40ರ ಬಳಿಕವೂ, ಯಂಗ್ ಆಗಿ ಕಾಣಲು, ಈ ಯೋಗಾಸನಗಳನ್ನು ಮಾಡಿ

ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡುವಲ್ಲಿ ಯೋಗ ಬಹುಮುಖ್ಯ ಪಾತ್ರ ವಹಿಸುವುದು. ಅಷ್ಟೇ ಅಲ್ಲ, ನಮ್ಮ ಅಂದ ಕಾಪಾಡಿಕೊಳ್ಳುವಲ್ಲೂ ಯೋಗ ಸಹಕಾರಿ. ಯೋಗವು ದೇಹದಿಂದ ಹಾನಿಕಾರಕ ವಿಷವನ್ನು ಹೊರಹಾಕಿ, ರಕ್ತ ಪರಿಚಲನೆ ಸುಧಾರಿಸುವುದಲ್ಲದೇ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇವುಗಳಿಂದ ನಾವು ವಯಸ್ಸಾಗುವಿಕೆಯ ಲಕ್ಷಣ ಹಾಗೂ ಇತರ ಸೌಂದರ್ಯ ಸಮಸ್ಯೆಗಳಿಂದ ದೂರವಿದ್ದು, ಸದಾ ತಾರುಣ್ಯಪೂರ್ಣ ತ್ವಚೆ ಪಡೆಯಬಹುದು. ಹಾಗಾದರೆ, ಸುಕ್ಕು, ಸೂಕ್ಷ್ಮ ರೇಖೆಗಳಂತಹ ವಯೋ ಸಹಜ ಸಮಸ್ಯೆಗಳನ್ನು ಕಡಿಮೆ ಮಾಡಿ, 40ರ ಬಳಿಕವೂ ಸುಂದರವಾಗಿ ಕಾಣಲು ಸಹಾಯ ಮಾಡುವ ಯೋಗಾಸನಗಳಾವುವು ಎಂಬುದನ್ನು ಇಲ್ಲಿ ನೊಡೋಣ.

ಸದಾ ತಾರುಣ್ಯಪೂರ್ಣರಾಗಿರಲು ಸಹಾಯ ಮಾಡುವ ಯೋಗಾಸನಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಬಾಲಾಸನ:

ಬಾಲಾಸನ:

ಮಗುವಿನ ಭಂಗಿ ಎಂದೂ ಕರೆಯಲ್ಪಡುವ ಈ ಯೋಗಾಸನವು ನಿಮ್ಮ ಚರ್ಮವನ್ನು ಫ್ರೆಶ್ ಮತ್ತು ಯೌವನವಾಗಿರಿಸಲು ಸಹಾಯ ಮಾಡುತ್ತದೆ. ಈ ಯೋಗಾಸನವನ್ನು ಮಾಡುವುದರಿಂದ ಆರೋಗ್ಯ ಸುಧಾರಿಸುತ್ತದೆ ಮತ್ತು ಒತ್ತಡವನ್ನು ದೂರವಿರಿಸುತ್ತದೆ.

ಬಾಲಾಸನ ಮಾಡುವುದು ಹೇಗೆ?:

ಮೊದಲು ಕಾಲುಗಳನ್ನು ಮುಂದೆ ಚಾಚಿ ಕುಳಿತುಕೊಳ್ಳಿ. ಆ ಬಳಿಕ ವಜ್ರಾಸನ ಮಾಡುವಂತೆ ಬಲಗಾಲನ್ನು ಹಿಂದಕ್ಕೆ ಮಡಚಿ ಪೃಷ್ಠದಡಿ ತನ್ನಿ, ಮತ್ತೊಂದು ಕಾಲನ್ನೂ ಹಿಂದಕ್ಕೆ ಮಡಿಚಿ. ವಜ್ರಾಸನ ಭಂಗಿಯಲ್ಲಿ ಕೂತು ಮುಂದಕ್ಕೆ ಬಾಗಿ. ಕೈಗಳೆರಡೂ ಚಾಚಿದ ಭಂಗಿಯಲ್ಲಿರಲಿ, ತಲೆ ನೆಲಕ್ಕೆ ಬಾಗಿರಲಿ. ಇನ್ನೊಮ್ಮೆ ಕೈಗಳನ್ನು ಹಿಂದಕ್ಕೆ ತಂದು ಮುಂದಕ್ಕೆ ಬಾಗಿ ನೆಲದ ಮೇಲೆ ತಲೆ ಬಾಗಿಸಿ. ಕೆಲವು ಸೆಕೆಂಡುಗಳ ಕಾಲ ಈ ಭಂಗಿಯಲ್ಲಿರಿ ಮತ್ತು ನಂತರ ಬಿಡುಗಡೆ ಮಾಡಿ.

ಹಲಾಸನ:

ಹಲಾಸನ:

ನೇಗಿಲು ಭಂಗಿ ಎಂದೂ ಕರೆಯಲ್ಪಡುವ ಹಲಸಾನವು ತಲೆಕೆಳಗಾದ ಆಸನವಾಗಿದೆ. ಈ ಆಸನವನ್ನು ದಿನಕ್ಕೆ ಒಂದು ಅಥವಾ ಎರಡು ಬಾರಿ ಅಭ್ಯಾಸ ಮಾಡುವುದರಿಂದ ಚರ್ಮದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಹಲಾಸನ ಮಾಡುವುದು ಹೇಗೆ?

ಮೊದಲು ಸರ್ವಾಂಗಾಸನದ ಸ್ಥಿತಿಗೆ ಬನ್ನಿ. ಮೇಲೆ ಇರುವ ಎರಡು ಕಾಲುಗಳನ್ನು ನಿಧಾನವಾಗಿ ಮುಂದಕ್ಕೆ ತೆಗೆದುಕೊಂಡು ಕಾಲ್ಬೆರಳುಗಳನ್ನು ನೆಲಕ್ಕೆ ತಾಗಿಸಬೇಕು. ಹೊಟ್ಟೆಯನ್ನು ಒಳಗೆ ಎಳೆದು ಪಕ್ಕೆಲುಬಿನ ಭಾಗವನ್ನು ಮೇಲಕ್ಕೆ ಹಿಗ್ಗಿಸುತ್ತ ಬೆನ್ನು ನೇರ ಮಾಡಬೇಕು. ಭುಜದ ನೇರದಲ್ಲಿ ಸೊಂಟದ ಭಾಗ ಬರಬೇಕು. ಗದ್ದ ಮತ್ತು ಎದೆ ಒಂದಕ್ಕೊಂದು ತಾಗಿರಬೇಕು. ಈ ಸ್ಥಿತಿಯಲ್ಲಿ ಸಹಜವಾದ ಉಸಿರಾಟ ಕ್ರಿಯೆ ಇರಬೇಕು. ನಂತರ ನಿಧಾನವಾಗಿ ಎರಡು ಕಾಲುಗಳನ್ನು ಮೇಲಕ್ಕೆ ತೆಗೆದುಕೊಂಡು ಸರ್ವಾಂಗಾಸನದ ಸ್ಥಿತಿಗೆ ಬನ್ನಿ. ಅಲ್ಲಿಂದ ಪುನಃ ಕೆಳಗೆ ಬಂದು ಹಿಂದಕ್ಕೆ ಮಲಗಿ ವಿಶ್ರಾಂತಿ ಪಡೆಯಿರಿ.

ಸರ್ವಾಂಗಾಸನ:

ಸರ್ವಾಂಗಾಸನ:

ಈ ಯೋಗಾಸನವನ್ನು ಭುಜದ ನಿಲುವು ಎಂದೂ ಕರೆಯುತ್ತಾರೆ. ತಜ್ಞರ ಪ್ರಕಾರ, ಈ ಯೋಗಾಸನವನ್ನು ಮಾಡುವುದರಿಂದ ವಯಸ್ಸಾದ ಪ್ರಕ್ರಿಯೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ.

ಸರ್ವಾಂಗಾಸನ ಮಾಡುವುದು ಹೇಗೆ?

ಮೊದಲು ಯೋಗ ಚಾಪೆಯ ಮೇಲೆ ಬೆನ್ನ ಮೇಲೆ ಮಲಗಿ ಎರಡೂ ಕೈಗಳನ್ನು ದೇಹದ ಎರಡೂ ಬದಿಗಳಲ್ಲಿ ನೆಲದ ಮೇಲೆ ಇರಿಸಿ. ಈಗ ಎರಡೂ ಕಾಲುಗಳನ್ನು ಗಾಳಿಯಲ್ಲಿ ಮೇಲಕ್ಕೆ ಎತ್ತಿ. ಪಾದಗಳಿಂದ ಸೊಂಟದವರೆಗೆ ನೆಲದಿಂದ ನಿಧಾನವಾಗಿ ಮೇಲೆತ್ತಲು ಪ್ರಯತ್ನಿಸಿ. ಈಗ ಕಾಲಿನ ಉಗುರುಗಳನ್ನು ಆಕಾಶದತ್ತ ಮುಖ ಮಾಡಿ. ಎರಡೂ ಅಂಗೈಗಳಿಂದ ಸೊಂಟವನ್ನು ಬೆಂಬಲಿಸಿ. ಈ ರೀತಿಯಾಗಿ ನಿಮ್ಮ ಇಡೀ ದೇಹವು ಆಕಾಶದ ಕಡೆಗೆ ಏರಬೇಕು ಮತ್ತು ಸಂಪೂರ್ಣ ದೈಹಿಕ ತೂಕವು ಭುಜಗಳ ಮೇಲೆ ಬರಬೇಕು. ಈ ಸ್ಥಿತಿಯಲ್ಲಿ ಕೆಲವು ನಿಮಿಷಗಳ ಕಾಲ ಹಾಗೆ ಇರಿ. ಇದನ್ನು ಮತ್ತೆ ಮತ್ತೆ ಮುಂದುವರೆಸಿ.

ಚಕ್ರಾಸನ:

ಚಕ್ರಾಸನ:

ಉರ್ಧ್ವ ಧನುರಾಸನ ಅಥವಾ ಚಕ್ರಾಸನವು ಕುತ್ತಿಗೆ ಮತ್ತು ಮುಖದ ಸ್ನಾಯುಗಳನ್ನು ಟೋನ್ ಮಾಡಲು ಸಹಾಯ ಮಾಡುತ್ತದೆ. ಇದು ಸುಕ್ಕುಗಳಂತಹ ವಯಸ್ಸಾದ ಚಿಹ್ನೆಗಳನ್ನು ಸಹ ಕಡಿಮೆ ಮಾಡುತ್ತದೆ .

ಚಕ್ರಾಸನ ಮಾಡುವುದು ಹೇಗೆ?

ಪಾದಹಸ್ತಾಸನದಂತೆ ಪ್ರಾರಂಭದಲ್ಲಿ ಭೂಮಿಗೆ ನೇರವಾಗಿ, ಲಂಬವಾಗಿ ನಿಲ್ಲಬೇಕು. ಅನಂತರ ಎರಡು ಕಾಲುಗಳ ನಡುವೆ ಒಂದು ಅಡಿಯಷ್ಟು ಅಂತರ ಇರಿಸಿ, ಅಂಗೈಗಳನ್ನು ಸೊಂಟದ ಮೇಲೆ ಇಡಬೇಕು. ಉಸಿರನ್ನು ಹೊರಕ್ಕೆ ದೂಡುತ್ತಾ ನಿಧಾನವಾಗಿ ಹಿಂದಕ್ಕೆ ಬಾಗಿ ನೆಲವನ್ನು ಮುಟ್ಟಬೇಕು. ಈ ಸ್ಥಿತಿಯಲ್ಲಿ ಶರೀರವು ಬಗ್ಗಿಸಿದ ಬಿಲ್ಲಿನಂತೆ ಇರುವುದು. ಆದರೆ ಹಿಂದಕ್ಕೆ ಬಾಗುವಾಗ ವಿಶೇಷವಾದ ಮುಂಜಾಗರೂಕತೆಯನ್ನು ವಹಿಸುವುದು ಉತ್ತಮ. ಪ್ರಾರಂಭದಲ್ಲಿ ಗೋಡೆಯ ಪಕ್ಕದಲ್ಲೇ ಈ ಆಸನವನ್ನು ಅಭ್ಯಾಸ ಮಾಡಿ, ಸಮತೋಲನ ಹಾಗೂ ಸ್ವಾಮ್ಯ ಪಡೆದ ನಂತರವೇ ಗೊಡೆಯನ್ನು ಬಿಟ್ಟು ದೂರದಲ್ಲಿ ಅಭ್ಯಾಸ ಮಾಡಬಹುದು.

English summary

Anti-Aging Yoga Exercises: Yoga Asanas will Make you look Younger in Kannada

Here we talking about Anti-aging yoga exercises: Yoga Asanas will make you look younger in kannada, read on
Story first published: Wednesday, February 23, 2022, 9:00 [IST]
X
Desktop Bottom Promotion