Latest Updates
-
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ!
ತಂಪು ಪಾನೀಯಗಳ ಬಗೆಗೆ ಕಟ್ಟೆಚ್ಚರ

ಮನೆಯಲ್ಲಿರುವ ಫ್ರಿಜ್ಜನ್ನು ವಾರಕ್ಕೆರಡು ಬಾರಿ ಸ್ವಚ್ಛ ಮಾಡಬೇಕು. ಯಾವತ್ತೋ ಅರ್ಧ ಹೆಚ್ಚಿ ಹಾಗೇ ಇಟ್ಟ ಕಲ್ಲಂಗಡಿ, ಬನಸ್ಪತ್ರೆ ಮುಂತಾದ ಹಣ್ಣು ಹಾಗೂ ಬಾಡಿದ ಕೊತ್ತಂಬರಿ ಸೊಪ್ಪು, ಬೂಷ್ಟು ಬಂದ ಕ್ಯಾರೆಟ್ಟುಗಳನ್ನು ಮುಲಾಜಿಲ್ಲದೇ ಬಿಸಾಕಬೇಕು. ಸರಿಯಾಗಿ ಉಪಯೋಗಿಸದಿದ್ದರೆ ರೆಫ್ರಿಜರೇಟರ್ ನಂಥ ಉಪದ್ರವಿ ಗ್ಯಾಡ್ಜೆಟ್ ಇನ್ನೊಂದಿಲ್ಲ. ಪ್ರತಿದಿನ ಶೀಶೆಯಲ್ಲಿರುವ ನೀರನ್ನು ತೆಗೆದು ಹೊಸನೀರು ಇಡಬೇಕು. ಆಗಾಗ ಗಂಟಲು ಬಾಧೆಯಿಂದ ತೊಂದರೆಪಡುವವರು ಎಷ್ಟೇ ದಾಹವಾದರೂ ಪ್ರಿಜ್ ನಲ್ಲಿರುವ ನೀರು, ಮಜ್ಜಿಗೆ ಕುಡಿಯಬಾರದು. ಮಕ್ಕಳೂ ಕುಡಿಯದಂತೆ ಎಚ್ಚರ ವಹಿಸಬೇಕು.
ಕೋಕಾಕೋಲ, ಫಾಂಟಾ, ಪೆಪ್ಸಿ ಮುಂತಾದ ಏಯಿರೇಟಡ್ ಪಾನೀಯಗಳನ್ನು ಮನೆಯಲ್ಲಿ ಮತ್ತು ಹೊರಗಡೆ ಕುಡಿಯಲೇಬಾರದು. ಪಿಕ್ ನಿಕ್ ಪ್ರವಾಸ ಹೋಗುವಾಗಲಂತೂ ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ಪಾನೀಯಗಳು ಫ್ರಿಜ್ ಸಹವಾಸದಿಂದ ತಂಪಾಗಿರುತ್ತವೇ ವಿನಾ ನಮ್ಮ ದೇಹ ಪೋಷಣೆ ಮಾಡುವಂಥ ಯಾವ ಗುಣಾತ್ಮಕ ಅಂಶಗಳೂ ಅವುಗಳಲ್ಲಿ ಇರುವುದಿಲ್ಲ. ಮೇಲಾಗಿ ಅವುಗಳಿಗೆ ಎಕ್ಸ್ ಪೈರಿ ಡೇಟ್ ಎನ್ನುವಂಥದ್ದಿಲ್ಲ. ಮಕ್ಕಳು ಇಂಥ ಪಾನೀಯಕ್ಕೆ ಆಸೆ ಪಡುವುದು ಸಹಜ. ಆದರೆ, ಇದನ್ನು ಮನೆಗೆ ತರದಂತೆ ಮತ್ತು ನೀವೂ ಕೂಡಾ ಯಾವತ್ತೂ ಕುಡಿಯದಂತೆ ಮಕ್ಕಳಿಗೆ ಮಾದರಿ ಆಗಬೇಕು.
ಮನೆಯಿಂದ ಹೊರಗೆ ಹೋಗುವಾಗ ತಪ್ಪದೆ ಸಣ್ಣ ಬಾಟಲಿನಲ್ಲಿ ನೀರು ಒಯ್ಯಬೇಕು. ಮಕ್ಕಳು ಶಾಲೆಗೆ ಒಯ್ಯುವ ಪ್ಲಾಸ್ಟಿಕ್ ನೀರಿನ ಬಾಟಲಿಯನ್ನು ಬ್ರಷ್ನಿಂದ ಪ್ರತಿದಿನ ಚೆನ್ನಾಗಿ ತೊಳೆಯುತ್ತಿದ್ದೀರಾ, ಗಮನಿಸುವುದು. ಒಂದು ವೇಳೆ ಹೋಟೆಲಿನಲ್ಲಿ ತಿಂಡಿ ಊಟ ಮಾಡುವಂಥ ಸಂದರ್ಭ ಬಂದರೂ ಮನೆಯಿಂದ ಒಯ್ದ ನೀರನ್ನೇ ಬಳಸಬೇಕು. ಸ್ನೇಹಿತರು, ನೆಂಟರ ಮನೆಗಳಿಗೆ ಭೇಟಿ ಕೊಟ್ಟಾಗ ಅವರು ಅರ್ಜೆಂಟಿಗೆ ಮಾಡಿಕೊಡುವ ಹಣ್ಣಿನ ಪರಿಮಳ ನೀಡುವ ತಂಪಾದ ಪೌಡರ್ ರಸಗಳನ್ನು ವಿನಯದಿಂದ ನಿರಾಕರಿಸಬೇಕು. ದಾಕ್ಷಿಣ್ಯಕ್ಕೆ ಕುಡಿದರೆ ಅವರ ಮನೆಯ ಫ್ರಿಜ್ ಕಾಯಿಲೆ ನಿಮ್ಮ ಗಂಟಲಿಗೆ ತಟ್ಟುವುದು ಖಾತರಿ. ಆದ್ದರಿಂದ ವಾಪಸ್ಸು ರಸ್ತೆಯಲ್ಲಿ ನಡೆದು ಬರುವಾಗ ಎದುರಾಗುವ ಸೈಕಲ್ ಎಳನೀರನ್ನು ಕುಡಿಯುವುದು ಸೂಕ್ತ.
ಬೇಸಿಗೆ ಕಾಲದಲ್ಲಿ ಜ್ಯೂಸ್ ಅಂಗಡಿಗಳು ದಾರಿಯುದ್ದಕ್ಕೂ ಸಿಗುತ್ತವೆ. ಆಸೆ ಪಡದಿರಿ. ಅವರು ಬಳಸುವ ಹಣ್ಣು ಚೆನ್ನಾಗಿರಬಹುದು. ಆದರೆ, ಆ ನೀರಿನ ಶುದ್ಧಿಯ ಬಗೆಗೆ ದೇವರಾಣೆ ಗ್ಯಾರಂಟಿ ಕೊಡಲಾಗುವುದಿಲ್ಲ. ನೂರಕ್ಕೆ 80ರಷ್ಟು ಕಾಯಿಲೆಗಳ ಮೂಲ ನೀರು ಎಂದು ಗೊತ್ತಿದ್ದೂ ಅಲ್ಲಿ ಇಲ್ಲಿ ಜ್ಯೂಸ್ ಕುಡಿಯುವುದು ನಿಮಗೆ ನೀವೇ ಎಸಗುವ ಅಪರಾಧವಾಗುತ್ತದೆ.
ಹಾಗಾದರೆ ಹಣ್ಣಿನ ರಸ ಕುಡಿಯುವ ಯೋಗ್ಯವೇ ಇಲ್ಲವೇ ಎಂದು ಪರಿತಪಿಸುವ ಅಗತ್ಯವಿಲ್ಲ. ಮನೆಮಂದಿಗೆಲ್ಲ ಇಷ್ಟವಾಗುವ ಯಾವುದಾದರೂ ಹಣ್ಣನ್ನು ಮನೆಗೆ ತರಬೇಕು. ಸುಮ್ಮನೆ ಹಣ್ಣನ್ನು ಹೆಚ್ಚಿ ನೀರು ಸುರಿದು ಮಿಕ್ಸಿಗೆ ಹಾಕಿ, ಸಕ್ಕರೆ ಬೆರೆಸಿ ಜ್ಯೂಸ್ ಕುಡಿತಾಯಿದೀವಿ ಅಂದುಕೊಂಡು ಕುಡಿಯುವುದು ತಪ್ಪಾಗುತ್ತದೆ. ನೀರು ಬೆರೆಸದೆ, ಸಕ್ಕರೆ ಹಾಕದೆ ಹಣ್ಣಿನ ರಸ ಮಾಡುವುದು ಆರೋಗ್ಯ ದೃಷ್ಟಿಯಿಂದ ಲಾಭಕರ. ಹೇಗೆಂದರೆ :
ಬರೀ ಹಣ್ಣಿನ ರಸದಲ್ಲಿರುವ ಪೌಷ್ಟಿಕಾಂಶಗಳು ದೇಹವನ್ನು ಕಟ್ಟಿ ಬೆಳೆಸುತ್ತವೆ ಎನ್ನುತ್ತಾರೆ ಆಹಾರ ತಜ್ಞರು. ಕೊಬ್ಬು ರಹಿತ, ನಾರು ಸಮೇತ, ರುಚಿ ಭರಿತ ಹಣ್ಣಿನ ರಸಕ್ಕೆ ಇನ್ನಾವುದೂ ಸಮವಲ್ಲ. ಪ್ರತಿದಿನ ರಾತ್ರಿ ನಿಮ್ಮ ಬ್ಯಾಗಿಗೆ ಎಟಕುವ ಯಾವುದೋ ಒಂದು ಹಣ್ಣನ್ನು ತಂದು ಹಣ್ಣಿನ ಗಟ್ಟಿ ರಸ ತಯಾರಿಸಿ ಮನೆಮಂದಿಯೆಲ್ಲ ಸೇವಿಸಿದರೆ ಆರೋಗ್ಯಕ್ಕೂ ಒಳ್ಳೆಯದು ಜತೆಗೆ, ನಾಲಕ್ಕು ಹೆಜ್ಜೆ ನಡೆದರೆ ಸಾಕು ಸುಸ್ತಪ್ಪಾ ಎನ್ನುವಂಥ ಪರಿಸ್ಥಿತಿಯನ್ನು ಹಣ್ಣಿನಿಂದ ಗಳಿಸಿದ ಬಲ ದೂರ ಇಡಬಲ್ಲುದು.
ಆಹಾರ ತಜ್ಞರು ಸೂಚಿಸುವ ಪ್ರಕಾರ ಒಂದು ದಿನಕ್ಕೆ ನಾಲಕ್ಕರಿಂದ ನಾಕೂವರೆ ಕಪ್ ನಷ್ಟು ತರಕಾರಿ ಮತ್ತು ಹಣ್ಣನ್ನು ಸೇವಿಸುವುದು ವ್ಯಕ್ತಿಯ ದೈನಂದಿನ ಆರೋಗ್ಯ ಮತ್ತು ಚಟುವಟಿಕೆಗೆ ಅಗತ್ಯ. ಅಷ್ಟು ಪ್ರಮಾಣವನ್ನು ನೀವು ಮತ್ತು ನಿಮ್ಮ ಪ್ರೀತಿ ಪಾತ್ರರು ಪ್ರತಿನಿತ್ಯ ಸೇವಿಸುತ್ತಿದ್ದೀರಾ? ಒಂದು ಗಮನ ಆ ಕಡೆ ಇಟ್ಟೇ ಇರಬೇಕು. ಅಸಡ್ಡೆ ಮಾಡಿದರೆ ಯಾರಿಗೆ ನಷ್ಟ?



Click it and Unblock the Notifications
