಕೊಳ್ಳಬೇಡಿ, ಏಕೆಂದರೆ ಹೆಚ್ಚಿನ ಉಪ್ಪಿನ ಸೇವನೆ ನೀರನ್ನು ಹೀರುತ್ತದೆ ಮತ್ತು ಸಕ್ಕರೆ ಅನಗತ್ಯ ಕ್ಯಾಲೋರಿಗಳನ್ನು ನೀಡುತ್ತದೆ. ಆಯುರ್ವೇದದ ಅಂಗಡಿಗಳಲ್ಲಿ ಸಿಗುವ ತ್ರಿಫಲಗಳನ್ನು ಸೇವಿಸುವುದು ಅತ್ಯುತ್ತಮ (ತ್ರಿಫಲಗಳೆಂದರೆ ಸಮಪ್ರಮಾಣದ ನೆಲ್ಲಿಕಾಯಿ, ಬಿಭಿತಾಕಿ ಮತ್ತು ಹರಿತಾಕಿ ಹಣ್ಣುಗಳು) ತ್ರಿಫಲದ ಚೂರ್ಣ ಒಣಗಿದ ರೂಪದಲ್ಲಿ ಲಭ್ಯವಿದ್ದು ತೂಕ ಇಳಿಸಲು ಉತ್ತಮವಾದ ಆಹಾರವಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

