Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ಕೊರೊನಾವೈರಸ್ ಲಕ್ಷಣಗಳು, ಕಾರಣಗಳು ಮತ್ತು ತಡೆಗಟ್ಟುವುದು ಹೇಗೆ
ಇದೀಗ ಚೀನಾದಲ್ಲಿ ಹೊಸ ಬಗೆಯ ಕಾಯಿಲೆಯೊಂದು ಹರಡುತ್ತಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಈ ಭಯಾನಕ ಕಾಯಿಲೆಯ ಹೆಸರು ಕೊರೊನಾವೈರಸ್ . ಈ ಸೋಂಕಾಣು ತಾಗಿ ಚೀನಾದಲ್ಲಿ ಈಗಾಗಲೇ ಆರು ಜನರು ಮೃತಪಟ್ಟಿದ್ದು, ಮುನ್ನೂರಕ್ಕೂ ಅಧಿಕ ಜನರಿಗೆ ಸೋಂಕು ಬಾಧಿಸಿದೆ.
ಈ ಕಾಯಿಲೆ ಥಾಯ್‌ಲ್ಯಾಂಡ್, ದಕ್ಷಿಣ ಕೊರಿಯಾ, ಜಪಾನ್ ದೇಶಗಳಲ್ಲಿಯೂ ಪತ್ತೆಯಾಗಿದ್ದು, ಈ ಕಾಯಿಲೆ ಹರಡುವುದನ್ನು ತಡೆಗಟ್ಟಲು ಇತರ ದೇಶಗಳು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮಾರ್ಗದರ್ಶನಗಳನ್ನು ನೀಡುತ್ತಿದೆ.

ವಿಶ್ವದಲ್ಲಿ ಆತಂಕ ಮೂಡಿಸಿರುವ ಈ ಹೊಸ ಬಗೆಯ ವೈರಸ್ ಪ್ರಾಣಿಗಳಿಂದ ಅಥವಾ ಚೀನಾದ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಸಮುದ್ರಾಹಾರಗಳಿಂದ ಮನುಷ್ಯನಿಗೆ ಹರಡುತ್ತಿರಬಹುದು ಎಂದು ವೈದ್ಯಕೀಯ ಲೋಕವು ಹೇಳಿದೆ. ಆದರೆ ಈ ವೈರಸ್ ಮನುಷ್ಯನ ಶರೀರದಲ್ಲಿ ಹೇಗೆ ಸೇರಿಕೊಳ್ಳುತ್ತಿದೆ ಎಂಬುವುದರ ಬಗ್ಗೆ ಇನ್ನೂ ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಈಗ ಕಂಡು ಬರುತ್ತಿರುವ ಈ ಹೊಸ ವೈರಸ್ 2003ರಲ್ಲಿ ಕಂಡು ಬಂದ SARS-CoV (Severe acute respiratory syndrome Coronavirus) ಎಂಬ ವೈರಸ್‌ನ ಕುಟುಂಬಕ್ಕೆ ಸೇರಿದ್ದಾಗಿರಬಹುದು ಎಂದು ವೈದ್ಯಕೀಯ ಸಂಶೋಧಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಏನಿದು ಕೊರೊನಾವೈರಸ್ , ಈ ಕಾಯಿಲೆಯ ಲಕ್ಷಣಗಳೇನು? ಇದನ್ನು ಪತ್ತೆ ಹಚ್ಚುವುದು ಹೇಗೆ, ಚಿಕಿತ್ಸೆ ಏನಿದೆ, ತಡೆಗಟ್ಟುವುದು ಹೇಗೆ ಎಂಬ ವಿವರವನ್ನು ತಿಳಿಯೋಣ ಬನ್ನಿ:

ಕೊರೊನಾವೈರಸ್ ಎಂದರೇನು?
ಕೊರೊನಾವೈರಸ್ ಒಂದು ಬಗೆಯ ಸೋಂಕಾಣು ಆಗಿದ್ದು ಇದು ಪ್ರಾಣಿಗಳಲ್ಲಿ ಕಂಡು ಬರುತ್ತದೆ. ಹ್ಯೂಮನ್ ಕಾರ್ನೊವೈರಸ್ ಎಂದು ಈಗ ಕಾಣಿಸಿಕೊಂಡಿರುವ ಹೊಸ ಬಗೆಯ ಕಾಯಿಲೆ ಪ್ರಾಣಿಗಳಿಂದ ಮನುಷ್ಯನಿಗೆ ಬಂದಂತಹ ಕಾಯಿಲೆಯಾಗಿದೆ. ಇದುವರೆಗೆ ಆರು ಬಗೆಯ ಕೊರೊನಾವೈರಸ್ ಗಳನ್ನು ಪತ್ತೆ ಹಚ್ಚಿರುವ ವಿಜ್ಞಾನಿಗಳು ಯಾವ ಕೋರ್ನೋವೈರಸ್ ಬಂದರೆ ಯಾವ ಲಕ್ಷಣಗಳು ಕಂಡು ಬರುತ್ತದೆ, ಯಾವಾಗ ಅಪಾಯಕಾರಿ ಎಂಬುವುದನ್ನು ತಿಳಿದುಕೊಂಡಿದ್ದಾರೆ. ಆದರೆ ಈಗ ಚೀನಾದಲ್ಲಿ ಕಂಡು ಬಂದಿರುವ ಕೋರ್ನೋವೈರಸ್ ಮಾತ್ರ ಹೊಸ ಬಗೆಯ ಕೋರ್ನೋವೈರಸ್ ಆಗಿದ್ದು ಈ ಅಪಾಯಕಾರಿ ವೈರಸ್ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಮೊತ್ತ ಮೊದಲ ಬಾರಿಗೆ 1960ರಲ್ಲಿ ಕೋರ್ನೋವೈರಸ್ ಪತ್ತೆ ಆಯಿತು. ಸಾಮಾನ್ಯ ಶೀತದಿಂದ ಬಳಲುತ್ತಿದ್ದ ವ್ಯಕ್ತಿಯಲ್ಲಿ ಈ ರೋಗಾಣು ಮೊದಲಿಗೆ ಪತ್ತೆ ಆಯಿತು. ಈ ವೈರಸ್ ಅನ್ನು ಮೈಕ್ರೋಸ್ಕೋಪ್ ಮೂಲಕ ಪರಿಶೀಲಿಸಿದಾಗ ಕ್ರೌನ್ (ಕಿರೀಟ) ರೀತಿ ಕಂಡು ಬಂದಿದ್ದರಿಂದ ಇದನ್ನು ಕೋರ್ನೋವೈರಸ್ ಎಂದು ಕರೆಯಲಾಯಿತು. ಈ ವೈರಸ್ ಹೆಚ್ಚೇನು ಅಪಾಯಕಾರಿಯಲ್ಲ, ಅವುಗಳು ದಾಳಿ ಮಾಡಿದಾಗ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ, ಈ ವೈರಸ್ ಸಾಮಾನ್ಯವಾಗಿ ಚಳಿಗಾಲದಲ್ಲಿ ಕಾಣಿಸಿಕೊಳ್ಳುತ್ತದೆ. ಈ ವೈರಸ್ ದಾಳಿ ಮಾಡಿದಾಗ ಶೀತ, ಉಸಿರಾಟದ ತೊಂದರೆ ಕಾಣಿಸಿಕೊಂಡರೂ ನಂತರ ಸರಿಯಾಗುವುದು.

ಇದುವರೆಗೆ ಪತ್ತೆಯಾದ 6 ಬಗೆಯ ಕೊರೊನಾವೈರಸ್ ಗಳೆಂದರೆ
ಆಲ್ಭಾ ಕೊರೊನಾವೈರಸ್ (ಇದರಲ್ಲಿ NL63 ಮತ್ತು 229E ಎಂಬ ಎರಡು ವಿಧವಿದೆ)
ಬೀಟಾ ಕೊರೊನಾವೈರಸ್ (ಇದರಲ್ಲಿ HKU1ಮತ್ತು OC43 ಎಂಬ ಎರಡು ವಿಧಗಳಿವೆ).
ಈ ಎರಡು ಕೊರೊನಾವೈರಸ್ ಗಳು ತುಂಬಾ ಅಪಾಯಕಾರಿ
SARS-CoV (Severe acute respiratory syndrome coronavirus)
MERS-CoV (Middle East Respiratory Syndrome Coronavirus)
ಈಗ ಕಂಡು ಬಂದಿರುವ ವೈರಸ್ ಈ ಅಪಾಯಕಾರಿ ಕೊರೊನಾವೈರಸ್ ಕುಟಂಬಕ್ಕೆ ಸೇರಿದ್ದಾಗಿದೆ.

ಕೊರೊನಾವೈರಸ್ ಹರಡಲು ಕಾರಣಗಳು
ಕೊರೊನಾವೈರಸ್ ಉಸಿರಾಟದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಈ ವೈರಸ್ ದಾಳಿ ಮಾಡಿದಾಗ ಶೀತ, ಸೀನು ಉಂಟಾಗುವುದು. ಸೋಂಕುವಿರುವ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಈ ಕಾಯಿಲೆ ಮತ್ತೊಬ್ಬರಿಗೆ ಹರಡುತ್ತದೆ. ಸೋಂಕು ಇರುವ ವ್ಯಕ್ತಿ ಬಾಯಿಗೆ ಕರ್ಚೀಫ್ ಅಡ್ಡ ಹಿಡಿಯದೆ ಸೀನಿದಾಗ ಕೂಡ ಮತ್ತೊಬ್ಬ ವ್ಯಕ್ತಿಗೆ ಹರಡುತ್ತದೆ.
ಸೋಂಕು ಇರುವ ವ್ಯಕ್ತಿಯ ಕೈ ಕುಲುಕಿದರೂ ಈ ಸೋಂಕಾಣು ಹರಡುವ ಅಪಾಯವಿದೆ. ಸೋಂಕು ಇರುವ ವ್ಯಕ್ತಿ ತನ್ನ ಮುಗು ಮುಟ್ಟಿ ನಂತರ ಕೈ ತೊಳೆಯದೆ ಯಾವುದಾದರೂ ವಸ್ತು ಮುಟ್ಟಿದ್ದರೆ, ಆ ವಸ್ತುವನ್ನು ಮುಟ್ಟಿದ ಆರೋಗ್ಯವಂತ ವ್ಯಕ್ತಿಗೆ ಸೋಂಕು ಹರಡುವುದು.

ಕೊರೊನಾವೈರಸ್ ಲಕ್ಷಣಗಳು
NL63, 229E, HKU1, OC43 ಈ ಬಗೆಯ ವೈರಸ್ ದಾಳಿ ಮಾಡಿದಾಗ ಹೆಚ್ಚಿನ ಗಂಭೀರ ಸಮಸ್ಯೆಯೇನು ಉಂಟಾಗುವುದಿಲ್ಲ. ಶೀತ, ಕೆಮ್ಮು, ಸ್ವಲ್ಪ ಉಸಿರಾಟದ ತೊಂದರೆ ಕಾಣಿಸುತ್ತದೆ. ಆದರೆ MERS ಮತ್ತು SARS ವೈರಸ್ ವ್ಯಕ್ತಿಯ ದೇಹವನ್ನು ಸೇರಿದಾಗ ರೋಗದ ಲಕ್ಷಣ ತುಂಬಾ ತೀವ್ರವಾಗಿರುತ್ತದೆ. ಈ ವೈರಸ್ ದಾಳಿ ಮಾಡಿದಾಗ ಕಂಡು ಬರುವ ಲಕ್ಷಣಗಳೆಂದರೆ
* ಮೂಗು ಸೋರುವುದು
* ಗಂಟಲು ಕೆರೆತ
* ಕೆಮ್ಮು
* ತಲೆನೋವು
* ಜ್ವರ
* ಸೀನು
* ತಲೆಸುತ್ತು
ಕಡಿಮೆ ರೋಗ ನಿರೋಧಕ ಶಕ್ತಿ ಇರುವವರಲ್ಲಿ ಹಾಗೂ ವಯಸ್ಸಾದವರು ಬೇಗನೆ ಈ ವೈರಸ್ ದಾಳಿಗೆ ಒಳಗಾಗುತ್ತಾರೆ. ಈ ವೈರಸ್ ದಾಳಿ ಮಾಡಿದಾಗ ನ್ಯೂಮೋನಿಯಾ, ಉಸಿರಾಟದ ತೊಂದರೆ ಕಾಣಿಸಿಕೊಳ್ಳುವುದು, ರೋಗ ಉಲ್ಭಣವಾದರೆ ಕಿಡ್ನಿಗೆ ಹಾನಿಯುಂಟಾಗುತ್ತದೆ, ಭೇದಿ ಉಂಟಾಗಿ ವ್ಯಕ್ತಿ ಸಾವನ್ನಪ್ಪಬಹುದು.

ಕೊರೊನಾವೈರಸ್ ಪತ್ತೆ ಹೇಗೆ?
ಈ ಕಾಯಿಲೆ ಪತ್ತೆಗೆ ಲ್ಯಾಬ್‌ರೋಟರಿಯಲ್ಲಿ ಈ ಬಗೆಯ ಪರೀಕ್ಷೆ ಮಾಡಲಾಗುವುದು.
* ಮಾಲೆಕ್ಯೂಲರ್ ಪರೀಕ್ಷೆ: ಇದರಲ್ಲಿ ಸೋಂಕಿನ ಲಕ್ಷಣಗಳನ್ನು ಪತ್ತೆ ಹಚ್ಚಲಾಗುವುದು.
* ಸೆರೊಲಜಿ ಪರೀಕ್ಷೆ: ಇದರಲ್ಲಿ ವ್ಯಕ್ತಿಗೆ ಯಾವ ಬಗೆಯ ವೈರಸ್ ದಾಳಿ ಮಾಡಲಾಗಿದೆ ಎಂದು ಪತ್ತೆ ಹಚ್ಚಲಾಗುವುದು.

ಚಿಕಿತ್ಸೆ
ಈ ಕಾಯಿಲೆಗೆ ನಿಖರವಾದ ಚಿಕಿತ್ಸೆ ಇನ್ನೂ ಕಂಡು ಹಿಡಿದಿಲ್ಲ. ಆದರೆ ಕೆಲವೊಂದು ಔಷಧಿಗಳು ಈ ಕಾಯಿಲೆಯನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ. ಈ ಸೋಂಕಾಣು ಹೆಚ್ಚೇನು ಅಪಾಯಕಾರಿ ಅಲ್ಲದಿದ್ದರೆ ಜ್ವರ, ಶೀತಕ್ಕೆ ನೀಡುವ ಔಷಧಿಗಳನ್ನು ನೀಡಿ ಕಾಯಿಲೆಯನ್ನು ನಿಯಂತ್ರಣ ಮಾಡಲಾಗುವುದು.
ಈಗ ಹರಡುತ್ತಿರುವಂಥ ಅಪಾಯಕಾರಿ ಕೋರ್ನೋವೈರಸ್ ತಡೆಗಟ್ಟಲು ಸೂಕ್ತ ಚಿಕಿತ್ಸೆ ಲಭ್ಯವಿಲ್ಲ.

ಕೊರೊನಾವೈರಸ್ ತಡೆಗೆ ಎನು ಮಾಡಬೇಕು?
* ಸೀನಿದಾಗ, ಕೆಮ್ಮಿದಾಗ ಸೋಂಕಿರುವ ವ್ಯಕ್ತಿ ಕೈಗಳನ್ನು ತೊಳೆಯಬೇಕು.
* ಬಾಯಿಗೆ ಬಟ್ಟೆ ಅಥವಾ ಕರ್ಚೀಫ್ ಅಡ್ಡ ಹಿಡಿದು ಸೀನುವುದು, ಕೆಮ್ಮುವುದು ಮಾಡಬೇಕು.
* ಸೋಂಕು ಇರುವ ವ್ಯಕ್ತಿಯಿಂದ ಅಂತರ ಕಾಯ್ದುಕೊಳ್ಳಬೇಕು.
* ಬೇಯಿಸದ ಮೊಟ್ಟೆ, ಮೀನು, ಮಾಂಸ ತಿನ್ನಬಾರದು.
* ಸಾಕಷ್ಟು ನೀರು ಕುಡಿಯಬೇಕು.
* ಧೂಮಪಾನ ಮಾಡಬಾರದು ಹಾಗೂ ಧೂಮಪಾನ ಮಾಡುವ ಜಾಗದಲ್ಲಿ ಓಡಾಡಬಾರದು.
* ಜನ ಸಂದಣಿ ಹೆಚ್ಚಿರುವ ಕಡೆ ಓಡಾಡಬಾರದು.
ಈ ಮುನ್ನೆಚ್ಚರಿಕೆ ಕ್ರಮ ಅನುಸರಿಸಿದರೆ ರೋಗ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದನ್ನು ತಡೆಗಟ್ಟಬಹುದು.



Click it and Unblock the Notifications