ಊದಿಕೊಂಡ ಮುಖಕ್ಕೆ ಸಾಂತ್ವನ ನೀಡುವ ಫೇಸ್ ಪ್ಯಾಕ್

By Super

ಕೆಲವೊಮ್ಮೆ ಸ್ಪಷ್ಟವಾಗಿ ವಿವರಿಸಲಾಗದ ಕಾರಣಗಳಿಂದ ಮುಖ ಕೊಂಚ ಊದಿಕೊಂಡಂತಿರುತ್ತದೆ. ವಾಸ್ತವವಾಗಿ ಇದಕ್ಕೆ ಚರ್ಮದಡಿಯಲ್ಲಿ ಸಂಗ್ರಹವಾಗುವ ಕೆಲವು ವಿಷಕಾರಿ ವಸ್ತುಗಳೇ ಕಾರಣ. ಈ ವಸ್ತುಗಳು ಚರ್ಮದ ಅಡಿಗೆ ಹೋಗಲು ವಾತಾವರಣದಲ್ಲಿರುವ ಹೊಗೆ, ಪರಾಗ, ಧೂಳು, ಬಿಸಿಲು, ಗಾಳಿಯಲ್ಲಿರುವ ಇತರ ಪ್ರೂದೂಷಣೆಯ ಪರಿಣಾಮದ ಸೂಕ್ಷ್ಮ ಕಣಗಳೂ ಕಾರಣ. ಅಷ್ಟೇ ಅಲ್ಲ, ಕೊಬ್ಬು, ಎಣ್ಣೆ, ಕೊಲೆಸ್ಟ್ರಾಲ್‌ ಹೆಚ್ಚಿರುವ ಆಹಾರಗಳ ಸೇವನೆಯಿಂದಲೂ ರಕ್ತದ ಮೂಲಕ ವಿಷಕಾರಿ ವಸ್ತುಗಳು ಚರ್ಮದಡಿಗೆ ತಲುಪಬಹುದು.

ಪರಿಣಾಮವಾಗಿ ಊದಿಕೊಂಡ ಮುಖ ನಿಮ್ಮ ಸೌಂದರ್ಯವನ್ನು ಕುಂದಿಸುವುದು ಮಾತ್ರವಲ್ಲ, ದಪ್ಪನಾಗಿರುವ ಭಾವನೆಯನ್ನೂ ನೀಡುತ್ತದೆ. ಅಲ್ಲದೇ ಎದುರಿನವರು ಹುಷಾರಿಲ್ಲವೇ ಎಂದು ವಿಚಾರಿಸಿದಾಗ ಇರಿಸು ಮುರಿಸು ಸಹಾ ಉಂಟಾಗುತ್ತದೆ. ಆದ್ದರಿಂದ ಚರ್ಮದ ಕಾಳಜಿ ವಹಿಸಿ ಚರ್ಮದಡಿಯಲ್ಲಿ ಸಂಗ್ರಹವಾಗಿರುವ ವಿಷಕಾರಿ ವಸ್ತುಗಳನ್ನು ಹೊರತೆಗೆಯುವುದು ಅವಶ್ಯಕ. ಇದರಿಂದ ಚರ್ಮದ ಕಾಂತಿ ಹೆಚ್ಚುವ ಜೊತೆಗೇ ಸಹಜ ಸೌಂದರ್ಯ ಕಳಕಳಿಸುತ್ತದೆ.

ಇದಕ್ಕಾಗಿ ವೃತ್ತಿಪರ ಸೇವೆಗಳು ಲಭ್ಯವಿವೆಯಾದರೂ ಇವು ದುಬಾರಿಯಾಗಿರುವ ಕಾರಣ ಇದಕ್ಕೆ ಕಡಿಮೆಯಿಲ್ಲದ ಆರೈಕೆಯನ್ನು ಮನೆಯಲ್ಲಿಯೇ ಲಭ್ಯವಾಗುವ ಸಾಮಾಗ್ರಿಗಳಿಂದ ಸುಲಭವಾಗಿ ತಯಾರಿಸಿ ಕೊಳ್ಳಬಹುದು. ಇದರಲ್ಲಿ ಹೇರಳವಾಗಿರುವ ಆಂಟಿ ಆಕ್ಸಿಡೆಂಟುಗಳ ಕಾರಣ ಚರ್ಮದ ಸೂಕ್ಷ್ಮ ರಂಧ್ರಗಳಿಂದ ಒಳಪ್ರವೇಶ ಪಡೆದಿದ್ದ ಅಥವಾ ರಕ್ತದ ಮೂಲಕ ಚರ್ಮದ ಅಡಿಯ ಗ್ರಂಥಿಗಳಲ್ಲಿ ಸಂಗ್ರಹವಾಗಿದ್ದ ವಿಷಕಾರಿ ವಸ್ತುಗಳು ಸೂಕ್ಷ್ಮರಂಧ್ರಗಳಿಂದ ಹೊರದೂಡಲ್ಪಟ್ಟು ಚರ್ಮಕ್ಕೆ ಸಹಜಕಾಂತಿ ಹಾಗೂ ಸೆಳೆತವನ್ನು ನೀಡುತ್ತವೆ.

ಅಲ್ಲದೇ ಕ್ಯಾನ್ಸರ್ ಗೆ ಕಾರಣವಾಗಬಲ್ಲ ಫ್ರೀ ರ್‍ಯಾಡಿಕಲ್ ಎಂಬ ಕಣಗಳಿಂದಲೂ ದೇಹವನ್ನು ಮುಕ್ತಗೊಳಿಸುತ್ತದೆ. ಇಂದು ಈ ತೊಂದರೆಯಿಂದ ಮುಕ್ತಿ ಪಡೆಯುವ ಸುಲಭ ವಿಧಾನಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ. ಈ ಮುಖಲೇಪಗಳು ಯಾವುದೇ ಅಡ್ಡಪರಿಣಾಮಗಳಿಲ್ಲದೇ ಊದಿಕೊಂಡ ಮುಖ, ವಿಶೇಷವಾಗಿ ಕೆನ್ನೆ ಮತ್ತು ಕಣ್ಣಿನ ಕೆಳಗಿನ ಭಾಗಕ್ಕೆ ಹೆಚ್ಚಿನ ಆರೈಕೆ ನೀಡುತ್ತದೆ...

ಊದಿಕೊಂಡ ಮುಖಕ್ಕೆ ಸಾಂತ್ವನ ನೀಡುವ ಫೇಸ್ ಪ್ಯಾಕ್

ಊದಿಕೊಂಡ ಮುಖಕ್ಕೆ ಸಾಂತ್ವನ ನೀಡುವ ಫೇಸ್ ಪ್ಯಾಕ್

ಕಪ್ಪುಹಣ್ಣು ಎಂದೂ ಕರೆಯಲ್ಪಡುವ ಬ್ಲ್ಯಾಕ್ ಬೆರಿ ಮತ್ತು ಅಕ್ರೋಟುಗಳಲ್ಲಿ ಉತ್ತಮ ಪ್ರಮಾಣದ ಒಮೆಗಾ ಕೊಬ್ಬಿನ ತೈಲ, ವಿಟಮಿನ್ ಸಿ.ಬಿ ಮತ್ತು ಇ ಇವೆ. ಇವೆಲ್ಲವೂ ಉತ್ತಮ ಆಂಟಿ ಆಕ್ಸಿಡೆಂಟುಗಳಾಗಿದ್ದು ಚರ್ಮದ ಆರೈಕೆಯಲ್ಲಿ ಮತ್ತು ವಿಷಕಾರಿ ವಸ್ತುಗಳನ್ನು ಹೊರಹಾಕುವಲ್ಲಿ ಸಕ್ಷಮವಾಗಿವೆ. ಇದಕ್ಕಾಗಿ ಕೆಲವು ತಾಜಾ ಬ್ಲ್ಯಾಕ್ ಬೆರಿ ಹಣ್ಣುಗಳ ತಿರುಳನ್ನು ನಯವಾಗಿ ಅರೆದು ಸಮಪ್ರಮಾಣದ ಅಕ್ರೋಟಿನ ಪುಡಿ (ನುಣ್ಣನೆಯ ಪುಡಿ) ಯನ್ನು ಸೇರಿಸಿ ಲೇಪನ ತಯಾರಿಸಿ. ಇದಕ್ಕೆ ಕೊಂಚವೇ ಗುಲಾಬಿ ನೀರನ್ನು ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳುವಷ್ಟು ದಪ್ಪನಾಗಿರುವಂತೆ ಮಿಶ್ರಣ ಮಾಡಿ. ಈಗತಾನೇ ಕೊಂಚ ಬಿಸಿನೀರಿನಲ್ಲಿ ತೊಳೆದ ಮುಖದ ಮೇಲೆ ಏಕಪ್ರಕಾರವಾಗಿ ಹಚ್ಚಿ. ಕಣ್ಣುಗಳ ಒಳಗೆ ಹೋಗದಂತೆ ಎಚ್ಚರವಹಿಸಿ. ಹದಿನೈದು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಈ ವಿಧಾನವನ್ನು ದಿನಕ್ಕೊಮ್ಮೆ ಅನುಸರಿಸಬಹುದು. ಮುಖ ತುಂಬಾ ಊದಿಕೊಂಡಿದ್ದರೆ ಮಾತ್ರ ಎರಡು ಬಾರಿ ನಿರ್ವಹಿಸಬಹುದು.

ಬೆಣ್ಣೆಹಣ್ಣು ಮತ್ತು ಗೋಧಿಹುಲ್ಲಿನ ಮುಖಲೇಪ

ಬೆಣ್ಣೆಹಣ್ಣು ಮತ್ತು ಗೋಧಿಹುಲ್ಲಿನ ಮುಖಲೇಪ

ಒಂದು ಬೆಣ್ಣೆಹಣ್ಣಿನ ತಿರುಳನ್ನು ಸಂಗ್ರಹಿಸಿ ಸಮಪ್ರಮಾಣದಲ್ಲಿ ನಯವಾಗಿ ಅರೆದ ಗೋಧಿಹುಲ್ಲನ್ನು ಸೇರಿಸಿ. ಈ ಪ್ರಮಾಣಕ್ಕೆ ಒಂದು ಚಿಕ್ಕಚಮಚ ಜೇನನ್ನು ಸೇರಿಸಿ ಒಂದು ಬಾಟಲಿಯಲ್ಲಿ ಸಂಗ್ರಹಿಸಿ. ಈ ಮುಖಲೇಪವನ್ನು ಈಗತಾನೇ ಕೊಂಚ ಬಿಸಿನೀರಿನಲ್ಲಿ ತೊಳೆದ ಮುಖದ ಮೇಲೆ ಏಕಪ್ರಕಾರವಾಗಿ ಹಚ್ಚಿ. ಕಣ್ಣುಗಳ ಒಳಗೆ ಹೋಗದಂತೆ ಎಚ್ಚರವಹಿಸಿ. ಹದಿನೈದು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ.ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಖನಿಜಗಳು ಮತ್ತು ಪ್ರೋಟೀನುಗಳು ಚರ್ಮಕ್ಕೆ ವಿಶೇಷ ಆರೈಕೆ ನೀಡುತ್ತವೆ.

ಅನ್ನ ಬಸಿದ ನೀರು, ಮೊಸರು ಮತ್ತು ಗುಲಾಬಿನೀರಿನ ಮುಖಲೇಪ

ಅನ್ನ ಬಸಿದ ನೀರು, ಮೊಸರು ಮತ್ತು ಗುಲಾಬಿನೀರಿನ ಮುಖಲೇಪ

ನಾಲ್ಕು ದೊಡ್ಡಚಮಚ ಅನ್ನಬಸಿದ ನೀರು (ಬೆಳ್ತಿಗೆ ಅನ್ನ), ಒಂದು ದೊಡ್ಡ ಚಮಚ ಮೊಸರು ಮತ್ತು ಕೆಲವು ಹನಿ ಗುಲಾಬಿನೀರನ್ನು ಸೇರಿಸಿ ಹದವಾಗಿ ಮಿಶ್ರಣ ಮಾಡಿಕೊಳ್ಳಿ. ಈ ಲೇಪನವನ್ನು ವೃತ್ತಾಕಾರದಲ್ಲಿ ಮಸಾಜ್ ಮಾಡುತ್ತಾ ಮುಖಕ್ಕೆ ಹಚ್ಚಿಕೊಳ್ಳಿ. ಸುಮಾರು ಮೂವತ್ತು ನಿಮಿಷಗಳ ಕಾಲ ಮಸಾಜ್ ಮುಂದುವರೆಸಿ. ಇದು ಕ್ಷಿಪ್ರವಾಗಿ ಮುಖದ ಊತವನ್ನು ನಿವಾರಿಸುತ್ತದೆ ಹಾಗೂ ಮುಖದ ಸೌಂದರ್ಯವನ್ನು ವೃದ್ದಿಸುತ್ತದೆ. ಯಾವುದಾದರೂ ಕಾರ್ಯಕ್ರಮಕ್ಕೆ ಹೋಗುವುದು ಅನಿವಾರ್ಯವಾಗಿದ್ದು ಹೆಚ್ಚಿನ ಸಮಯ ಇಲ್ಲದಿದ್ದರೆ ಈ ವಿಧಾನ ಹೆಚ್ಚು ಸೂಕ್ತವಾಗಿದೆ.

ಸೌತೆ, ಲಿಂಬೆ ಮತ್ತು ಮೊಟ್ಟೆಯ ಬಿಳಿಭಾಗದ ಮುಖಲೇಪ

ಸೌತೆ, ಲಿಂಬೆ ಮತ್ತು ಮೊಟ್ಟೆಯ ಬಿಳಿಭಾಗದ ಮುಖಲೇಪ

ಒಂದು ಇಡಿಯ ಸೌತೆಕಾಯಿಯ ಸಿಪ್ಪೆ ಸುಲಿದು ಬೀಜ ನಿವಾರಿಸಿ ನುಣ್ಣಗೆ ಅರೆಯಿರಿ. ಇದಕ್ಕೆ ಒಂದು ಲಿಂಬೆಯ ರಸ ಮತ್ತು ಒಂದು ಮೊಟ್ಟೆಯ ಬಿಳಿಭಾಗವನ್ನು ಪ್ರತ್ಯೇಕಿಸಿ ಬೆರೆಸಿ ನಯವಾದ ಮಿಶ್ರಣ ತಯಾರಿಸಿ. ತಾಜಾ ಇದ್ದಂತೆಯೇ ಈಗತಾನೇ ಕೊಂಚ ಬಿಸಿನೀರಿನಲ್ಲಿ ತೊಳೆದಿರುವ ಮುಖದ ಮೇಲೆ ಏಕಪ್ರಕಾರವಾಗಿ ಹಚ್ಚಿ. ಕಣ್ಣುಗಳ ಒಳಗೆ ಹೋಗದಂತೆ ಎಚ್ಚರವಹಿಸಿ. ಹತ್ತು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಈ ಲೇಪವನ್ನು ಫ್ರಿಜ್ಜಿನಲ್ಲಿಟ್ಟರೂ ಒಂದು ದಿನದ ಹೆಚ್ಚು ಕಾಲ ಬಳಸಲು ಸಾಧ್ಯವಿಲ್ಲದ ಕಾರಣ ಎರಡನೆಯ ದಿನ ಅಗತ್ಯವಿದ್ದರೆ ಹೊಸದಾಗಿಯೇ ತಯಾರಿಸಿಕೊಳ್ಳಬೇಕು.

ಬಾದಾಮಿ ಮತ್ತು ಕಿವಿ ಹಣ್ಣಿನ ಮುಖಲೇಪ

ಬಾದಾಮಿ ಮತ್ತು ಕಿವಿ ಹಣ್ಣಿನ ಮುಖಲೇಪ

ಈ ಮುಖಲೇಪದಿಂದ ಒತ್ತಡದ ಕಾರಣ ಊದಿಕೊಂಡ ಮುಖಕ್ಕೆ ಅತ್ಯುತ್ತಮವಾದ ಆರೈಕೆ ದೊರಕುತ್ತದೆ. ಅಲ್ಲದೇ ಇದು ಚರ್ಮಕ್ಕೆ ಕಾಂತಿ, ತಾಜಾತನ ಮತ್ತು ನವತಾರುಣ್ಯವನ್ನು ನೀಡುತ್ತದೆ. ಇದಕ್ಕಾಗಿ ಕೆಲವು ನೆನೆಸಿಟ್ಟ ಬಾದಾಮಿಗಳ ಸಿಪ್ಪೆ ಸುಲಿದು ಅರೆಯಿರಿ. ಸಮಪ್ರಮಾಣದಲ್ಲಿ ಒಂದು ಕಿವಿ ಹಣ್ಣಿನ ತಿರುಳನ್ನು ಅರೆದು ಕೊಂಚವೇ ಹಾಲು ಸೇರಿಸಿ ಮಿಶ್ರಣ ತಯಾರಿಸಿ. (ಬಾದಾಮಿ ಮತ್ತು ಕಿವಿಹಣ್ಣುಗಳನ್ನು ಪ್ರತ್ಯೇಕವಾಗಿಯೇ ಅರೆಯಬೇಕು). ಈ ಮುಖಲೇಪವನ್ನು ಮುಖಕ್ಕೆ ಹಚ್ಚಿ ಹದಿನೈದು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಬಾಳೆಹಣ್ಣು, ಮುಲ್ತಾನಿ ಮಿಟ್ಟಿ ಮತ್ತು ಹಾಲಿನ ಕೆನೆಯ ಮುಖಲೇಪ

ಬಾಳೆಹಣ್ಣು, ಮುಲ್ತಾನಿ ಮಿಟ್ಟಿ ಮತ್ತು ಹಾಲಿನ ಕೆನೆಯ ಮುಖಲೇಪ

ಈ ಮುಖಲೇಪದಲ್ಲಿ ಹೆಚ್ಚಿನ ಪ್ರಮಾಣದಲಿರುವ ವಿಟಮಿನ್ ಇ,ಎ,ಬಿ ಮತ್ತು ಸಿ ಚರ್ಮಕ್ಕೆ ಆರೈಕೆ ನೀಡುವ ಜೊತೆಗೇ ಮುಖದ ಕಲೆಗಳನ್ನೂ ನಿವಾರಿಸಲು ಸಹಕಾರಿಯಾಗಿದೆ. ಇದಕ್ಕಾಗಿ ಚೆನ್ನಾಗಿ ಹಣ್ಣಾದ ಒಂದು ಬಾಳೆಹಣ್ಣನ್ನು ಕಿವುಚಿ ಒಂದು ದೊಡ್ಡಚಮಚ ಮುಲ್ತಾನಿ ಮಿಟ್ಟಿ ಮತ್ತು ಒಂದು ಚಿಕ್ಕಚಮಚ ಹಾಲಿನ ಕೆನೆ (ಕ್ರೀಂ) ಸೇರಿಸಿ ಮಿಶ್ರಣ ಮಾಡಿ. ಈ ಮುಖಲೇಪವನ್ನು ಈಗತಾನೇ ಕೊಂಚ ಬಿಸಿಯಾದ ನೀರಿನಲ್ಲಿ ತೊಳೆದುಕೊಂಡ ಮುಖಕ್ಕೆ ನಯವಾದ ಮಸಾಜ್ ಮೂಲಕ ಹಚ್ಚಿ ಹದಿನೈದು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಓಟ್ಸ್, ಟೊಮೇಟೋ ಮತ್ತು ಮೊಸರಿನ ಮುಖಲೇಪ

ಓಟ್ಸ್, ಟೊಮೇಟೋ ಮತ್ತು ಮೊಸರಿನ ಮುಖಲೇಪ

ಈ ಮುಖಲೇಪದಲ್ಲಿರುವ ಉರಿಯೂತ ನಿವಾರಕ ಗುಣ ಚರ್ಮದಡಿಯಲ್ಲಿ ಸಂಗ್ರಹವಾಗಿದ್ದ ವಿಷಕಾರಿ ವಸ್ತುಗಳನ್ನು ನಿವಾರಿಸಲು ನೆರವಾಗುತ್ತದೆ. ಅಲ್ಲದೇ ಚರ್ಮಕ್ಕೆ ತಂಪು ನೀಡುತ್ತದೆ ಹಾಗೂ ಉರಿಯನ್ನೂ ಕಡಿಮೆಮಾಡುತ್ತದೆ. ಇದಕ್ಕಾಗಿ ಒಂದು ಕಪ್ ಓಟ್ಸ್, ಒಂದು ಚೆನ್ನಾಗಿ ಹಣ್ಣಾದ ಟೊಮಾಟೋ ಹಣ್ಣು (ಬೀಜ ನಿವಾರಿಸಿದ್ದು) ಹಾಗೂ ಕಾಲು ಕಪ್ ಮೊಸರು ಸೇರಿಸಿ ಚೆನ್ನಾಗಿ ಅರೆಯಿರಿ. ಇದನ್ನು ಈಗತಾನೇ ಕೊಂಚ ಬಿಸಿಯಾದ ನೀರಿನಲ್ಲಿ ತೊಳೆದುಕೊಂಡ ಮುಖಕ್ಕೆ ದಪ್ಪನಾಗಿ ಹಚ್ಚಿ ಹದಿನೈದು ನಿಮಿಷಗಳ ಕಾಲ ಹಾಗೇ ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

X
Desktop Bottom Promotion